ಲಾಸ್‌ಎಂಜಲಿಸ್‌ನಿಂದ ಟಿಟಾನ್ ವಿಲೇಜ್‌ವರೆಗೆ
ಲಾಸ್‌ಎಂಜಲಿಸ್‌ನಿಂದ ಟಿಟಾನ್ ವಿಲೇಜ್‌ವರೆಗೆ
ಪ್ರವಾಸವೆಂದರೆ ಏನೋ ಒಂದು ಹೊಸ ಪ್ರಪಂಚಕ್ಕೆ ಕಾಲಿಟ್ಟು ಹೊಸದನ್ನು ನೋಡುತ್ತಾ ಅನುಭವಿಸುವ ತವಕದ ಮನೋಲ್ಲಾಸದಾಯಕ ಸಮಯದ ಎದುರುನೋಟ! ನಮ್ಮ ಭಾರತದಲ್ಲಿಯೇ ತೆಗೆದುಕೊಳ್ಳಿ… ದಕ್ಷಿಣದಲ್ಲಿ ತಮಿಳುನಾಡು, ಕೇರಳ, ಕರ್ನಾಟಕದಲ್ಲಿನ ಮುಖ್ಯವಾಗಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿನ ಸಾಹಸಪ್ರದ, ಆನ್ವೇಷಣಾ ಪ್ರವಾಸಗಳ ಅನುಭವ ಮತ್ತು ಉತ್ತರ ಭಾರತದ ಹಿಮಾಲಯ ಪರ್ವತಶ್ರೇಣಿಗಳಲ್ಲಿ ಮಾಡುವ ಪ್ರವಾಸದ ಅನುಭವಗಳನ್ನು ವರ್ಣಿಸಲಾಸಾಧ್ಯ! ಮನಸ್ಸನ್ನು ಏನೋ ಒಂದು, ಊಹಿಸಲೂ ಇರದ ಹೊಸ ಪ್ರಪಂಚ, ಹೊಸ ವಾತಾವರಣದಿಂದ ಕೂಡಿದ ಉಲ್ಲಾಸದಾಯಕ ಪರಿಭ್ರಮಣೆಗೆ ಒಯ್ಯಲ್ಪಡುತ್ತದೆ. ಸರಿ, ಈಗ ಅಂತಹುದೊಂದು ಪ್ರವಾಸದ ಅನುಭವವನ್ನು ನಾನಿಲ್ಲಿ ತೆರೆದಿಡುತ್ತಿದ್ದೇನೆ… ಹತ್ತಿರ‍್ಹತ್ತಿರ ಎರಡೂಮುಕ್ಕಾಲು ವರ್ಷಗಳ ಹಿಂದಿನ ನನ್ನ ಪ್ರವಾಸವನ್ನು… ಅಮೆರಿಕಾ ಪ್ರವಾಸ… ಅದರಲ್ಲೂ ಕ್ಯಾಲಿಫ಼ೋರ್ನಿಯಾದ ಲಾಸ್ ಎಂಜಲಿಸ್, ನೆವಾಡ ರಾಜ್ಯದ ಲಾಸ್ ವೆಗಾಸ್, ಆರಿಜೋ಼ನಾದ ಗ್ರ್ಯಾಂಡ್‌ಕ್ಯಾನಿಯನ್ ಮತ್ತು ಯೂಟ ರಾಜ್ಯದ ಸಾಲ್ಟ್ ಲೇಕ್ ಸಿಟಿಯಿಂದ ಹಿಡಿದು ವೈಯೋಮಿಂಗ್ ರಾಜ್ಯದ ಟಿಟಾನ್ ಕೌಂಟಿಯ "ಟಿಟಾನ್ ವಿಲೇಜ್" ವರೆಗಿನ ಪಯಣ… ಮರೆಯಲಾಗದ ಪ್ರಯಾಣದ ಅನುಭವ.
※ಟಿಪ್ಪಣಿ: ಈ ಪ್ರವಾಸದ ಬರಹದಲ್ಲಿ ನಾನು ಉಲ್ಲೇಖಿಸಿರುವ ಸಮಯಗಳನ್ನು "ಗೂಗಲ್ ಟೈಮ್ಲೈನ್" ನಲ್ಲಿ ತೋರಿಸಿರುವಂತೆ ಮತ್ತು ಸಿಂಚನ ತೆಗೆದ ಛಾಯಾಚಿತ್ರಗಳ ಸ್ವಾಮ್ಯದಲ್ಲಿ ದಾಖಲಾಗಿರುವ ಸಮಯಗಳನ್ನು ಎಕ್ಕಿಕೊಂಡು ಬಹುತೇಕವಾಗಿ ದಾಖಲಿಸಿರುತ್ತೇನೆ. ಏಕೆಂದರೆ ಅಮೆರಿಕದಲ್ಲಿ ಐದು ಟೈಮ್-ಜೋ಼ನ್‌ಗಳಿವೆ. ಅವುಗಳು ಸ್ವಲ್ಪ ವ್ಯತ್ಯಾಸ ತೋರಿಸುತ್ತವೆ.
ಲಾಸ್‌ಎಂಜಲಿಸ್, ವಾಲ್ಟಡಿಸ್ನಿ ಸ್ಟುಡಿಯೊ, ಹಾಲಿವುಡ್:
ನಮ್ಮ ಪ್ರವಾಸ ಪ್ರಾರಂಭವಾಗಿದ್ದು ಆಗಸ್ಟ್ 24ರಂದು… ಮೊದಲ ದಿನ ಲಾಸ್ ಎಂಜಲಿಸ್‌ನಲ್ಲಿನ ವಾಲ್ಟ್‌ಡಿಸ್ನಿ ಸ್ಟುಡಿಯೊ…
ವಾಲ್ಟ್‌ಡಿಸ್ನಿ ಸ್ಟುಡಿಯೊ… |
ಗ್ರಿಫಿ಼ತ್ ಪಾರ್ಕ್ ಬಳಿಯಿಂದ ಹಾಲಿವುಡ್ ಫಲಕ ನೋಟ |
ನಟಿ ಮರ್ಲಿನ್‌ಮನ್ರೋಳ ಮೇಣದ ಬೊಂಬೆ |
ಗಮನಿಸಿದ ಆತ ಕೂಡಲೇ ಸಿಂಚನಳ ಬಳಿ ಬಂದು ಕೆಮೆರಾ ತೆಗೆಸಿ ಆ ಚಿತ್ರವನ್ನು ಹಳಿಸಿಹಾಕಲು ಗಲಾಟೆ ಮಾಡಿದ.
