ಕನ್ನಡಕ್ಕಾಗಿ ವಿಂಡೋಸ್ ಎದುರು ಲಿನಕ್ಸ್ ಗಣಕ ನಿರ್ವಹಣಾ ತಂತ್ರಾಂಶ
ಕನ್ನಡಕ್ಕಾಗಿ ವಿಂಡೋಸ್ ಎದುರು ಲಿನಕ್ಸ್ ಗಣಕ ನಿರ್ವಹಣಾ ತಂತ್ರಾಂಶ
ಜೀವಶಾಸ್ತ್ರದಲ್ಲಿ ಪದವಿಪಡೆದ ಈ ಬ್ಲಾಗಿ ನಾಟಕ, ಪತ್ರಿಕೋಧ್ಯಮ ಎಂದು ತಲೆಕೆಡಿಸಿಕೊಂಡು ಓಡಾಡಿ ಕೊನೆಗೆ 1976ರಲ್ಲಿ ಸೇರಿದ್ದು ಕರ್ನಾಟಕ ಸರ್ಕಾರದ ಸಹಕಾರಿ ಇಲಾಖೆಯಲ್ಲಿ ನಿರೀಕ್ಷರ ಕೆಲಸಕ್ಕೆ. ಇಲಾಖೆಗೆ ಸೇರಿದಂತೆ ಬೆಂಗಳೂರಿನ ಪದ್ಮನಾಭನಗರದಲ್ಲಿರುವ “ಸಹಕಾರಿ ಆಢಳಿತ ತರಭೇತಿ ಸಂಸ್ಥೆ‘ಯಲ್ಲಿ ನೀಡಿದ ms-dos, wordstar ಮತ್ತೊಂದು lotus123 – graphic-presentation ಗಣಕೀಕರಣ ತರಭೇತು ಮಾತ್ರ. ಮತ್ತಿನ್ನಾವ ಅಧಿಕೃತ ಗಣಕ–ಕೌಶಲ್ಯ ತರಭೇತಿ ಪಡೆಯಲಿಲ್ಲ, ಕೇವಲ ಗಣಕದ ಮುಂದೆ ಕುಳಿತು ಪ್ರಯತ್ನ–ಅಪ್ರಯತ್ನಗಳ ಆಧಾರದಲ್ಲಿ windows ಮತ್ತು MS Office ತಂತ್ರಾಂಶದ ಒಳಹೊರಗನ್ನು ಕಲಿತದ್ದಾಯಿತು. ಹಾಗಾಗಿ ಅಂತರ್ಜಾಲ ಹುಡು/ಬೆದಕಾಟ, ವಿ–ಟಪಾಲು ಇತ್ಯಾದಿ…ಆದರೆ ವಿಷಯ ಅದಲ್ಲ..?!
ಇತ್ತೀಚೆಗೆ ಈ ಲೇಖಕ ಹಾಗೂ ಗಣಕ ಬಳಸುವ ಎಲ್ಲಾ ಕಂಪ್ಯೂಟರ್ ಗೀಕುಗಳಿಗೆ ಆದ ಒಂದು ದುಸ್ವಪ್ನವೆಂದರೆ ಮೈಕ್ರೊಸಾಫ್ಟ್ ಸಂಸ್ಥೆ windows-XP ನಿರ್ವಹಣಾ ತಂತ್ರಾಂಶ ಮತ್ತು MS Office 2003 ಇವುಗಳ ಸೇವಾಬೆಂಬಲವನ್ನು ಇದೇ ವರ್ಷದ ಏಪ್ರಿಲ್ 8ರಿಂದ ಹಿಂಪಡೆದುಕೊಂಡದ್ದು ಮತ್ತು ಬಳಕೆದಾರರಿಗೆ ಆನಂತರದ ನಿರ್ವಹಣಾ ತಂತ್ರಾಂಶ windows-7 ಮತ್ತು -8ಆಳವಡಿಸಿಕೊಳ್ಳಲು ಸೂಚಿಸಿದ್ದು! “ನುಡಿ‘ ಕನ್ನಡ ತಂತ್ರಾಂಶವನ್ನು ಬಳಸುತ್ತಿದ್ದ ಲೇಖಕನಿಗೆ ಇದೊಂದು ಆಘಾತ! ಈ ಕಾರಣಕ್ಕೆ ಮೈಕ್ರೊಸಾಫ್ಟ್ ಸಂಸ್ಥೆಯ ಈ ಘನಕಾರ್ಯವನ್ನು ನಾವು ಅದರ “”ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ” ಎಂದು ಕರೆಯೋಣವೆ ಎಂಬುದೊಂದು ಅಂಬೋಣ!? ಜಗತ್ತಿನ ಬಹುತೇಕ ಮಂದಿಗೆ ಗೊತ್ತಿಲ್ಲ…ಬಿಲ್ ಗೇಟ್ಸ್, ಮೈಕ್ರೊಸಾಫ್ಟ್ ಒಡೆಯ MS-Office ಬರವಣಿಗೆ ತಂತ್ರಾಂಶದ mail merge, spell-check, grammer-check, ಮತ್ತು outline processing ತಂತ್ರಾಂಶಗಳನ್ನು
ಸಣ್ಣಪುಟ್ಟ ಸಂಸ್ಥೆಗಳ ತಂತ್ರಜ್ಞರು ಸಿದ್ದಪಡಿಸಿದ್ದನ್ನು ಸಂಪೂರ್ಣವಾಗಿ ಹಕ್ಕುಗಳ
ಸಹಿತ ಖರೀದಿಸಿ ಅವರನ್ನು ಅತಂತ್ರರನ್ನಾಗಿ ಮಾಡಿ ಮುಖ್ಯ ಚೌಕಟ್ಟಿನಿಂದ ಹೊರಹಾಕಿರುವುದು. ಈ ವಿಷಯವನ್ನು ಚಾರ್ಲಿ ಸ್ಟ್ರೊಸ್ ಎಂಬ ಕಾದಂಬರಿಕಾರ ಮೈಕ್ರೊಸಾಫ್ಟ್ ಸಂಸ್ಥೆಯ ವಿರುದ್ಧ ವಾಚಾಮಗೋಚರವಾಗಿ ಬೈದು ಬರೆದಿದ್ದಾನೆ ಆತನ ಬ್ಲಾಗಿನಲ್ಲಿ. ಯಾರಾದರೂ ಪರಿಶೀಲಿಸಬಹುದು “Why Mmicrosoft Word Must Die” ಎಂಬ ಬರಹದಲ್ಲಿ (URL: http://www.antipope.org/charlie/blog-static/2013/10/why-microsoft-word-must-die.html). ಅದಾಗ್ಯೂ ಆತ ತಾನೊಬ್ಬ ದೊಡ್ಡ ಸಾಮಾಜಿಕ ಪ್ರಜ್ಞೆ ಮತ್ತು ಕಳಕಳಿಯಿರುವ ವ್ಯಕ್ತಿಯೆಂದು ಬಿಂಬಿಸಿಕೊಳ್ಳುತ್ತಿರುವುದೊಂದು ಅಭಾಸದ ಸಂಗತಿ. ಇದೀಗ Windows Server 2003 ನ್ನು ಕೊಲ್ಲಲು ಅಣಿಯಾಗಿದೆ, ತಂತ್ರಾಂಶವನ್ನು ಉಪಯೋಗಿಸುತ್ತಿರುವ ಸಂಸ್ಥೆಗಳು Windows Server 2012 ನ್ನು ಅಳವಡಿಸಿಕೊಳ್ಳಲು ತಯಾರಿರಲು ಸೂಚನೆ ಬಂದಿದೆ – URL http://searchwindowsserver.techtarget.com/tip/Preparing-for-a-move-away-from-Windows-Server-2003?
