ಪ್ರವಾಸ ಕಥನ: ಜೀಪಿನಲ್ಲಿ ಲಡಖ್‌ ಪ್ರವಾಸ


































                                  
ಪ್ರವಾಸ ಕಥನ 
                        ಜೀಪಿನಲ್ಲಿ ಲಡಖ್‌ ಪ್ರವಾಸ
                               ಬರಹ: ದಿವಾಕರ ತಿಮ್ಮಣ್ಣ 
                                      ಚಿತ್ರಗಳು: ಡಾ|| ಸಿಂಚನ ದಿವಾಕರ , ಚಿನ್ಮಯಿ ದಿವಾಕರ
                             ವರ್ಷ: 2011(ಜೂನ್‌ 03ರಿಂದ 12ರವರೆಗೆ) 

ಪ್ರಸ್ತಾಪ: 
ಯಶಪಾಲ ಮಾರ್ಚ್‌ ತಿಂಗಳಿನಿಂದಲೇ ನೊಯಿಡಾದಿಂದ ದೂರವಾಣಿ ಮೂಲಕ ನಮ್ಮ ಕುಟುಂಬದ ಸದಸ್ಯರೊಂದಿಗೆ ವಿಷಯ ಪ್ರಸ್ತಾಪಿಸಿ ಸತಾಯಿಸುತ್ತಿದ್ದ… ಜೂನ್‌ ತಿಂಗಳಿನಲ್ಲಿ ಮನಾಲಿಯ ಹತ್ತಿರದ ರೊಹ್ತಾಂಗ್‌ ಪಾಸ್‌ ತೆರೆಯುತ್ತದೆಂದು ತಿಳಿಸಿ ಲಡಖ್‌ನ ಲೆಹ್‌ಗೆ ದೆಹಲಿಯಿಂದ ಜೀಪಿನಲ್ಲಿ ಕುಲ್ಲು-ಮನಾಲಿ ಮಾರ್ಗವಾಗಿ ಪ್ರವಾಸ ಹೋಗೋಣವೆನ್ನುತ್ತಿದ್ದ. ಆ ವೇಳೆಗೆ 10 ದಿನಗಳ ರಜೆ ಹೊಂದಾಣಿಕೆ ಮಾಡಿಕೊಂಡು ಬೆಂಗಳೂರು-ದೆಹಲಿ-ಬೆಂಗಳೂರು ಮಧ್ಯೆ ಮರುಪ್ರಯಾಣದ ಅನುವು ಮಾಡಿ ವಿಮಾನದ ಟಿಕೆಟ್‌ ಖರೀದಿಸಲು ಯೋಜಿಸಿ ಸಿದ್ಧವಾವಾಗಿರಲು ಸೂಚನೆ ನೀಡಿದ್ದ. ನಾವು ಏಪ್ರಿಲ್‌ ತಿಂಗಳಿನಲ್ಲಿ ವಿಮಾನಗಳ ಸೀಟು ಲಭ್ಯತೆ ನೋಡಿ ಜೂನ್‌ 03 ರಿಂದ 12ರವರೆಗೆ ದಿನಗಳನ್ನು ನಿಗದಿಪಡಿಸಿ ಬೆಂಗಳೂರಿನಿಂದ ಐದು ಜನ ಹೊರಡುವುದೆಂದು ಟಿಕೆಟುಗಳನ್ನು ಕಾಯ್ದಿರಿಸಿದೆವು… ನಾನು ನನ್ನ ಪತ್ನಿ ವಸಂತ, ಮಕ್ಕಳಾದ ಡಾ|| ಸಿಂಚನ ಡಿ., ಚಿನ್ಮಯಿ ಡಿ., ಮತ್ತು ನನ್ನ ಷಡ್ಡಕನ ಮಗಳಾದ ಪುಷ್ಪಲತ ಎಂ.ಆರ್‌. 

ಯಶಪಾಲ, ನನ್ನ ಬಾವನ ಮಗ. ಅವನೊಮ್ಮೆ ಸ್ನೇಹಿತರ ಜೊತೆ ಮೋಟಾರು-ಸೈಕಲ್ಲಿನಲ್ಲಿ ಲೆಹ್‌ಗೆ ಹೋಗಿ ಬಂದಿದ್ದ… ಈಗವನ ಬಳಿ ಮೈಸೂರಿನಲ್ಲಿ ಖರೀದಿಸಿದ್ದ ಕರ್ನಾಟಕ ರಿಜಿಸ್ಟ್ರೇಷನ್‌ ಹೊಂದಿದ ಮಹೀಂದ್ರ ಬೊಲೆರೊ ಜೀಪು ಇತ್ತು. ಅದನ್ನವನು ದೆಹಲಿಗೆ ತೆಗೆದುಕೊಂಡು ಹೋಗಿದ್ದನು.

ಜೂನ್‌ 3, ಮೊದಲ ದಿನ – ಮೊದಲ ಹಂತ:
ನಾವು ಐದು ಜನ ಜೂನ್‌ 3ರಂದು ರಾತ್ರಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಾಗ 23.20 (ರಾತ್ರಿ11.20) ಗಂಟೆಯಾಗಿತ್ತು. ಬೆಂಗಳೂರಿನಲ್ಲಿಯೇ ವಿಮಾನ ಇಂಡಿಗೊ ಒಂದು ಗಂಟೆ ತಡವಾಗಿ ಹೊರಟಿತ್ತು. ಲಗೇಜು ಸಂಗ್ರಹಿಸಿಕೊಂಡು ಹೊರಗೆ ಬಂದು ಮನೆಯಿಂದ ತುಂಬಿಕೊಂಡು ಬಂದಿದ್ದ ಊಟದ ಡಬ್ಬಿಗಳನ್ನು ತೆಗೆದು ಪೇಪರ್‌ ಪ್ಲೇಟುಗಳಿಗೆ ಹಾಕಿಕೊಂಡು ನಿಧಾನವಾಗಿ ತಿನ್ನುತ್ತಾ ಯಶಪಾಲನಿಗಾಗಿ ಕಾಯುತ್ತಾ ಕುಳಿತೆವು. ಅವನು ತಾನಿನ್ನೂ ಜೀಪಿಗೆ ಸಾಮಾನುಗಳನ್ನು ತುಂಬಿಕೊಳ್ಳುತ್ತಿದ್ದೇನೆಂದು ದೂರವಾಣಿಯಲ್ಲಿ ತಿಳಿಸಿದ. 

ಜೂನ್‌ 4, ಎರಡನೇ ದಿನ: 
ಯಶಪಾಲ ಜೀಪಿನಲ್ಲಿ ವಿಮಾನ ನಿಲ್ದಾಣಕ್ಕೆ ಬಂದಾಗ ಜೂನ್‌ 04ರ 00.15 ಗಂಟೆ (ರಾತ್ರಿ 12.15). ಲಘುಬಗನೆ ಲಗೇಜನ್ನು ಜೀಪಿನ ಮೇಲಕ್ಕೆ ಏರಿಸಿ ಕಟ್ಟಿದ್ದಾಯಿತು. ಆಹಾರದ ಬ್ಯಾಗನ್ನು ಜೀಪಿನೊಳಗೆ ಇಟ್ಟುಕೊಂಡು ವಿಮಾನ ನಿಲ್ದಾಣದಿಂದ ಚಂಡೀಗಢದ ರಸ್ತೆ ಹಿಡಿದಾಗ ನಡುರಾತ್ರಿ 00.30 ಗಂಟೆ. 

ಹರ್ಯಾಣ ರಾಜ್ಯದ ಹೈವೇನಲ್ಲಿ ಢಾಬ ಬಳಿಯೊಂದರ ಬಳಿ ಜೀಪನ್ನು ನಿಲ್ಲಿಸಿದಾಗ ಬೆಳಗಿನ ಜಾವ 02.30 ಗಂಟೆ. ಯಶಪಾಲ ಅಲ್ಲಿ ಊಟ ಮಾಡಿದ! ಅವನು ರಾತ್ರಿ ಹೊರಡುವಾಗ್ಗೆ ಊಟವನ್ನೇ ಮಾಡಿರಲಿಲ್ಲ. ಉಳಿದ ನಾವು ಚಹಾ ಕುಡಿದೆವು. ಮತ್ತೊಮ್ಮೆ ಟಾಪ್‌ ಮೇಲಿದ್ದ ಲಗೇಜನ್ನು ಸರಿಯಾಗಿ ಜೋಡಿಸಿ ಭದ್ರವಾಗಿ ಕಟ್ಟಿ ಅಲ್ಲಿಂದ ಹೊರಟದ್ದಾಯಿತು.  

