ಗುರುವಂದನಾ ಕಾರ್ಯಕ್ರಮ ಮತ್ತು ನನ್ನ ಪ್ರೌಢಶಾಲೆಯ ದಿನಗಳು


ಗುರುವಂದನಾ ಕಾರ್ಯಕ್ರಮ ಮತ್ತು ನನ್ನ ಪ್ರೌಢಶಾಲೆಯ ದಿನಗಳು
ಮ್ಮೂರು, ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಹೊಸಹಳ್ಳಿ… ಆಂದ್ರಪ್ರದೇಶದ ಮಡಕಶಿರ ತಾಲ್ಲೂಕಿನ ಗಡಿಯಲ್ಲಿ ಐದಾರು ಕಿಲೋಮೀಟರುಗಳ ಅಂತರದಲ್ಲಿದೆ. ಇಲ್ಲಿ ಇದೇ ಜೂನ್‌ 14, 2017 ರಂದು ಗುರುವಂದನಾ ಕಾರ್ಯಕ್ರಮವೊಂದು ನಡೆದಿದೆ. ನಮ್ಮೂರಿನ ಪ್ರೌಢಶಾಲೆ, "ಶ್ರೀಮಾರುತಿ ಗ್ರಾಮಾಂತರ ಪ್ರೌಢಶಾಲೆ'ಯಲ್ಲಿ ಹತ್ತನೇ ತರಗತಿಯವರೆಗೆ ಕಲಿತ ಅಂದಿನ ಹುಡುಗರು ಇಂದಿನ ಹಳೆಯ ವಿದ್ಯಾರ್ಥಿಗಳು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ನಾನೂ ಸಹ ಅದೇ ಶಾಲೆಯಲ್ಲಿ 10ನೇ ತರಗತಿ ಮುಗಿಸಿದ್ದುದರಿಂದ ನನಗೂ ಸಹ ಕರೆಯೋಲೆಯಿತ್ತು. ಹಲವಾರು ಕೆಲಸಗಳ ತೊಡಕಿನಲ್ಲಿ ಸಿಲುಕಿದ್ದುದರಿಂದ ನಾನು ಬರಲಾಗುವುದಿಲ್ಲವೆಂದು ಪೋ಼ನಿನ ಮೂಲಕ ಮತ್ತೊಮ್ಮೆ ಜ್ಞಾಪಿಸಿದ ತುಮಕೂರಿನ ಕುಮಾರನಿಗೆ ತಿಳಿಯ ಹೇಳಿದೆ. ಒಟ್ಟಿನಲ್ಲಿ ಆ ಕಾರ್ಯಕ್ರಮಕ್ಕೆ ನಾನು ಹೋಗಲಿಲ್ಲ. ನಮ್ಮ ಹನುಮಂತರಾಯಣ್ಣ(ಮೂರ್ತಿ)ನ ಮಗ ಕಿರಣ ವಾಟ್ಸಪ್‌ನಲ್ಲಿ ಕಾರ್ಯಕ್ರಮದ ಪೋ಼ಟೋಗಳನ್ನು ಹಾಕಿದ್ದನು. ತುಮಕೂರಿನ ಶಿವಕುಮಾರ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾದ ಸಚಿತ್ರ ವರದಿಯನ್ನು ಚಿತ್ರ ತೆಗೆದು ಅವನ ವಾಟ್ಸಪ್‌ನಲ್ಲಿ ಪ್ರಕಟಿಸಿಬಿಟ್ಟಿದ್ದ. ಇದನ್ನು ಗಮನಿಸಿದ ಮೇಲೆ ನಾನು ಹೋಗದೆ ಇದ್ದುದಕ್ಕೆ ಸ್ವಲ್ಪಮಟ್ಟಿನ ಬೇಜಾರಾಯಿತು…ಕಾರ್ಯಕ್ರಮದಲ್ಲಿ ನನ್ನ ಪ್ರೀತಿಯ ಮಾವ ಮುಖ್ಯೋಪಾಧ್ಯಾಯರಾಗಿದ್ದ ಹೆಚ್‌.ಎಂ.ಹನುಮಂತಣ್ಣನವರನ್ನು ಬೆಳ್ಳಿರಥದಲ್ಲಿ ಕೂರಿಸಿ ಹೊಸಹಳ್ಳಿ, ಜಂಗಮರಹಳ್ಳಿ ಮತ್ತು ಮರೂರಿನ ಬೀದಿಗಳಲ್ಲಿ ಮೆರವಣಿಗೆ ಮಾಡಿರುತ್ತಾರೆ. ಶಾಲಾ ಸಂಸ್ಥಾಪಕ ಶ್ರೀ ಎಂ.ಚಂದ್ರಶೇಖರಯ್ಯನವರ ವೇದಿಕೆ ಮೇಲೆ ಅವರ ಶ್ರೀಮತಿಯವರನ್ನೂ ಕೂರಿಸಿ ಶಾಲು ಹೊದೆಸಿ ಸನ್ಮಾನ ಮಾಡಿರುವುದು ಒಂದು ಭಾವನಾತ್ಮಕ ಅವಿಸ್ಮರಣೀಯ ವಿಷಯದ ದಿನ. ಇರಲಿ ಬಿಡಿ...ನನ್ನ ಪ್ರೌಢಶಾಲಾ ದಿನಗಳ ಆ ಕಥೆಯನ್ನು ಹೇಳಬಯುಸುತ್ತೇನೆ. ಆ ಶಾಲೆಯಲ್ಲಿ ಕಲಿತ ನನ್ನ 8, 9 ಮತ್ತು 10ನೇ ತರಗತಿಗಳ ಚರಿತ್ರೆಯ ಪುಟಗಳನ್ನಿಲ್ಲಿ ತೆರೆದಿಟ್ಟಿದ್ದೇನೆ.

ವರ್ಷ 1965
ನಾನು ಉನ್ನತ ಪ್ರಾಥಮಿಕ(ಮಾಧ್ಯಮಿಕ) ಶಾಲೆ ಮುಗಿಸಿ ಪ್ರೌಢಶಾಲೆಗೆ ಸೇರಬೇಕಾಗಿದ್ದ ವರ್ಷ. ಇಲ್ಲಿಗೆ ಹೊಸಹಳ್ಳಿಯ ಪ್ರೌಢಶಾಲೆ ಪ್ರಾರಂಭವಾಗಿ ಐದು ವರ್ಷವಾಗಿ ಆರನೇ ವರ್ಷಕ್ಕೆ ಕಾಲಿಟ್ಟಿದ್ದಿತು. ಮಂಗಳವಾಡದಲ್ಲಿ ನಾನು ಮತ್ತು ನನ್ನ ಚಿಕ್ಕಮ್ಮನ ಮಗ ರಾಮಚಂದ್ರ ಮಾಧ್ಯಮಿಕ ಶಾಲೆಯ ಏಳನೇ ತರಗತಿಯನ್ನು ಮುಗಿಸಿದ್ದೆವು. ಹೊಸಹಳ್ಳಿಯಲ್ಲಿಯೇ ಪ್ರಾಥಮಿಕ ಶಾಲೆ ತರಗತಿ ನಾಲ್ಕನ್ನು ಮುಗಿಸಿದನಂತರ, ನನ್ನಪ್ಪ ಮಂಗಳವಾಡದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದುದರಿಂದ ನಮ್ಮನ್ನು ಅಲ್ಲಿಗೇ ಕರೆದುಕೊಂಡು ಹೋಗಿ ಮಾಧ್ಯಮಿಕ ಐದನೇ ತರಗತಿಗಾಗಿ ಉನ್ನಥ ಪ್ರಾಥಮಿಕ ಶಾಲೆಗೆ ಸೇರಿಸಿದ್ದರು. ಮೂರು ವರ್ಷಗಳನಂತರ…ಏಳನೇ ತರಗತಿ ಮುಗಿಸಿದ ಮೇಲೆ ಪ್ರೌಢ ಶಾಲೆಗೆ ಸೇರಲು ಮಂಗಳವಾಡದ ಶಾಲೆಯಿಂದ ವರ್ಗಾವಣೆ ಪ್ರಮಾಣಪತ್ರವನ್ನೂ ತಂದಿಟ್ಟುಕೊಂಡಿದ್ದರೂ 1965-66ನೇ ಸಾಲು ಶೈಕ್ಷಣಿಕ ವರ್ಷದ ಶಾಲಾದಿನಗಳು ಪ್ರಾರಂಭವಾಗಿ 15-20ದಿನಗಳು ಕಳೆದರೂ ನಮ್ಮನ್ನು ಪ್ರೌಢಶಾಲೆಗೆ ದಾಖಲಿಸಿರಲಿಲ್ಲ ನನ್ನಪ್ಪ. ನನ್ನಪ್ಪನ ಮನಸ್ಸಿನಲ್ಲಿ ಏನಿತ್ತೋ ಗೊತ್ತಿಲ್ಲ. ಯಾಕಂದರೆ ಆಗಾಗಲೇ ಶಾಲಾ ಉಸ್ತುವಾರಿಯ ಆಡಳಿತಮಂಡಳಿಯ ಸದಸ್ಯರಲ್ಲಿ ಒಬ್ಬರಿಗೊಬ್ಬರಿಗೆ ಆಗುತ್ತಿರಲಿಲ್ಲವೆಂಬುದು. ಶಾಲೆಯ ಆಡಳಿತಮಂಡಳಿಯಲ್ಲಿ ಕಾರ್ಯದರ್ಶಿ ಆಗಿದ್ದ ಎಂ.ಚಂದ್ರಶೇಖರಯ್ಯನವರ ವಿರುದ್ಧ ಮಂಡಳಿಯ ಒಂದರ್ಧ ಸದಸ್ಯರು ಕಿಡಿಕಾರುತ್ತಿದ್ದುದು ಒಂದೆರಡು ವರ್ಷದ ಹಿಂದೆಯೇ ಬೆಳಕಿಗೆ ಬಂದಿತ್ತು. ಇದಕ್ಕೆಲ್ಲ ಮೂಲ ಕಾರಣ...ಚಂದ್ರಶೇಖರಯ್ಯನವರು ಶಾಲೆಯು ನಡೆಸುತ್ತಿದ್ದ ವಿದ್ಯಾರ್ಥಿಗಳ ವಸತಿ-ನಿಲಯ ಮತ್ತು ಊಟದ ಸೌಕರ್ಯದ ಸರ್ಕಾರದ ಅನುದಾನದ ಹಣವನ್ನು ದುರುಪಯೋಗಮಾಡಿದ್ದರು...ಎಂಬುದೇ ಕಾರಣ. ವಿದ್ಯಾರ್ಥಿ ವಸತಿ-ಊಟೋಪಚಾರ ಗೃಹದ ನಿರ್ವಹಣೆಗಾಗಿ ಸರ್ಕಾರದಿಂದ ಬರುತ್ತಿದ್ದ ಅನುದಾನದ ಹಣವನ್ನು ದುರುಪಯೋಗಪಡಿಸಿದ್ದ ವಿಷಯವನ್ನು ಬೆಳಕಿಗೆ ತಂದವರು ಶಾಲೆಯ ಮುಖ್ಯೋಪಾಧ್ಯಾಯ ಶ್ರೀಯುತ ನಾಗೇಂದ್ರರಾವ್‌ರವರು.

ಶಾಲಾ ಕಟ್ಟಡಗಳು
ಹಾಗೆ ನೋಡಿದರೆ ಚಂದ್ರಶೇಖರಯ್ಯನವರು ಶಾಲೆಯ ಆಡಳಿತ ಕಚೇರಿಗಾಗಿ ನಿರ್ಮಿಸಿದ್ದ ಕಲ್ಲುಕಟ್ಟಡವನ್ನೇ ತಮ್ಮ ವಾಸದ ಮನೆಯನ್ನಾಗಿ ಬಳಸಿಕೊಂಡಿದ್ದರು. ಜೊತೆಗೆ ಅದಕ್ಕೊಂದು ಮಹಡಿಯ ಹಜಾರ-ಕೊಠಡಿಯನ್ನು ಕಲ್ಲುಕಟ್ಟಡದ ಪೂರ್ಣ ಉದ್ದಗಲಕ್ಕೆ ನಿರ್ಮಿಸಿಕೊಂಡಿದ್ದರು. ಅದಕ್ಕೆ ಮೆಟ್ಟಿಲುಗಳೇನನ್ನೂ ನಿರ್ಮಿಸಿರಲಿಲ್ಲ...ಏರಿಳಿಯಲು ಏಣಿಯನ್ನು ಬಳಸುತ್ತಿದ್ದರು. ಕೆಳಗೆ ಕಲ್ಲುಕಟ್ಟಡಕ್ಕೆ ಹೊಂದಿಕೊಂಡಂತೆ ಹಿಂಭಾಗದಲ್ಲಿ ಅಡಿಗೆ ಮನೆ ಊಟದ ಹಜಾರವನ್ನು ನಿರ್ಮಿಸಿಕೊಂಡು ಲಾಗಾಯ್ತಿನಿಂದ ಕಟ್ಟಡದ ಜಾಗವನ್ನು ಬಿಡದೆ ಕೊನೆಗೆ ತಮ್ಮ ಹೆಸರಿಗೇ ಮಾಡಿಸಿಕೊಂಡು ಅನುಭವಿಸಿದವರು. ಬಹುಷಃ ಇದೀಗ ಅದು ಹಾಳು ಬಿದ್ದಿರಬಹುದು, ನನಗೆ ಸರಿಯಾಗಿ ಗೊತ್ತಿಲ್ಲ...ನಾನೇನು ಆಕಡೆ ಹೋಗಿ ಅದನ್ನು ಗಮನಿಸಿಲ್ಲ. ಮತ್ತೀಗ ಯಾರ ಸುಪರ್ದಿನಲ್ಲಿದೆ ಎಂದೂ ನನಗೆ ತಿಳಿಯದು. ಅದೇ ಕಲ್ಲುಕಟ್ಟಡಕ್ಕೆ ಆತುಕೊಂಡು ಪೂರ್ವಭಾಗದಲ್ಲಿ ಇಟ್ಟಿಗೆ-ಕೆಮ್ಮಣ್ಣಿನಲ್ಲಿ ನಾಲ್ಕು ಶಾಲಾ ಕೋಣೆಗಳನ್ನು ಒಂದರ-ಹಿಂದೊಂದು ಬರುವಂತೆ ನಿರ್ಮಿಸಲಾಗಿದ್ದಿತು, ಛಾವಣಿಗೆ ಹೆಂಚು ಮಾತ್ರ ಹೊದೆಸಲಾಗಿತ್ತು. ಎರೆಡೆರಡು ಕೋಣೆಗಳ ಮಧ್ಯೆ ಉತ್ತರ-ದಕ್ಷಿಣವಾಗಿ ಆಕಡೆಯಿಂದೀಕಡೆ ಓಡಾಡಲು ಹುಸಿ ದಾರಿಯನ್ನು ಬಿಡಲಾಗಿದ್ದಿತು. ಕೇವಲ ಬಾಗಿಲಿನ ಮರದ ನಿಲುವು ಚೌಕಟ್ಟುಗಳು ಮಾತ್ರ ಇಡಲ್ಪಟ್ಟಿದ್ದವು, ಕಿಟಕಿಗಳಿಗೆ ಯಾವ ಚೌಕಟ್ಟಗಳೂ ಇರಲಿಲ್ಲ…ಅಲ್ಲಲ್ಲಿ ಇಟ್ಟಿಗೆಗಳು ಕಿತ್ತುಬಂದು ಊರಬಾಗಿಲುಗಳ ರೀತ್ಯ ತೆರೆದಿರುತ್ತಿದ್ದವು. ಕೊಠಡಿಗಳಲ್ಲಿ ನಾಲ್ಕೈದು ವಿದ್ಯಾರ್ಥಿಗಳು ಒಟ್ಟಿಗೆ ಕುಳಿತುಕೊಳ್ಳಲು ಅನುಕೂಲವಾಗುವಂಥ ಹಲವಾರು ಕೈಮೇಜಿನ ಆಸನಗಳನ್ನಿರಿಸಿದ್ದರು. ಇದೇ ಇಟ್ಟಿಗೆ-ಕಟ್ಟಡದ ಪೂರ್ವಭಾಗಕ್ಕೆ ಉತ್ತರ-ದಕ್ಷಿಣ ಪೂರ್ಣವಾಗಿ ಒಂದು ಹಜಾರದಂಥ ಕೋಣೆ ಮತ್ತು ಹೊಂದಿಕೊಂಡಂತೆ ಅಡಿಗೆಮಾಡಲು ಒಂದು ಜಾಗದ ಕೆಮ್ಮಣ್ಣು-ಇಟ್ಟಿಗೆಯ ನಿರ್ಮಾಣವಿದ್ದಿತು. ಉತ್ತರಕ್ಕೊಂದು ಮತ್ತು ದಕ್ಷಿಣಕ್ಕೊಂದು ಮರದ ಬಾಗಿಲು ಚೌಕಟ್ಟುಗಳನ್ನಡಲಾಗಿದ್ದಿತು. ಮೇಲ್ಛಾವಣಿ ಹೊದೆಸದೆ ಇದ್ದುದರಿಂದ ಮುಗಿಲು ಕಾಣುತ್ತಿತ್ತು. ಬಹುಷಃ ಇದು ವಿದ್ಯಾರ್ಥಿಗಳ ವಸತಿಯೂಟದ ಸೌಕರ್ಯಕ್ಕೆ ನಿರ್ಮಿಸಿದ್ದಾಗಿತ್ತು, ಆದರೆ ಆಡಳಿತಮಂಡಳಿಯಲ್ಲುಂಟಾದ ಒಳಜಗಳ ಕಾರಣ ಕಟ್ಟಡ ಪೂರ್ಣಗೊಂಡಿರಲಿಲ್ಲ. ಅರೆಬರೆಯಾಗಿ ನಿಂತುಹೋಗಿತ್ತಲ್ಲದೆ ಹಾಳು ಬೀಳಲಿದ್ದಿತು. ಇದಲ್ಲದೆ ಶಾಲೆಯ ಮುಂಭಾಗದಲ್ಲಿ ಅನತಿ ದೂರದಲ್ಲಿ ಒಂದು ಚಿಕ್ಕ ಹೆಂಚಿನ-ಮನೆ ನಿರ್ಮಿಸಿದ್ದರು. ಅದನ್ನು ಆಮೊದಲು ಮುಖ್ಯೋಪಾದ್ಯಾಯರಾಗಿದ್ದ ಶ್ರೀ ನಾಗೇಂದ್ರರಾವ್‌ರವರಿಗೆ ಮತ್ತವರ ಕುಟುಂಬದ ವಾಸಕ್ಕಾಗಿ ಬಿಟ್ಟುಕೊಟ್ಟಿದ್ದರು. ಗಲಾಟೆಗಳು ಪ್ರಾರಂಭಗೊಂಡ ಮೇಲೆ ಪಾವಗಡದಲ್ಲಿ ಮನೆಮಾಡಿ ಅಲ್ಲಿಗೆ ಕುಟುಂಬದ ಸದಸ್ಯರನ್ನು ವರ್ಗಾಯಿಸಿದ್ದರು.