![]() |
ಕೊಡಕ್‌ನ ಡೋಲ್ಬಿ ತಿಯೇಟರ್ |
ಹಾಲಿವುಡ್ ಬೂಲೆವಾರ್ಡ್ ಕಾಲುದಾರಿ ಮೇಲಿನ ಫಲಕ |
※ಟಿಪ್ಪಣಿ: ಅಮೆರಿಕದಲ್ಲಿ ನಾಲ್ಕೈದು ಕಾರು ಬಾಡಿಗೆ ನೀಡುವ ಸಂಸ್ಥೆಗಳಿವೆ. ಇವುಗಳ ಏಜೆನ್ಸಿಗಳು ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಪಾರ್ಕಿಂಗ್ ಜಾಗವನ್ನು ಹೊಂದಿ ಕಾರ್ಯನಿರ್ವಹಿಸುತ್ತವೆ. ಪ್ರವಾಸಿಗರ ಬಳಿ ಕ್ರೆಡಿಟ್ ಕಾರ್ಡ್ ಮತ್ತು ಅಮೆರಿಕದ ವಾಹನ ಚಾಲನಾ ರಹದಾರಿ ಅಥವಾ ಅಂತಾರಾಷ್ಟ್ರೀಯ ವಾಹನ ಚಾಲನಾ ರಹದಾರಿಯಿದ್ದರೆ ಈ ಏಜನ್ಸಿಗಳಿಂದ ನಮಗೆ ಬೇಕಾದ ಸಂಸ್ಥೆಯ ಬೇಕಾದ ಮಾದರಿ ಕಾರನ್ನು ಬಾಡಿಗೆಗೆ ಪಡೆಯಬಹುದು. ಕೊನೆಗೆ ನಾವು ಯಾವ ನಗರದಲ್ಲಿರುತ್ತೇವೆಯೋ ಆ ನಗರದಲ್ಲಿರುವ ವಿಮಾನ ನಿಲ್ದಾಣದಲ್ಲಿರುವ ಅದೇ ಏಜೆನ್ಸಿಯ ಬಳಿ ಕಾರನ್ನು ನಾವು ಬಾಡಿಗೆ ಪಡೆಯುವಾಗ್ಗೆ ಇದ್ದಷ್ಟು ಇಂಧನವನ್ನು ತುಂಬಿಸಿ ಬಿಡಬಹುದು, ಅಲ್ಲಿಯೇ ಬಾಡಿಗೆಯನ್ನು ಪಡೆಯುತ್ತಾರೆ.
ಲಾಸ್‌ವೇಗಾಸ್, ಗ್ರ್ಯಾಂಡ್ ಕ್ಯಾನಿಯನ್ ಹುಡುಕುತ್ತಾ:
ನಮ್ಮ ಮುಂದಿನ ಪ್ರಯಾಣ ನೆವಾಡ ರಾಜ್ಯದ ಲಾಸ್‌ವೇಗಾಸ್. ಹೈವೇನಲ್ಲಿ ದಾರಿ ತಪ್ಪಿ ಸುಮಾರು ಎರಡು ಕಿ.ಮೀ. ಗಳಷ್ಟು ದೂರಹೋಗಿದ್ದ ಚಿನ್ಮಯಿ ತಿರುವು ಹುಡುಕಿ ಮತ್ತೆ ಹಿಂದಕ್ಕೆ ಬಂದು ಲಾಸ್‌ವೇಗಾಸ್ ರಸ್ತೆ(ಬಾರ್ಸ್ಟೋ ಫ಼್ರೀವೇ) ಹಿಡಿದಳು.
ರಸ್ತೆ ಪಕ್ಕದ ಕ್ಯಾಕ್ಟಸ್ ಕಾಡು |
ಲಾಸ್‌ವೇಗಾಸ್ ಕಡೆಗೆ |
ರಸ್ತೆ ಒಂದು ರೀತಿಯ ಮರುಭೂಮಿಯಲ್ಲಿ ಹೋಗುತ್ತದೆ. ಕಾರ್ಟೂನ್ ಸಿನಿಮಾ "ರೋಡ್ ರನ್ನರ್" ನೋಡಿರುವವರಿಗೆ ಈ ರಸ್ತೆ ಚಿರಪರಿಚಿತವೆನಿಸುತ್ತದೆ. ಸುತ್ತಲ ಪ್ರದೇಶ ಮಂಡಕಳ್ಳಿ (ಕ್ಯಾಕ್ಟಸ್) ಕುರುಚಲ ಕಾಡುಗಳ ಬೆಟ್ಟಗುಡ್ಡಗಳ ತಾಣ. ಅಮೆರಿಕನ್ ಇಂಡಿಯನ್ನರು ವಾಸ್ತವ್ಯವನ್ನು ಜ್ಞಾಪಕಕ್ಕೆ ತರುತ್ತದೆ. ಬಾರ್ಸ್ಟೋ ಫ಼್ರೀವೇ ರಸ್ತೆಯಲ್ಲಿ ಹೊಟ್ಟೆ ಹಸಿಯಲು ಪ್ರಾರಂಬವಾಗಿತ್ತು. ಸಾಯಂಕಾಲವಾಗುತ್ತಿತ್ತು.
ಲಾಸ್‌ವೇಗಾಸ್‌ನ ರೋಡ್‌ರನ್ನರ್ ರಸ್ತೆ |
ಲಾಸ್‌ವೇಗಾಸ್‌ನಲ್ಲಿ ನಾವು ಉಳಿದದ್ದು ಎರಡುರಾತ್ರಿ ಒಂದು ಹಗಲು. ಆ ಹಗಲು ದಿನ, 26ರ ಬೆಳಗ್ಗೆ ಆರು ಗಂಟೆಗೆಲ್ಲಾ ವಿಮಾನ ನಿಲ್ದಾಣದ ಬಳಿ ಜಮಾಯಿಸಿ ಮೊದಲೇ ಕಾಯ್ದಿರಿಸಲಾಗಿದ್ದ ಪ್ರವಾಸಿ ಬಸ್ಸಿನಲ್ಲಿ ಆರಿಜೋ಼ನಾದ ಗ್ರ್ಯಾಂಡ್-ಕ್ಯಾನಿಯನ್ ನೋಡಲು ಹೊರೆಟೆವು. ಪ್ರವಾಸಿ ಬಸ್ಸಿನಲ್ಲೊಬ್ಬ ಗೈಡ್ ಇದ್ದ. ಈತ ಎಲ್ಲ ಪ್ರಯಾಣಿಕರಿಕೂ ಒಂದೊಂದು ನೀರಿನ ಬಾಟಲ್ ನೀಡಿದ. ರಸ್ತೆ ಪ್ರಯಾಣದ ಹೊರಗಿನ ನೋಟ ಮೋಹಕವಾಗಿತ್ತು. ಗೈಡ್ ಪ್ರಯಾಣದುದ್ದಕ್ಕೂ ಗ್ರ್ಯಾಂಡ್-ಕ್ಯಾನಿಯನ್ ಪ್ರವಾಸದ ಬಗ್ಗೆ ವೀಕ್ಷಣಾ ವ್ಯಾಖ್ಯಾನವನ್ನು ಎರಡು ಬಾಷೆಗಳಲ್ಲಿ ಮಾಡುತ್ತಿದ್ದ. ಬಸ್ಸಿನಲ್ಲಿ ಚೀನಿಯರೇ ಹೆಚ್ಚಿದ್ದುದರಿಂದ ಅವರ ಭಾಷೆಯಲ್ಲಿಯೂ ಗೈಡ್ ವಿವರಣೆ ನೀಡುತ್ತಿದ್ದ. ಮಧ್ಯೆ ಮಧ್ಯೆ ಇಂಗ್ಲೀಶ್ ಉಪಯೋಗಿಸುತ್ತಿದ್ದ. ಬಸ್ಸನ್ನು ಮಧ್ಯದಾರಿಯಲ್ಲಿ ಯೂಟ-ಆರಿಜೋ಼ನ-ರಾಜ್ಯಗಳ ಬಾರ್ಡರ್ ಬಳಿಯ "ಬಾರ್ಡರ್ ಸ್ಟೋರ್" ಹೊಟೇಲೊಂದರ ಬಳಿ ಬೆಳಗಿನ ಉಪಹಾರಕ್ಕಾಗಿ ನಿಲ್ಲಿಸಿದರು.