ಬಹುತೇಕ ಮಂದಿ ಅವರ ಮನೆಗಳಲ್ಲಿ ಮತ್ತವರ ಪುಟ್ಟ ಕಛೇರಿಗಳಲ್ಲಿ windows-XP ಅಳವಡಿಸಿದ ಗಣಕಗಳನ್ನಿಟ್ಟುಕೊಂಡಿದ್ದಾರೆ. ಅವುಗಳಿಗೆ ಅಂತರ್ಜಾಲ ಸಂಪರ್ಕವನ್ನೂ ಪಡೆದುಕೊಂಡಿರುತ್ತಾರೆ. ಈ ಅಂತರ್ಜಾಲ ಸಂಪರ್ಕವೇ ಈ ಎಲ್ಲ ತಂತ್ರಾಂಶ ಬಳಕೆದಾರರಿಗೆ ಆಗಿರುವ ತಲೆನೋವು. ಈ ಲೇಖಕನ ಗಮನಕ್ಕೆ ಬಂದಹಾಗೆ ಈಗಾಗಲೇ ಅಲ್ಲಲ್ಲಿ ಗಣಕಗಳು ಸರಿಯಾಗಿ ಕಾರ್ಯನಿರ್ವಹಿಸದೆ ಮಗುಚಿಕೊಂಡುಬಿದ್ದಿವೆ. ಹೀಗಾದರೆ ಮುಂದೇನು..? ಕಾಲೋನ್ನತಿಗಳನ್ನು(updates) ಅಳವಡಿಸಿಕೊಳ್ಳಬೇಕು ಅಷ್ಟೆ… ಅಂದರೆ windows-7 ಅಥವಾ -8. ಇದೊಂದು ರೀತಿಯಲ್ಲಿ ಮುಂದುವರಿದ ವ್ಯಾಪಾರ Microsoft ಸಂಸ್ಥೆಗೆ! ಅದರ ಈ ನರಿ ಬುದ್ಧಿಗಾಗಿ ಬ್ಲಾಗಿ ಅವರ ಗಣಕದಿಂದ Windows XP ನಿರ್ವಹಣಾ ತಂತ್ರಾಂಶವನ್ನು ಕಿತ್ತೊಗೆದಿದ್ದಾರೆ.
ಭಾರತ ಸರ್ಕಾರದ ಸ್ವಾಮ್ಯಕ್ಕೊಳಪಟ್ಟಿರುವ C-DAC ಸಂಸ್ಥೆ ಒಂದು ಗಣಕ ನಿರ್ವಹಣಾ ತಂತ್ರಾಂಶವನ್ನು ಬಿಡುಗಡೆ ಮಾಡಿದೆ. ಅದರ ಹೆಸರು BOSS. ಅವತರಣಿಕೆ BOSS-4 ಮತ್ತು -5; ಸಧ್ಯಕ್ಕೀಗ BOSS-5 ಹಳೆಯದು. ಇದೀಗ BOSS-6 ಬಂದಿದೆ. ಇವು ಲಿನಕ್ಸ್(Linux) ಆಧಾರಿತ ತಂತ್ರಾಂಶ. ಸಾಮಾನ್ಯ ಬಳಕೆದಾರರಿಗೆ ಈ ತಂತ್ರಾಂಶ ಬಳಕೆಯಲ್ಲಿಲ್ಲ. ಹಾಗಾಗಿ ಉಪಯೋಗಿಸುವುದು ಸ್ವಲ್ಪ ಕಷ್ಟ. ಸಾಮಾನ್ಯರೇಕೆ ಕರ್ನಾಟಕ ಸರ್ಕಾರದ ಕಛೇರಿಗಳಲ್ಲಿಯೇ ಬಳಸಲ್ಪಡುತ್ತಿಲ್ಲ. ಏಕೆಂದರೆ “ನುಡಿ‘ ಕನ್ನಡ ಗಣಕೀಕೃತ ಬೆರಳಚ್ಚು/ಬರವಣಿಗೆ ತಂತ್ರಾಶ ಮೂಲ windows ತಂತ್ರಾಂಶ ನಿರ್ವಹಣೆಗೊಳಪಟ್ಟಿದೆ. “ನುಡಿ‘ ಲಿನಕ್ಸ್(Linux) ನಿರ್ವಹಣಾ ತಂತ್ರಾಂಶದಲ್ಲಿ ಅಳವಡಿಕೆಯಾಗಿ ಕಾರ್ಯನಿರ್ವಹಿಸುವುದಿಲ್ಲ. “ನುಡಿ‘ ಕರ್ನಾಟಕ ಸರ್ಕಾರದ ತಂತ್ರಾಂಶ. ಸರ್ಕಾರದ ಸ್ವಾಭಿಮಾನಕ್ಕೆ ಲಿನಕ್ಸ್ ಬಳಸುವುದು ಅವಮಾನಕರವೇನೋ? ಹಾಗಾಗಿ ಕರ್ನಾಟಕ ಸರ್ಕಾರದ ನೌಕರರಿಗೆ ಅದಿನ್ನೂ ಅಭ್ಯಾಸಕ್ಕೆ ಬಂದಿಲ್ಲ. ಮತ್ತೊಂದು ಅಂಶವೆಂದರೆ ಈಗಾಗಲೇ “ನುಡಿ‘ ಬಳಸಿ ಸೃಷ್ಟಿಸಿರುವ ದಾಖಲೆಗಳನ್ನು ಹೊಸ ತಂತ್ರಾಂಶಕ್ಕೆ ವರ್ಗಾವಣೆ ಮಾಡಿಕೊಳ್ಳುವ ದುಸ್ಸಾಹಸ ಮತ್ತು ಅದಕ್ಕೆ ತಗಲುವ ದುಭಾರಿ ವೆಚ್ಚ. ಸರ್ಕಾರ ಯೋಚನೆಮಾಡಬೇಕಾದ ವಿಷಯ!