ಈ ಕಾರಣಗಳಿಗಾಗಿರಬಹುದು ನನ್ನಪ್ಪ ನಮ್ಮನ್ನಿನ್ನೂ ಶಾಲೆಗೆ ಸೇರಿಸಿರಲಿಲ್ಲ. ಶಾಲೆ ಮುಂದುವರಿದು ನಡೆಯುತ್ತದೆ ಎಂಬ ಖಾತರಿ ಅವರಲ್ಲಿ ಇದ್ದಂತಿರಲಿಲ್ಲ. ನಮ್ಮೂರಿನ ಪ್ರಾಥಮಿಕ ಶಾಲೆಯಲ್ಲಿ(ಶಾಲೆ ಊರೊಳಗಿನ ಹನುಮಂತರಾಯನ ಗುಡಿಯೊಳಗೆ ಬೇರಾವುದೇ ಕಟ್ಟಡವಿಲ್ಲದ ಕಾರಣ ನಡೆಯುತ್ತಿತ್ತು) 1961-62ನೇ ಶೈಕ್ಷಣಿಕ ಸಾಲಿನಲ್ಲಿ ನನ್ನ ಜೊತೆಯಲ್ಲಿ ನಾಲ್ಕನೇ ತರಗತಿಯವರೆಗೆ ಕಲಿತಿದ್ದ ನನ್ನ ದೊಡ್ಡಪ್ಪನ ಮಗ ರಾಮಕೃಷ್ಣ, ನಮ್ಮ ಪಕ್ಕದ ಮನೆಯ ಹೆಂಜಾರಪ್ಪ, ಆತನ ತಮ್ಮ ಸಣ್ಣೀರಪ್ಪ, ಮಲ್ಲೇಶ್ವರಯ್ಯ, ಹಿಂದಿನ ಕೇರಿಯ ಪಟೇಲರ ಮನೆಯ ರಾಜಶೇಖರ ಮತ್ತಾತನ ಅಕ್ಕ ವಿಶಾಲಾಕ್ಷಮ್ಮ, ನಮ್ಮದೇ ಕೇರಿಯ ಹೆಣ್ಣು ಮಕ್ಕಳಾದ ಸರ್ವಮಂಗಳ, ಸರೋಜಮ್ಮ, ಮತ್ತು ಹರಿಜನರ ಕೇರಿಯ ದೊಡ್ಡೀರಪ್ಪ ಮತ್ತು ಸಿದ್ದಲಿಂಗಪ್ಪ ಇವರೆಲ್ಲ ನಮ್ಮ ಪಕ್ಕದ ಹಳ್ಳಿ, ಒಂದು ಕಿಲೋಮೀಟರು ದೂರದ ಜಂಗಮರಹಳ್ಳಿಯ ಉನ್ನತ ಪ್ರಾಥಮಿಕ ಶಾಲೆಯ ಮಾಧ್ಯಮಿಕ ತರಗತಿಗಳಿಗೆ ಸೇರಿಕೊಂಡಿದ್ದರು. ಏಳನೇ ತರಗತಿಗೆ ಹೋಗಬೇಕಿದ್ದ ಸಮಯದಲ್ಲಿ ಸರ್ವಮಂಗಳನ ಮನೆಯವರು ಆಕೆಯ ವರ್ಗಾವಣೆ ಪತ್ರ ಪಡೆದು ಮುಂದಿನ ಕಲಿಕೆಗಾಗಿ ಮೈಸೂರಿನಲ್ಲಿ ಶಾಲೆಗೆ ಸೇರಿಸಿದ್ದರು. ಉಳಿದವರೆಲ್ಲಾ ಏಳನೇ ತರಗತಿ ಮುಗಿಸಿದನಂತರ ನಮ್ಮೂರಿನ "ಶ್ರೀ ಮಾರುತಿ ಗ್ರಾಮಾಂತರ ಪ್ರೌಢಶಾಲೆ"ಗೆ ನೊಂದಾಯಿಸಿಕೊಂಡಿದ್ದರು. ಕುತೂಹಲದ ಸಂಗತಿಯೆಂದರೆ ಮಂಗಳವಾಡದಲ್ಲಿ ಏಳನೇ ತರಗತಿಯವರೆಗೆ ಅಭ್ಯಸಿಸಿದ್ದ ನನ್ನಸಹಪಾಠಿಗಳಿಬ್ಬರು... ಕೆ.ಜಿ.ಕೃಷ್ಣಯ್ಯಶೆಟ್ಟರ ಮಗ ಸುಬ್ರಮಣ್ಯ ಮತ್ತು ತುಮಕುಂಟೆ ಶಾನುಭೋಗರ ಮಗ ನಾಗಭೂಷಣ… ಆಗಲೇ ನಮ್ಮೂರಿನ ಪ್ರೌಢಶಾಲೆಗೆ ದಾಖಲಿಸಿಕೊಂಡಿದ್ದರು. ಕೊನೆಗೆ ನನ್ನ ಮತ್ತು ರಾಮಚಂದ್ರನ ಗೋಗರೆತ ತಾಳಲಾರದೆ ನನ್ನಪ್ಪ ನಮ್ಮಿಬ್ಬರನ್ನೂ ಅದೇ ಶಾಲೆಗೆ ನೋಂದಾಯಿಸಿದರು. ಅಲ್ಲಿಂದ ಮುಂದೆ ನನ್ನ ಪ್ರೌಢಶಾಲಾ ದಿನಗಳು ಪ್ರಾರಂಭವಾದವು.

ಶಿಕ್ಷಕರ ಕೊರತೆ ಮತ್ತು ಶಾಲೆಯ ವಿಭಜನೆ
ಶಾಲೆಯಲ್ಲಿ ಶಿಕ್ಷಕರ ಕೊರತೆಯಿತ್ತು. ಬಿ.ಎಸ್ಸಿ ಪಧವಿ ಪಡೆದಿದ್ದ ಮುಖ್ಯೋಪಾಧ್ಯಾಯ ನಾಗೇಂದ್ರರಾವ್‌, ಬಿ.ಎಸ್ಸಿ ಅನುತ್ತೀರ್ಣ ಪಾವಗಡದ ಕೃಷ್ಣಮೂರ್ತಿ ಇವರಿಬ್ಬರೇ ಹೇಳಿಕೊಳ್ಳಲು ಶಿಕ್ಷಕರಿದ್ದುದು, ಉಳಿದಂತೆ ಬಿ.ಎಸ್ಸಿ ಅನುತ್ತೀರ್ಣ ಕಾರ್ಯದರ್ಶಿ ಚಂದ್ರಶೇಖರಯ್ಯನವರೇ ಪಾಠಪ್ರವಚನಗಳಿಗೆ ಆಧಾರವಾಗಿದ್ದರು. ಎಲ್ಲರೂ ವಿಜ್ಞಾನ-ಗಣಿತ ವಿಷಯದವರೇ ಆಗಿದ್ದರು. ಸಮಾಜಶಾಸ್ತ್ರ, ಇಂಗ್ಲೀಷ್‌, ಮತ್ತು ಕನ್ನಡದ ವಿಷಯಗಳಿಗೆ ಯಾರೂ ಇರಲಿಲ್ಲ. ಅವರಲ್ಲೇ ಯಾರೋ ಒಬ್ಬರು ಆ ವಿಷಯಗಳ ಪಾಠವನ್ನೂ ಮಾಡುತ್ತಿದ್ದರು. ಕನ್ನಡ ಮಾಧ್ಯಮವಾದುದರಿಂದ ಅವರಿಗೆ ಅಂಥ ಕಷ್ಟವೇನೂ ಆಗುತ್ತಿರಲಿಲ್ಲ. ಶಾಲೆ ಪ್ರಾರಂಭವಾಗಿ ಒಂದು ತಿಂಗಳು ಕಳೆದಿರಬಹುದು. ಆಡಳಿತಮಂಡಳಿಯ ಒಳಜಗಳ ಹೊರಬಂದು ತಾರಕಕ್ಕೇರಿತ್ತು. ಕೊನೆಗೂ ಆಡಳಿತ-ಮಂಡಳಿ ಇಬ್ಭಾಗವಾಗಿತ್ತು. ಆಡಳಿತ-ಮಂಡಳಿಯಲ್ಲಿ ಯಾರ್ಯಾರಿದ್ದರೋ ನನಗೆ ಸರಿಯಾಗಿ ತಿಳಿಯದು. ಕಾರ್ಯದರ್ಶಿ ಚಂದ್ರಶೇಖರಯ್ಯನವರ ಜೊತೆಯಲ್ಲಿ ನಮ್ಮೂರಿನ ಘಾಳೇಗೌಡರ ಚಿಕ್ಕಣ್ಣ, ನನ್ನ ಸೋದರಮಾವ ಕರಿಯಣ್ಣ ಮತ್ತು ಜಂಗಮರಹಳ್ಳಿಯ ಈರೇಗೌಡ ಬೆಂಬಲವಾಗಿ ನಿಂತಿದ್ದರು. ಮುಖ್ಯೋಪಾಧ್ಯಾಯ ನಾಗೇಂದ್ರರಾವ್‌ರವರ ಬೆಂಬಲವಾಗಿ ಪಟೇಲ್‌ ದೊಡ್ಡೇಗೌಡರು, ಸಣ್ಣೀರೇಗೌಡರ ಕರಿಯಣ್ಣ ಮತ್ತು ಮಾದಿಗರಬಾವಿ ಕರಿಯಣ್ಣನವರು ನಿಂತಿದ್ದರು. ಜಂಗಮರಹಳ್ಳಿ ಈರೇಗೌಡ ಹೊರತು ಉಳಿದವರೆಲ್ಲಾ ನಮಗೆ ನೆಂಟರಿಷ್ಟರಾದವರೆ. ಇಬ್ಭಾಗವಾದ ಆಡಳಿತ-ಮಂಡಳಿಯ ಎರಡೂ ಗುಂಪು ಪ್ರತ್ಯೇಕವಾಗಿ ಶಾಲೆ ನಡೆಸಲು ಪ್ರಾರಂಬಿಸಿದರು. ಮುಖ್ಯೋಪಾದ್ಯಾಯ ನಾಗೇಂದ್ರರಾವ್‌ರವರ ಗುಂಪಿನವರು ಪಟೇಲ್‌ ದೊಡ್ಡೇಗೌಡರ ಕುಟುಂಬದ ಕಣದ ಮನೆಯ ದನದ ಕೊಟ್ಟಿಗೆ ಮತ್ತದರ ಪಕ್ಕದಲ್ಲಿ ಏಕವಾಗಿ ಉದ್ದವಿದ್ದ ಕೊಠಡಿಯಲ್ಲಿನ ಗೋಡೆ, ಹೊರಗಡೆ ಚಪ್ಪರದ ಕೆಳಗೆ ಹೊರಗೋಡೆಗಳಿಗೆ ಸಿಮೆಂಟ್‌ ಬೋರ್ಡ್‌ಗಳನ್ನು ನಿರ್ಮಿಸಿ ತರಗತಿಗಳನ್ನು ನಡೆಸಲು ಪ್ರಾರಂಬಿಸಿದರು. ಚಂದ್ರಶೇಖರಯ್ಯನವರ ಗುಂಪಿನವರು ಅದೇ ಶಾಲಾ ಕಟ್ಟಡದಲ್ಲಿಯೇ ತರಗತಿಗಳನ್ನು ನಡೆಸುತ್ತಿದ್ದರು…ಆದರವರಿಗೆ ವಿದ್ಯಾರ್ಥಿಗಳ ಕೊರತೆಯಿತ್ತು. ಹಾಗೆ ನೋಡಿದರೆ ಶ್ರೀ ನಾಗೇಂದ್ರರಾವ್‌ರವರ ಹಿಂದಿನ ಗುಂಪಿಗೆ ವಿದ್ಯಾರ್ಥಿಗಳ ಬೆಂಬಲ ಬಲವಾಗಿದ್ದಿತು. ಪಕ್ಕದ ಮಂಗಳವಾಡದಲ್ಲಿ ಆಗತಾನೆ ಕಲಾವಿಭಾಗದಲ್ಲಿ ಪಧವಿ ಗಳಿಸಿಕೊಂಡು ಬಂದಿದ್ದ ರಾಮಚಂದ್ರಯ್ಯ ಎಂಬುವರನ್ನು ಇಂಗ್ಲೀಷ್‌ ಪಾಠಮಾಡಲು ಕರೆದುಕೊಂಡು ಬರಲಾಯಿತು. ಹಾಗೂ ಹೀಗೂ ತರಗತಿಗಳು ನಡೆಯುತ್ತಿದ್ದವು. ಸಮಸ್ಯೆ ಉದ್ಭವಾಗಿದ್ದು ಈ ಶಿಕ್ಷಕರಿಗೆ ವೇತನ ನೀಡುವಲ್ಲಿ...ಒಟ್ಟು ಮೂರುಜನ ಶಿಕ್ಷಕರಿಗೆ?! ವಿದ್ಯಾರ್ಥಿಗಳು ಮಾಸಿಕ ಶುಲ್ಕವನ್ನು ಸರಿಯಾಗಿ ನೀಡುತ್ತಿರಲಿಲ್ಲ. ಏಕಂದರೆ ನೊಂದಣಿಯಾದ ಶಾಲಾ ದಾಖಲೆಗಳು ಕಾರ್ಯದರ್ಶಿ ಚಂದ್ರಶೇಖರಯ್ಯನವರ ಬಳಿಯಿದ್ದವು. ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿಗಳಲ್ಲಿ
ಹೊಸಹಳ್ಳಿ(ನಮ್ಮೂರು), ಮರೂರು, ಜಂಗಮರಹಳ್ಳಿ, ಬುಡುಸನಹಳ್ಳಿ, ಮಂಗಳವಾಡ, ತುಮಕುಂಟೆ, ಅರಸೀಕೆರೆ, ಗುಜ್ಜಾರಹಳ್ಳಿ, ಶಾಮರಾಯನ ಪಾಳ್ಯ, ಆಂದ್ರದ ಮಡಕಶಿರಾ ತಾಲ್ಲೂಕಿನ ಚಿಟ್ಟನಡುಕು. ಇದರಲ್ಲಿ ಅರಸೀಕೆರೆ ಮತ್ತು ಮಂಗಳವಾಡದಿಂದ ಬರುತ್ತಿದ್ದ ಹುಡುಗಿಯರೂ ಸೇರಿದ್ದರು.