ಆರಿಜೋ಼ನ ಕೊರಕಲ ದಾರಿಯಲ್ಲಿ, ಯೂಟ ಗಡಿ ಬಳಿ |
ಪೊವೆಲ್ ಅಣೆಕಟ್ಟೆ ನೋಟ |
ಆಂಟಿಲೋಪ್ ಕ್ಯಾನಿಯನ್, ಸುಮಾರು 30-40 ಅಡಿ ಆಳದ 300ಅಡಿ ಅಗಲದ ಮರಳಿನಿಂದ ಕೂಡಿದ ಹಳ್ಳ. ಅನಾದಿ ಕಾಲದಿಂದಲೂ ಪ್ರವಾಹದ ನೀರು ಹರಿದು ಮೃದುವಾದ ಕೆಂಪುಕಲ್ಲನ್ನು ಸವೆಸಿ ಕೊರೆದ ಇಕ್ಕಟ್ಟಾದ ಅಂಕುಡೊಂಕಿನ ಗುಹೆಯಾಕಾರದ ಕೊರಕಲು, ಅದು ಹಳ್ಳದ ಕೊನೆಯಲ್ಲಿ ಸಿಗುತ್ತದೆ…
ಆಂಟಿಲೋಪ್ ಕ್ಯಾನಯನ್ ದ್ವಾರ |
※ಟಿಪ್ಪಣಿ: ಇದರ ವೀಕ್ಷಣೆಗೆ ಹೋಗಲು ಪಾರ್ಕಿಂಗ್ ಸ್ಥಳದಲ್ಲಿ ಆಂಟಿಲೋಪ್ ಕ್ಯಾನಿಯನ್ ಟೂರ್ ಮಾಡಿಸುವ ಓಪನ್ ಶೆಲ್ಟರ್ ಇರುವ ವ್ಯಾನುಗಳಿಗೆ ನಿಗದಿಪಡಿಸಿದ ಫೀ಼ ಪಾವತಿಸಿ ಉಪಯೋಗ ಪಡೆದುಕೊಳ್ಳಬೇಕು. ಅಲ್ಲಿಂದ ಒಂದೆರಡೂವರೆ ಕಿ.ಮೀ. ದೂರವಿದೆ, ಆಂಟಿಲೋಪ್ ಕ್ಯಾನಿಯನ್‌ನ ಕೊರಕಲಿನ ಧ್ವಾರ. ವಾಹನಗಳು ಹಳ್ಳಕ್ಕಿಳಿದು ಹೋಗಬೇಕು. ವಾಹನಗಳ ಓಡಾಟದಿಂದಾಗಿ ಹಳ್ಳದ ಮರಳು ಉಸುಕಾಗಿರದೆ ಬುಲ್ಡೋಜ಼ರ್ ಹೊಡೆದು ಗಟ್ಟಿಯಾಗಿ ಕೂರಿಸಿದ ಹಾಗಾಗಿದೆ. ವೇಗವಾಗಿ ಓಡಾಡುವ ವಾಹನಗಳ ಹಿಂದೆ ದೂಳೇಳುತ್ತಿರುತ್ತದೆ. ಮುಂದೆ ಓದಿ.
ಹಾರ್ಸ್‌ಶೂ ಕ್ಯಾನಿಯನ್ ನೋಡಲು ಹೋಗಿದ್ದ ಬಳಿ… ಬಸ್ಸಿನ ಪಾರ್ಕಿಂಗ್ ಸ್ಥಳದಲ್ಲಿ ಎಲ್ಲರೂ ಇಳಿಯುವಾಗ್ಗೆ ಗೈಡ್ ತಲಾ ಒಂದೊಂದು ಶೀತಲಗೊಳಿಸಿದ ನೀರಿನ ಬಾಟಲುಗಳನ್ನು ನೀಡಿದ. ಹಾರ್ಸ್‌ಶೂ ಕ್ಯಾನಿಯನ್ ನೋಡಲು ಒಂದು ಕಿ.ಮೀ.ನಷ್ಟು ದೂರ ಮೆಟ್ಟಿಲು ಮಾಡಿದ ಮರಳಿನ ದಿಬ್ಬವನ್ನು ಹತ್ತಿ ಇಳಿಯಬೇಕಾಗಿತ್ತು, ಅಲ್ಲಲ್ಲಿ ಕಿತ್ತುಹೋಗಿದ್ದ ಮೆಟ್ಟಿಲುಗಳು ಮರಳಿನಿಂದ ತುಂಬಿಕೊಂಡು ನಡೆಯಲು ಕಷ್ಟವಾಗುತ್ತಿತ್ತು. ಬಿಸಿಲಿನ ಝಳ ಬೇರೆ, ತಾಪವನ್ನು ತಡೆಯುವುದೇ ಆಗುತ್ತಿರಲಿಲ್ಲ. ಛತ್ರಿ ಬೇಕೆನಿಸುತ್ತಿತ್ತು. ತಣ್ಣಗಿದ್ದ ನೀರಿನ ಬಾಟಲನ್ನು ಆಗಾಗ್ಗೆ ಕೈಮೇಲೆ ಮತ್ತು ಮುಖದ ಮೇಲೆಲ್ಲಾ ಓಡಾಡಿಸಿ ತಣ್ಣಗಾಗಿಸಿ ಕೊಳ್ಳುತ್ತಿದ್ದೆವು. ಮರಳಿನ ದಿಬ್ಬದ ಮೇಲೆ ಧಣಿವಾರಿಸಿಕೊಳ್ಳಲು ಒಂದು ಶೆಲ್ಟರನ್ನು ನಿರ್ಮಿಸಿ ಒರಗುಬೆಂಚುಗಳನ್ನು ಹಾಕಿದ್ದರು. ಅಲ್ಲಿ ಸ್ವಲ್ಪ ವಿರಮಿಸಿ ಕ್ಯಾನಿಯನ್ ಕಡೆಗೆ ಇಳಿದೆವು. ಇದೊಂದು ಕೊಲೊರಾಡೊ ನದಿಯ ಹರಿವಿನ ಕೊರಕಲು, ಕುದುರೆ ಲಾಳದ ಆಕಾರದಲ್ಲಿ ತಿರುವು ಪಡೆದಿರುವ ಸುಮಾರು 300 ಅಡಿಗಳಾಳದ ಲಂಬದ ಕೊಳ್ಳ.