ಚಂಡೀಗಢಕ್ಕೆ ಮೊದಲೇ ಸಿಗುವ Zirakapur ಬಳಿ ನಾವು ರಾಷ್ಟ್ರೀಯ ಹೆದ್ದಾರಿ 21ಕ್ಕೆ ಪ್ರವೇಶಿಸಿದ್ದೆವು. ಚಂಡಿಗಢ ತಲುಪುವ ವೇಳೆಗೆ ಬೆಳಗ್ಗೆ 05.30ರ ಸಮಯ, ಸೂರ್ಯ ಮಾರುದ್ದ ಮೇಲೇರಿ ಬಂದಿದ್ದ. ಸ್ವಲ್ಪ ಸಮಯ ಪುಷ್ಪಲತ ಜೀಪನ್ನು ಓಡಿಸುತ್ತಿದ್ದಳು. ಚಂಡಿಗಢ-ರೂಪನಗರದ ಬಳಿ ಪ್ರತಿಬಾರಿ ರಸ್ತೆಮಾರ್ಗ ಕೇಳಿಕೇಳಿ ಡ್ರೈವ್‌ ಮಾಡುತ್ತಿದ್ದುದರಿಂದ ಪ್ರಯಾಣ ನಿಧಾನವಾಯಿತು. 

ಒಂದು ಗಂಟೆ ವಿರಮಿಸಿದ್ದ ಯಶಪಾಲ ಮತ್ತೆ ಸ್ಟಿಯರಿಂಗ್‌ ಹಿಡಿದು ಪಂಜಾಬ್‌ನ ಕಿರಾತ್‌ಪುರ ಬಳಿ ರಾ.ಹೆ.21ರಲ್ಲಿ ಬಕ್ರಾನಂಗಲ್‌(ಗೋವಿಂದ ಸಾಗರ) ನಾಲೆ ದಾಟಿ ಹಿಮಾಚಲ ಪ್ರದೇಶದ ಕಡೆಗೆ ತಿರುಗಿದ. ಇಲ್ಲಿಂದ ಘಟ್ಟಪ್ರದೇಶ ಪ್ರಾರಂಭವಾಯಿತು. ಅಂಕುಡೊಂಕಿನ ಏರಿಳಿತದ ರಸ್ತೆ ರಾ.ಹೆ.21 ಲೆಹ್‌ವರೆಗೆ ಮುಂದುವರೆದು ಕೊನೆಗೊಳ್ಳುತ್ತದೆ. ರಾತ್ರಿಯಿಡೀ ಪ್ರಯಾಣ, ಗಂಟೆ ಬೆಳಗ್ಗೆ 08.30 ಆಗುತ್ತಿತ್ತು, ಜೊತೆಯಲ್ಲಿದ್ದ ನಾಲ್ಕೂ ಜನ ಹೆಣ್ಣುಮಕ್ಕಳು ನಿತ್ಯಕರ್ಮಗಳಿಗಾಗಿ ಬೇಡಿಕೆ ಇಡಲು ಪ್ರಾರಂಬಿಸಿದ್ದರು. ಸ್ವರ್ಘತ್‌ ಎಂಬ ಹಳ್ಳಿಯ ಬಳಿ ರಸ್ತೆ ಬದಿಯಲ್ಲಿನ ಶೌಚಾಲಯ ಸೌಕರ‍್ಯವಿರುವ ಢಾಬವೊಂದರ ಹತ್ತಿರ ಜೀಪು ನಿಲ್ಲಿಸಲು ಎಲ್ಲರೂ ಶೌಚಗೃಹಕ್ಕೆ ಹೋಗಿ ಬಂದರು. ಇಲ್ಲಿ ರಸ್ತೆಯ ಎಡಕ್ಕೆ ಗೋವಿಂದಸಾಗರ (ಬಕ್ರಾನಂಗಲ್‌) ಜಲಾಶಯದ ಕಣಿವೆ ಕಾಣಿಸುತ್ತಿತ್ತು. ಮುಖ ತೊಳೆದು ಬ್ರೆಡ್‌-ಚಹ ಸೇವಿಸಿ ಅಲ್ಲಿಂದ ಹೊರಟಾಗ ವೇಳೆ ಸುಮಾರು 09.30 ಗಂಟೆ. 

ಯಶಪಾಲನಿಗೆ ಹಿಮಾಚಲ ಪ್ರದೇಶದ ಬರ್ಮಾನ ಎಂಬಲ್ಲಿ ಸ್ನೇಹಿತರ ಮನೆಯೊಂದಿತ್ತು. ಬರ್ಮಾನ ಬಿಲಾಸ್ಪುರದ ನಂತರ ಸಿಗುತ್ತದೆ… ಸಟ್ಲೆಜ್‌ ನದಿ ದಂಡೆಯಲ್ಲಿದೆ. ಅವನು ಅವರಿಗೆ ಕುಲ್ಲು-ಮನಾಲಿಗೆ ಹೋಗುವಾಗ್ಗೆ ನಾವು ಆರೂ ಜನ ಮನೆಗೆ ಭೇಟಿ ನೀಡುವುದಾಗಿ ಹಿಂದಿನ ದಿನವೇ ದೂರವಾಣಿ ಮೂಲಕ ತಿಳಿಸಿದ್ದನಂತೆ. ನಾವು ಅಲ್ಲಿಗೆ ತಲುಪಿದಾಗ ಸರಿಸುಮಾರು 11.30 ಗಂಟೆಯಾಗಿತ್ತು. ನಮಗಾಗಿ ಕಾಯುತ್ತಿದ್ದ ನಮ್ಮ ಅತಿಥೇಯರು ಕುಶಲೋಪರಿಯನಂತರ ನಮ್ಮನ್ನು ಚೆನ್ನಾಗಿಯೇ ಉಪಚರಿಸಿದರು. ಎಲ್ಲರೂ ಬಾತ್‌ ರೂಮಿಗೆ ಹೋಗಿಬಂದಾಯಿತು. ಪೇಸ್ಟ್‌-ಬ್ರಷ್‌ನೊಡನೆ ಹಲ್ಲುಜ್ಜಿ ಮತ್ತೊಮ್ಮೆ ಮುಖ ತೊಳೆದಿದ್ದಾಯಿತು. ಕರುಬೂಜ ಹಣ್ಣು ತಿಂದು ಜ್ಯೂಸ್‌ ಕುಡಿದಾದ ಮೇಲೆ ಆಲೂ-ಪರೋಟವನ್ನು ಪುದಿನ ಚಟ್ನಿ, ಬೆಣ್ಣೆ ಮತ್ತು ಮೊಸರಿನೊಡನೆ ತಿಂದಾಯಿತು. ಮತ್ತೆ ಚಹ ಸೇವಿಸಿ ವಿಶ್ರಮಿಸಿದ ನಂತರ ಅವರ ಮನೆಯಿಂದ ಹೊರಟೆವು. ಅವರ ಮನೆಯ ಪಿಯುಸಿ ಓದಿದ ಹುಡುಗ ಜೀಪಿನ ಬ್ರೇಕ್‌ನಲ್ಲಿ ಏನೋ ತೊಂದರೆ ಇದೆಯೆಂದು ಅದರ ಶಬ್ದದಿಂದ ಗುರುತುಹಿಡಿದು “ರಿಪೇರಿ ಮಾಡಿಸಿಕೊಂಡು ಹೋಗಿ… ಮಂಡಿಯಲ್ಲಿ ಮಹೀಂದ್ರ ಸರ್ವೀಸ್‌ ಸ್ಟೇಷನ್‌ ಇದೆ…” ಎಂದು ಸೂಚಿಸಿದ. ಆಗ ವೇಳೆ ಸುಮಾರು ಮಧ್ಯಾಹ್ನ 12.30 ಗಂಟೆ. ಅವರಿಗೆ ವಿಧಾಯ ಹೇಳಿ ಕುಲ್ಲು-ಮನಾಲಿಯ ಕಡೆಗೆ ಜೀಪು ಧೌಡಾಯಿಸಿದ ಯಶಪಾಲ. 
 