ನನಗೂ ರಾಮಚಂದ್ರನಿಗೂ ಇದ್ದ ತೊದರೆಯೆಂದರೆ ನಮ್ಮ ಸೋದರಮಾವ ಕರಿಯಣ್ಣ…ಆತ ಎದುರು ಗಂಪಿನ ಬೆಂಬಲಕ್ಕಿದ್ದುದರಿಂದ ನಿತ್ಯವೂ ನಮ್ಮ ಮನೆಗೆ ಬಂದು ನಮಗೆ ಅಲ್ಲೇಕೆ ಶಾಲೆಗೆ ಹೋಗುತ್ತಿದ್ದೀರ..? ಎಂದು ಕೆಂಗಣ್ಣು ಬೀರಿ ಹೆದರಿಸುತ್ತಿದ್ದ. ನನ್ನಪ್ಪ-ಅಮ್ಮನ ಬಳಿ ಚಾಡಿ ಹೇಳಿ ಚಂದ್ರಶೇಖರಯ್ಯನ ಶಾಲೆಗೆ ಕಳುಹಿಸುವಂತೆ ತಾಕೀತು ಮಾಡುತ್ತಿದ್ದ. ಅಲ್ಲಿದ್ದ ಶಿಕ್ಷಕರೆಂದರೆ ಶ್ರೀಯುತರಾದ ಚಂದ್ರಶೇಖರಯ್ಯನವರು ಅವರ ಚಿಕ್ಕಪ್ಪ ದೇವೇಗೌಡರ ಮಗ ಶ್ರೀ ಹೆಚ್‌.ಡಿ.ಮಲ್ಲಿಕಾರ್ಜುನಗೌಡ ಮತ್ತು ಇನ್ನೊಬ್ಬ ಚಿಕ್ಕಪ್ಪನ ಮಗ ಇದೇ ಶಾಲೆಯಲ್ಲಿ 10ನೇ ತರಗತಿ ಎಸ್ಸೆಸ್ಸೆಲ್ಸಿ ಬರೆದ ಶ್ರೀಯುತ ಹೆಚ್‌.ಕೆ. ಜಗನ್ನಾಥ್‌. ಈ ಸಮಸ್ಯೆಯನ್ನರಿತ ನಾವಿಬ್ಬರೂ ಅಲ್ಲೊಂದಷ್ಟು ದಿನ ಇಲ್ಲೊಂದಷ್ಟು ದಿನ ಶಾಲೆಗೆ ಹೋಗಲು ಪ್ರಾರಂಭಿಸಿದೆವು. ಇದು ಎಷ್ಟು ದಿನಗಳ ಕಾಲ ನಡೆಯಿತೋ ಗೊತ್ತಿಲ್ಲ. ಶಾಲೆ ಅವನತಿಯ ಕಡೆಗೆ ಸಾಗಿತ್ತು. ಶಿಕ್ಷಕರಿಗೆ ವೇತನ ಪಾವತಿಯಾಗಿರಲಿಲ್ಲ. ಯಾಕಂದರೆ ಶಾಲೆಗೆ ಸರ್ಕಾರದ ಅನುದಾನ ಇನ್ನೂ ಸಿಕ್ಕಿರಲಿಲ್ಲ. ಧಸರೆ ರಜೆ ವೇಳೆಗೆ ಶಿಕ್ಷಕರು ಒಬ್ಬೊಬ್ಬರಾಗಿ ಕಳಚಿಕೊಳ್ಳತೊಡಗಿದರು. ಇದೇ ಸಮಯದಲ್ಲಿ ಶಾಲೆಯ ಕುರಿತು ಯಾರೋ ಬರೆದಿದ್ದ ದೂರು ಅರ್ಜಿಯ ವಿಚಾರಣೆ ಮತ್ತು ತನಿಖೆಗಾಗಿ ತುಮಕೂರಿನಿಂದ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ತನಿಖೆಗೆ ಮತ್ತು ವಿಚಾರಣೆಗೆ ಬಂದಿದ್ದರು. ಅವರು ದಢೂತಿ ಮಹಿಳೆಯಾಗಿದ್ದರು ಎಂಬುದೊಂದು ವೀಶೇಷ. ಆ ದಿನ ನಮ್ಮೂರಿನ ಹುಡುಗರು ಮತ್ತಿನ್ನಿತರ ಬೆರಳೆಣಿಕೆಯಷ್ಟು ಹುಡುಗರು ಅವರ ಮುಂದೆ ಹಾಜರಾಗಬೇಕಾಯಿತು. ಹೊಸದಾಗಿ ಬಂದಿದ್ದ ಶಿಕ್ಷಕ ರಾಮಚಂದ್ರಯ್ಯನವರು ಇನ್ನೂ ಬರುತ್ತಿದ್ದುದರಿಂದ ಅವರೂ ಹಾಜರಾಗಿದ್ದರು. ಜೊತೆಗೆ ನಮ್ಮ ಇನ್ನೊಬ್ಬ ಮಾವ ಶ್ರೀಯುತ ಹೆಚ್‌.ಎಂ. ಹನುಮಂತಣ್ಣನವರು ಹಾಜರಿದ್ದರು. ಇವರು ಇದೇ ಶಾಲೆಯ ಪ್ರಾರಂಭದ ದಿನಗಳಲ್ಲಿ ಇಲ್ಲಿಯೇ ಉಪಾಧ್ಯಾಯ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸಿದ್ದರು. ಆಮೇಲೆ ತುಮಕೂರಿನ ಸಿದ್ದಗಂಗಾ ಮಠದ ಗುಡೇಮಾರನಹಳ್ಳಿ ಶಾಖಾ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯ/ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ವಾಸ...ಕುಟುಂಬ ಸಹಿತ ತುಮಕೂರು. ಬಹುಷಃ ಅವರು ಬಿ.ಎಡ್‌ ಓದಲು ತೆರಳಿದವರು ಮತ್ತೆ ನಮ್ಮೂರ ಶಾಲೆಗೆ ಹಿಂದಿರುಗಿ ಬಂದಿರಲಿಲ್ಲವೆಂದನಿಸುತ್ತದೆ. ಅದು ಸರಿಯಾಗಿ ನನಗೆ ಗೊತ್ತಿಲ್ಲ. ನಾನೇಂದೂ ಅವರನ್ನು ಆ ಬಗ್ಗೆ ಕೇಳಲಿಲ್ಲ. ಉಪನಿರ್ದೇಶಕರ ಭೇಟಿಯ ಹಿಂದಿನ ಉದ್ದೇಶ ಶಾಲೆಯ ಆಡಳಿತವನ್ನು ಸಂಪೂರ್ಣವಾಗಿ ಸಿದ್ದಗಂಗಾ ಮಠದ ಆಡಳಿತಕ್ಕೆ ವಹಿಸಿಕೊಡುವ ಇರಾದೆಯಾಗಿತ್ತೆಂದು ನನಗನಿಸುತ್ತದೆ… ಏಕೆಂದರೆ ಹೆಚ್‌.ಎಂ ಹನುಮಂತಣ್ಣನವರು ಆಗ ಅಲ್ಲಿ ಹಾಜರಿದ್ದುದರಿಂದ?! ಆದರದು ನನ್ನ ಭಾವನೆಯಷ್ಟೆ. ಧಸರೆ ರಜೆಯೊಂದಿಗೆ ಶಾಲೆ ಮುಚ್ಚಿಹೋಗಿತ್ತು. ನನ್ನ ಸಹಪಾಠಿಗಳಾದ ಸಬ್ರಮಣ್ಯ ಮತ್ತು ನಾಗಭೂಷಣ ಆ ದಿನಗಳಲ್ಲಾಗಲೇ ವರ್ಗಾವಣೆ ಪತ್ರ ಪಡೆದುಕೊಂಡು ಹೊರಟುಹೋಗಿದ್ದರು.

ಒಂದು ಸಂಪರ್ಕ ರಸ್ತೆ ಕತೆ
ನಮ್ಮೂರಿನ ಘಾಳೇಗೌಡರ ಚಿಕ್ಕಣ್ಣನವರ ಜಮೀನು ಮತ್ತು ಜಂಗಮರಹಳ್ಳಿಯ ಈರೇಗೌಡರ ಜಮೀನುಗಳ ಮಧ್ಯೆ ಸಣ್ಣ ಓಣಿ ರೀತಿಯ ಹಳ್ಳವೊಂದಿತ್ತು. ಏಳೆಂಟು ವರ್ಷಗಳ ಚಿಕ್ಕ ಹುಡುಗನಾಗಿದ್ದಾಗ ನಾನು ಆ ಓಣಿಯ ಹಳ್ಳದ ಬೇಲಿಗಳಲ್ಲಿ ಬೆಳೆದಿರುತ್ತಿದ್ದ ಹುಲಿ-ಹಣ್ಣಿನ ಬಳ್ಳಿಪೊದೆಗೆ ನುಗ್ಗಿ ಹಣ್ಣುಗಳನ್ನು ಕಿತ್ತು ತಿನ್ನುತ್ತಿದ್ದುದು ನನಗಿನ್ನೂ ಜ್ಞಾಪಕವಿದೆ. ಮುಂದೆ ಈ ಹಳ್ಳದ ಓಣಿಯಲ್ಲಿ ಆಗಿನ ಭಾರತ/ಮೈಸೂರು ರಾಜ್ಯ ಸರ್ಕಾರವು 60ರ ದಶಕದ ಆರಂಭದಲ್ಲಿ ನಡೆಸಿದ ಬರಗಾಲ-ನಿವಾರಣೆ ಕೆಲಸದಲ್ಲಿ ಸೇರಿಸಿಕೊಂಡು ಮರೂರು-ಹೊಸಹಳ್ಳಿ(ನಮ್ಮೂರು) ಮಧ್ಯೆ ಕೊರತೆಯಿದ್ದ ಒಂದು ಸಂಪರ್ಕ-ರಸ್ತೆ ನಿರ್ಮಾಣ ಮಾಡಿದ್ದರು. ಇದಕ್ಕೆ ಬಲಿಯಾಗಿ ಎರಡೂ ಕಡೆ ಒಂದೂವರೆ ಮೀಟರುಗಳಷ್ಟು ಪಕ್ಕದ ಜಮೀನುಗಳ ಜಾಗ ಬೇಲಿಯೊಂದಿಗೆ ರಸ್ತೆಗೆ ಸೇರಿಕೊಂಡಿದ್ದವು. ಈರೇಗೌಡರ ಜಮೀನಿನಲ್ಲಿ ರಸ್ತೆಯ ಪಕ್ಕದಲ್ಲಿ ಮೊದಲಿನಂತೆ ಹಳ್ಳದ ನೀರು ಹರಿದು ಹೋಗಲು ಚರಂಡಿ ಮಾಡಲಾಗಿದ್ದಿತು. ಒಟ್ಟಿನಲ್ಲಿ ಕಾರುಗಳು, ಜೀಪುಗಳು, ಲಾರಿಗಳು, ಬಸ್ಸುಗಳು ಓಡಾಡುವಷ್ಟು ಅಗಲದ ರಸ್ತೆಯಾಗಿದ್ದಿತು. ಇದಲ್ಲದೆ ಪಕ್ಕದ ಇನ್ನಿತರ ಹಳ್ಳಿಗಳಿಗೆ ಬರೀ ಎತ್ತಿನ ಗಾಡಿಗಳೇ ಓಡಾಡುವಂತೆ ಇದ್ದ ಬಂಡಿಜಾಡುಗಳನ್ನು ಅಗಲ-ಸಮತಟ್ಟು ಮಾಡಿ ಸುಗಮ ಮಾಡಿದ್ದರು.