ಆಂಟಿಲೋಪ್ ಕೊಳ್ಳದ ಒಳನೋಟ |
ಸುಮಾರು ನಾಲ್ಕು ಗಂಟೆಯ ವೇಳೆಗೆ ಕೊಲೊರಾಡೊ ಕೊರಕಲಿನಿಂದ ನಮ್ಮ ಪ್ರವಾಸದ ಬಸ್ಸು ಲಾಸ್‌ವೇಗಾಸ್ ಕಡೆಗೆ ಮುಖಮಾಡಿತು. ಗೈಡ್ ಎಲ್ಲರಿಗೂ ನೀರಿನ ಬಾಟಲ್ ವಿತರಿಸಿದ. ಮಧ್ಯದಾರಿಯಲ್ಲಿ ನೈಸರ್ಗಿಕ ಕರೆಗಾಗಿ ಬಸ್ಸನ್ನು ನಿಲ್ಲಿಸಿ ಸಮಯ ಕೊಡಲಾಯಿತು. ಈ ಆರಿಜೋ಼ನಾದ ಸುತ್ತಲ ಪ್ರಾಂತ ನನಗೆ ಚಿರಪರಿಚತವೇನೋ ಎಂದೆನಿಸುತ್ತಿತ್ತು… ಜ್ಞಾಪಕಕ್ಕೆ ಬಂದಿತ್ತು ನಾಲ್ಕು ಬಾರಿ ನೋಡಿದ್ದ "ಮೆಕೆನ್ನಾಸ್ ಗೋಲ್ಡ್" ಎನ್ನುವ ಹಾಲಿವುಡ್‌ನ ಚಲನಚಿತ್ರ, ಸಾಹಸಮಯ ಆನ್ವೇಷಣಾ ಚಲನಚಿತ್ರ…. ರಾತ್ರಿಯ ಏಳೂವರೆ ವೇಳೆಗೆ ಪ್ರವಾಸಿ ಬಸ್ಸು ಲಾಸ್‌ವೇಗಾಸ್‌ನ ವಿಮಾನ ನಿಲ್ದಾಣದ ಬಳಿ ನಮ್ಮನ್ನು ಇಳಿಸಿತು.
※ಟಿಪ್ಪಣಿ: ಕೊಲೊರಾಡೊ ನದಿ, 1450ಮೈಲಿ ಉದ್ದದ ನದಿ, ಕೊಲೊರಾಡೊ ರಾಜ್ಯದ Rocky Mountains ನಲ್ಲಿನ "ಲೇಕ್ ರ‍್ಯಾನ್ಬಿ"ಯಲ್ಲಿ ಹುಟ್ಟಿ ಬಹುತೇಕ ಬರಡು ಮರುಭೂಮಿ ಪ್ರದೇಶಗಳಲ್ಲಿ (ಯೂಟಾ, ಆರಿಜೋ಼ನಾ, ನೆವಾಡ, ಕ್ಯಾಲಿಫ಼ೋರ್ನಿಯಾ, ನ್ಯೂ-ಮೆಕ್ಸಿಕೊ) ರಾಜ್ಯಗಳಲ್ಲಿ ಹರಿಯುತ್ತಾ ಮುಂದೆ ಮೆಕ್ಸಿಕೊ ದೇಶದಲ್ಲಿ ಕ್ಯಾಲಿಫೊ಼ರ್ನಿಯಾ ಕೊಲ್ಲಿಯ ಒಣಗಿದ ಬರಡು ಮುಖಜ ಭೂಮಿಯಲ್ಲಿ ಒಣಗಿಹೋಗುತ್ತದೆ.
![]() |
ಕೊಲೊರಾಡೊ ನದಿಯ ಹರವಿನ ಭೂಪಟ |
ಲಾಸ್‌ವೇಗಾಸ್ ಸಿಟಿ:
ಲಾಸ್‌ವೇಗಾಸ್ ಸಿಟಿ, ಒಂದು ಜೂಜುಕೋರರ ತಂಗುದಾಣಗಳ ಅಡ್ಡೆ. ನಗರದ ತುಂಬಾ ಜೂಜಿನ ಅಡ್ಡೆಗಳಾದ "ಕ್ಯಾಸಿನೊ"ಗಳಿವೆ. ರಾತ್ರಿ ವೇಳೆ ನಗರ ಬಣ್ಣಗಳ ಬೆಳಕಿನಿಂದ ಮಿಂಚಿ ಮಿರುಗತ್ತಿರುತ್ತದೆ. ಕ್ಯಾನಿಯನ್ ಪ್ರವಾಸದಿಂದ ಹಿಂದುರಿಗಿದ ನಾವು ಕತ್ತಲ ನಗರ ವೀಕ್ಷಣೆಗೆ ತೊಡಗಿದೆವು. ನಗರದಲ್ಲೊಂದು ದೊಡ್ಡ ಸಂಗೀತ ಕಾರಂಜಿ ಚೌಕವಿದೆ. ಅದನ್ನಲ್ಲಿ ನೋಡಲು ಹೋಗಲಾಯಿತು. ಅಲ್ಲಿ ಹತ್ತು ನಿಮಿಷ ವೀಕ್ಷಿಸುತ್ತಿದ್ದ ಸಮಯದಲ್ಲಿ ಕೆಲವು 20-25 ವಯಸ್ಸಿನ ಬೆತ್ತಲೆ ಮಹಿಳೆಯರು ಮೈಮೇಲೆ ಮೂರುಕಡೆ ಮಾತ್ರ ಸ್ಟಿಕರುಗಳನ್ನು ಅಂಟಿಸಿಕೊಂಡು ಅಲ್ಲಲ್ಲಿ ಓಡಾಡುತ್ತಿದ್ದುದು ಕಂಡು ಬಂದಿತು. ಆ ಬಗ್ಗೆ ಯಾರೂ ಏನೂ ಮಾತನಾಡುವುದಿಲ್ಲ, ಅವರ ಗೋಜಿಗೂ ಹೋಗುವುದಿಲ್ಲ. ಅದು ಅವರ ಸ್ವಾತಂತ್ರ್ಯವೆಂದು ಹೇಳುತ್ತಾರೆ. ಬಹಷಃ ಅವರು ತಮ್ಮ ಗಿರಾಕಿಗಳ ಭೇಟೆಯಾಡುತ್ತಿರುತಾರೆಂದು ಕಾಣುತ್ತದೆ. ಇಲ್ಲಿಗೆ ಜೂಜಾಡಲು ಪ್ರಪಂಚದಲ್ಲಿ ಹಣ ಹೆಚ್ಚಾಗಿರುವ ಉದ್ಯಮಿಗಳು, ರಾಜಕಾರಣಿಗಳು, ದುಂಧುಕೋರರೆಲ್ಲಾ ಗಂಡುಹೆಣ್ಣಿನ ಭೇದಭಾವವಿಲ್ಲದೆ ಜಮಾಯಿಸುತ್ತಾರೆ. ಜೂಜಿನ ಅಡ್ಡೆಗಳಿವೆಯೆಂದರೆ ಕೇಳಬೇಕೆ ವೇಶ್ಯಾವಾಟಿಕಾ ಕೇಂದ್ರಗಳೂ ಇವೆ. ಹೆಂಗಸರಿಗೆ ಕಟ್ಟುಮಸ್ತಾದ ಗಂಡುಸೂಳೆಯರೂ ಇಲ್ಲಿ ದೊರಕುತ್ತಾರೆ. ನಾವು ಒಂದು ಕ್ಯಾಸಿನೋದಿಂದ ಹೊರಬಂದು ಸುತ್ತಲೂ ನೋಡುತ್ತಾ ನಿಂತಿರಬೇಕಾದರೆ ಜನಸಂದಣಿಯಿಂದ ಕೂಡಿದ ರಸ್ತೆಯಲ್ಲಿಯೇ ಒಬ್ಬ ಕಟ್ಟುಮಸ್ತಾದ ವ್ಯಕ್ತಿ ಒಂದು ಹೆಂಗಸನ್ನು ಎತ್ತಿ ಮುದ್ದಾಡಿ ಮುತ್ತುಕೊಟ್ಟು ಹಣ ಪಡೆಯುತ್ತಿದ್ದ. ಲಾಸ್‌ವೇಗಾಸ್ ನಗರ, ಅಮೆರಿಕದಲ್ಲಿ ಒಂದು ಅಪರಾಧಗಳಿಗೆ ಹೆಸರಾದ ನಗರ. ಇದನ್ನು "ಪಾಪಿ ನಗರ" ಅಥವಾ "ಪಾಪಿಗಳ ನಗರ"(ಸಿನ್ ಸಿಟಿ-sin city) ಎಂದೇ ಪ್ರಸಿದ್ಧವಾಗಿದೆ. ಆ ಕಾರಣಕ್ಕಾಗಿಯೇ ಅಮೆರಕಕ್ಕೆ ಬರುವ ಬಹುತೇಕ ಪ್ರವಾಸಿಗರು ಈ ನಗರಕ್ಕೆ ಭೇಟಿ ನೀಡದೆ ಹಿಂದಿರುಗುವುದಿಲ್ಲ.
ಬಿಯರ್ ಲೇಕ್, ವೈಯೋಮಿಂಗ್ ರಾಜ್ಯದ ಟಿಟಾನ್ ಕೌಂಟಿಯ ಟಿಟಾನ್ ಹಳ್ಳಿಯ ಕಡೆಗೆ :
ಸೋಮವಾರ, ಆಗಸ್ಟ್ 27ರಂದು ನೆವಾಡ ರಾಜ್ಯದ ಲಾಸ್‌ವೆಗಾಸ್‌ನಿಂದ ಬೆಳಗ್ಗೆ ಸುಮಾರು 7-00ಕ್ಕೆ ಹೊರಟ ನಮ್ಮ ಪ್ರಯಾಣದ ವಿಮಾನ ಯೂಟ ರಾಜ್ಯದ ಸಾಲ್ಟ್ ಲೇಕ್ ಸಿಟಿ ತಲುಪಿದಾಗ ಅಲ್ಲಿಯ ಸಮಯ ಬೆಳಗ್ಗೆ 10.58 ಗಂಟೆ(ವಲಯ ವ್ಯತ್ಯಾಸವಿದೆ). ಲಗೇಜುಗಳನ್ನು ಪಡೆದು ಹೊರಬಂದು ಬಾಡಿಗೆ ಕಾರು ಪಡೆದು ಲಗೇಜುಗಳನ್ನು ತುಂಬಿಕೊಂಡು ಬಿಯರ್‌ಲೇಕ್ ಸರೋವರದ ಹೈವೇ-89 ರಸ್ತೆಯನ್ನಿಡಿದು ಹೊರಟಿದ್ದೆವು. ದಾರಿಯಲ್ಲಿ ಸಿಗುವ ಬ್ರಿಗ್ಹಾಮ್ ಸಿಟಿಯಲ್ಲಿ ಸಿಕ್ಕ ಸುಮಾರು 90ವರ್ಷಗಳಷ್ಟು ಹಳೆಯ ಸಣ್ಣ ಹೊಟೆಲ್, Bert's Family Cafeನಲ್ಲಿ ಬೆಳಗಿನ ಉಪಾಹಾರ ತಿನ್ನಲು ಒಂದರ್ಧ ಗಂಟೆ ವ್ಯಯಿಸಲಾಯಿತು.
ಹೈವೇ 89ರಲ್ಲಿ ಬ್ರಿಗ್ಹಾಮ್ ಸಿಟಿ |
ಬ್ರಿಗ್ಹಾಮ್ ಕೌಂಟಿಯಲ್ಲಿ ಮುಂದಕ್ಕೆ ಪ್ರಯಾಣಿಸಿದಂತೆಲ್ಲಾ ಸಿಗುತ್ತಿದ್ದುದು ಸಣ್ಣಸಣ್ಣ ಪಟ್ಟಣಗಳಿಂದ ಕೂಡಿದ ಗ್ರಾಮೀಣ ಪ್ರದೇಶ, ಸುತ್ತುವರಿದ ಕೃಷಿಭೂಮಿ, ಹೈನುಗಾರಿಕೆ ರ‍್ಯಾಂಚುಗಳು ಮತ್ತು ತೋಟಗಳು ಇತ್ಯಾದಿ. ಅಲ್ಲಲ್ಲಿ ತೋಟ ಮಾರಾಟದ ಫಲಕಗಳು ಕಾಣಸಿಗುತ್ತಿದ್ದವು. ಇವೆಲ್ಲವುಗಳನ್ನು ದಾಟಿ ಮುಂದೆ ಹೈವೇ 89ರಸ್ತೆಯಲ್ಲಿ ಲೋಗನ್ ನಗರ ಸಿಗುತ್ತದೆ. ಲೋಗನ್ ಕೊಳ್ಳ(Canyon)ದ ನದಿ ಕಣಿವೆಯಿಂದಾಗಿ ಆ ಪಟ್ಟಣಕ್ಕೆ ಆ ಹೆಸರು ಬಂದಿದೆ.