BOSS-5 ಗಣಕ ನಿರ್ವಹಣ ತಂತ್ರಾಂಶದಲ್ಲಿ SCIM(Smart Common Input Method) ಎಂಬ ತಂತ್ರಾಂಶವನ್ನು ಅಳವಡಿಸಲಾಗಿದೆ. ಇದು ಚೀನೀಯರು ಅವರ ಭಾಷೆಯನ್ನು ಗಣಕದಲ್ಲಿ ಅಳವಡಿಸಲು ಸಿದ್ಧಪಡಿಸಿದ ಒಂದು ತಂತ್ರಾಂಶ. ಇದೀಗ ಆ ತಂತ್ರಾಂಶವನ್ನು ಏಶಿಯಾದ ಎಲ್ಲ ಭಾಷೆಗಳಿಗೂ ಅಳವಡಿಸಿಕೊಳ್ಳಬಹುದಾಗಿದೆ. ಅವಶ್ಯವಾಗಿ ಬೇಕಾಗಿರುವುದು ಯೂನಿಕೋಡ್ ಲಿಪಿ(font)ಗಳು ಮಾತ್ರ. BOSS-5ರಲ್ಲಿ ಲಭ್ಯವಿರುವ ಲಿಪಿಗಳೆಂದರೆ “”ಲೋಹಿತ್ ಕನ್ನಡ, ಕೇದಗೆ, ಗುಬ್ಬಿ, ಮಲ್ಲಿಗೆ, ನವಿಲು ಮತ್ತು ಸಂಪಿಗೆ; ಲೋಹಿತ್ ದೇವನಾಗರಿ ಮತ್ತು CDAC-GISTSakalBharati”, ಈ ಕೊನೆಯೆರಡು ಲಿಪಿಗಳಲ್ಲಿ ಭಾರತೀಯ ಎಲ್ಲಾ ಭಾಷೆಗಳಿಗೆ ಅನ್ವಯಿಸಿ ಲಿಪಿ ಸಿದ್ಧಪಡಿಸಿದೆ. ಆದರೆ “ನುಡಿ‘ ಲಿಪಿಗಳು ಈ SCIM ತಂತ್ರಾಂಶದಲ್ಲಿ ಕಾರ್ಯನಿರ್ವಹಿಸುವುದಿಲ್ಲ. BOSS-5ರ ನ್ಯೂನತೆಯೆಂದರೆ ಅದರ SCIMನಲ್ಲಿ ಅಳವಡಿಸಿರುವ ಎರಡು ಕನ್ನಡದ ಕೀಲಿಮಣೆಗಳಲ್ಲೊಂದು KGP, ಇದು ಕಾಗುಣಿತಗಳನ್ನು ತೆಗೆದುಕೊಳ್ಳುವುದಿಲ್ಲ ಕೇವಲ ಒತ್ತಕ್ಷರಗಳನ್ನು ಮಾತ್ರ ತೆಗೆದುಕೊಳ್ಳುತ್ತದೆ. ಆದುದರಿಂದ ಅದು ಉಪಯೋಗವಿಲ್ಲ. ಇನ್ನೊಂದು inscript, ಇದು ಪೂರ್ಣ ಕಾರ್ಯನಿರವಹಿಸುತ್ತದೆ. ಆದರೆ ಕೀಲಿಮಣೆಯ ಬಹುತೇಕ ಎಲ್ಲಾ ಕೀಲಿಗಳಿಗೂ ಅನ್ವಯಿಸುವ ಹಾಗೆ ಕನ್ನಡದ ಕೀಲಿಮಣೆ ಸಿದ್ಧಪಡಿಸಿದ್ದಾರೆ. “ನುಡಿ‘ಯಷ್ಟು ಬೆರಳಚ್ಚು ಸ್ನೇಹಿಯಲ್ಲ; ಇದರ ಕೀಲಿಮಣೆ ಉಪಯೋಗಿಸುವುದು “ನುಡಿ‘ ಬಳಸಿದವರಿಗೆ ಕಷ್ಟವೇ ಸರಿ. ಹಾಗಾಗಿ ಲೇಖಕ “ನುಡಿ‘ ಕೀಲಿಮಣೆ ಆಧರಿಸಿ ಕನ್ನಡ ಅಂಕಿ ಮತ್ತು ಇಂಗ್ಲೀಷ್ ಅಂಕಿಗಳಿಗಾಗಿ ಪ್ರತ್ಯೇಕವಾಗಿ ಒಂದೊಂದು SCIM ಕೀಲಿಮಣೆಗಳನ್ನು ಸಿದ್ಧಪಡಿಸಿದ್ದಾರೆ. (ಹೊಸದಾಗಿ ಸಿದ್ಧಪಡಿಸಿರುವ ಎರಡೂ ಕೀಲಿಮಣೆಗಳನ್ನು ಕನ್ನಡಿಗರಿಗಾಗಿ SCIMತಂತ್ರಾಂಶದ ಉಪಯೋಗಕ್ಕಾಗಿ ಸಧ್ಯದಲ್ಲಿಯೇ ಅಂತರ್ಜಾಲ ಪುಟಗಳಿಗೆ ತುಂಬಲಾಗುವುದು). ಯಾಕೋ ಏನೋ C-DACನವರು ಇನ್ನೊಂದು ಕೀಲಿಮಣೆ ಬಳಸಿಲ್ಲ. ಅದರ ಹೆಸರು itrans (in transliteration), ಇದು ನಮ್ಮ ಕನ್ನಡದ “ಬರಹ‘ಕ್ಕೆ ಸಮನಾಗಿದೆ, ಇಂಗ್ಲಿಷಿನಲ್ಲಿ ಕೀಲಿಸಿದರೆ ಕನ್ನಡದಲ್ಲಿ ರೂಪಾಂತರವಾಗಿ ನಿಮ್ಮ ಬರವಣಿಗೆ ಅಚ್ಚಾಗುತ್ತದೆ, ಇದೊಂದು ಸ್ವರೋತ್ಪತ್ತಿ(Phonetics) ಆಧಾರದ m17n ತಂತ್ರಾಂಶವಾಗಿದೆ. ಬಹುಷಃ “ಬರಹ‘ ವನ್ನು m17n ತಂತ್ರಾಂಶ ಆಧರಿಸಿ ಸಿದ್ಧಪಡಿಸಿರಬಹುದು! ಭಾರತದ ಇತರೆ ಭಾಷೆಗಳಿಗಾಗಿಯೆ ಅಂದರೆ… ತಮಿಳು, ತೆಲುಗು, ಮಲಯಾಳಂ, ಹಿಂದಿ, ಗುಜರಾತಿ, ಬಂಗಾಲಿ ಮತ್ತಿತರ ಭಾಷೆಗಳಿಗನುಕೂಲಕ್ಕಾಗಿ BOSS-5ರಲ್ಲಿ ಆಯಾ ಲಿಪಿಗಳನ್ನು ಮತ್ತು SCIM ಕೀಲಿಮಣೆಗಳನ್ನು ಅಳವಡಿಸಲಾಗಿದೆ. SCIM ಮೂಲಕ “ನೇರನುಡಿ‘ ರೀತ್ಯ LibreOffice Writer ಮತ್ತು .txt ಕಡತಗಳ ಮೇಲೆ ಬೆರಳಚ್ಚಿಸಬಹುದು. Windowsನಲ್ಲಿ “ನೇರನುಡಿ‘ .txt ಕಡತದ ಮೇಲೆ ಅದರ ಕೀಲಿಮಣೆಗನುಗುಣವಾಗಿ ಕನ್ನಡ ಅಕ್ಷರಗಳನ್ನು ಮುದ್ರಿಸುವುದಿಲ್ಲ, ಕಾರಣ “ನುಡಿ‘ ಲಿಪಿಗಳಲ್ಲಿ ಮಾಡಿರುವ ಸಂಕೇತೀಕರಣ(coding) ತಪ್ಪುಗಳು. ಯಾರು ಬೇಕಾದರೂ BOSS-5 ನ್ನು C-DAC ಜಾಲ–ತಾಣದಿಂದ ಕೆಳಗಿಳಿಸಿಕೊಳ್ಳಬಹುದು. ಈ ನಿರ್ವಹಣಾ ತಂತ್ರಾಂಶವನ್ನು ಅಳವಡಿಸಿದನಂತರ ಕಾಲೋನ್ನತಿಗಳನ್ನು(updates) ಅಳವಡಿಸುವುದು ಒಳ್ಳೆಯದು. ಇಲ್ಲದಿದ್ದಲ್ಲಿ ಕನ್ನಡ ಲಿಪಿಗಳು ಸರಿಯಾಗಿ ಮುದ್ರಿತವಾಗುವುದಿಲ್ಲ. BOSS-6 ರಲ್ಲಿ SCIM(Smart Common Input Method) ಇಲ್ಲ... ಬದಲಾಗಿ ibus ಎಂಬ ತಂತ್ರಾಂಶವನ್ನು ಅಳವಡಿಸಿದೆ.
ಕನ್ನಡ ಯೂನಿಕೋಡ್ ಲಿಪಿಗಳ ಬಗ್ಗೆ(ನುಡಿ ಲಿಪಿಗಳು ಹೊರತುಪಡಿಸಿ) ಒಂದು ಮಾತು:
ಕೇದಗೆ ಮತ್ತು ಗುಬ್ಬಿ ಲಿಪಿಗಳು ಪುಸ್ತಕ ಪ್ರಕಾಶಕರಿಗೆ ಅನುಕೂಲವಾಗುವಂತಹ ಸುಂದರವಾದ ಲಿಪಿಗಳು. ಗುಬ್ಬಿ, ಸಂಪಿಗೆ ಮತ್ತು ನವಿಲು ಲಿಪಿಗಳಲ್ಲಿ ಮಾತ್ರ ನಂಟುಗೆರೆ(hypen) “-‘ ಇದೆ, ಈ ” ಼‘ ನುಕ್ತ ಚಿಹ್ನೆ ಇಲ್ಲ. “ಕೇದಗೆ‘ ಮತ್ತು “ಮಲ್ಲಿಗೆ‘ಯಲ್ಲಿ ಈ ಎರಡೂ ಚಹ್ನೆಗಳೂ ಇಲ್ಲ. “ಲೋಹಿತ್ ಕನ್ನಡ‘ ದಲ್ಲಿ ಮಾತ್ರ ಈ ಎರಡೂ ಚಿಹ್ನೆಗಳಿವೆ. ಈ ನುಕ್ತ " ಼" ಏಕೆ ಬೇಕು? ಇದು ಜ ಅಕ್ಷರದ Z ಶಬ್ಧೋತ್ಪತ್ತಿಗಾಗಿ ಬೇಕಿದೆ. ಉದಾ: vision ಎಂಬ ಇಂಗ್ಲೀಷ್ ಪದವನ್ನು ಕನ್ನಡದಲ್ಲಿ ಬರೆಯುವಾಗ್ಗೆ ತಪ್ಪಾಗಿ “ವಿಷನ್‘ ಅಥವಾ “ವಿಜನ್‘ ಎಂದು ಬರೆಯುತ್ತಾರೆ. ಇಲ್ಲಿ Z ಶಬ್ಧೋತ್ಪತ್ತಿಯಾಗುವುದಿಲ್ಲ. ಹಾಗಾಗಿ ಈ ನುಕ್ತ ಚಿಹ್ನೆ " ಼" ಅವಶ್ಯವಾಗಿ ಬೇಕಿಲ್ಲಿ – ಈಗ ಉಚ್ಛರಿಸಿರಿ “ವಿಜ಼ನ್" ಎಂದು. “ಲೋಹಿತ್ ಕನ್ನಡ" ಹೊರತು
ಯಾವುದೇ ಲಿಪಿಯನ್ನು ಈ ನುಕ್ತ ಚಿಹ್ನೆ ತೆಗೆದುಕೊಳ್ಳುವುದಿಲ್ಲ. ಇಲ್ಲಿಯೂ ಸಹ