ಎರಡು ಗುಂಪಿನ ನಡುವೆ ಹೆಚ್ಚಿದ ವೈಷಮ್ಯ ಹೊಗೆಯಾಡುತ್ತಿದ್ದ ಧ್ವೇಷ
ಮುಚ್ಚಿಹೋಗಿದ್ದ ಶಾಲೆಯ ಸಂಬಂಧದ ಧ್ವೇಷ ಒಳಗೊಳಗೆ ಹೊಗೆಯಾಡುತ್ತಿತ್ತು. ಹೊಸಹಳ್ಳಿಯ ಎದುರು ಗುಂಪಿನ ಜನತೆಯ ಮೇಲೆ ಧ್ವೇಷ ತೀರಿಸಿಕೊಳ್ಳಲು ಚಂದ್ರಶೇಖರಯ್ಯನವರ ಬೆಂಬಲಿಗ ಜಂಗಮರಹಳ್ಳಿಯ ಈರೇಗೌಡರು ಹವಣಿಕೆ ಹಾಕಿದ್ದರು. ಘಾಳೇಗೌಡರ ಜಮೀನು ಮತ್ತು ಈರೇಗೌಡರ ಜಮೀನುಗಳ ಮಧ್ಯೆ ನಿರ್ಮಿಸಲಾಗಿದ್ದ ಹೊಸರಸ್ತೆಯ ಚರಂಡಿಯನ್ನು ಉಪಯೋಗಿಸಿಕೊಳ್ಳುವ ಮಸಲತ್ತಾಗಿತ್ತು. ಹೊಸಹಳ್ಳಿ, ಬುಡುಸನಹಳ್ಳಿ-ಜಂಗಮರಹಳ್ಳಿ ಮಳೆ ನೀರಹರಿವಿನ ಕೆಳಭಾಗಕ್ಕೆ ಬರುತ್ತದೆ. ಬುಡಸನಹಳ್ಳಿಯ ಪಾಸಲೆಯಿಂದ ಜಂಗಮರಹಳ್ಳಿ ಪಕ್ಕದಲ್ಲಿ ಹರಿದು ಬರುತ್ತಿದ್ದ ಸಣ್ಣ ಹಳ್ಳವೊಂದಿತ್ತು. ಇದಕ್ಕೆ ಸಾಮಾನ್ಯವಾಗಿ 'ಹೇಲ್ಹಳ್ಳ' ಎಂದು ಕರೆಯುವುದು ವಾಡಿಕೆಯಿತ್ತು. ಇದರ ಮಾರ್ಗ ಮೇಲಿಂದ ಹರಿದುಬಂದು ನಮ್ಮ ಎಂ.ಚಂದ್ರಶೇಖರಯ್ಯನವರ ನೀರಾವರಿ ಜಮೀನಿನ ಮಂಟಪದ-ಬಾವಿಗೆ ಅಡ್ಡಲಾಗಿ ನಿರ್ಮಿಸಿದ ಏರಿ ಬಳಿ ಹರಿದು ಬಾವಿಯ ಹಿಂಭಾಗಕ್ಕೆ ನಿರ್ಮಿಸಲಾದ ಸಣ್ಣಕಟ್ಟೆಗೆ ಸೇರಿ ನೀರು ನಿಂತುಕೊಳ್ಳುತ್ತಿತ್ತು. ಹೊಂಡುಮಣ್ಣಿನ ಕೆಂಪುನೀರು ನಿಂತು-ನಿಂತು ತಳದಲ್ಲಿ ಜಿಗುಟುಮಣ್ಣು ಕೇಂದ್ರೀಕೃತವಾಗಿತ್ತು. ಬೇಸಗೆಯಲ್ಲಿ ಬತ್ತಿಹೋಗುತ್ತಿದ್ದುದರಿಂದ ತಳದ ಜಿಗುಟುಮಣ್ಣನ್ನು ಹೊಸದಾಗಿ ಮನೆ ಕಟ್ಟುವವರು ಮತ್ತು ಮನೆ ತೇಪೆಮಾಡಿಕೊಳ್ಳುವವರು ಮಣ್ಣನ್ನಗೆದು ತೆಗೆದುಕೊಂಡು ಹೋಗುತ್ತಿದ್ದರು. ಹಾಗಾಗಿ ಅಲ್ಲೊಂದು ದೊಡ್ಡ ಗುಂಡಿಯಾಗಿದ್ದಿತು. ಅದನ್ನು ಊರಿನವರು ಕೆಮ್ಮಣ್ಣುಗುಂಡಿಯೆಂದೇ ಕರೆಯುತ್ತಿದ್ದರು. ಈ ಗುಂಡಿ ಸರಿಯಾಗಿ ಚಂದ್ರಶೇಖರಯ್ಯನವರು ವಾಸವಿದ್ದ ಮನೆಯ ಹಿಂಭಾಗಕ್ಕೆ ಅನತಿ ದೂರದಲ್ಲಿಯೇ ಇತ್ತು. ಈ ಗುಂಡಿಯ ಕೆಮ್ಮಣ್ಣನ್ನೇ ಶಾಲಾಕಟ್ಟಡ ನಿರ್ಮಿಸಲೂ ಉಪಯೋಗಿಸಿದ್ದರು. ಮಳೆಗಾಲದ ದಿನಗಳಲ್ಲಿ ಮೇಲಿನಿಂದ ಹರಿದು ಬರುತ್ತಿದ್ದ ನೀರು ಇಲ್ಲಿ ನಿಂತುಕೊಳ್ಳುತ್ತಿತ್ತು. ಈ ಕಟ್ಟೆ ತುಂಬಿಕೊಂಡು ಹೆಚ್ಚುವರಿ ನೀರು ಹೊರಹರಿದು ಹೋದುದನ್ನು ನಾನೆಂದೂ ನೋಡಿರಲಿಲ್ಲ. ಬಹಷಃ ಈ ಕಟ್ಟೆಯಿಂದ ಹರಿದು ಮುಂದೆ ಹೋಗುತ್ತಿದ್ದ ಹೆಚ್ಚುವರಿ ನೀರು ಹರಿಜನ ಕೇರಿಯ ಜೂಲಪ್ಪನ ಮನೆ ಹಿಂದು-ಮುಂದು ಸುತ್ತುವರಿದು ಹರಿದು ಈಮೊದಲು ತಿಳಿಸಿದ ಎರಡು ಜಮೀನುಗಳ ಮಧ್ಯದ ಓಣಿ-ಹಳ್ಳದಲ್ಲಿ ಹರಿಯುತ್ತಾ ವೀರನಾಗಪ್ಪನ ಗುಡಿಯ ದೊಡ್ಡ-ಹಳ್ಳಕ್ಕೆ ಸೇರುತ್ತಿತ್ತೆಂದು ಕಾಣಿಸುತ್ತದೆ. ಮೇಲಿನ ಕಟ್ಟೆಯಿಂದಾರಂಬಿಸಿ ಹರಿಜನರ ಕೇರಿಯಾಂತ್ಯದ ಹೊಸರಸ್ತೆಯ ಚರಂಡಿಯವರೆಗೆ…ಈರೇಗೌಡರ ಜಮೀನಿನ ಕಡೆಗೆ ನೀರು ನುಗ್ಗದಂತೆ ತಡೆಯೇರಿಯನ್ನು ಹಾಕಿಕೊಂಡು ಅದರುದ್ದಕ್ಕೂ ಹೊಂಗೆ ಗಿಡಗಳನ್ನು ಬೆಳಸಿದ್ದರವರು. ಇದೀಗ ಎಲ್ಲರಿಗೂ ಅರ್ಥವಾಗಿದೆಯೆಂದು ತಿಳಿಯುತ್ತೇನೆ...ಹೇಲ್ಹಳ್ಳದ ನೀರು, ಕೆಮ್ಮಣ್ಣುಗುಂಡಿ ಕಟ್ಟೆ, ಹೊಸರಸ್ತೆಯ ಚರಂಡಿ...ಜಂಗಮರಹಳ್ಳಿ ಈರೇಗೌಡರ ಧ್ವೇಷ-ಬ್ರಹ್ಮಾಸ್ತ್ರ?!

ಊರಿನ ಮೇಲೆ ಹರಿದ ಹಳ್ಳದ ಪ್ರವಾಹ
ಧಸರ ಕಾಲದ ಆಸುಪಾಸೆಂದರೆ ಮುಂಗಾರು ಮಳೆಯ ಪರ್ವಕಾಲ…ಹಿಂಗಾರು ಮಳೆಗಾಲ ಆರಂಭ, ಬಯಲುಸೀಮೆಗೆ ವರ್ಷಕಾಲ. ಒಂದು ದಿನ ಇದ್ದಕ್ಕಿದ್ದಹಾಗೆ ಈರೇಗೌಡರ ಜಮೀನಿನಲ್ಲಿ ಮಣ್ಣನ್ನು ಅಗೆದು ರಸ್ತೆಬದಿಯ ಚರಂಡಿಯನ್ನು ಭರ್ತಿಮಾಡುತ್ತಿದ್ದರು ಅವರಿಟ್ಟ ಕೂಲಿಕೆಲಸಗಾರರು. ಆ ಕೆಲಸ ಎರಡು ದಿನಗಳಲ್ಲಿ ಹರಿಜನಕೇರಿಯಿಂದ ಪ್ರಾರಂಬಿಸಿ ವೀರನಾಗಪ್ಪನ ಗುಡಿಯ ಹತ್ತಿರದ ದೊಡ್ಡ-ಹಳ್ಳದವರೆಗೆ ಚರಂಡಿಯನ್ನು ಎತ್ತರವಾಗಿ ಪೂರ್ಣವಾಗಿ ಮುಚ್ಚಿ ದೊಡ್ಡದೊಡ್ಡ ಕತ್ತಾಳೆ ಗಿಡಗಳನ್ನು ಬೇಲಿಯಾಗಿ ನೆಟ್ಟಿದ್ದರು. ಅದಾದ ಮೇಲೆ ಕೆಲದಿನಗಳಲ್ಲಿಯೇ ಒಂದು ದಿನ ರಾತ್ರಿ 11:30ರ ವೇಳೆಗೆ ಪ್ರಾರಂಭವಾದ ಬಿರುಸಾದ ಮಳೆ ಮಧ್ಯರಾತ್ರಿ ಕಳೆದು ಸಮಾರು ಎರಡು ಗಂಟೆಗಳ ಕಾಲ ಸುರಿಯಿತು. ಈ ಮಳೆಯ ಹೊಡೆತವನ್ನು ಕಂಡ ಊರಿನ ಜನತೆ ಕಂಗಾಲಾದರು. ಮಳೆ ನಿಲ್ಲುವ ಸಮಯದವರೆಗೂ ಯಾರೂ ನಿದ್ರೆ ಮಾಡಿರಲಿಲ್ಲ. ಆ ವೇಳೆಗೆ ಊರೊಳಗೆ ಹೇಲ್ಹಳ್ಳದ ಪ್ರವಾಹದ ನೀರು ಹರಿಯುವ ಸದ್ದಾಗುತ್ತಿತ್ತು. ಊರಿನ ಉತ್ತರ-ದಕ್ಷಿಣ ಎರಡೂ ಪಕ್ಕಗಳಲ್ಲಿ ಪೂರ್ವ-ಪಶ್ಚಿಮವಾಗಿ ಹರಿಯುತ್ತಿದ್ದ ಎರಡೂ ಹಳ್ಳಗಳ ಹರಿವಿನ ಭೋರ್ಗರೆತವೂ ಕೇಳಿ ಬರುತ್ತಿತ್ತು. ಹೇಲ್ಹಳ್ಳದ ನೀರಿನ ಪ್ರವಾಹವೂ ಪೂರ್ವದಿಂದ ಪಶ್ಚಿಮದ ಕಡೆಗೇ ಹರಿಯುತ್ತಿದ್ದಿದು. ನಾವು ವಾಸವಿದ್ದ ಮನೆಯ ಮುಂಬಾಗಿಲು ಪೂರ್ವಾಭಿಮುಖವಾಗಿಯೇ ಇದ್ದಿತು. ನೀರಿನ ಹರಿವು ನಮ್ಮ ಮನೆ ಬಾಗಿಲ ಹೊಸಲಿನ ಮುಕ್ಕಾಲು ಭಾಗಕ್ಕೇರಿದ್ದಿತು. ನಮ್ಮ ಮನೆಬಾಗಿಲಿನ ಹೊಸಿಲು ಸ್ವಲ್ಪ ಎತ್ತರವಾಗಿ ದೊಡ್ಡದಾಗಿದ್ದಿತು. ಆದಾಗ್ಯೂ ಮನೆಯ ಹತ್ತಿರ ತಂದಿಟ್ಟುಕೊಂಡಿದ್ದ ಕರಲು ಮಣ್ಣಿನಲ್ಲಿ ಹೊಸಲಿನ ಮೇಲೆ ಕಟ್ಟೆಯನ್ನು ಕಟ್ಟಿ ನೀರು ಒಳನುಗ್ಗದಂತೆ ಮುಂಜಾಗರೂಕತೆ ವಹಿಸಿದೆವು. ಕೆಳಮಟ್ಟದಲ್ಲಿದ್ದ ಮನೆಗಳ ಬಾಗಿಲುಗಳ ಮೂಲಕ ನೀರು ಒಳನುಗ್ಗಿದ್ದಿತು. ಅಡಿಗೆ ಮನೆಗಳಲ್ಲಿದ್ದ ಅಲ್ಯೂಮಿನಿಯಂ ಪಾತ್ರೆಗಳು ನೀರಿನಲ್ಲಿ ತೇಲಾಡಿದವು. ಚಂದ್ರಶೇಖರಯ್ಯನ ಪ್ರಬಲ ವಿರೋಧಿಯೆನಿಸಿದ್ದ ಮಾದಿಗರಬಾವಿ ಕರಿಯಣ್ಣನವರ ಮನೆಯೂ ಈ ಗುಂಪಿಗೆ ಸೇರಿಕೊಂಡುಬಿಟ್ಟಿತ್ತು. ಬೆಳಗಿನಜಾವ ಸುಮಾರು 02:00 ಗಂಟೆ ವೇಳೆಗೆ ಮಳೆ ಕಡಿಮೆಯಾಗಿ ನಿಂತು ಹೋಗಿತ್ತು. ರಾತ್ರಿಯಿಡೀ ಊರಲ್ಲಿ ಯಾರೂ ನಿದ್ರೆ ಮಾಡಿರಲಿಲ್ಲ.

ಪೂರ್ಣ ಬೆಳಗಾಗುವುದರೊಳಗೆ ನೆರೆಹಾವಳಿ ಕಡಿಮೆಯಾಗಿತ್ತು. ಊರಿನ ಜನ ಎಲ್ಲೆಲ್ಲಿ ಏನೇನು ಅನಾಹುತವಾಗಿದೆಯೆಂದು ಪರಿವೀಕ್ಷಣೆ ಮಾಡುತ್ತಿದ್ದರು. ಹರಿಜನರ ಕೇರಿಯಿಂದ ಪ್ರಾರಂಬಿಸಿ ಕೆಳಗೆ ವೀರನಗೌಡನ ಬಾವಿ ಜಮೀನಿನವರೆಗೆ ಇದ್ದ ಹೊಸಕಾಮಗಾರಿ ರಸ್ತೆಯಲ್ಲಿ ಪ್ರವಾಹದ ನೀರು ಹರಿದಿತ್ತು. ಪ್ರವಾಹವು, ಮೇಲಿನಿಂದ ಸೇರಿ ಮಾರಮ್ಮನ ಗುಡಿಯ ಸುತ್ತಲೂ ಸಹ ಗಾಡಿಗಳು ಓಡಾಡದಂತೆ ರಸ್ತೆಯನ್ನು ಕೊರೆದುಕೊಡು ಹೋಗಿ ಮರಳು ಮತ್ತು ಹೊಂಡನ್ನು ಕೆಳಗಿನ ವೀರನಗೌಡನ ಬಾವಿ ಜಮೀನಿನಲ್ಲಿ ಹರಡಿದ್ದಿತು. ಅಲ್ಲಿನ ಬೆಳೆಯಲ್ಲಾ ಕೊಚ್ಚಿಹೋಗಿ ಹಾಳಾಗಿದ್ದಿತು. ಪುನಃ ಆದಿನ ರಾತ್ರಿಯೂ ಮಳೆ ಬಂದಿತು. ಆದರೆ ಹಿಂದಿನ ದಿನ ರಾತ್ರಿ ಬಂದಷ್ಟು ಮಳೆಯಾಗಿರಲಿಲ್ಲ. ಕೆಮ್ಮಣ್ಣುಗುಂಡಿ ಮೊದಲೇ ತುಂಬಿದ್ದುದರಿಂದ ಹೇಲ್ಹಳ್ಳದಲ್ಲಿ ಬಂದ ನೀರು ಬಂದಂತೆ ಆದಿನವೂ ಹರಿದುಹೋಯಿತು. ಆದರೆ ಹಿಂದಿನ ರಾತ್ರಿ ಆದಂತೆ ನೆರೆಹಾವಳಿಯೇನು ಆಗಲಿಲ್ಲ...ಕೊರೆದ ರಸ್ತೆಯಲ್ಲಿ ಹರಿದುಹೋಯಿತು.

ತೆರವಾದ ರಸ್ತೆ ಬದಿಯ ದೊಡ್ಡ ಚರಂಡಿ
ಈ ಪ್ರವಾಹಕ್ಕೆ ಸಂಬಂಧಿಸಿದಂತೆ ಹೊಸಹಳ್ಳಿಯ ಜನತೆ ದೂರು ಅರ್ಜಿಯನ್ನು ತುಮಕೂರಿನ ಜಿಲ್ಲಾಧಿಕಾರಿಗಳಿಗೆ, ಮಧುಗಿರಿಯ ಉಪವಿಭಾಗಾಧಿಕಾರಿಯವರಿಗೆ, ಪಾವಗಡದ ತಹಶೀಲುದಾರರಿಗೆ ಮತ್ತು ಸಂಬಂಧಿಸಿದಂತೆ ಆಯಾ ವ್ಯಾಪ್ತಿಯ ಪೊಲೀಸು ಅಧಿಗಾರಿಗಳಿಗೆ ಬರೆಯಲಾಗಿದ್ದಿತು. ಈ ವಿಷಯವಾಗಿ ತಾಲ್ಲೂಕು ಕಂದಾಯಾಧಿಕಾರಿಯಾದ ತಹಶೀಲುದಾರರು ಮತ್ತು ಪೊಲೀಸು ಅಧಿಕಾರಿಗಳು ಪರಿಶೀಲನೆಗೆ ಭೇಟಿ ನೀಡಿ ಮಣ್ಣು-ಭರ್ತಿ ಮಾಡಿದ್ದ ಚರಂಡಿಯನ್ನು ತೆರವುಮಾಡಲು ದಿನ ನಿಗದಿಪಡಿಸಿ ಆದಿನ ಹೊಸಹಳ್ಳಿಯ ಜನತೆ ಹಾಜರಿರಲು ತಿಳಿಸಿದ್ದರು. ಈರೇಗೌಡರ ಕಡೆಯವರು ಆ ಕಾಲದಲ್ಲಿ ಕೊಲೆಗಳನ್ನು ಮಾಡುತ್ತಿದ್ದನಲಾದ ರೌಡಿಯೊಬ್ಬನನ್ನು ಶಿರಾ ತಾಲ್ಲೂಕಿನ ತಡಕಲೂರಿನಿಂದ ಕರೆಯಿಸಿಕೊಂಡು ಕೊಡಲಿ ಮಚ್ಚು ದೊಣ್ಣೆಗಳಿಂದ ಹೊಸಹಳ್ಳಿಯವರನ್ನು ಆದಿನ ಹೊಡೆಯಬೇಕೆಂದು ಗಂಪುಕಟ್ಟಿಕೊಂಡು ಕಾಯುತ್ತಿದ್ದರು.