ಲೋಗನ್ ಕೊಳ್ಳದ ರಸ್ತೆಯಲ್ಲಿ |
ಬಿಯರ್ ಸರೋವರದ ವಿಹಂಗಮನೋಟ |
ದಾಟುದಾರಿ ತಂಗುದಾಣದಲ್ಲಿ |
ಬಿಯರ್ ಲೇಕ್, ಯೂಟಾ ಮತ್ತು ಐಡಹೊ ರಾಜ್ಯಗಳಲ್ಲಿ ಅಂಚಿಹೋಗಿದೆ. ನಾವು ಯೂಟಾ ರಾಜ್ಯದ ಪಶ್ಚಿಮ ದಂಡೆಯ ಗಾರ್ಡನ್ ಸಿಟಿ ಬಳಿಯಲ್ಲಿ ಕಾರು ಪಾರ್ಕಿಂಗ್ ವ್ಯವಸ್ಥೆ ಮತ್ತು ಮಧ್ಯಾಹ್ನದ ಊಟ ಸಿಗುವಂಥ ಸ್ಥಳ ಹುಡುಕಿ ಸಣ್ಣ ಕ್ಯಾಂಟಿನ್ ಹತ್ತಿರ ಕಾರು ಪಾರ್ಕ್ ಮಾಡಿದೆವು.
ಬಿಯರ್‌ಲೇಕ್ ಕಡೆಗೆ ಇಳಿ ರಸ್ತೆಯಲ್ಲಿ |
ಕ್ಯಾಂಟೀನ್‌ನಲ್ಲಿ ವಿಚಾರಿಸಿ ಸಿಗುವಂಥ ಆಹಾರವನ್ನು ನಾಲ್ಕು ಜನರಿಗೂ ಬೇಡಿಕೆ ಇಡಲು ಕ್ಯಾಂಟೀನ್‌ವಾಲ ಅರ್ಧಗಂಟೆ ಸಮಯ ಕೇಳಿದ… ಮುಖ್ಯವಾಗಿ ಬರ್ಗರ್, ಬ್ರೆಡ್ ಟೋಸ್ಟ್, ಹಣ್ಣುಗಳ ಸಲಾಡ್ ಮತ್ತು ನೀರಿನ ಬಾಟಲುಗಳು. ಬೆಳಗಿನಿಂದ ಪ್ರಯಾಣ, ಸುಮಾರು ಸಮಯ ಕಳೆದಿತ್ತು, ಶೌಚಾಲಯ ಭೇಟಿಯನ್ನೂ ಮುಗಿಸಿ ಬರುವ ವೇಳೆಗೆ ಕ್ಯಾಂಟೀನ್‌ವಾಲ ಸಿದ್ಧಪಡಿಸಿದ ಆಹಾರದ ಪ್ಯಾಕುಗಳನ್ನು ನೀಡಿದ.
ಬಿಯರ್ ಲೇಕ್‌ನ ತೀರದ ಕಡೆಗೆ ಕಾಲುದಾರಿಯಲ್ಲಿ |
ಬಿಯರ್ ಲೇಕ್ ತೀರದ ಮರದಡಿಯಲ್ಲಿ ಊಟಮಾಡುತ್ತಾ |
※ಟಿಪ್ಪಣಿ: ಬಿಯರ್ ಲೇಕ್, ಒಂದು ಸಿಹಿನೀರ ಸರೋವರ, ಯೂಟಾ ಮತ್ತು ಐಡಹೊ ರಾಜ್ಯಗಳಲ್ಲಿ 280 ಚದರ ಕಿ.ಮೀ. ವಿಸ್ತೀರ್ಣಕ್ಕೆ ಆವರಿಸಿಕೊಂಡಿದೆ. ಡೊನಾಲ್ಡ್ ಮೆಕ್ಕೆಂಜಿ಼ೕ ಎನ್ನುವ ವ್ಯಕ್ತಿ 1819ರಲ್ಲಿ ಈ ಸರೋವರವನ್ನು ಶೋಧನೆ ಮಾಡಿ ಮೊದಲಿಗೆ "ಬ್ಲ್ಯಾಕ್ ಬಿಯರ್ ಲೇಕ್" ಎಂದು ನಾಮಕರಣ ಮಾಡಿದ… ಕ್ರಮೇಣ ಅದು ಮೊಟಕಾಗುತ್ತಾ "ಬಿಯರ್ ಲೇಕ್" ಎಂದಾಗಿದೆ. ಪಶ್ಚಿಮದ ಕಡೆಯಲ್ಲಿ ಕಡಿಮೆ ಆಳವಿದ್ದು ಪೂರ್ವದ ಘಟ್ಟದಕಡೆಗೆ ಸುಮಾರು 200 ಅಡಿ ಆಳವಾಗಿದೆಯೆಂದು ಮಾಹಿತಿ ತಿಳಿಸುತ್ತದೆ. ಇದರ ಸುತ್ತಮುತ್ತ ವಾಸಿಸುವ ಜನ, ಮೊದಲ ತಿಳುವಳಿಕೆ ಪ್ರಕಾರ "ಶೊಶೋನ್" ಬುಡಕಟ್ಟು ಮೂಲವಾಸಿಗಳು… ಅಮೆರಿಕನ್ ಇಂಡಿಯನ್ನರು. ಈ ಸರೋವರದ ಸುತ್ತಲ ಇನ್ನೊಂದು ದಂತಕಥೆಯೆಂದರೆ ಇದರಲ್ಲೊಂದು "ಸರೋವರ-ರಕ್ಕಸ" ಇದ್ದಾನೆಂಬುದು. ಇದನ್ನು ಹಲವು ಮಂದಿ ಅಲ್ಲಲ್ಲಿ ಅಗಾಗ್ಗೆ ನೋಡಿರುತ್ತಾರೆಂದು ತಿಳಿಸಿ The Desert News ಪತ್ರಿಕೆ ಕೆಲವು ಲೇಖನಗಳನ್ನು ಪ್ರಕಟಿಸಿದೆ. ಸ್ಥಳೀಯ ಜನ ಈ ಲೇಖನಗಳಿಗೆ ಒತ್ತಾಸೆಯಾಗುವಂತೆ ಇಂಬುನೀಡಿ "ಅದನ್ನು ಅಲ್ಲಗಳೆಯಲಾಗುವುದಿಲ್ಲ… " ಎಂದೂ ವಾದಿಸಿದ್ದಾರೆ. ಈ ಸರೋವರ-ರಕ್ಕಸನ ದಂತಕತೆಗಳ ಪಿಸುಗುಸುವಿನಿಂದಾಗಿ ಇಲ್ಲಿಗೆ ಪ್ರವಾಸಿಗರು ಲಗ್ಗೆಯಿಟ್ಟರೆಂದು ಮಾಹಿತಿ. ಆದಾಗ್ಯೂ ಈಗ ಅಲ್ಲಿಗೆ ಪ್ರವಾಸಿಗರು ದೋಣಿವಿಹಾರ, ನೀರಮೇಲಿನ ಸ್ಕೀಯಿಂಗ್, ಈಜಾಟ ನೀರಾಟಗಳಿಗಾಗಿ ಕುಟುಂಬ ಸಹಿತ ಬೇಸಿಗೆಯಲ್ಲಿ ಧೌಡಾಯಸಿ ಬರುತ್ತಾರೆ… ಬರುತ್ತಿದ್ದಾರೆ. ಸರೋವರ-ರಕ್ಕಸನ ಯಾವುದೇ ತೊಂದರೆಗಳು ಆದಂತೆ ಅನುಭವ ವರದಿಗಳಿಲ್ಲ. ಪಶ್ಚಿಮ ತೀರದಲ್ಲಿ ಒಂದ್ಮೂರು ಕಡೆ ದೋಣಿವಿಹಾರಕ್ಕಾಗಿ ಅಟ್ಟಣಿಗೆಗಳನ್ನು ನಿರ್ಮಿಸಿರುತ್ತಾರೆ. ಇದೀಗ ಸರೋವರ-ರಕ್ಕಸನ ಬಗ್ಗೆ, ಯಾವುದೇ ಊಹಾಪೋಹ ವರದಿಗಳಿಂದ ಮುಕ್ತವಾಗಿ, ಪ್ರವಾಸಿಗಳ ಕೇಂದ್ರವಾಗಿದೆ. ಒಂದುಕಾಲಕ್ಕೆ ಬಿಯರ್ ಲೇಕ್ ಸುತ್ತಲ ಪ್ರದೇಶ ಬುಡಕಟ್ಟು ವಾಸಿಗಳು ಸಂಗ್ರಹಿಸುತ್ತಿದ್ದ ಪ್ರಾಣಿಗಳ ತುಪ್ಪಳದ ವ್ಯಾಪಾರ ಕೇಂದ್ರವಾಗಿತ್ತೆಂಬುದೂ ಒಂದು ಮಾಹಿತಿ.