ಇಲ್ಲೊಂದು ವಿಶ್ಲೇಷಣೆ:
ಯಶಪಾಲನ ಸ್ನೇಹಿತರ ಮನೆ ಬಿಟ್ಟು ಸ್ವಲ್ಪದೂರ ಮುಂದೆ ಚಲಿಸುತ್ತಿದ್ದ ಹಾಗೆ ಸಟ್ಲಜ್‌ ನದಿಯ ಬಲದಂಡೆಗೆ ಹೋಗುವ ಕಬ್ಬಿಣದ ಸೇತುವೆ ಬಳಿ ತಿರುವು ಪಡೆಯುವಾಗ ಎದುರಿನ ಗಿರಿಯಲ್ಲಿ ಜಲವಿದ್ಯುತ್‌ ಉತ್ಪಾದನೆಗೆ ತೊಡಗಿಸಿರುವ ದೊಡ್ಡ ನೀರಿನ ಪೈಪುಗಳನ್ನು ಕಾಣುತ್ತೇವೆ. ಆದರೆ ನೀರು ಎಲ್ಲಿಂದ ಬರುತ್ತದೆಂದು ಮಾತ್ರ ಗೊತ್ತಾಗುವುದಿಲ್ಲ. ನಾವು ಸುಂದರ್‌ನಗರ ತಲುಪುತ್ತಿದ್ದ ಹಾಗೆ ಮತ್ತಲ್ಲೊಂದು ಸರೋವರದಂಥ ಜಲಾಶಯವನ್ನು ಕಾಣುತ್ತೇವೆ. ರಸ್ತೆ ಪಕ್ಕದಲ್ಲಿಯೇ ನಿರ್ಮಾಣ ಮಾಡಿರುವ ಕಾಲುವೆಯಲ್ಲಿ ಬಿರುಸಾಗಿ ಹರಿದು ಬರುವ ನೀರು ಜಲಾಶಯಕ್ಕೆ ಸೇರುತ್ತದೆ. ಕಾಲುವೆ ಎಲ್ಲಿಂದ ಬರುತ್ತದೆಂದು ಗೊತ್ತಾಗಲಿಲ್ಲ. ರಾಷ್ಟ್ರೀಯ ಹೆದ್ದಾರಿ ಮುಂದೆ ನಾಲೆಯನ್ನು ದಾಟಿ ನೇರವಾಗಿ ಹೋಗುತ್ತದೆ. ನಾಲೆ ಬಲಗಡೆ ಪೂರ್ವ ದಿಕ್ಕಿಗೆ ಉಳಿಯುತ್ತದೆ. ಆದರದು ಬಿಯಾಸ್‌ ನದಿಯ ನೀರು. ಸುಂದರ್‌ನಗರದ ಜಲಾಶಯದಿಂದ ನೀರುನ್ನು ಬರ್ಮಾನ ಬಳಿಯ ವಿದ್ಯುದಾಗಾರಕ್ಕೆ ಸುರಂಗ ಕೊರೆದು ತೆಗೆದುಕೊಂಡು ಹೋಗಿದ್ದಾರೆಂದು ಅನಿಸಿತು. ವಿದ್ಯುತ್‌ ಉತ್ಪಾದನೆಯನಂತರ ನೀರು ಸಟ್ಲಜ್‌ ಕೊಳ್ಳಕ್ಕೆ ಸೇರಿಕೊಳ್ಳುತ್ತದೆ. ಇದೊಂದು ರೀತಿಯಲ್ಲಿ ಬಿಯಾಸ್‌-ಸಟ್ಲಜ್‌ ನದಿಗಳ ಜೋಡಣೆ. ಸಟ್ಲಜ್‌ನಲ್ಲಿ ಕೆಳಕ್ಕೆ ಹರಿಯುವ ನೀರು ಬಕ್ರಾನಂಗಲ್‌ ಸೇರಿ ವಿದ್ಯುತ್‌ ಮತ್ತು ವ್ಯವಸಾಯೋತ್ಪತ್ತಿಗೆ ಮರು ಬಳಕೆಯಾಗುತ್ತದೆ. 

ಮಂಡಿ, ಮನಾಲಿ ರಸ್ತೆಯಲ್ಲಿ ಬಿಯಾಸ್‌(ವ್ಯಾಸ) ನದಿ ದಂಡೆಯಲ್ಲಿದೆ. ಬರ್ಮಾನದಿಂದ ಒಂದು ಗಂಟೆಯ ಪ್ರಯಾಣ. ವಿಚಾರಿಸಿ, ಮಹೀಂದ್ರ ಸರ್ವೀಸ್‌ ಸ್ಟೇಷನ್ನಿನಲ್ಲಿ ಜೀಪನ್ನು ರಿಪೇರಿಗೆ ಒಪ್ಪಿಸಲಾಯಿತು. ಸುಮಾರು ಒಂದೂವರೆ ಗಂಟೆ ಕೆಲಸ ಹಿಡಿಯಿತು. ಮೆಕಾನಿಕ್‌ ಗಾಡಿಯಲ್ಲಿ ತೊಂದರೆಯೇನೂ ಇಲ್ಲ, ಕಸ ಸೇರಿಕೊಂಡಿದೆಯೆಂದು ತಿಳಿಸಿ ಅದನ್ನು ಬೇಗನೆ ಕ್ಲೀನ್‌ ಮಾಡಿಕೊಟ್ಟರು. ಗಂಟೆ ಮಧ್ಯಾಹ್ನ 03.00 ಆಗಿತ್ತು. ರಿಪೇರಿ ಬಿಲ್‌ ಪಾವತಿಸಿ ಅಲ್ಲಿಂದ ಮುಂದೆ ಜೀಪನ್ನು ಧೌಡಾಯಿಸಿದೆವು. ಸಾಯಂಕಾಲದೊಳಗೆ ಮನಾಲಿ ಸೇರುವುದು ನಮ್ಮ ಉದ್ದೇಶವಾಗಿತ್ತು. 

ರಸ್ತೆ ಇಲ್ಲಿಂದ ಮುಂದಕ್ಕೆ ಬಿಯಾಸ್‌ ನದಿ ಕಣಿವೆಯಲ್ಲಿಯೇ ಮುಂದುವರಿದಿತ್ತು. ಎರಡೂ ಕಡೆ ಬೆಟ್ಟ ಸಾಲು… ಬಿಯಾಸ್‌ ನದೀ ಕಣಿವೆ! ಅಂಕುಡೊಂಕಿನ ರಸ್ತೆ. ಕೆಲವು ಕಡೆ ಎದುರು ಬರುವ ವಾಹನಗಳು ಕಾಣದಂಥ ತಿರುವುಗಳು. ಜಾಗರೂಕವಾಗಿ ಡ್ರೈವ್‌ ಮಾಡಬೇಕಿತ್ತು. ಅಂತಹ ಒಂದು ಕಡೆ ವಾಹನಗಳು ದಟ್ಟವಾಗಿ ಸಾಲುಗಟ್ಟಿ ನಿಂತಿದ್ದವು. ರಸ್ತೆ ಬದಿಯಲ್ಲಿ ನದಿ ದಂಡೆಗೆ ಆನಿಸಿಕೊಂಡ ಹನುಮಾನ್‌ ಮತ್ತು ಕಾಳಿಕಾದೇವಿ ದೇವಸ್ಥಾನಗಳು. ಅದು ಹನೋಗಿ ಮಾತಾ ದೇವಸ್ಥಾನ ಎಂದಾಗಿತ್ತು. ನಾವೂ ಜೀಪು ನಿಲ್ಲಿಸಿ ಭೇಟಿಯಿತ್ತು ಕೈಮುಗಿದು ಮುಂದುವರಿದೆವು. ಸಿಂಚನ ಛಾಯಾಚಿತ್ರ ತೆಗೆಯಲು ಪ್ರಾರಂಭಿಸಿದ್ದಳು. ಕಣಿವೆಯುದ್ದಕ್ಕೂ ಕ್ಲಿಕ್ಕಿಸುತ್ತಿದ್ದಳು. 

ಟಿಪ್ಪಣಿ ವಿವರಣೆ: 
ಮಂಡಿಯಿಂದ ಕೆಲವು ಕಿಲೋಮೀಟರುಗಳು ಪೂರ್ವದ ಕಡೆಗೆ ಪ್ರಯಾಣಿಸಿದರೆ ಅಲ್ಲಿ ಪಾಂಡೋಹ್‌ ಎಂಬ ಸ್ಥಳವಿದೆ. ಅಲ್ಲಿ ಬಿಯಾಸ್‌ ನದಿಗೆ ನ್ಯಾಷನಲ್‌ ಹೈಡ್ರೋ ಪವರ್‌ ಕಾರ್ಪೋರೇಷನ್‌ನವರು ಸಣ್ಣ ಅಣೆಕಟ್ಟೆಯನ್ನು ನಿರ್ಮಿಸಿರುವುದು ಕಾಣಿಸುತ್ತದೆ. ಇಲ್ಲಿ ಸಂಗ್ರಹಿಸಿದ ನೀರನ್ನು ಸುರಂಗದ ಮೂಲಕ ಖಿಯುರಿ ಎನ್ನುವವರೆಗೆ ತೆಗೆದುಕೊಂಡು ಹೋಗಿ ಅಲ್ಲಿಂದ ಕಾಲುವೆ ಮೂಲಕ ಸುಂದರ್‌ನಗರದ ಜಲಾಶಯಕ್ಕೆ ಹರಿಸಿದ್ದಾರೆ. ನಮ್ಮ ದಾರಿಯಲ್ಲಿ ಸಿಗುವ ಲಾರ್ಜಿ ಎಂಬಲ್ಲಿ ನ್ಯಾಷನಲ್‌ ಹೈಡ್ರೋ ಪವರ್‌ ಕಾರ್ಪೋರೇಷನ್‌ನವರು ಸುಮಾರು ಎರಡು ಕಿ.ಮೀ. ಉದ್ದದ ಸುರಂಗ ಕೊರೆದು ರಸ್ತೆ ಸಂಪರ್ಕ ಕಲ್ಪಿಸಿದ್ದಾರೆ. ನದೀ ದಂಡೆಯ ರಸ್ತೆ ಲಾರ್ಜಿ ಜಲವಿದ್ಯುದಾಗಾರಕ್ಕೆ ನಿರ್ಮಿಸಿರುವ ಬಿಯಾಸ್‌ ಮೇಲ್ದಂಡೆ ಜಲಾಶಯದಿಂದಾಗಿ ಭೂಕುಸಿತಗೊಂಡು ಹಾಳಾಗಿದೆ. ಹಾಗಾಗಿ ಈ ಸುರಂಗಮಾರ್ಗ. ಸುರಂಗದುದ್ದಕ್ಕೂ ಸಿಂಚನ ಕೆಮೆರಾದಿಂದ ವಿಡಿಯೋ ಚಿತ್ರೀಕರಿಸಿದಳು. 

ಬಿಯಾಸ್‌ ಪಕ್ಕದಲ್ಲಿ ಇಕ್ಕಟ್ಟಾದ ದುರ್ಗಮ ಕಣಿವೆ ಪ್ರದೇಶದ ಭುಂತರ್‌ ಎಂಬಲ್ಲಿ ಕುಲ್ಲು-ಮನಾಲಿಯ ಒಂದೇ ಟ್ರ್ಯಾಕ್‌ ಮಾತ್ರವೇ ಇರುವ ವಿಮಾನ ನಿಲ್ದಾಣವಿದೆ. ಇದೊಂದು ವಿಮಾನ-ಚಾಲಕನಿಗೆ ವಿಮಾನ ಹಾರಿಸಲು ಮತ್ತು ಇಳಿಸಲು ಸವಾಲಿನ ನಿಲ್ದಾಣವಾಗಿದೆ.

 ಬಿಯಾಸ್‌ ಕಣಿವೆ ಪ್ರಯಾಣವೇ ಒಂದು ರೀತಿಯಲ್ಲಿ ಮೈನವಿರೇಳಿಸುವ, ಎದೆ ಜಲ್ಲೆನಿಸುವ ಮೋಹಕ ದೃಶ್ಯವಾಗಿತ್ತು. ಈ ಕುಲ್ಲು-ಮನಾಲಿ ಕಣಿವೆಯನ್ನು ದೇವತೆಗಳ ಕಣಿವೆ ಎಂದೇ ಇಲ್ಲಿನ ಜನ ಕರೆಯುತ್ತಾರೆ. ಆಗಾಗ ಅಲ್ಲಲ್ಲಿ ಇಣುಕಿ ಕಾಣುತ್ತಿದ್ದ ಹಿಮಾಚ್ಛಾದಿತ ಗಿರಿಪರ್ವತಗಳು, ಇಳಿಜಾರುಗಳಲ್ಲಿ ಜಗತಿಗಳಂತೆ ವಿನ್ಯಾಸ ಮೂಡಿಸಿ ಕಾಣುತ್ತಿದ್ದ ಬತ್ತದ ಗದ್ದೆಗಳು, ಸೇಬಿನ ತೋಟಗಳು ನಮ್ಮ ಕಣ್ಮನ ಸೂರೆಗೊಳ್ಳುತ್ತಿದ್ದವು. ಛಾಯಾಚಿತ್ರಗಳು ಇಲ್ಲದೆ ಮುಂದೆ ಹೋಗಲು ಮನಸ್ಸಾಗುತ್ತಿರಲಿಲ್ಲ. ಅದಕ್ಕಾಗಿ ಸಮಯ ಬೇಕಿತ್ತು. ಜೊತೆಗೆ ನಿತ್ಯಕರ್ಮಗಳು, ಊಟ-ತಿಂಡಿ, ದೈಹಿಕ ಕರೆ ನಿದ್ದೆ ವಿಶ್ರಾಂತಿಗಳಿಗೆ ಸಮಯಬೇಕಿತ್ತು. ಪರ್ವತ ಶ್ರೇಣಿ… ನದಿ-ಕಣಿವೆಗಳ ದುರ್ಗಮ ದಾರಿಯಾಗಿತ್ತು. ಅಲ್ಲಲ್ಲಿ ವಾಹನ ಸಂಚಾರ ಅಡಚಣೆ, ಕೆಟ್ಟುಹೋದ ವಾಹನಗಳು, ಕಿರಿದಾದ ರಸ್ತೆಯಲ್ಲಿ ಆದ ಅಪಘಾತಗಳು, ಭೂಕುಸಿತದಿಂದ ರಸ್ತೆ ತಡೆ ಇವುಗಳನ್ನೆಲ್ಲಾ ಎದುರಿಸಬೇಕಾಗಿತ್ತು. ಈ ಎಲ್ಲ ಅವಗಡಗಳನ್ನೆದುರಿಸಲು ನಾವು ಸಕಲ ಸಿದ್ಧತೆ ಮಾಡಿಕೊಂಡಿರಬೇಕಿತ್ತು. ಮಾಡಿಕೊಂಡಿದ್ದೆವೂ ಕೂಡ. 
 
ಪೂರ್ವಸಿದ್ಧತೆ ಟಿಪ್ಪಣಿ:
 ನಮ್ಮದು ಪ್ರವಾಸ ಏರ್ಪಡಿಸುವ ಸಂಸ್ಥೆಗಳ ಪ್ಯಾಕೇಜ್‌ ಪ್ರವಾಸವಾಗಿರಲಿಲ್ಲ. ದೆಹಲಿಯಿಂದ ನಾವುಗಳೇ ಡ್ರೈವ್‌ ಮಾಡಿಕೊಂಡು ಹೋಗುವುದೆಂದು ಯಶಪಾಲನ ಯೋಜನೆಯಾಗಿತ್ತು. ದೆಹಲಿಯಿಂದ ಲೆಹ್‌ಗೆ ಮನಾಲಿ ಮೂಲಕ ಸುಮಾರು 1100 ಕಿ.ಮೀಟರುಗಳ ಪ್ರಯಾಣ. ಕಡೇಪಕ್ಷ ಮೂರು ಹಗಲು ಪ್ರಯಾಣ ಹಿಡಿಯುತ್ತದೆ. ಹಾಗಾಗಿ ಅಲ್ಲಲ್ಲಿ ಮೂರುಕಡೆ ರಾತ್ರಿ ತಂಗಣೆ ಮಾಡಬೇಕಾಗಿತ್ತು. ರೊಹ್ತಾಂಗ್‌ ಲಾ, ಬಾರಲಾಚ ಲಾ, ನಕೀ ಲಾ, ಲಾಚುಲುಂಗ್‌ ಲಾ, ತಾಂಗ್ಲಾಂಗ್‌ ಲಾ ಸೇರಿ ಒಟ್ಟು ಐದು ಪಾಸ್‌ಗಳನ್ನು ದಾಟಬೇಕು… ಟಿಬೆಟಿಯನ್ನರ ಭಾಷೆಯಲ್ಲಿ “ಲಾ” ಎಂದರೆ ‘ಪರ್ವತ ದಾಟುದಾರಿ’ ಅಥವಾ ಪಾಸ್‌(Pass) ಎಂದರ್ಥ. ಹಿಮದ ಹೊದಿಕೆ ಹೊದ್ದ ಗಿರಿ ಶ್ರೇಣಿಗಳನ್ನು ದಾಟಲು ವಿಪರೀತ ಚಳಿ ವಾತಾವರಣವನ್ನು ಎದುರಿಸಬೇಕು. ಅಂಕುಡೊಂಕಿನ ರಸ್ತೆಯಲ್ಲಿ ಪ್ರಯಾಣದ ಅವಧಿಯೇ ಹೆಚ್ಚು.

ನಾವೆಲ್ಲಾ ಬೆಚ್ಚಗಿನ ಉಡುಪುಗಳು ಮತ್ತು ಕಾಲಿಗೆ ಹಿಮಕೊರೆತ ತಡೆಯಲು ಶೂಗಳನ್ನು ತೆಗೆದುಕೊಂಡಿದ್ದೆವು. ಕೈಗಳಿಗೆ ಬೆಚ್ಚಗಿನ ಗ್ಲೌಸ್‌ಗಳು, ಒಂದು ಚಿಕ್ಕ ಗ್ಯಾಸ್‌ ಸ್ಟೌ, 20 ಲೀಟರಿನ ಶುದ್ದೀಕರಿಸಿದ ನೀರಿನ ಕ್ಯಾನ್‌, ಚಿಕ್ಕ ಬಕೆಟ್‌ ಮತ್ತು ಟಂಬ್ಲರ್‌, ಒಂದು ಶೊವೆಲ್‌, ಸುಮಾರು ಐದು ಟನ್‌ ಭಾರ ತಡೆಯುವ ಸಿಂತೆಟಿಕ್‌ ಹಗ್ಗ, ನಾಲ್ಕು ಪಿಚ್ಚಿಂಗ್‌ ಟೆಂಟುಗಳು, ಒಂದು ಶೌಚಾಲಯ ಟೆಂಟ್‌, ಮಲಗುವ ಚೀಲಗಳು… ಇವೆಲ್ಲವುಗಳನ್ನೂ ಯಶಪಾಲ ಸ್ನೇಹಿತರಿಂದ ಎರವಲು ಪಡೆದು ಜೋಡಿಸಿಕೊಂಡು ಬಂದಿದ್ದ. ಬೆಂಗಳೂರಿನಿಂದ ನಾವು ಮೂರು ದಿನಗಳಿಗಾಗುವಷ್ಟು ಸಿದ್ಧಾಹಾರ ಪ್ಯಾಕ್‌ ಮಾಡಿಕೊಂಡು ಬಂದಿದ್ದೆವು… ಚಾಕೊಲೆಟ್ಟುಗಳು, ಬಿಸ್ಕೆತ್ತುಗಳು, ಉಪ್ಪಿಟ್ಟಿನ ಮಿಕ್ಸ್‌, ಜಾಮ್, ಪುಲ್ಕಾ, ಖಾರ ತೊಕ್ಕು, ಗೊಜ್ಜವಲಕ್ಕಿ, ಒಬ್ಬಟ್ಟುಗಳು ಇತ್ಯಾದಿ, ಜೊತೆಗೆ ಇನ್ಸ್ಟಂಟ್‌ coffee, ಹಾಲಿನ ಪುಡಿ, ಪೇಪರ್‌ ಪ್ಲೇಟು-ಕಪ್ಪುಗಳು ಇವುಗಳನ್ನೆಲ್ಲಾ ಪ್ಯಾಕ್‌ ಮಾಡಿ ಪ್ರತ್ಯೇಕ ಬ್ಯಾಗಿನಲ್ಲಿ ಹಾಕಿಕೊಂಡಿದ್ದೆವು. ಜೀಪಿನ ಹಿಂದಿನ ಸೀಟಿನಲ್ಲಿ ಕೈಗೆಟುಕುವ ಹಾಗೆ ಸಿದ್ಧವಾಗಿ ಇರಿಸಿಕೊಂಡಿದ್ದೆವು. ಮುಖ್ಯವಾಗಿ ಎತ್ತರದ ಪರ್ವತ ಶ್ರೇಣಿಗಳಲ್ಲಿ ಆಮ್ಲಜನಕದ ಕೊರತೆ ಕಾರಣ ಉಂಟಾಗುವ ಮೌಂಟನ್‌ ಸಿಕ್ನೆಸ್‌… ತಲೆನೋವು, ಹಿಮದಿಂದ ಪ್ರತಿಫಲನವಾಗುವ ಸೂರ್ಯನ ಕಿರಣಗಳ ತೀವ್ರತೆಯಿಂದಾಗುವ ತಲೆಸುತ್ತು, ವಾಂತಿ… ಬೆಳಕಿನ ತೀವ್ರತೆ ಹೇಗಿರುತ್ತದೆಂದರೆ ನಾವು ಕಣ್ಣುರೆಪ್ಪೆ ಕಿರಿದುಮಾಡಿಕೊಂಡು ಹೊರಜಗತ್ತನ್ನು ನೋಡಬೇಕಾಗುತ್ತದೆ… ಇದಕ್ಕಾಗಿ ಸನ್‌ಗ್ಲಾಸ್‌ಗಳು. ವಿಪರೀತ ತಲೆನೋವು, ತಲೆಸುತ್ತುವಿಕೆಯಿಂದಾಗುವ ವಾಂತಿ, ಚಳಿ ಮತ್ತು ಚಳಿಗಾಳಿಗೆ ಬರುವ ಜ್ವರ, ಇವುಗಳ ನಿವಾರಣೆಗೆ ಸೂಕ್ತ ಔಷಧಿಗಳನ್ನು ನನ್ನ ಮಗಳು ಡಾ|| ಸಿಂಚನ ಜೋಡಿಸಿಕೊಂಡು ಬಂದಿದ್ದಳು. 

 ನಾವು ಕುಲ್ಲು ತಲುಪಿದಾಗ ಸುಮಾರು ಸಂಜೆ 05.00 ಗಂಟೆ. ಪಟ್ಟಣದ ದಾರಿಯಲ್ಲಿ ಸಿಕ್ಕಿದ ಪೆಟ್ರೋಲ್‌ ಸ್ಟೇಷನ್ನಿಗೆ ಜೀಪು ತಿರುಗಿಸಿ ಮತ್ತೊಮ್ಮೆ ಟ್ಯಾಂಕ್‌ಪೂರ್ಣ ಇಂಧನ ತುಂಬಿಸಿ ಖಾಲಿ ತಂದಿದ್ದ ಜೆರ‍್ರಿ ಕ್ಯಾನಿನಲ್ಲಿ 21 ಲೀಟರು ಇಂಧನ ತುಂಬಿಸಿ ಆಪತ್ಕಾಲೀನ ಸಮಯಕ್ಕೆ ಸ್ಟಾಕ್‌ ಇರಲೆಂದು… ಸೋರದಂತೆ ಭದ್ರವಾಗಿ ಬಿರುಟೆ ಹಾಕಿ ಜೀಪಿನ ಹಿಂದಿನ ಸೀಟಿನ ಬಳಿ ಅಲ್ಲಾಡದಂತೆ ಇಡಲಾಯಿತು.

ಕುಲ್ಲುವಿಗೆ ದೆಹಲಿಯಿಂದ ಅಂಬಾಲ, ಚಂಡಿಗಢ, ರೂಪನಗರ, ಬಿಲಾಸ್ಪುರ, ಮಂಡಿ ಮಾರ್ಗವಾಗಿ ಸುಮಾರು 550 ಕಿ.ಮೀ. ಪ್ರಯಾಣ. ಕುಲ್ಲು ತಲುಪಿದ ವೇಳೆಗೆ ನಮ್ಮ ಪಯಣದ ಅವಧಿ, ಊಟ-ತಿಂಡಿ ಇತರೆ ನಿತ್ಯಕರ್ಮ ಸೇರಿ ಸುಮಾರು ಹದಿನಾರುವರೆ ಗಂಟೆಗಳಾಗಿದ್ದವು. ಇಲ್ಲದಿದ್ದಲ್ಲಿ 12 ರಿಂದ 13 ಗಂಟೆಗಳ ಪ್ರಯಾಣವೆಂದು ಯಶಪಾಲ ಹೇಳುತ್ತಿದ್ದ. ಮನಾಲಿ ಇನ್ನೂ ದೂರವಿತ್ತು. 