ನಿಗದಿಯಾದ ದಿನ ಸುಮಾರು ಬೆಳಗ್ಗೆ 11.00 ಗಂಟೆ ವೇಳೆಗೆ ಪಾವಗಡದಿಂದ ತಹಶೀಲುದಾರರು ಸಾಕಷ್ಟು ಪೊಲೀಸು ಸಿಬ್ಬಂದಿಯೊಡನೆ ಜೀಪು ವ್ಯಾನುಗಳ ಸಹಿತ ಹಾಜರಾದರು. ಪ್ರವಾಹದ ಅನಾಹುತ ಮತ್ತು ರಸ್ತೆಪಕ್ಕದ ಚರಂಡಿಯನ್ನು ಮುಚ್ಚಿ ಕತ್ತಾಳೆ ಗಿಡಗಳನ್ನು ಹೂಳಿದ್ದ ಸ್ಥಳ ಪರಿಶೀಲಿಸಿದ ತಹಶೀಲುದಾರರು ಎರಡೂ ಕಡೆಯ ಜನರಿಗೆ ತಿಳಿಯ ಹೇಳಿ ಮುಚ್ಚಿದ ಚರಂಡಿಯನ್ನು ತೆರವುಮಾಡಲು ಆದೇಶಿಸಿದರು. ಜಂಗಮರಹಳ್ಳಿ ಈರೇಗೌಡರ ಕಡೆಯ ಗುಂಪಿಗೆ ತಿಳಿಯ ಹೇಳಿ ಯಾರಾದರೂ ಅಡಚಣೆ ಮಾಡಿದಲ್ಲಿ ಕೂಡಲೆ ಬಂದಿಸಿ ಪೊಲೀಸು ಠಾಣೆಗೆೊಯ್ಯುವುದಾಗಿ ಬೆದರಕೆ ಹಾಕಿದರು. ನಂತರ ಹೊಸಹಳ್ಳಿಯ ಜನ ನಿಯೋಜಿಸಿದ್ದ ಕೂಲಿಯಾಳುಗಳು ಸಲಿಕೆ ಗುದ್ದಲಿ ಹಾರೆಗಳನ್ನು ತೆಗೆದುಕೊಂಡು ಸಾಯಂಕಾಲದವರೆಗೆ ಕೆಲಸಮಾಡಿ ಮುಚ್ಚಿದ ಚರಂಡಿಯನ್ನು ತೆರವುಗೊಳಿಸಿದರು. ಆದಿನ ಈಕಾರ್ಯಕ್ಕೆ ಆಗಮಿಸಿದ್ದ ಎಲ್ಲಾ ಅಧಿಕಾರಿಗಳಿಗೆ ಪೊಲೀಸಿನವರಿಗೆ ಮತ್ತು ಕೂಲಿ ಕೆಲಸಗಾರರಿಗೆ ಊಟ ತಿಂಡಿ ಮತ್ತು ಕಾಪಿ಼ಯ ವ್ಯವಸ್ಥೆಯನ್ನು ಹೊಸಹಳ್ಳಿಯ ಜನತೆ ನೋಡಿಕೊಂಡಿತು.

ಸಿದ್ದಗಂಗೆ ಮಠದ ಸ್ವಾಮೀಜಿಗಳ ಭೇಟಿ
ಧಸರೆ ರಜೆ ಮುಗಿದ ಮೇಲೂ ಶಾಲೆ ತೆರೆಯಲಿಲ್ಲ. ಈಮಧ್ಯೆ ಶ್ರೀ ಹೆಚ್‌.ಎಂ.ಹನುಮತಣ್ಣನವರನ್ನು ಮುಂದೆ ಇಟ್ಟುಕೊಂಡು ಶಾಲೆಯನ್ನು ತುಮಕೂರಿನ ಶ್ರೀ ಸಿದ್ದಗಂಗಾಮಠದ ಆಡಳಿತಕ್ಕೆ ಒಪ್ಪಿಸುವ ಹುನ್ನಾರ ನಡೆಯುತ್ತಿತ್ತು. ಇದಕ್ಕಾಗಿ ಮಠಕ್ಕೆ ಎರಡು-ಮೂರು ಬಾರಿ ಭೇಟಿನೀಡಿ ಮಠದ ಸ್ವಾಮೀಜಿ ಶ್ರೀ ಶಿವಕುಮಾರಸ್ವಾಮಿಗಳನ್ನು ಹೊಸಹಳ್ಳಿಗೆ ಆಹ್ವಾನಿಸಿ ಅವರ ಬರುವಿಗಾಗಿ ದಿನ ನಿಗದಿಪಡಿಸಿದ್ದರು. ಸ್ವಾಮಿಗಳು ಭೇಟಿ ನೀಡುವ ದಿನದಂದು ಊರಿನೊಳಕ್ಕೆ ಬಂದುಸೇರುವ ರಸ್ತೆ ಪ್ರವೇಶದಲ್ಲಿ ತೋರಣ ಕಟ್ಟಿ ಸಿಂಗಾರ ಮಾಡಿದ್ದರು. ನಮ್ಮ ಹೆಚ್‌.ಎಂ.ಹನುಮಂತಣ್ಣನವರ ತಂದೆ ಮಲ್ಲೇಗೌಡರು ತಳಿರುತೋರಣದ ಪ್ರವೇಶಧ್ವಾರದ ಬಳಿಯೇ ತಲೆಗೆ ರುಮಾಲು, ಅವರ ಮಾಮೂಲು ಉದ್ದನೆ ದೊಗಲೆಯಂಗಿ, ಪಂಚೆಯುಟ್ಟು...ಒಟ್ಟಾರೆ ಶುಚಿರ್ಭೂತರಾಗಿ ರಸ್ತೆಯಮೇಲೆ ಸ್ವಾಮಿಗಳನ್ನು ಎದುರ್ಗೊಳ್ಳಲು ಕುಳಿತಿದ್ದರು. ಸುಮಾರು ಮಧ್ಯಾಹ್ನದ ವೇಳೆಗೆ ಸ್ವಾಮಿಗಳ ಕಾರು ಬಂದಿತು. ನಮ್ಮ ಮಲ್ಲೇಗೌಡರು ಶ್ರೀ ಶಿವಕುಮಾರಸ್ವಾಮಿಗಳು ಕಾರಿನಿಂದ ಇಳಿಯುತ್ತಲೇ ಹೋಗಿ ಅವರ ಕಾಲಿಗೆ ಸಾಷ್ಟಾಂಗವೆರಗಿದರು. ಕಾವಿ ವಸ್ತ್ರಧಾರಿಗಳಾಗಿದ್ದ ಅವರು ಸುಮಾರು 57-58 ವಸಂತಗಳನ್ನು ಕಂಡಿರಬಹುದೆನಿಸುತ್ತಿತ್ತು. ಸ್ವಾಮಿಗಳಿಗೆ ಆರತಿಯೆತ್ತಿ ಅವರನ್ನು ವಾಧ್ಯಗೋಷ್ಠಿಯೊಡನೆ ಕಾರ್ಯದರ್ಶಿ ಚಂದ್ರಶೇಖರಯ್ಯನವರು ವಾಸಮಾಡುತ್ತಿದ್ದ ಮನೆಯಮುಂದೆ ಧ್ವನಿವರ್ಧಕ ಉಪಕರಣಗಳ ಸಹಿತ ಸಿದ್ಧಪಡಿಸಿದ ವೇದಿಕೆಗೆ ಕರೆದೊಯ್ದರು. ಮರದ ಪಾದರಕ್ಷೆಗಳನ್ನು ಧರಿಸಿದ್ದ ಅವರು ವೇದಿಕೆಯ ಕಡೆಗೆ ಕರೆದೊಯ್ಯುವಾಗ ಟಕಟಕನೆ ವೇಗವಾಗಿ ನಡೆದರೆ ಹಿಂಬಾಲಿಸುತ್ತಿದ್ದ ಜನ ಅವರ ವೇಗಕ್ಕೆ ಸಮದೂಗಲಿಲ್ಲ. ವೇದಿಕೆಯ ಬಳಿ ಹೊಸಹಳ್ಳಿ ಮತ್ತದರ ಸುತ್ತಮುತ್ತಲ ಹಳ್ಳಿಗಳ ಜನ ಸೇರಿದ್ದರು. ಹತ್ತಿರದಲ್ಲಿಯೇ ಅಪರೂಪವಾಗಿ ದೊರಕಿದ ಸ್ವಾಮಿಗಳ ದರ್ಶನಕ್ಕಾಗಿ ಜನ ಚೆನ್ನಾಗಿಯೇ ಜಮಾಯಿಸಿದ್ದರು. ಹೊಸಹಳ್ಳಿಯ ಹಿರಿಯರು, ಆಡಳಿತ ಮಂಡಳಿ ಸದಸ್ಯರು ಸ್ವಾಮಿಗಳನ್ನು ಸ್ವಾಗತಿಸಿದರು. ಶಾಲೆಯ ಆಗುಹೋಗುಗಳ ಬಗ್ಗೆ ಮಾತನಾಡಿದರು. ಶ್ರೀಮಾನ್‌ ಎಂ.ಚಂದ್ರಶೇಖರಯ್ಯನವರೂ ಸಹ ಮಾತನಾಡಿದರು. ಈಮಧ್ಯೆ ಮನಸ್ತಾಪಗಳ ಬಗ್ಗೆಯೂ ವಿಷಧವಾಗಿಯೇ ಮಾತನಾಡಿದ್ದರು. ಕೊನೆಯದಾಗಿ ಶಾಲೆಯನ್ನು ಶ್ರೀ ಸಿದ್ದಗಂಗಾ ಮಠದ ಆಡಳಿತಕ್ಕೆ ಒಪ್ಪಿಸುವ ಸೂಚನೆ ಮಂಡನೆ ಮಾಡಿದ ಮೇಲೆ ಸೇರಿದ್ದ ಜನತೆ ಅದೇ ಸರಿಯೆಂದು ಒಪ್ಪಿಗೆ ಸೂಚಿಸಿದರು. ಚಂದ್ರಶೇಖರಯ್ಯನವರೂ ಅವರ ಬೆಂಬಲಿಗರು ಅರೆಮನಸ್ಸಿನಿಂದಲೇ ಒಪ್ಪಿಗೆ ನೀಡಿದರು. ಶ್ರೀ ಸ್ವಾಮೀಜಿಯವರು ಎಲ್ಲರ ಒಪ್ಪಿಗೆಯನ್ನೂ ಪರಿಗಣಿಸಿ ಶಾಲೆಯನ್ನು ತೆಗೆದುಕೊಳ್ಳಲು ಒಪ್ಪಿಕೊಂಡು ಅದಕ್ಕಾಗಿ ಕಾಗದ ಪತ್ರಗಳನ್ನು ಸಿದ್ಧಪಡಿಸಲು ಸೂಚಿಸಿ ಕೊನೆಯದಾಗಿ ಜನತೆಯನ್ನುದ್ದೇಶಿಸಿ ಮಾತನಾಡಿದರು. ಸಭೆಯನಂತರ ಊರವರಿಂದ ಗುರುಕಾಣಿಕೆಗಳನ್ನು ಸ್ವೀಕರಿಸಿ ತುಮಕೂರಿಗೆ ಹಿಂದಿರುಗಿದರು. ಶಾಲೆಯ ಆಡಳಿತ ವರ್ಗಾವಣೆಯ ವ್ಯವಹಾರಗಳು ಹಲವು ದಿನಗಳು ತೆಗೆದುಕೊಂಡವು. ಶಾಲೆಯ ಮರುಪ್ರಾರಂಭಕ್ಕೆ ಮುನ್ನ ಮತ್ತೊಮ್ಮೆ ಸ್ವಾಮಿಗಳು ಬಂದಿದ್ದರೇನೋ ಎಂಬುದು ನನಗೆ ಸರಿಯಾಗಿ ನೆನಪಿಲ್ಲ.

ಶಾಲೆಯ ಪುನರಾರಂಭ
ಮುಚ್ಚಿಹೋದ ಶಾಲೆ ಪುನಃ ತೆರೆದದ್ದು 1966ರ ಜನವರಿ ತಿಂಗಳಿನ ಅಂತ್ಯ-ಭಾಗದಲ್ಲಿ. ಈ ಸಮಯದಲ್ಲಿ ನಮ್ಮೂರಿನ ನೆಂಟಸ್ತಿಕೆ ಬಂಧುವಾಗಿದ್ದ ಹರಿಯಬ್ಬೆ ರಾಮದಾಸಪ್ಪನವರೂ ಬಂದು ಬೀಜಗಣಿತದ ಪಾಠ ಮಾಡುತ್ತಾ ಕುರಿ ಮತ್ತು ಕೋಳಿಯನ್ನು ಗಣಿತದ ಪ್ರಕಾರ ಕೂಡುವಂತೆ ನಮಗೆ ತಿಳಿಸಿದರು. ನಮ್ಮ ತರಗತಿಯ ಹೆಂಜಾರಪ್ಪ, "ಕೊರ್ಕೋಳಿ/ಕುರ್ಕೋಳಿ" ಎಂದೇನನ್ನೋ ಉತ್ತರಿಸಿದ. ಎಲ್ಲ ಹುಡುಗರೂ ಪಕ್ಕನೆ ನಗಾಡಿ ದೊಡ್ಡ ನಗೆಯ ಅಲೆಯನ್ನೇ ಎಬ್ಬಿಸಿದರು. ಅದಕ್ಕವರು...ಹಾಗೆ ಕೂಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸುತ್ತಾ "ಕುರಿ+ಕೋಳಿ = ಕುರಿ+ಕೋಳಿ" ಎಂದೇ ಬರೆಯಬೇಕೆಂದು ತಿಳಿಸಿ ಬೀಜಗಣಿತವನ್ನು ತಮಾಷೆಯಾಗಿ ಹೇಳಿಕೊಟ್ಟದ್ದು ನನಗಿನ್ನೂ ಜ್ಞಾಪಕವಿದೆ. ಇಂಗ್ಲೀಷ್‌ ಭಾಷೆ ಹೇಳಿಕೊಡಲು ಯಾರೋ ಒಬ್ಬರು ಬಿ.ಕಾಂ ಪಧವಿ ಮಾಡಿದವರನ್ನು ನೇಮಿಸಿದ್ದರು. ಇವರು ನಂತರದ ವರ್ಷ ಶಾಲೆಗೆ ಬರಲಿಲ್ಲ. ಕೇವಲ ಒಂದೂವರೆ ತಿಂಗಳಿನಷ್ಟೆ ತರಗತಿಗಳು ನಡೆದದ್ದು. ಮಾರ್ಚಿ ತಿಂಗಳಿನ ಅಂತ್ಯದ ವೇಳೆಗೆ ನೆಪಮಾತ್ರಕ್ಕೆ ಶಾಲಾ ಧಾಖಲೆಗೋಸ್ಕರ ಪರೀಕ್ಷೆಯನ್ನೂ ಮಾಡಿ ಮುಗಿಸಿದರು. ಎಂಟು ಮತ್ತು ಒಂಬತ್ತನೇ ತರಗತಿಯ ಎಲ್ಲ ವಿದ್ಯಾರ್ಥಿಗಳೂ ಮುಂದಿನ ತರಗತಿಗಳಿಗೆ ಹೋಗುವಂತೆ ಉತ್ತೀರ್ಣಮಾಡಿದ್ದರು. ಆದರೆ ಆ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಾಗಿದ್ದ ಹುಡುಗರು ಏನಾದರೆಂಬ ಬಗ್ಗೆ ನನಗೆ ಸರಿಯಾಗಿ ಮಾಹಿತಿಯಿಲ್ಲ. ಒಟ್ಟಿನಲ್ಲಿ 1965-66ನೇ ಸಾಲಿನ ಶೈಕ್ಷಣಿಕ ವರ್ಷ ಮುಗಿದು ಹೋಗಿತ್ತು. ಆ ವರ್ಷ 8ನೇ ತರಗತಿಯಲ್ಲಿ ನಾವೇನು ಕಲಿತೆವು ಎಂಬುದೇ ಪ್ರಶ್ನಾರ್ಹ..?

"ಹಿಂದಿ ಮಧ್ಯಮ" ಪರೀಕ್ಷೆ ಮುಗಿಸಿ ಪ್ರಮಾಣಪತ್ರ ಪಡೆದದ್ದು
ಈಮಧ್ಯೆ ಮಡಕಶಿರ ತಾಲ್ಲೂಕಿನ ಅಮರಾಪುರದ ಕಡೆಯ "ಹಿಂದಿ ಪಂಡಿತ" ಪರೀಕ್ಷೆ ಉತ್ತೀರ್ಣರಾದ ಒಬ್ಬರು ಹಿಂದಿ ಶಿಕ್ಷಕರನ್ನು ನೇಮಿಸಿಕೊಂಡಿದ್ದರು. ಅವರು ಶಾಲೆಯ ಎಲ್ಲಾ 8-9ನೇ ತರಗತಿಯ ಹುಡುಗರನ್ನು ಸೇರಿಸಿಕೊಂಡು ಹಿಂದಿ ಅಕ್ಷರಗಳನ್ನು ಕಲಿಸಿದರು. ಕಾಗುಣಿತ ವ್ಯಾಕರಣವನ್ನೂ ಹೇಳಿಕೊಟ್ಟರು. ಏಕಂದರೆ 10ನೇ ತರಗತಿಯ ಪರೀಕ್ಷೆಗೆ ಹಿಂದಿಯನ್ನೂ ಕಡ್ಡಾಯಗೊಳಿಸಿದ್ದರು. ನನಗೆ ಮತ್ತು ರಾಮಚಂದ್ರನಿಗೆ ಹಿಂದಿ ಕಲಿಯುವುದು ಕಷ್ಟವಾಗಲಿಲ್ಲ. ಮಂಗಳವಾಡದಲ್ಲಿ ಮಾಧ್ಯಮಿಕ ತರಗತಿಯಲ್ಲಿದ್ದಾಗ ಆರನೇ ತರಗತಿಯಿಂದಲೇ ಹಿಂದಿಯ ಭೋದನೆಯಾಗಿತ್ತು. ಜಂಗಮರಹಳ್ಳಿಯ ಮಾಧ್ಯಮಿಕ ಶಾಲೆಯಿಂದ ಬಂದಿದ್ದ ಹುಡುಗರಿಗೆ ಹಿಂದಿಯ ಭೋದನೆಯಾಗಿರಲಿಲ್ಲ. ಅವರಿಗೆ ಹಿಂದಿ ಸ್ವಲ್ಪ ಕಷ್ಟವೇ ಆಗಿತ್ತು. ಆದಾಗ್ಯೂ ಆ ಹಿಂದಿ ಶಿಕ್ಷಕರು ಒಂದಿಪ್ಪತ್ತೈದು ಹುಡುಗರನ್ನು ಸೇರಿಸಿಕೊಂಡು "ಹಿಂದಿ ಮಾಧ್ಯಮಿಕ" ಪರೀಕ್ಷೆ ಕಟ್ಟಿಸಿ ಪರೀಕ್ಷಾ ಕೇಂದ್ರ ಹೊಸಹಳ್ಳಿಯಲ್ಲಿಯೇ ಇರಿಸಿ "ಹಿಂದಿ ಮಾಧ್ಯಮಿಕ" ಪರೀಕ್ಷೆಯನ್ನು ಎಲ್ಲ ವಿದ್ಯಾರ್ಥಿಗಳೂ ಉತ್ತೀರ್ಣರಾಗುವಂತೆ ಮಾಡಿದ್ದರು. ತೇರ್ಗಡೆ ಹೊಂದಿದ ಬಗ್ಗೆ ಪ್ರಮಾಣಪತ್ರಗಳನ್ನೂ ತರಿಸಿಕೊಟ್ಟರು. ಒಟ್ಟಾರೆಯಾಗಿ ಹಿಂದಿ ಬರದಿದ್ದವರು ಕೊನೇಪಕ್ಷ ಹಿಂದಿ ಓದುವುದನ್ನು ಬರೆಯುವುದನ್ನು ಕಲಿತಿದ್ದರು.

ವರ್ಷ 1966, ಶೈಕ್ಷಣಿಕ ವರ್ಷ 1966-67, ನನ್ನ 9ನೇ ತರಗತಿಗೆ ಹೊಸ ಹುಡುಗರು
1966-67 ನೇ ಶೈಕ್ಷಣಿಕ ಸಾಲು, ನಾವು 9ನೇ ತರಗತಿಯಲ್ಲಿದ್ದೆವು. ಆಗಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯೆಂದರೆ 9-10ನೇ ತರಗತಿಗಳಲ್ಲಿ ಐಚ್ಛಿಕ ವಿಷಯಗಳನ್ನು ಕಲಿಯಬೇಕಾಗಿತ್ತು. ಇವುಗಳನ್ನು ಒಂಬತ್ತನೇ ತರಗತಿಯಲ್ಲಿದ್ದಾಗಲೇ ಆಯ್ಕೆಮಾಡಿಕೊಳ್ಳಬೇಕಿತ್ತು. ಸುಮಾರು 20-21 ಹುಡುಗರಿದ್ದ ನಮ್ಮ ತರಗತಿಯಲ್ಲಿ 9ಜನ ವಿಜ್ಞಾನ(PCM)ವನ್ನೂ ಉಳಿದವರು ಕಲಾ(HEP) ವಿಷಯಗಳನ್ನು ತೆಗೆದುಕೊಂಡರು...ನಮ್ಮ ಶಾಲೆಯಲ್ಲಿದ್ದುದೇ ಅವೆರಡು ವಿಷಯಗಳು. ಆ ವರ್ಷ ಒಂದಿಬ್ಬರು ಹುಡುಗರು ಹೊಸದಾಗಿ ಹೊರಗಿನಿಂದ ಬಂದು ಸೇರಿಕೊಂಡಿದ್ದರು. ಒಬ್ಬ ಹುಡುಗ ಆಂದ್ರದ ಮಡಕಶಿರ ತಾಲ್ಲೂಕಿನ ಹೇಮಾವತಿ ಶಾಲೆಯಿಂದ ಬಂದಿದ್ದನು, ಹೆಸರು ಜ್ಞಾಪನವಿಲ್ಲ, ಮೂಲತಃ ಊರು ಮಡಕಶಿರ ತಾಲ್ಲೂಕಿನ ಚಿಟ್ಟನಡಕು, ಮನೆ ಮಾತು ಕನ್ನಡ, ಶಾಲೆಯಲ್ಲಿ ಕಲಿತಿದ್ದುದು ತೆಲುಗು. ಆದರೂ ನಮ್ಮಜೊತೆಯಲ್ಲಿ ಕನ್ನಡವನ್ನು ಸುಲಭವಾಗಿ ಓದಿ-ಬರೆಯುತ್ತಿದ್ದನು. ಈತ 10ನೇ ತರಗತಿಯ ಕೊನೆಯತನಕ ನಮ್ಮ ಜೊತೆಯಲ್ಲಿದ್ದನೆಂಬುದೂ ನನಗೆ ಜ್ಞಾಪನವಿಲ್ಲ. ಇನ್ನೊಬ್ಬನೆಂದರೆ ನಿಡಗಲ್ಲುವಿನ ತಿಪ್ಪೆಸ್ವಾಮಿ.ಎನ್.ಎಸ್‌. ಇವರಿಬ್ಬರೂ ವಿಜ್ಞಾನವನ್ನೇ ಐಚ್ಛಿಕ ವಿಷಯವನ್ನಾಗಿ ಆರಿಸಿಕೊಂಡಿದ್ದರು. ನನಗೆ ಪ್ರಥಮದಲ್ಲಿ ಐಚ್ಛಿಕ ವಿಷಯಗಳು ಭೌತಶಾಸ್ತ್ರ, ರಸಾಯನಶಾಸ್ತ್ರ, ಮತ್ತು ಬೀಜಗಣಿತ ರೇಖಾಗಣಿತದ ಸೂತ್ರಗಳು ಸಿದ್ಧಾಂತಗಳು ಸ್ವಲ್ಪ ಕಷ್ಟವೇ ಆಗಿದ್ದವು. ಅದರಲ್ಲೂ ರೇಖಾಗಣಿತದ ಪ್ರಮೇಯಗಳು ಅರ್ಥವಾದರೂ ಜ್ಞಾಪಕವಿರುತ್ತಿರಲಿಲ್ಲ...ಮರೆತುಹೋಗುತ್ತಿದ್ದವು.

ನಮ್ಮ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ
ಶ್ರೀ ಹೆಚ್..ಹನುಮಂತಣ್ಣ ಬಿ.ಎಸ್ಸಿ, ಬಿ.ಎಡ್‌. ಮುಖ್ಯೋಪಾಧ್ಯಾಯರು(PCM), ಶ್ರೀ ಡಿ.ಆರ್‌.ತಿಮ್ಮಣ್ಣ ಬಿ.(HEP),
ಶ್ರೀ ಹೆಚ್‌.ಡಿ.ಮಲ್ಲಿಕಾರ್ಜುನಗೌಡ ಬಿ.ಎಸ್ಸಿ(ಜೀವಶಾಸ್ತ್ರಗಳು), ಶ್ರೀ ಹೆಚ್‌.ಡಿ.ಶಂಕರಾನಂದಯ್ಯ ಬಿ.ಎಸ್ಸಿ(PCM), ಸಹಾಯಕ ಶಿಕ್ಷಕರು. ಪಟೇಲರ ಮನೆಯ ಗುರುದೇವಪ್ಪನವರು ಮತ್ತು ಇದೇ ಶಾಲೆಯಲ್ಲಿ 10ನೇ ತರಗತಿಯವರೆಗೆ ಕಲಿತ ನರಸಿಂಹಯ್ಯ ಗುಮಾಸ್ತರ ಹುದ್ದೆಗೆ ಮತ್ತು ತೋಟಗಾರಿಕೆ ಕೌಲ್ಯ(craft) ತರಬೇತಿಯ ಡಿ.ಮೈಲಾರಪ್ಪ ಕುಶಲತೆ ಶಿಕ್ಷಕರಾಗಿದ್ದರು. ನಂತರದಲ್ಲಿ ಕಚೇರಿಯ ಜವಾನರಾಗಿ ಸೇರಿಮರೂರಿನ ದಾಸರ ನಾಗಣ್ಣ ಮತ್ತು ಶಾಮರಾಯನಪಾಳ್ಯದ ಕುರುಬರ ಬೈಪ್ಪ. ಪ್ರೌಶಾಲೆಯ ಶಿಕ್ಷಕರಿಗೆ ಸರ್ಕಾರದಿಂದ ಅನುದಾನ ಪಡೆಯಬೇಕಾಗಿದ್ದಲ್ಲಿ ಬಿ.ಎಡ್‌ ಪಧವಿ ಅತ್ಯವಶ್ಯವಾಗಿ ಬೇಕಾಗಿತ್ತು. ಮುಖ್ಯೋಪಾಧ್ಯಾಯರ ಹೊರತು ಯಾರಿಗೂ ಬಿ.ಎಡ್‌. ಪಧವಿ ತರಬೇತಿಯಿರಲಿಲ್ಲ.

1966-67ರ ಸಾಲಿನಲ್ಲಿ ನಮ್ಮ ಪ್ರೌಢಶಾಲಾ ಶಿಕ್ಷಣ ಪ್ರಗತಿ
1966-67 ನೇ ಸಾಲಿನಲ್ಲಿ ಇಂಗ್ಲೀಷ್‌, ಕನ್ನಡ, ಸಮಾಜಶಾಸ್ತ್ರ, ಮತ್ತು ಕಲಾ ವಿಭಾಗದ ವಿಷಯಗಳನ್ನು ಡಿ.ಆರ್‌.ತಿಮ್ಮಣ್ಣನವರು ತೆಗೆದುಕೊಳ್ಳುತ್ತಿದ್ದರು. ಹೆಚ್‌..ಹನುಮಂತಣ್ಣನವರು ಕನ್ನಡ, ಸಾಮನ್ಯ ವಿಜ್ಞಾನ, ಸಾಮಾನ್ಯ ಗಣಿತ, ರೇಖಾಗಣಿತ, ಐಚ್ಛಿಕ ಭೌತಶಾಸ್ತ್ರ ಮತ್ತು ಐಚ್ಛಿಕ-ಗಣಿತ ತೆಗೆದುಕೊಳ್ಳುತ್ತಿದ್ದರು. ಹೆಚ್‌.ಡಿ.ಮಲ್ಲಿಕಾರ್ಜುನಗೌಡರು ಸಾಮಾನ್ಯ ವಿಜ್ಞಾನದ ಜೀವಶಾಸ್ತ್ರ, ಹೆಚ್‌.ಡಿ.ಶಂಕರಾನಂದಯ್ಯನವರು ಸಾಮಾನ್ಯ ಗಣಿತದ ಬೀಜಗಣಿತ ವಿಜ್ಞಾನದ ರಸಾಯನಶಾಸ್ತ್ರ ಐಚ್ಬಿಕ ರಸಾಯನಶಾಸ್ತ್ರದ ಪಾಠ ಮಾಡುತ್ತಿದ್ದರು. ಡಿ.ಮೈಲಾರಪ್ಪ ತೋಟಗಾರಿಕೆ ವಿಷಯಗಳ ಪಾಠ ಮಾಡುತ್ತಿದ್ದರು. ನಮ್ಮದು ಗ್ರಾಮೀಣ ಶಾಲೆಯಾಗಿದ್ದುದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ತೋಟಗಾರಿಕೆಯ ಬಗ್ಗೆ ತಿಳಿದಿರಲೆಂಬುದು ವಿಷಯದ ಮುಖ್ಯ ಉದ್ದೇಶವಾಗಿತ್ತು. ಆದರೆ ಅದು 10ನೇ ತರಗತಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ವಿಷಯವೇನೂ ಆಗಿರಲಿಲ್ಲ. ಈ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ನಮ್ಮ ಹಿರಿಯ ವಿದ್ಯಾರ್ಥಿಗಳಲ್ಲಿ ಉತ್ತೀರ್ಣರಾದವರೆಷ್ಟು ಮಂದಿಯೆಂದರೆ..? ಕೇವಲ ಒಬ್ಬರು ಮಾತ್ರ...ಊರ-ಹಿಂದಲ ಮಲ್ಲೇಗೌಡರ ಕರಿಯಣ್ಣ, ಎಂ.ಚಂದ್ರಶೇಖರಯ್ಯನವರ ಚಿಕ್ಕಪ್ಪಮಗ ಚಂದ್ರಮೌಳಿ, ಅರಸೀಕೆರೆಯಲ್ಲಿ ವಾಸ, ದಿನವೂ ನಾಲ್ಕು ಕಿಲೋಮೀಟರು ನಡೆದು ಶಾಲೆಗೆ ಬರುತ್ತಿದ್ದ…ನಮ್ಮೆಲ್ಲರಿಗಿಂತಲೂ ಇಂಗ್ಲೀಷ್‌ ಮತ್ತು ಗಣಿತದಲ್ಲಿ ಬುದ್ಧಿವಂತ. ಜೊತೆಗೆ ಚಂದ್ರಮೌಳಿಯ ಅಣ್ಣ ಹೆಚ್‌.ಕೆ.ಜಗನ್ನಾಥರವರ ಅವನ ಹಿಂದೆ ನಿಂತು ತರಬೇತಿ ನೀಡಿದ್ದರೆನ್ನಬಹುದು. ತ್ತೀರ್ಣತೆಯು ಸುಮಾರು 40 ವಿದ್ಯರ್ಥಿಗಳಿದ್ದ ತರಗತಿಯ ಶೇಕಡಾವಾರು ತೆಗೆದುಕೊಂಡರೆ ಕೇವಲ 0.025% ಮಾತ್ರ. ಕಾರಣ ಹಲವಾರು...ಪ್ರೌಢಶಾಲೆಯ
8 ಮತ್ತು 9ನೇ ತರಗತಿಗಳಲ್ಲಿ ನಡೆದ ಮೂಲ ಶಿಕ್ಷಣ ಮತ್ತು ಅಭ್ಯಾಸದ ಕೊರತೆ. ಅಲ್ಲದೆ ಭಾಷೆ ವಿಷಯಗಳ ಹೊರತು ಇತರೆ ವಿಷಯಗಳಲ್ಲಿ 9 ಮತ್ತು 10ನೇ ತರಗತಿ ಪಾಠಗಳಿಂದಲೂ ಪ್ರಶ್ನೆಗಳಿರುತ್ತಿದ್ದುದು. ಮುಖ್ಯೋಪಾಧ್ಯಾಯರಾದ ಹನುಮಂತಣ್ಣನವರ ಕುಟುಂಬವು ಇನ್ನೂ ಹೊಸಹಳ್ಳಿಗೆ ಸ್ಥಳಾಂತರವಾಗದೆ ತುಮಕೂರಿನಲ್ಲಿ ವಾಸವಿದ್ದಿತು. ಅದು ಅವರ ಸಮಸ್ಯೆಯಾಗಿತ್ತು. ಕೌಟುಂಬಿಕ ವಿಷಯಗಳಿಗಾಗಿ ಮತ್ತು ಶಿಕ್ಷಕರ ವೇತನ ಅನುದಾನಕ್ಕಾಗಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ತುಮಕೂರಿಗೆ ಹೋದರೆ ಅವರು ಹಿಂದಿರುಗಿ ಬರುವುದು ಹಲವಾರು ದಿನಗಳೇ ಕಳೆಯುತ್ತಿದ್ದವು. ಕೆಲವೊಮ್ಮೆ ತಿಂಗಳಾಗುತ್ತಿತ್ತು. ಅವರು ಮಾಡಬೇಕಾಗಿದ್ದ ಪಾಠಗಳು ಹಿಂದುಳಿಯುತ್ತಿದ್ದವು. ಮಾಡದೆ ಉಳಿದ ಪಾಠಗಳನ್ನು ಕೇವಲ ಪರೀಕ್ಷೆ ಒಂದು ತಿಂಗಳಿರುವಂಥ ಸಮಯದಲ್ಲಿ ಮಾಡುತ್ತಿದ್ದರು. ಸಾಮಾನ್ಯವಾಗಿ ನಿಗದಿತ ಪಾಠಗಳನ್ನು ಪರೀಕ್ಷೆಗೆ ಒಂದು ತಿಂಗಳು ಮೊದಲೇ ಮುಗಿಸಿ ಹಳೆಯ ಪಾಠಗಳ ನೆನಪಿಕೆಗಾಗಿ ಪುನರಾವರ್ತಿ ಮಾಡುತ್ತಾ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು ಶಾಲೆಗಳ ವಾಡಿಕೆ. ಅದಾಗಿರಲಿಲ್ಲ ಇಲ್ಲಿ. ಆದರೆ ನಮ್ಮೆಲ್ಲರನ್ನು ತರಗತಿ 9 ರಿಂದ 10ಕ್ಕೆ ಹೋಗಲು ತೇರ್ಗಡೆಗೊಳಿಸಿದ್ದರು. ಒಂದು ಮುಖ್ಯ ಕೆಲಸವಾಗಿದ್ದೆದರೆ ಶಾಲೆಗೆ ಅವಶ್ಯವಾಗಿ ಬೇಕಿದ್ದ ವಿಜ್ಞಾನೋಪಕರಣಗಳನ್ನು ತರಿಸುವಲ್ಲಿ ಯಶಸ್ವಿಯಾಗಿದ್ದರು.