ನಾವು ಬಿಯರ್ ಲೇಕ್‌ನಿಂದ ಹೊರಟಾಗ ಗಂಟೆ ಸಾಯಂಕಾಲದ ಕಡೆಗೆ ತಿರುಗಿ ಮೂರಾಗುತ್ತಿತ್ತು. ಪಶ್ಚಿಮದ ಬಿಯರ್ ಲೇಕ್‌ನ ದಂಡೆಯಲ್ಲಿ ಉತ್ತರಾಭಿಮುಖವಾಗಿ ಕಾರನ್ನು ಧೌಡಾಯಿಸಿದಳು ಚಿನ್ಮಯಿ. ಐಡಹೊ ರಾಜ್ಯದಲ್ಲಿ ಬಿಯರ್ ಲೇಕ್‌ನ ಉತ್ತರದ ಅಂತ್ಯಕ್ಕೊಂದು ಲೇಕ್ ಇದೆ, ಅದಕ್ಕೆ "ಕೆಸರು ಸರೋವರ(ಮಡ್ ಲೇಕ್)” ಎಂದು ಹೆಸರು. ಇದರ ಅಂತ್ಯದವರೆಗೂ ರಸ್ತೆ ಬಹುತೇಕ ನೇರ. ಸಂಚಾರ ವಿರಳವಾಗಿತ್ತು, ಹುಲ್ಲುಗಾವಲು ರ‍್ಯಾಂಚುಗಳ ಕೃಷಿ ಪ್ರದೇಶಗಳ ಮಧ್ಯೆ ಯಾವುದೇ ಚಾಲನಾ ಅಡಚಣೆಗಳಿಲ್ಲದ ಮೋಹಕ ಪ್ರಯಾಣ. ಆನಂತರ ರಸ್ತೆ-89 ಪೂರ್ವದ ಘಟ್ಟ ಪ್ರದೇಶದ ಕಡೆಗೆ ತಿರುಗಿ ಹೋಗುತ್ತಾ ಐಡಹೊ ರಾಜ್ಯದ ಬಿಯರ್ ಲೇಕ್ ಕೌಂಟಿಯ ಮಾಂಟ್‌ಪೆಲಿಯರ್ ಪಟ್ಟಣದ ಮೂಲಕ ಹೋಗುತ್ತಾ ವೈಯೋಮಿಂಗ್ ರಾಜ್ಯಕ್ಕೆ ಪ್ರವೇಶ ಪಡೆಯುತ್ತದೆ. ಈ ಘಟ್ಟ ಪ್ರದೇಶದ ರಸ್ತೆ-89ಉದ್ದಕ್ಕೂ ಕೃಷಿ ರ‍್ಯಾಂಚುಗಳ ವ್ಯಾವಸಾಯಿಕ ಭೂಮಿ. ವೈಯೋಮಿಂಗ್ ರಾಜ್ಯದ ಸ್ಟಾರ್ ಕಣಿವೆಯಲ್ಲಿ ರಸ್ತೆ-89ರಲ್ಲಿ ಸಿಗುವ ಆಫ಼್ಟನ್ ಪಟ್ಟಣದಲ್ಲಿ ಪ್ರಪಂಚದಲ್ಲಿಯೇ ಅತಿದೊಡ್ಡದಾಗಿ ನಿರ್ಮಿಸಿರುವ ಒಂದು ಎಲ್ಕ್‌ಹಾರ್ನ್-ಆರ್ಚನ್ನು ನೋಡಬಹುದು.
ಆಫ಼್ಟನ್‌ನಲ್ಲಿನ ಎಲ್ಕ್‌ಹಾರ್ನ್-ಆರ್ಚ್ |
ಸ್ಟಾರ್ ಕಣಿವೆ ರಸ್ತೆಯಲ್ಲಿ |
ಇದನ್ನು ರಸ್ತೆ-89 ಕ್ಕೆ ಅಡ್ಡಲಾಗಿ ಕೇವಲ ಎಲ್ಕ್‌ಗಳ(ಒಂದು ರೀತಿಯ ಜಿಂಕೆಗಳು) ಕೊಂಬುಗಳನ್ನೇ ಹೆಣೆದು ನಿರ್ಮಿಸಿರುವ ರಸ್ತೆ-ಕಮಾನು. ನೋಡಲು ಸುಂದರವಾಗಿದೆ. ಸ್ಟಾರ್ ಕಣಿವೆ, ಎರಡು ಕಡೆಯೂ ಘಟ್ಟಗಳಿಂದ ಕೂಡಿದ್ದು ಮಧ್ಯದಲ್ಲಿ ಕಣಿವೆಯುದ್ದಕ್ಕೂ ಕೃಷಿ ರ‍್ಯಾಂಚುಗಳನ್ನು ಹೊಂದಿರುವ ವ್ಯಾವಸಾಯಿಕ ಪ್ರದೇಶ. ಮಂದೆ ಸಿಗುವ ಸ್ನೇಕ್ ರಿವರ್‌ನ ಸೇತುವೆ ಹಾದು ಆಲ್ಪೈನ್ ಪಟ್ಟಣದಲ್ಲಿ ರಸ್ತೆ-89 ಬಲಕ್ಕೆ ತಿರುಗಿ ಪೂರ್ವದ ಕಡೆಗೆ ಅದೇ ನದಿ ದಂಡೆಯಲ್ಲಿಯೇ ಮುಂದೆ ನಮ್ಮ ಪ್ರಯಾಣ. ನಾವು ಇಂಥ ಒಂದುಕಡೆ ಪ್ರಯಾಣಿಸುತ್ತಿದ್ದ ಸಮಯದಲ್ಲಿ ಸುಮಾರಾಗಿ ಮಳೆ ಬೀಳಲು ಪ್ರಾರಂಬವಾಯಿತು. ಈ ಮಳೆ ಕಡಿಮೆಯಾಗುವ ವೇಳೆಗೆ ನದಿಯನ್ನು ಪಕ್ಕಮಾಡಿ ಉತ್ತರದ ಕಡೆಗೆ ತಿರುಗಿ ಘಟ್ಟದ ಮೇಲ್ಸ್ತರದಲ್ಲಿ ಹೋಗುವಾಗ್ಗೆ ಪೂರ್ವದ ಕಡೆಗೆ ಸುಂದರವಾದ ತೀವ್ರಬಣ್ಣಗಳಿಂದ ಕೂಡಿದ ಕಾಮನ ಬಿಲ್ಲೊಂದು ಮೂಡಿತ್ತು.