ಬಳಸಿದ್ದು ಕೇದಗೆ ಲಿಪಿಯನ್ನೆ, ಆದರೆ ಅದು ಇಲ್ಲಿಯೂ ಬೆರಳಚ್ಚಿನಲ್ಲಿ ತೆಗೆದುಕೊಂಡಿದ್ದು
ಜ಼ “ಲೋಹಿತ್ ಕನ್ನಡ" ಲಿಪಿಯನ್ನೆ. ಉಳಿತಾಯ ಮಾಡುವಾಗ್ಗೆ ಕೇದಗೆ ಲಿಪಿಯಲ್ಲಿಯೇ ಉಳಿದಿದೆ. ಕೇದಗೆ ಲಿಪಿಗಳ ಮಧ್ಯೆ ಈ ಪ್ರತ್ಯೇಕ “ಲೋಹಿತ್ ಕನ್ನಡ" ಲಿಪಿ ಮುದ್ರಣದಲ್ಲಿ ಅಭಾಸವಾಗಿ ಕಾಣುತ್ತದೆ. ಹಾಗಾಗಿ ಲೇಖಕ ಕೇದಗೆ ಮತ್ತು ಗುಬ್ಬಿ ಲಿಪಿಗಳಿಗೆ ನುಕ್ತ ಚಿಹ್ನೆಯನ್ನು ಸೇರಿಸಿಕೊಂಡಿದ್ದಾರೆ. “ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು‘ ರವರು GNU General Public Licence (URL: http://www.gnu.org/copyleft/gpl.html) ಅಡಿಯಲ್ಲಿ ಈ ಲಿಪಿಗಳನ್ನು ಸಿದ್ಧಪಡಿಸಿದ್ದಾರೆ. ಹಕ್ಕುಗಳು ಅವರದೇ ಆಗಿರುತ್ತದೆ.
ಕೊನೆಯದಾಗಿ ಒಂದು ಕಿವಿಮಾತು windows ನಿರ್ವಹಣಾ ತಂತ್ರಾಂಶ ಇಷ್ಟಪಡದೇ ಇರುವವರು BOSS-5 ಮತ್ತು ಹೊಸದಾಗಿ ಬಂದಿರುವ openSUSE 13.2 ಲಿನಕ್ಸ್ ನಿರ್ವಹಣಾ ತಂತ್ರಾಂಶಗಳನ್ನು ಅಳವಡಿಸಿಕೊಳ್ಳಬಹುದು. ಎರಡೂ ಅದ್ಭುತ ತಂತ್ರಾಂಶಗಳು. ಎರಡನ್ನೂ ಸಹ ಉಚಿತವಾಗಿ ಅವುಗಳ ಜಾಲ–ತಾಣದಿಂದ ಕೆಳಗಿಳಿಸಿಕೊಳ್ಳಬಹುದು. openSUSE ಯಲ್ಲಿ ಕನ್ನಡ ಲಿಪಿಗಳು ಇರುವುದಿಲ್ಲ. SCIM ತಂತ್ರಾಂಶವನ್ನುಅಳವಡಿಸಿದನಂತರ ಕನ್ನಡ ಲಿಪಿಗಳನ್ನು BOSS-5 ರಿಂದ ನಕಲುಮಾಡಿ ಅಳವಡಿಸಿಕೊಳ್ಳಬಹುದು, GNU General Public Licence ಅಡಿಯಲ್ಲಿ ಆ ಅವಕಾಶವಿದೆ. ಅಥವಾ windows ಇದ್ದಲ್ಲಿ ಅದರಲ್ಲಿನ Arial Unicode