1967-68 ಶೈಕ್ಷಣಿಕ ಸಾಲು...ನಾನು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವರ್ಷ – 1968
1967-68 ನೇ ಸಾಲಿನಲ್ಲಿಯೂ ಹಿಂದಿನ ವರ್ಷದ ಯಥಾಸ್ಥಿತಿ ಮುಂದುವರಿದಿತ್ತು. ಕೊನೆ ಕೊನೆಗೆ ಮುಖ್ಯೋಪಾಧ್ಯಾಯರಾಗಿದ್ದ ಹೆಚ್‌.ಎಂ.ಹನುಮಂತಣ್ಣನವರು ಅವರ ಕುಟುಂಬವನ್ನು ಹೊಸಹಳ್ಳಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದರು. ಆದಾಗ್ಯೂ ಅವರು ಶಿಕ್ಷಕರ ವೇತನ ಮತ್ತು ವಿದ್ಯಾರ್ಥಿ ನಿಲಯದ ಖರ್ಚುಗಳಿಗೆ ಸರ್ಕಾರದ ಅನುದಾನ ಪಡೆಯುವ ಹೋರಾಟವನ್ನು ಮುಂದುವರಿಸಿದ್ದರು. 10ನೇ ತರಗತಿಯ ನಮಗೆ ಐಚ್ಛಿಕ-ಭೌತಶಾಸ್ತ್ರ, ಐಚ್ಛಿಕ-ಗಣಿತ, ಸಾಮಾನ್ಯ-ಗಣಿತ(ಬೀಜಗಣಿತ ಹೊರತು), ಕನ್ನಡ ಮತ್ತು ಇಂಗ್ಲೀಷ್‌ ಭಾಷೆಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರ ಪಾಠ-ಪ್ರವಚನಗಳು ಹಾಗೆಯೇ ಉಳಿಯುತ್ತಿದ್ದವು. ನಮ್ಮ ತರಗತಿಗೆ ಇವರ ವಿಷಯಗಳಲ್ಲಿ ಅನುತ್ತೀರ್ಣರಾಗಿ ಸೆಪ್ಟಂಬರ್‌ ಮತ್ತು ಮಾರ್ಚ್‌-ಏಪ್ರಿಲ್‌ ನ ಪೂರಕ ಪರೀಕ್ಷೆಗಳನ್ನು ಬರೆಯುತ್ತಿದ್ದವರೂ ಹಾಜರಾಗುತ್ತಿದ್ದರು. ಇದಕ್ಕೆ ಯಾವ ಅನುಮತಿ ಯಾ ಆಕ್ಷೇಪಣೆಯೇನೂ ಇರಲಿಲ್ಲ. ಒಟ್ಟಿನಲ್ಲಿ ಅವರೆಲ್ಲಾ ಶಾಲೆಯನ್ನು ಪ್ರತಿನಿಧಿಸುತ್ತಿದ್ದರು. 1968 ರ ಪೆ಼ಬ್ರವರಿ ಮತ್ತು ಮಾರ್ಚ್‌ ತಿಂಗಳುಗಳಲ್ಲಿ ಸಾಕಷ್ಟು ವಿಶೇಷ ತರಗತಿಗಳನ್ನು ನಡೆಸಿ ಪಾಠಗಳನ್ನು ಮುಗಿಸಿದ್ದರು. ಇಂಗ್ಲೀಷಿನ ಅವಿವರ(non-detail) ಪಠ್ಯದ ಕತೆಯನ್ನು ಹೆಚ್‌.ಡಿ.ಮಲ್ಲಿಕಾರ್ಜುನಗೌಡರು ಶಾಲೆಯಲ್ಲಿ ಮತ್ತವರ ಮನೆಯ ಬಳಿಯೂ ಪಾಠಮಾಡಿ ಮುಗಿಸಿದರು. ಆದರೆ ನಮಗೆಲ್ಲಾ ಇದ್ದ ಮುಖ್ಯ ತೊಂದರೆಯೆಂದರೆ ಇಂಗ್ಲೀಷ್‌ನಲ್ಲಿಕಂಡಿಕೆ(para)ಗಟ್ಟಲೆ ಉತ್ತರ ಬರೆಯುವುದು. ಅರಿಬಿರಿಯಾಗಿ ಪ್ರಶ್ನೋತ್ತರಗಳನ್ನು ಪರೀಕ್ಷೆ ಹತ್ತಿರದ ಸಮಯದಲ್ಲಿ ಬರೆಸಿದ್ದರು. ಅಷ್ಟು ಪ್ರಶ್ನೋತ್ತರಗಳ-ಇಂಗ್ಲೀಷ್‌-ಜ್ಞಾನ ಬಾಯಿಪಾಠ ಮಾಡದೆ ಬರುತ್ತಿರಲಿಲ್ಲ. ಜೊತೆಗೆ ವ್ಯಾಕರಣವೂ ಅಷ್ಟೆ... ಸರಿಯಾಗಿ ಹೇಳಿಕೊಟ್ಟಿರಲಿಲ್ಲ. ಹೇಳಿಕೊಟ್ಟಷ್ಟು ಜ್ಞಾಪನವಿರುತ್ತಿರಲಿಲ್ಲ. ಏಕಂದರೆ ಉಳಿದೆಲ್ಲಾ ವಿಷಯಗಳು ಕನ್ನಡದಲ್ಲಿದ್ದುದರಿಂದ ಪಾಠ-ಪ್ರವಚನಗಳಲ್ಲಿ ಇಂಗ್ಲೀಷನ್ನು ಉಪಯೋಗಿಸುತ್ತಿರಲಿಲ್ಲ. ಹಾಗಾಗಿ ಅವು ಜ್ಞಾಪನವೇ ಇರುತ್ತಿರಲಿಲ್ಲ. ಒಟ್ಟಾರೆ ಇಂಗ್ಲೀಷ್‌ ನಮ್ಮ ಶತ್ರುವಾಗಿತ್ತು. ಮುಖ್ಯವಾಗಿ ಹೆಚ್‌.ಡಿ.ಶಂಕರಾನಂದಯ್ಯನವರು ತೆಗೆದುಕೊಂಡ ಮುತುವರ್ಜಿ. ಅವರ ಮನೆ ಬಳಿ ಮತ್ತು ಶಾಲೆಯಲ್ಲಿ ತೆಗೆದುಕೊಂಡ ವಿಶೇಷ ತರಗತಿಗಳಲ್ಲಿ ಗಣಿತ, ಐಚ್ಛಿಕ-ಗಣಿತ, ವಿಜ್ಞಾನ, ಐಚ್ಚಿಕ-ಭೌತ ಮತ್ತು ರಸಾಯನಶಾಸ್ತ್ರದಲ್ಲಿ ನಡೆಸಿದ ಪುನರಾವರ್ತಿ ಪಾಠಗಳು ನಮ್ಮ ಪರೀಕ್ಷೆ ಸಿದ್ಧತೆಯ ಮುಖ್ಯಾಂಶಗಳು.

ಪಾವಗಡ ತಾಲ್ಲೂಕು ಕೇಂದ್ರದಲ್ಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ
ವಿದ್ಯಾರ್ಥಿಗಳನ್ನು ಪಾವಗಡಕ್ಕೆ ಪರಕ್ಷೆಗಾಗಿ ಕರೆದುಕೊಂಡು ಹೋಗುವುದು ಶಾಲೆಯ ಮುಖ್ಯಸ್ಥರದೇ ಜವಾಬ್ದಾರಿಯಾಗಿತ್ತು.
ಪಾವಗಡದ ವೈಶ್ಯರ ಸಭಾಭವನದ ಬಳಿಯ ಈಶ್ವರನ ಗುಡಿಯ ಪ್ರಾಂಗಣದಲ್ಲಿ ವಿದ್ಯಾರ್ಥಿಗಳ ಠಿಕಾಣಿ. ಐಚ್ಛಿಕ-ಗಣಿತ ಪರೀಕ್ಷೆಯ ಹಿಂದಿನ ದಿನ ರಾತ್ರಿ ಶಾಲೆಯಲ್ಲಿ ಯಾವತ್ತೂ ಹೇಳಿಕೊಟ್ಟಿರದಿದ್ದ ಸಮಸ್ಯೆಯೊಂದನ್ನು ನಮ್ಮ ಮುಖ್ಯೋಪಾಧ್ಯಾಯರಾದ ಹೆಚ್‌.ಎಂ. ಹನುಮಂತಣ್ಣನವರು ದೇವಸ್ಥಾನದ ಪ್ರಾಂಗಣದ ಜಗುಲಿಯ ಮೇಲೆ ಒಂದು ಕರಿ-ಸುತ್ತಲಗೆಯನ್ನು ನೇತುಹಾಕಿ ಹೇಳಿಕೊಟ್ಟಿದ್ದರು. ಒಂದೆರಡು ಸಾರಿ ಅಭ್ಯಾಸವನ್ನೂ ಮಾಡಿಕೊಂಡಿದ್ದೆವು. ಅದು ಸುಮಾರು ಎಂಟ್ಹತ್ತು ಅಂಕಗಳ ಸಮಸ್ಯೆ. ಪರೀಕ್ಷಾಂಗಣದಲ್ಲಿ ಪ್ರಶ್ನೆಪತ್ರಿಕೆ ನೋಡಿದಕೂಡಲೆ ಕಣ್ಣಿಗೆ ಬಿದ್ದುದು ಅದೇ ಸಮಸ್ಯೆ. ಒಂದರೆಗಳಿಗೆ ದೇಹ ಅದುರಿತು. ಆ ಸಮಸ್ಯೆಯನ್ನು ಹೇಗೆ ಪ್ರಾರಂಭಿಸಬೇಕೆಂದ ಹೊಳೆಯದೆ ಮರೆತುಹೋಗಿತ್ತು. ಕೊನೆಗೆ ಏನೂ ತೋಚದೆ ಸರಳವಾಗಿದ್ದ ಕೆಲವು ಬೀಜಗಣಿತ ರೇಖಾಗಣಿತ ಸಮಸ್ಯಗಳನ್ನು ಬಗೆಹರಿಸಿ ಕಡ್ಡಾಯವಾಗಿ ಮಾಡಬೇಕಿದ್ದ ಒಂದಂಕಗಳ ಖಾಲಿ ಜಾಗ ತುಂಬುವ 10ಸಮಸ್ಯೆಗಳನ್ನು ಮುಗಿಸುವಷ್ಟರಲ್ಲಿ ವೇಳೆಯಾಗಿತ್ತು. ಉತ್ತರ-ಪುಸ್ತಕವನ್ನು ನೀಡಿ ದೇವಸ್ಥಾನಕ್ಕೆ ಎಲ್ಲ ಹುಡುಗರೊಂದಿಗೆ ಹಿಂದಿರುಗಿದೆ. ದೇವಸ್ಥಾನಕ್ಕೆ ಬಂದಕೂಡಲೆ ಯಾರ್ಯಾರು ಆ ನೂತನ ಸಮಸ್ಯೆಯನ್ನು ಬಿಡಿಸಿದ್ದೀರಿ ಎಂದು ಮೊದಲು ಪ್ರಶ್ನಿಸಿದರು..? ನಮ್ಮ ಮುಖ್ಯೋಪಾಧ್ಯಾಯರು. ನಾನು ಆ ಸಮಸ್ಯೆಯನ್ನು ಬಿಡಿಸಿಲ್ಲ ಎಂದು ಹೇಳುತ್ತಲೇ ನನ್ನಮೇಲೆ ಹರಿಹಾಯ್ದರು...ಬೈಯ್ದರು, ಕೈಯಿಂದ ಒಂದೆರಡು ಏಟುಗಳನ್ನೂ ಕೊಟ್ಟರು. ನನಗೆ ಅಳು ಬರುತ್ತಿತ್ತು. ಏಕಂದರೆ ನಾನು ಆ ವರ್ಷ ಅವರ ದೃಷ್ಟಿಯಲ್ಲಿ ಬರವಸೆಯ ಉತ್ತೀರ್ಣನಾಗುವ ವಿದ್ಯರ್ಥಿ/ ವ್ಯಕ್ತಿಯಲ್ಲೊಬ್ಬನಾಗಿದ್ದೆ. ಆದಾಗ್ಯೂ ಅವರು ನನ್ನನ್ನು ಕೂರಿಸಿಕೊಂಡು ಇನ್ನೊಮ್ಮೆ ನಾನು ಉತ್ತರಿಸಿದ್ದ ಎಲ್ಲ ಸಮಸ್ಯೆಗಳನ್ನು ಪರಿಶೀಲಿಸಿ ಐಚ್ಛಿಕ-ಗಣಿತದಲ್ಲಿ ಉತ್ತೀರ್ಣನಾಗುತ್ತೇನೆಂದು ಅವರೇ ಹೇಳಿದರು. ನಾನೇಕೆ ಅವರ ಬರವಸೆಯ ವ್ಯಕ್ತಿಯಾಗಿದ್ದೆ..? ನನಗೆ ಇಂಗ್ಲೀಷ್‌ ಪರೀಕ್ಷೆಯಿದ್ದ ದಿನ ಅವರೇ ಪರೀಕ್ಷಾಂಗಣದ ಮೇಲ್ವಿಚಾರಕರಾಗಿದ್ದರು. ಪರೀಕ್ಷಾಂಗಣ ನೆಲದ ಮೇಲೆ ಕುಳಿತು ಒತ್ತಲಗೆ ಇಟ್ಟುಕೊಂಡು ಉತ್ತರಬರೆಯಬೇಕಾದ ಅಂಗಣವಾಗಿತ್ತು. ಆದಿನ ಅವರು ನನಗೆ ಎಲ್ಲಾ ವ್ಯಾಕರಣದ ಉತ್ತರಗಳನ್ನು ಹೇಳಿಕೊಟ್ಟಿದ್ದರು. ಇನ್ನು ಅವುಗಳೊಂದಿಗೆ ನಾನು ಬರೆದಿರಬಹುದಾದ ಉತ್ತರಗಳು ಸೇರಿದರೆ ನನಗೆ ಉತ್ತೀರ್ಣನಾಗುವುದಕ್ಕೆ ಸಾಕಷ್ಟು ಅಂಕಗಳು ಬರುತ್ತವೆಂಬುದು ಅವರ ನಿರೀಕ್ಷೆಯಾಗಿತ್ತು.