ಕುಲ್ಲುವಿನಿಂದ ಮುಂದಕ್ಕೆ ಪ್ರಯಾಣಿಸಿದ ಮೇಲೆ ಯಶಪಾಲ ಕಾತ್ರೇನ್‌ ಎಂಬ ಸಣ್ಣ ಪಟ್ಟಣದ ಬಳಿ ಜೀಪನ್ನು ನಿಲ್ಲಿಸಿದ. ಸಮಯ ಸಾಯಂಕಾಲ 06.30 ಆಗುತ್ತಿತ್ತು. ನಾಲ್ಕೂ ದಿಕ್ಕುಗಳಲ್ಲಿಯೂ ಪರ್ವತ ಶ್ರೇಣಿ. ಸೂರ್ಯ ಪಶ್ಚಿಮ ಶ್ರೇಣಿಯ ಹಿಂದೆ ಮರೆಯಾಗಿದ್ದ. ಯಶಪಾಲ ಅಲ್ಲಿಯೇ ಪಕ್ಕದಲ್ಲಿದ್ದ ಹಿಮಾಚಲ ಪ್ರದೇಶ ಸರ್ಕಾರದ ಪ್ರವಾಸಿಗರ ತಂಗುದಾಣದಲ್ಲಿ ರಾತ್ರಿ ತಂಗಣೆಗೆ ವಿಚಾರಿಸಿದ. ಕೇವಲ ಒಬ್ಬಿಬ್ಬರಿಗೆ ಜಾಗವಿದೆಯೆಂದು ಮೇಲ್ವಿಚಾರಕ ತಿಳಿಸಿದ. ನಾವು ಆರು ಜನರಿದ್ದೆವು. ನಮ್ಮನ್ನೇ ಗಮನಿಸುತ್ತಿದ್ದ ವ್ಯಕ್ತಿಯೊಬ್ಬ “ಸ್ಟೇ ಹೋಂ ಸಿಗುತ್ತದೆ, ಒಂದು ರಾತ್ರಿಗೆ 1500 ರುಪಾಯಿ” ಎಂದು ತಿಳಿಸಿದ. ಮನಾಲಿ ತಲುಪಲು ಇನ್ನೂ 18 ಕಿ.ಮೀ. ಪ್ರಯಾಣಿಸಬೇಕಿತ್ತು. ಅಲ್ಲಿ ರೂಮುಗಳು ದುಭಾರಿ ಬೆಲೆ. ನಾವು ಹೋಗುವ ವೇಳೆಗೆ ಸಮಯವಾಗುವುದರಿಂದ ರೂಮುಗಳು ಸಿಗುತ್ತವೆಂಬ ಖಾತರಿಯಿರಲಿಲ್ಲ. ಏಕೆಂದರೆ ರೊಹ್ತಾಂಗ್‌ ಪಾಸ್‌ ತೆರೆದಿದ್ದ ಕಾರಣ ಪ್ರವಾಸಿಗರ ಲಗ್ಗೆಯಾಗಿದ್ದ ಕಾಲವದು. ಯಶಪಾಲ ಅನುಮಾನಿಸಿದ. ಕಾತ್ರೇನ್‌ನಲ್ಲಿಯೇ ಉಳಿಯುವುದೆಂದು ತೀರ್ಮಾನಿಸಿ ಸ್ಟೇ ಹೋಂ ಮಾಹಿತಿ ನೀಡಿದ ವ್ಯಕ್ತಿಯ ಸ್ಕೂಟರನ್ನು ಎಲ್ಲರೂ ಜೀಪಿನಲ್ಲಿ ಪರಿಶೀಲನೆಗಾಗಿ ಹಿಂಬಾಲಿಸಿದೆವು. 

ಮನೆ ಮಹಡಿಯಲ್ಲಿ ಒಂದು ಹಾಲ್‌ ಮತ್ತು ಒಂದು ರೂಮು ಇದ್ದವು. ಸ್ಟಾರ್‌ ಹೊಟೆಲಿನ ರೂಮುಗಳಂತೆ ಸಿದ್ಧಪಡಿಸಿದ್ದರು. ಸ್ಥಳ ಚೆನ್ನಾಗಿತ್ತು, ಒಪ್ಪಿದೆವು. ಎರಡು ಸ್ನಾನದ ರೂಮುಗಳಲ್ಲಿ ಬಿಸಿನೀರು ಸ್ನಾನಕ್ಕೆ ಅವಕಾಶಮಾಡಿಕೊಟ್ಟರು. ರಾತ್ರಿ ಊಟದ ಆದೇಶ ನೀಡಿದೆವು… ಪುಲ್ಕ-ದಾಲ್‌ ಅನ್ನ-ಮೊಸರು ಜೊತೆಗೆ ಹಪ್ಪಳ. ಈ ಮಧ್ಯೆ ಬಿಸಿ ಚಹ ಮಾಡಿಸಿ ಕುಡಿದೆವು. ರಾತ್ರಿ ಊಟ ತುಂಬಾ ಚೆನ್ನಾಗಿತ್ತು. ಮಲಗಲು ಹಾಸಿಗೆಯಷ್ಟೇ ದಪ್ಪಗಿನ ಹೊದಿಕೆಗಳನ್ನು ಕೊಟ್ಟರು. ಬೆಳಗ್ಗೆ ನಾಲ್ಕು ಗಂಟೆಗೇ ಎದ್ದು ಪ್ರಯಾಣ ಮುಂದುವರಿಸಲು ನಿರ್ಧರಿಸಿ ಬೇಗನೆ ಮಲಗಿದೆವು. ಸ್ಟೇ ಹೋಂ ಬಿಲ್ಲನ್ನು ರಾತ್ರಿಯೇ ಪಾವತಿಸಿದ್ದೆವು. ಬಿಲ್ಲು ಮೊತ್ತ 2000 ರುಪಾಯಿಗಳಷ್ಟಾಗಿತ್ತು. 

ಜೂನ್‌ 5, ಮೂರನೇ ದಿನ – ಮನಾಲಿ ರೊಹ್ತಾಂಗ್‌ ಪಾಸ್‌:
ರಾತ್ರಿ ಮಲಗಿದ್ದೊಂದೇ ಜ್ಞಾಪಕ ಅಲಾರ್ಮ್‌ ಶಬ್ದಕ್ಕೆ ಎಚ್ಚರವಾದಾಗ ಬೆಳಗಿನ ಜಾವ ಮೂರೂವರೆ ಗಂಟೆ ಸಮಯ. ಪಕ್ಕದಲ್ಲಿ ಬಿಯಾಸ್‌ ನದಿಯ ಮೊರೆತದ ಸದ್ದು ಕೇಳುತ್ತಿತ್ತು. ಎಲ್ಲರೂ ಹಲ್ಲುಜ್ಜಿ ಮುಖ ತೊಳೆದರು. ಹೊರಗೆ ಚಳಿಯಿದ್ದುದರಿಂದ ಬೆಚ್ಚಗಿನ ಉಡುಪು ಧರಿಸಿ ಸೂಟ್‌ಕೇಸು-ಗಳನ್ನು ಪ್ಯಾಕ್‌ ಮಾಡಿ ಜೀಪಿನ ಮೇಲಕ್ಕೆ ಹಾಕಿ ಮೇಲೊಂದು ಕವರ್‌ಶೀಟ್‌ ಹೊದೆಸಿ ಕಟ್ಟಿದೆವು. ಸ್ಟೇ ಹೋಮ್‌ನ ಹುಡುಗ ಇದಕ್ಕೆಲ್ಲಾ ಸಹಕರಿಸಿ ಚಹ ತಂದುಕೊಟ್ಟ. ಪುಷ್ಪಲತ ಆತನಿಗೆ 50 ರುಪಾಯಿ ಬಕ್ಷೀಸು ನೀಡಿದಳು. ವೇಳೆ 05.00 ಗಂಟೆಯಾಗಿತ್ತು. ಬೆಳಗಾಗಿತ್ತು. ಯಶಪಾಲ ಲೇಟಾಯಿತೆಂದು ಗೊಣಗುತ್ತಿದ್ದ. “ಬೆಳಗಿನ ಜಾವ ಮೂರು ಗಂಟೆಗೇ ಮನಾಲಿಯಿಂದ ಪ್ರವಾಸಿ ವಾಹನಗಳು ಹೊರಡುವುದರಿಂದ ಸಂಚಾರ ದಟ್ಟಣೆಯಿಂದ ಜಾಮ್‌ ಆಗುವ ಸಾಧ್ಯತೆಯಿದೆ,” ಎಂದ ಯಶಪಾಲ. “ರೊಹ್ತಾಂಗ್‌ ಪಾಸ್‌ ಕಾತ್ರೇನ್‌ನಿಂದ 70 ಕಿ.ಮೀಟರುಗಳಷ್ಟಾಗುತ್ತದೆ, ಮನಾಲಿಯಿಂದ 51ಕಿ.ಮೀಟರುಗಳ ಏರು ರಸ್ತೆ…” ಮತ್ತೆ ಯಶಪಾಲನ ಉವಾಚ. 