MS[ARIALUNI.TTF] ಬಹುಭಾಷ ಲಿಪಿ ಮತ್ತು Tunga.ttf ಕನ್ನಡ ಲಿಪಿ ಬಳಸಿಕೊಳ್ಳಬಹುದು. “ತುಂಗಾ‘ ಲಿಪಿ ಅಷ್ಟು ಚೆನ್ನಾಗಿಲ್ಲ ಮತ್ತು ಈ " ಼" ನುಕ್ತ ಚಿಹ್ನೆ ಎರಡು ಲಿಪಿಗಳಲ್ಲಿಯೂ ಇಲ್ಲ. ಆದರೆ ಕಾನೂನು ರೀತ್ಯ ನಕಲುಮಾಡಿ ಬಳಸುವ ಅವಕಾಶ ಪರಿಶೀಲಿಸುವುದುತ್ತಮ. ಹಕ್ಕುಗಳು ಪೂರ್ಣವಾಗಿ ಮೈಕ್ರೊಸಾಫ್ಟ್ ಸಂಸ್ಥೆಗೆ ಒಳಪಟ್ಟಿದೆ. ###
ಟಿ.ದಿವಾಕರ
ಹೊಸದಾಗಿ ಮತ್ತಷ್ಟು ಯೂನಿಕೋಡ್ ಲಿಪಿಗಳು ಜಾಲತಾಣಗಣಗಳಲ್ಲಿ ಸಿಗುತ್ತವೆ. ಕರ್ನಾಟಕ-ಸರ್ಕಾರದ ಕನ್ನಡ ಸಂಸ್ಕೃತಿ ಇಲಾಖೆಯು 12 ಯೂನಿಕೋಡ್ ಲಿಪಿಗಳನ್ನು ಅದರ ಜಾಲತಾಣದಲ್ಲಿ ಕನ್ನಡಿಗರ ಮತ್ತು ಕನ್ನಡದ ಅಭಿವೃದ್ಧಿಗಾಗಿ ಇಳಿಸಿಕೊಂಡು ಉಪಯೋಗಿಸಬಹುದು. ಮತ್ತು ನುಡಿ-5 ತಂತ್ರಾಂಶದಲ್ಲಿ 22 ಹೊಸ ಯುನಿಕೋಡ್ ಲಿಪಿಗಳಿವೆ. ನುಡಿ-5 ನ್ನು ವಿಂಡೋಸ್ ಗಣಕ-ಚಾಲಕದಲ್ಲಿ ಅಳವಡಿಸಿಕೊಂಡಿದ್ದರೆ /fonts ಅಡಕದಿಂದ ನಕಲುಮಾಡಿ ಪ್ರತ್ಯೇಕವಾಗಿ ಅಡಕಮಾಡಿಟ್ಟುಕೊಂಡು ಬೇಕಾದಕಡೆ ಉಪಯೋಗಿಸಿಕೊಳ್ಳಬಹುದು. ಯಾವುದೇ ಅಂಡ್ರಾಯಿಡ್ ಕೋಶವಾಣಿಗಳಲ್ಲಿ ಗೂಗಲ್‌ನಲ್ಲಿ ಕನ್ನಡ ಉಪಯೋಗಿಸುತ್ತಿದ್ದರೆ ಅದರಲ್ಲಿ ಒಂದು ಕನ್ನಡ ಯೂನಿಕೋಡ್ ಲಿಪಿ ಅಚಾನಕ್ಕಾಗಿ ತೆರೆದುಕೊಳ್ಳುತ್ತದೆ. ಇದನ್ನು ಗೂಗಲ್ ಸಂಸ್ಥೆಯು ಇದನ್ನು ಅಭಿವೃದ್ಧಿಪಡಿಸಿ ಗೂಗಲ್ ಉಪಯೋಗದಾರರಿಗೆ ಬಿಡುಗಡೆ ಮಾಡಿರುತ್ತದೆ. ಇದರ ಹೆಸರು "Noto Sans Kannada.ttf"
ReplyDeleteಇದನ್ನೂ ಜಾಲತಾಣದಿಂದ ಇಳಿಸಿಕೊಂಡು /fonts ಅಡಕಕ್ಕೆ ನಕಲು ಮಾಡಿ ತುಂಬಿಕೊಳ್ಳಬಹುದು.