ಪರೀಕ್ಷೆಯ ಕೊನೆಯ ದಿನವಾಗಿದ್ದ ಆದಿನ ಸಾಯಂಕಾಲ ಆ ಸಾಲಿನ ನಾವೆಲ್ಲಾ ವಿದ್ಯಾರ್ಥಿಗಳು ನೆನಪಿಗಾಗಿ ಗುಂಪು-ಭಾವಚಿತ್ರ ತೆಗೆಸಿದೆವು ಕೂಡ. ಭಾವಚಿತ್ರದಲ್ಲಿ ನನ್ನ ಹೊರತು ಉಳಿದೆಲ್ಲಾ ಹುಡುಗರು ಚೆನ್ನಾಗಿ ಮೂಡಿಬಂದಿದ್ದರು.

ಶಾಲೆಯ ಫಲಿತಾಂಶ ಶೂನ್ಯ
ಒಂದು ತಿಂಗಳಿನ ನಂತರ ಪರೀಕ್ಷೆ ಫಲಿತಾಂಶ ದಿನಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಆ ದಿನಗಳಲ್ಲಿ ನಮ್ಮೂರಿಗೆ ದಿನಪತ್ರಿಕೆ ಬರುವ ವೇಳೆಗೆ ಸಾಯಂಕಾಲವಾಗುತ್ತಿತ್ತು. ಪತ್ರಿಕೆ, ಸಿರಾ ಪಟ್ಟಣದಿಂದ ಬರುತ್ತಿದ್ದ ಶ್ರೀ ಹನುಮಾನ್‌ ಬಸ್ಸಿನಲ್ಲಿ ಬರುತ್ತಿತ್ತು. ಆಗ ಬರುತ್ತಿದ್ದುದೇ ಪ್ರಜಾವಾಣಿ ಪತ್ರಿಕೆ ಮಾತ್ರ. ಬಸ್ಸು ಮಂಗಳವಾಡಕ್ಕೆ ಬಂದು ತಲುಪುವ ವೇಳೆಗೆ ಮಧ್ಯಹ್ನ 12.00ಗಂಟೆಯಾಗುತ್ತಿತ್ತು. ಪ್ರತಿನಿಧಿ ಪತ್ರಿಕೆ ಪಡೆದು ಹಂಚುತ್ತಿದ್ದರು. ನಮ್ಮೂರಿಗೆ ಅದನ್ನು ಅಂಚೆ ರವಾನೆಗಾರ ಮರೂರಿನ ವೀರಣ್ಣ ತಂದು ಸಾಯಂಕಾಲ ಅಂಚೆ ಪತ್ರಗಳ ಜೊತೆಯಲ್ಲಿ ತಲುಪಿಸಿ ಹೋಗುತ್ತಿದ್ದರು. ಕಾರಣ ಉತ್ತೀರ್ಣರಾಗುತ್ತೇವೆಂದು ಬೀಗುತ್ತಿದ್ದ ನಾವೊಂದ್ಮೂರು ಜನ ಆದಿನ ಪತ್ರಿಕೆ ತರಲು ಪ್ರತಿನಿಧಿ ಬಳಿಗೆ ಮಧ್ಯಾಹ್ನವೇ ಹೋಗಿದ್ದೆವು. ಪತ್ರಿಕೆಯ ಫಲಿತಾಂಶ ಪುಟಗಳಲ್ಲಿ ಹುಡುಕಾಡಿದರೆ ತೇರ್ಗಡೆಯಾಗಿದ್ದರೆ ತಾನೆ ನಮ್ಮ ನೊಂದಣಿ ಸಂಖ್ಯೆ ಸಿಗುವುದು?! ಬರವಸೆ ಹೊಂದಿದ್ದ ಹುಡುಗರೆಲ್ಲಾ ಅನುತ್ತೀರ್ಣರಾಗಿದ್ದೆವು. ಎಲ್ಲರಿಗೂ ಹತಾಶೆಯೊಂದಿಗೆ ಬ್ರಮನಿರಸನವಾಗಿತ್ತು. ಆ ವರ್ಷ ನಮ್ಮೂರ ಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷಾ ತೇರ್ಗಡೆ ಶೂನ್ಯ. ಇದು ಶಾಲೆಯ ಚರಿತ್ರೆಯ ಭೂಪಟದಲ್ಲಿ ಒಂದು ಕಪ್ಪು ಚುಕ್ಕಿಯಾಗಿತ್ತು.

ಮೂರ್ನಾಲ್ಕು ದಿನಗಳಲ್ಲಿ ಶಾಲೆಗೆ ಅಂಚೆ ಮೂಲಕ ಹೊಸ ಮತ್ತು ಹಳೆಯ ಪೂರಕ ಪರೀಕ್ಷಾ ವಿದ್ಯಾರ್ಥಿಗಳ ಅಂಕಗಳ ಸಹಿತದ ಫಲಿತಾಂಶ ಪಟ್ಟಿ ಬಂದಿತು. ಹಳೆಯ ಹುಡುಗರಲ್ಲಿ ಕೆಲವರು ಅವರ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದರು. ಇನ್ನು ಹೊಸ ಹುಡುಗರ ಪಟ್ಟಿಯಲ್ಲಿನ ನಾಲ್ಕುಜನ ಇಂಗ್ಲೀಷಿನಲ್ಲಿ ಮಾತ್ರ ಅನುತ್ತೀರ್ಣರಾಗಿದ್ದೆವು… ನಾನು, ರಾಮಕೃಷ್ಣ, ರಾಜಶೇಖರ ಮತ್ತು ಮಲ್ಲೇಶ್ವರಯ್ಯ. ಕೆಲವರು ಎರಡುಮೂರು ಅಥವಾ ಅಧಿಕ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರು... ನಮ್ಮ ರಾಮಚಂದ್ರನೂ ಸೇರಿ.

ನಮ್ಮ ಮುಖ್ಯೋಪಾಧ್ಯಾಯರು ಇಂಗ್ಲೀಷಿನಲ್ಲಿ ಅನುತ್ತೀರ್ಣರಾಗಿದ್ದ ನಾಲ್ಕು ಜನರ ಇಂಗ್ಲೀಷ್‌ ಉತ್ತರಪುಸ್ತಕಗಳಲ್ಲಿನ ಅಂಕಗಳ ಮರುಕೂಡಿಕೆಗಾಗಿ ಶುಲ್ಕಸಹಿತ ಎಸ್ಸೆಸ್ಸೆಲ್ಸಿ ಪರೀಕ್ಷಾ ಮಂಡಳಿಗೆ ಅರ್ಜಿ ಸಲ್ಲಿಸಿದರು. ಅಲ್ಲಿಂದ ಬಂದ ಉತ್ತರದಲ್ಲಿ ಯಾವ ಬದಲಾವಣೆಯೂ ಇರಲಿಲ್ಲ.

ಸೆಪ್ಟಂಬರ್‌ ತಿಂಗಳಿನ ಪೂರಕ ಪರೀಕ್ಷೆ ಮತ್ತು ಅಂಕಪಟ್ಟಿಗಳು ಕಳೆದು ಏಕೀಕೃತ ಅಂಕಪಟ್ಟಿ ಪಡೆದದ್ದು
ಬರುವ ಸೆಪ್ಟಂಬರ್‌ನಲ್ಲಿ ನಡೆಯುವ ಪೂರಕ ಪರೀಕ್ಷೆಗೆ ಶುಲ್ಕ ತುಂಬಿ ಪರೀಕ್ಷೆ ಬರೆದು ನಾವು ನಾಲ್ಕು ಜನರೂ ತೇರ್ಗಡೆ ಹೊಂದಿದೆವು ಹಲವು ಹಳೆಯ ವಿದ್ಯಾರ್ಥಿಗಳ ಜೊತೆಯಲ್ಲಿ. ನನ್ನ ತೇರ್ಗಡೆ ಹೊಂದಿದ ಅಂಕಪಟ್ಟಿಗಳನ್ನು ನಾನು ಶಾಲೆಯಿಂದ ಪಡೆದು ತಂದಿರಲಿಲ್ಲ. ಯಾರೋ ಶಾಲೆಯಿಂದ ತೆಗೆದುಕೊಂಡು ಬಂದು ನನಗೆ ಕೊಟ್ಟಿದ್ದರು. ನಾನು ಅವುಗಳನ್ನು ಜೋಪಾನ ಮಾಡಿರಲಿಲ್ಲ. ಅವುಗಳ ಮುಂದಿನ ಅವಶ್ಯಕತೆ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ ಕೂಡ. ಒಟ್ಟಾರೆಯಾಗಿ ನಮ್ಮ ಮನೆಯವರೆಲ್ಲೋ ಕಸದಲ್ಲಿ ಸೇರಿಸಿ ಎಸೆದಿದ್ದರು. ಇದು ಗಮನಕ್ಕೆ ಬಂದದ್ದು 1969ರಲ್ಲಿ ಸ್ನಾತಕಪೂರ್ವ(PUC) ಉನ್ನತ ವಿದ್ಯಾಭ್ಯಾಸಕ್ಕೆ ಸೇರುವ ಮೊದಲು. ನನ್ನ ಪ್ರೀತಿಯ ಮಾವ ಹೆಚ್‌.ಎಂ.ಹನುಮತಣ್ಣನವರಿಂದ ಮತ್ತೊಮ್ಮೆ ಬೈಯ್ಗಳು ಕೇಳಬೇಕಾಯಿತು. ಅವರು ಕೂಡಲೇ ಶಾಲೆಯ ಧಾಕಲೆಗಳೊಂದಿಗೆ ಪರಿಶೀಲಿಸಿ ಅಂಕಪಟ್ಟಿ ಕಳೆದುಕೊಂಡಿದ್ದ ಮೂರ್ನಾಲ್ಕು ಜನ ಹುಡುಗರ ಪರವಾಗಿ ಎಸ್ಸೆಸ್ಸೆಲ್ಸಿ ಮಂಡಳಿಗೆ ಅರ್ಜಿ ಸಲ್ಲಿಸಿ ಏಕೀಕೃತ ಅಂಕಪಟ್ಟಿ ಪಡೆಯಲು ಅವರೇ ಓಡಾಡಿ ಕ್ಲುಪ್ತಸಮಯದಲ್ಲಿ ತಂದುಕೊಟ್ಟಿದ್ದರು.

ಏಕೀಕೃತ ಅಂಕಪಟ್ಟಿ ಬಂದಮೇಲೆ ನಮ್ಮ ಮಾವ ಹೆಚ್‌.ಎಂ.ಹನುಮಂತಣ್ಣನವರೇ ನನ್ನನ್ನೂ ಅವರ ತಮ್ಮ ಮಲ್ಲೇಶ್ವರಯ್ಯನನ್ನು ಕರೆದುಕೊಂಡು ಹೋಗಿ ಮಧುಗಿರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಗ್ಲೀಷ್‌ ಮಾಧ್ಯಮದ 11ನೇ ತರಗತಿಗೆ, ಸ್ನಾತಕಪೂರ್ವ (PUC) ವಿದ್ಯಾಭ್ಯಾಸಕ್ಕಾಗಿ ವಿಜ್ಞಾನ(PCM) ವಿಷಯಗಳಲ್ಲಿ ಪ್ರವೇಶ ಮಾಡಿಸಿದರು...1969ರ ಜೂನ್‌ ತಿಂಗಳಿನಲ್ಲಿ.

1966ರ ಜನವರಿ ತಿಂಗಳಿನಲ್ಲಿ ಶ್ರೀ ಸಿದ್ದಗಂಗಾ ಮಠದ ಆಡಳಿತಕ್ಕೊಳಪಟ್ಟ ಶಾಖೆ, "ಶ್ರೀ ಮಾರುತಿ ಗ್ರಾಮಾಂತರ ಪ್ರೌಢಶಾಲೆ"ಯ ಮುಖ್ಯೋಪಾಧ್ಯಾಯರಾಗಿ, ಮಠದ ಇನ್ನೊಂದು ಪ್ರೌಢಶಾಲೆಯಿಂದ ವರ್ಗವಾಗಿ, ಮರುನೇಮಕವಾಗಿ ಬಂದ ನನ್ನ ಪ್ರೀತಿಯ ಮಾವ ನಿವೃತ್ತಿಯಾಗುವವರೆಗೆ ಅಲ್ಲಿಯೇ ಸೇವೆ ಸಲ್ಲಿಸಿದ್ದಾರೆ. ಇಂದು 90ರ ಹತ್ತಿರದ ಇಳಿವಯಸ್ಸಿನಲ್ಲಿದ್ದಾರೆ. ನಮ್ಮೆಲ್ಲರ ಪ್ರೀತಿಯ ಅವರು ಮಠದ ಸ್ವಾಮೀಜಿಗಳಂತೆ ನೂರುಕಾಲ ಬಾಳಲೆಂಬುದೇ... ನಮ್ಮೆಲ್ಲರ ಒತ್ತಾಸೆ.###

ಟಿ.ದಿವಾಕರ

ಬಾಲಂಗೋಚಿ: ಶ್ರೀ ಮಾರುತಿ ಗ್ರಾಮಾಂತರ ಪ್ರೌಢಶಾಲೆಯ ಸಂಸ್ಥಾಪಕ-ಪಿತಾಮಹ ಶ್ರೀ ಎಂ.ಚಂದ್ರಶೇಖರಯ್ಯನವರು ಶಾಲೆ ಹುಟ್ಟುಹಾಕಿದ ಬರೆಯಲುಳಿದ ಕತೆಯನ್ನಿಲ್ಲಿ ಸೇರಿಸಿಲ್ಲ. ಅದು ಎರಡುಮೂರು ಪುಟಗಳಾಗಬಹುದು. ನನ್ನ ಮುಂದಿನ ಬರವಣಿಗೆಯಲ್ಲಿ ವಿವರಿಸುತ್ತೇನೆ.

Comments

Popular posts from this blog

ಲಾಸ್‌ಎಂಜಲಿಸ್‌ನಿಂದ ಟಿಟಾನ್‌ ವಿಲೇಜ್‌ವರೆಗೆ

ಜೀವಂತ ಕ್ರಿಯಾಶೀಲ ಜ್ವಾಲಾಮುಖಿಯ ಮೇಲೆ 18 ಗಂಟೆಗಳ ಓಡಾಟ

ಕನ್ನಡಕ್ಕಾಗಿ ವಿಂಡೋಸ್ ಎದುರು ಲಿನಕ್ಸ್ ಗಣಕ ನಿರ್ವಹಣಾ ತಂತ್ರಾಂಶ