ಪೂರ್ವ ಪಶ್ಚಿಮ ಉತ್ತರ ಮೂರೂ ಕಡೆಗೂ ಪರ್ವತಗಳಿರುವ ಮನಾಲಿ ಗಿರಿಕಣಿವೆ ತಲುಪುವ ವೇಳೆಗೆ ಗಂಟೆ 05.45 ಇರಬಹುದು. ಜೀಪಿನಲ್ಲಿ ಪ್ರಯಾಣಿಸುತ್ತಲೇ ಮನಾಲಿ ಪಟ್ಟಣ ಮತ್ತದರ ಪರಿಸರವನ್ನು ಗಮನಿಸಿದೆವು. ಕಣಿವೆಯಲ್ಲಿನ್ನೂ ಸೂರ್ಯನ ಕಿರಣಗಳು ಬಿದ್ದಿರಲಿಲ್ಲ. ಯಶಪಾಲ ಲೇಟಾಗಿದೆಯೆಂದು ರೊಹ್ತಾಂಗ್‌ನ ಏರು ರಸ್ತೆಯಲ್ಲಿ ಜೀಪು ಓಡಿಸಿದ (2011 ರಲ್ಲಿ ಮನಾಲಿಯಿಂದ ಮುಂದಕ್ಕೆ ರೊಹ್ತಾಂಗ್‌ ಲಾ, ಲಾಹೌಲ್‌ ಮತ್ತು ಸ್ಪಿಟಿ ಕಣಿವೆಗಳ ಕಿಲಾಂಗ್‌ಗೆ ನಾವು ಪ್ರಯಾಣಿಸಲು ಯಾವುದೇ ಅನುಮತಿಯ ನಿಯಮಗಳಿರಲಿಲ್ಲ). ರಸ್ತೆಯುದ್ದಕ್ಕೂ ಉದ್ದಬಾಲದ ಕುರಿ ಹಿಂಡುಗಳ ಸಾಲು, ಹೇರ‍್ಪಿನ್‌ ತಿರುವುಗಳು, ಸಾಲುಗಟ್ಟಿದ ವಾಹನಗಳು, ಸಂಚಾರ ದಟ್ಟಣೆಯಾಗಿತ್ತು. ಕಾರಣ ಅಲ್ಲಲ್ಲಿ ನಿಲ್ಲಬೇಕಾಯಿತು. ಪುಷ್ಪಲತ, ಸಿಂಚನ, ಚಿನ್ಮಯಿ ಜೀಪಿನಿಂದಿಳಿದು ಮುಂದೆ ನಡೆಯುತ್ತಾ ಬೇಕೆಂದಕಡೆ ನಿಲ್ಲುತ್ತಾ ಛಾಯಾಚಿತ್ರ ತೆಗೆದುಕೊಳ್ಳತೊಡಗಿದರು. 

ಸುಮಾರು 08.00 ಗಂಟೆಯ ವೇಳೆಗೆ ಮಾರ‍್ಹಿ ಎಂಬ ಪ್ರದೇಶ ತಲುಪಿದೆವು. ಸಂಚಾರ ದಟ್ಟಣೆಯಾಗಿತ್ತು. ಅಲ್ಲೊಂದು ಚಿಕ್ಕ ಲೇಕ್‌ ಇರುವ ಒಂದು ಹುಲ್ಲುಗಾವಲಿನಂಥ ಪ್ರದೇಶ, ಹಿಮಾಚ್ಛಾದಿತ ಪರ್ವತ ಶ್ರೇಣಿಗೆ ಚಾಚಿಕೊಂಡಿದ್ದಿತು. ಹಿಮರಾಶಿಯ ಇಳಿಜಾರು ಪ್ರದೇಶಗಳಲ್ಲಿ ಪ್ರವಾಸಿಗರು ತಮ್ಮ ಕುಟುಂಬ ಸದಸ್ಯರುಗಳಡನೆ ಜಾರು ತಟ್ಟೆಗಳನ್ನಿಟ್ಟುಕೊಂಡು ಜಾರುತ್ತಿದ್ದರು. ಕೆಲವರು ಕುದುರೆ ಸವಾರಿ ಮಾಡುತ್ತಿದ್ದರು. ಸಮತಟ್ಟು ಸ್ಥಳದಲ್ಲೊಂದುಕಡೆ ರಸ್ತೆಯ ಇಕ್ಕೆಲಗಳಲ್ಲಿ ಚಹಾ ಹೊಟೆಲುಗಳು, ರಾತ್ರಿ ತಂಗಣೆ ಗುಡಾರಗಳು, ಪಾವತಿ ಶೌಚಾಲಯಗಳಿದ್ದವು. ಇಲ್ಲಿ ಚಹಾ ಮತ್ತು ಬೆಳಗಿನ ಉಪಹಾರಕ್ಕಾಗಿ ಚಾಲಕರು ವಾಹನ ನಿಲುಗಡೆ ಮಾಡಿದ್ದುದರಿಂದ ಸಂಚಾರ ಸ್ಥಗಿತವಾಗಿತ್ತು. ಅಡ್ಡಾದಿಡ್ಡಿಯಾಗಿ ವಾಹನಗಳನ್ನು, ಬೇರೆಯವರಿಗೆ ತೊಂದರೆಯಾಗುವಂತೆ ನಿಲ್ಲಿಸಿದ್ದರು. ಇಲ್ಲಿ ನಮಗೆ ಸುಮಾರು ಒಂದು ಗಂಟೆಯ ಸಮಯ ವ್ಯಯವಾಯಿತು. ಈ ಸಮಯದಲ್ಲಿ ಸಿಂಚನ, ಚಿನ್ಮಯಿ, ಪುಷ್ಪಲತ ಛಾಯಾಚಿತ್ರಗಳನ್ನು ತೆಗೆಯುತ್ತಾ ಸಮಯ ತಳ್ಳಿದರು. ನಾನು ಹುಲ್ಲುಗಾವಲಿನ ಮೇಲೆ ಅಲ್ಲಲ್ಲಿ ಓಡಾಡಿಕೊಂಡು ಬಂದೆ. ಬಹು ಸುಂದರವಾದ ಪ್ರದೇಶ, ದಕ್ಷಿಣದ ಕೆಳಗಡೆಗೆ ಮನಾಲಿ ಕಣಿವೆ ಚಾಚಿಕೊಂಡಿರುವುದು ಕಾಣಿಸುತ್ತಿತ್ತು.

ಮಂದಗತಿಯಲ್ಲಿ ವಾಹನಗಳು ಚಲಿಸುತ್ತಿದ್ದ ಹಾಗೆ ಯಶಪಾಲ ಜೀಪನ್ನು ಹೊಟೆಲುಗಳಿಂದಾಚೆಗಿನ ಏರು ರಸ್ತೆಗೆ ಓಡಿಸಿದ… ಸಮಯ 09.30 ಗಂಟೆಯಾಗುತ್ತಲಿತ್ತು. ಈ ವೇಳೆಗಾಗಲೇ ರೊಹ್ತಾಂಗ್‌ ಪಾಸ್‌ ಕಡೆಯಿಂದ ಪ್ರವಾಸಿ ವಾಹನಗಳು ಹಿಂದಿರುಗುತ್ತಿದ್ದವು. ರಸ್ತೆ ಅಲ್ಲಲ್ಲಿ ತುಂಬಾ ಹಾಳಾಗಿದ್ದಿತು. ಹಿಮ ಕರಿಗಿದ ನೀರು ರಸ್ತೆಯಲ್ಲಿಯೇ ಹರಿಯುತ್ತಿತ್ತು. ಕೊಚ್ಚೆಯಾದ ರಸ್ತೆ, ಭೂಕುಸಿತದ ನಿದರ್ಶನಗಳು. ಮತ್ತೊಮ್ಮೆ ಸಂಚಾರ ದಟ್ಟಣೆ. ಕಾರಣ ಭೂಕುಸಿತದಿಂದಾಗಿ ರಸ್ತೆಗೆ ಅಡ್ಡಬಿದ್ದಿರುವ ಬಂಡೆಗಲ್ಲು. Border Roads Organization(BRO) ಸಂಸ್ಥೆ ಕೆಲಸಗಾರರು ಅರ್ತ್‌ಮೂವರ್‌ ಬಳಸಿ ಬಂಡೆಗಲ್ಲನ್ನು ಪಕ್ಕಕ್ಕೆ ಸರಿಸುವ ವೇಳೆಗೆ 11.00 ಗಂಟೆಯಾಗಿತ್ತು. ಎರಡೂಕಡೆಯ ವಾನಗಳನ್ನು ನಿಯಂತ್ರಿಸಿ ಸಂಚಾರಕ್ಕೆ ಬಿಡುತ್ತಿದ್ದರು. ನಮ್ಮ ಬೆಳಗಿನ ಉಪಹಾರವನ್ನು ವಾಹನದಲ್ಲಿಯೇ ಬಿಸ್ಕತ್‌, ಚಾಕೊಲೆಟ್‌, ಒಬ್ಬಟ್ಟುಗಳನ್ನು ತಿನ್ನುತ್ತಲೇ ಮುಗಿಸಿದೆವು. 