ಗಾಢ ಬಣ್ಣದ ಕಾಮನಬಿಲ್ಲು |
ನಾವು ವೈಯೋಮಿಂಗ್‌ನ ಟಿಟಾನ್ ಕೌಂಟಿಯ ಜಾಕ್ಸನ್ ಪಟ್ಟಣಕ್ಕೆ ಹತ್ತಿರವಾಗಿದ್ದೆವು. ಹೈವೇ-89 ಜಾಕ್ಸನ್ ಪಟ್ಟಣಕ್ಕೆ ಮೊದಲೇ ಸಿಗುವ ರಾಷ್ಟ್ರೀಯ ಹೈವೇ-191ರೊಂದಿಗೆ ಮಿಳಿತವಾಗಿ ನಮ್ಮನ್ನು ಸಾಯಂಕಾಲ 7.30 ರ ವೇಳೆಗೆ ಜಾಕ್ಸನ್ ಪಟ್ಟಣಕ್ಕೆ ಕರೆದೊಯ್ದಿತ್ತು. ಜಾಕ್ಸನ್ನಿನಲ್ಲಿ ಕಾರಿಗೆ ಇಂಧನ ತುಂಬಿಸಿಕೊಂಡು… ಕೆಮಾರ್ಟ್, "ಜಾಕ್ಸನ್ ವೋಲ್ ಗ್ರಾಸರ್ & ಕೆಫೆ಼"ಗೆ ತೆರಳಿ ರಾತ್ರಿಯ ಊಟಕ್ಕೆ ಪಿಜಾ಼, ಕುಡಿಯಲು ಜ್ಯೂಸ್ ಪ್ಯಾಕ್‌ಗಳನ್ನು ಕೊಳ್ಳಲಾಯಿತು. ಇಪ್ಪತ್ತು ನಿಮಿಷ ಕಳೆದು ಟಿಟಾನ್ ವಿಲೇಜ್ ಕಡೆಗೆ ಹೊರಡಲಾಯಿತು.
ಮುಸ್ಸಂಜೆಯಲಿ ಟಿಟಾನ್ ವಿಲೇಜ್ ರಸ್ತೆಯಲ್ಲಿ |
ನಾವು ಟಿಟಾನ್ ವಿಲೇಜ್‌ನ "ಸ್ನೇಕ್ ರಿವರ್ ಲಾಡ್ಜ್ & ಸ್ಪಾ" ಹತ್ತಿರ ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು ನಿಲ್ಲಿಸಿ ಲಗೇಜುಗಳನ್ನು ತೆಗೆದುಕೊಂಡು ಲಾಡ್ಜ್‌ಗೆ ತೆರಳಿದಾಗ ಸಮಯ ರಾತ್ರಿ 8.35 ಗಂಟೆಯಾಗಿತ್ತು.
ಸ್ನೇಕ್ ರಿವರ್ ಲಾಡ್ಜ್ & ಸ್ಪಾ |
ಕೌಂಟರಿನಲ್ಲಿ ಮೊದಲೇ ಕಾಯ್ದಿರಿಸಿದ್ದ ಕೋಣೆಯ ಕೀ ಪಡೆದು ತೆರಳಿ ಬಟ್ಟೆ ಬದಲಾಯಿಸಿ ವಿರಮಿಸುತ್ತಾ ಜಾಕ್ಸನ್ನಿನಲ್ಲಿ ಕೊಂಡಿದ್ದ ಆಹಾರ ಪೊಟ್ಟಣಗಳನ್ನು ಬಿಚ್ಚಿ ತಿಂದು ಮಲಗಿದ್ದೊಂದೇ ಜ್ಞಾಪಕ… ಬೆಳಗಾಗುವವರೆಗೆ. ಚಿನ್ಮಯಿ ನಮ್ಮ ಪ್ರವಾಸದ ಎಲ್ಲಾ ತಂಗಣೆ ಹೊಟೇಲ್/ಲಾಡ್ಜ್‌ಗಳ ರೂಮುಗಳನ್ನು ನಾವು ಅಮೆರಿಕಾಕ್ಕೆ ತೆರಳುವ 15ದಿನ ಮೊದಲೇ ಕಾಯ್ದಿರಿಸಿದ್ದಳು. "ಲಾಸ್‌ಎಂಜಲಿಸ್"ನಿಂದ ಹೊರಟು "ಲಾಸ್ ವೇಗಾಸ್, "ಗ್ರ್ಯಾಂಡ್ ಕ್ಯಾನಿಯನ್," "ಟಿಟಾನ್ ವಿಲೇಜ್" ವರೆಗಿನ ಪರ್ವತಗಳು, ಕಣಿವೆಗಳು, ನದೀತೀರ ಮತ್ತು ಬಿಯರ್ ಲೇಕ್ ತೀರದ ಕೃಷಿ ರ‍್ಯಾಂಚುಗಳ ಕೌಂಟಿಗಳಲ್ಲಿ ಮಾಡಿದ ಪ್ರಯಾಣ ಮುಗಿದಿತ್ತು. ಈ ದೀರ್ಘ ಪ್ರಯಾಣವೇ ಒಂದು ವಿಭಿನ್ನ ಅನುಭವವಾಗಿತ್ತು. ####
ದಿವಾಕರ ತಿಮ್ಮಣ್ಣ
ಚಿತ್ರಗಳು: ಡಾ|| ಸಿಂಚನ ದಿವಾಕರ
Picture courtesy : sinchana 😀😊
ReplyDeleteThis comment has been removed by the author.
DeleteYes, Pictures by Sinchana Divakara
Delete