ರೊಹ್ತಾಂಗ್‌ ಪಾಸ್‌:
ಪಾಸ್‌ ತಲುಪಿದಾಗ ಮಧ್ಯಾಹ್ನ 12.00 ಗಂಟೆ. ಇದು ಮನಾಲಿ ಕಣಿವೆಯ ಉತ್ತರದ ಕಡೆಗಿರುವ ಪರ್ವತ ಸಾಲಿಗೆ ಸೇರುತ್ತದೆ. ಸಮುದ್ರ ಮಟ್ಟದಿಂದ ಸುಮಾರು 13500 ಅಡಿ ಎತ್ತರದ ಪ್ರದೇಶ… ಇದೇ ಸಾಲಿನ ಪಶ್ಚಿಮದ ಕಡೆಗಿರುವ ರೊಲಾಂಗ್‌ ಕಣಿವೆಯಲ್ಲಿ ಬಿಯಾಸ್‌ ನದಿ ಉಗಮಸ್ಥಾನವಿದೆ. ರಸ್ತೆಯನ್ನು ಹಿಮದ ಬಂಡೆ ಕೊರೆದು ಹೊರ ತೆಗೆದಂತಿತ್ತು. ಇಕ್ಕೆಲಗಳಲ್ಲಿ ಹಿಮದ ಗೋಡೆ ಏಳೆಂಟಡಿ ಎತ್ತರವಿತ್ತು. ಎರಡೂ ಪಕ್ಕಗಳಲ್ಲಿ ಸುಮಾರು ಒಂದೂವರೆ ಕಿ.ಮೀಟರು ಉದ್ದ ವಾಹನಗಳ ನಿಲುಗಡೆ ಸಾಲು. ಯಶಪಾಲ ಪಾಸ್‌ನ ಉತ್ತರದ ಕಡೆಯ ರಸ್ತೆ ಹತ್ತಿರಕ್ಕೆ ಸರಿಯಾದ ಜಾಗ ನೋಡಿ ಜೀಪು ನಿಲ್ಲಿಸಿದ. ಎಲ್ಲರೂ ಇಳಿದರು. ಅತೀವ ಚಳಿಯಾಗುತ್ತಿತ್ತು. ಪರ್ವತದ ಹರವಿನಷ್ಟಕ್ಕೂ ಹಿಮದ ರಾಶಿ ಬಿಳಿ ಹಾಸುಬಂಡೆಯಂತೆ ಹರಡಿಕೊಂಡಿತ್ತು. ಸಂತೆಯಂತೆ ಸೇರಿದ್ದ ಪ್ರವಾಸಿಗರು ಹಿಮದ ಮೇಲೆ ಆಟವಾಡುತ್ತಿದ್ದರು. ವಸಂತ, ಪುಷ್ಪಲತ ಶೌಚಾಲಯ ಹುಡುಕಿಕೊಂಡು ಹೋದರು. ಸಿಂಚನ, ಚಿನ್ಮಯಿ ಹಿಮದ ರಾಶಿಯ ಮೇಲೆ ಆಟವಾಡುತ್ತಾ ಛಾಯಾಚಿತ್ರಗಳನ್ನು ತೆಗೆದುಕೊಂಡರು. ಯಶಪಾಲ ಹಿಮದೊಡನೆ ಆಟವಾಡುತ್ತಿದ್ದ. ನಾನೂ ಕೂಡ ಹಿಮಗೋಡೆಯನ್ನು ಕೆರೆದು ಉಂಡೆ ಮಾಡಿ ಎಸೆದೆ. ನನಗಾಗಲೇ ಹಿಮವನ್ನು ನೋಡಿನೋಡಿ ಕಣ್ಣು ಕೋರೈಸುತ್ತಿದ್ದವು. ಶೌಚಾಲಯ ಹುಡುಕಿಕೊಂಡು ಹೋದವರು ಅದು ಸಿಗಲಿಲ್ಲವೆಂದು ಹಿಂದಿರುಗಿದರು. ಒಂದರ್ಧ ಗಂಟೆ ಕಳೆದು ಅಲ್ಲಿಂದ ಜಾಗ ಖಾಲಿ ಮಾಡಿದೆವು. ಬಿಆರ್‌ಓ ನವರು ಸಂಚಾರಕ್ಕಾಗಿ ರೊಹ್ತಾಂಗ್‌ ಪಾಸ್‌ ತೆರೆದು ಕೇವಲ ನಾಲ್ಕು ದಿನಗಳಾಗಿದ್ದವು. 
ಟಿಪ್ಪಣಿ: ರಸ್ತೆ ತೆರವಿಗಾಗಿ ಬಿಆರ್‌ಓ ನವರು ಮೇ ತಿಂಗಳಿನಿಂದಲೇ ಕೆಲಸ ಪ್ರಾರಂಭಿಸಿರುತ್ತಾರೆ. ಅದು ನವಂಬರ್‌ ತಿಂಗಳಿನಿಂದ ಹಿಮದಲ್ಲಿ ಮುಚ್ಚಿ ಹೋಗಿರುತ್ತದೆ. 

ಮೂರನೇ ಹಂತ – ಲಡಖ್‌ – ಲೆಹ್‌ನತ್ತ ಪಯಣ:
ರೊಹ್ತಾಂಗ್‌ ಪಾಸ್‌ನ ಉತ್ತರದ ಕಡೆಗೆ ಇಳಿಕೆ ರಸ್ತೆ, ಚಂದ್ರಾ ನದಿ ಕಣಿವೆಗೆ ಕರೆದೊಯ್ಯುತ್ತದೆ. ರಸ್ತೆಯನ್ನಿಲ್ಲಿ ಇದೊಂದು ರಾಷ್ಟ್ರೀಯ ಹೆದ್ದಾರಿ ಎಂದು ಹೇಳಲಾಗುತ್ತಿರಲಿಲ್ಲ. ನಮ್ಮ ಹಳ್ಳಿ ಕಡೆಯ ಸಾಮಾನ್ಯ ರಸ್ತೆಯಂತಿತ್ತು. ಹಿಮ ಕರಗಿ ಹರಿಯುವ ನೀರಿನಿಂದಾಗಿ ರಜ್ಜೆಯಾಗಿ ಅಲ್ಲಲ್ಲಿ ಕೆಸರಾಗಿದ್ದಿತು. ನಿಧಾನವಾಗಿ ಚಲಿಸಬೇಕಿದ್ದಿತು. ಹಿಮ, ರಸ್ತೆಯ ಇಕ್ಕೆಲಗಳಲ್ಲಿ ಪರ್ವತದ ಮೇಲ್ಸ್ತರದ ವಿಸ್ತಾರಕ್ಕೂ ಹರಡಿಕೊಂಡಿದ್ದಿತು. ಸಂಚಾರ ದಟ್ಟಣೆ ಇರಲಿಲ್ಲ. ಲೆಹ್‌ ಕಡೆಗೆ ಪ್ರಯಾಣ ಮಾಡುವವರು ವಿರಳವಾಗಿದ್ದರು. ಆಗಾಗ್ಗೆ ಒಂದೊಂದು ಮಿನಿ ಸಾಮಾನು ಲಾರಿ, ಜೀಪು, ಕಾರುಗಳು ಎದುರಾಗುತ್ತಿದ್ದವು. ಚಾಲನೆ ನಿಧಾನವಾಗಿದ್ದರೂ ಸುಗಮವಾಗಿತ್ತು. ಮಧ್ಯಾಹ್ನ 01.00 ಗಂಟೆ ವೇಳೆಗೆ ಚಂದ್ರಾ ನದೀ ತಟದ ಕೋಕ್ಸರ್‌ ಎಂಬ ಸಣ್ಣ ಹಳ್ಳಿ ತಲುಪಿದೆವು. ದಾರಿ ಪಕ್ಕದಲ್ಲಿ ಢಾಬ ತರಹದ ಚಿಕ್ಕ ಹೊಟೆಲೊಂದಿತ್ತು. ಅದರ ಹಿಂಭಾಗದಲ್ಲಿ ಪರ್ವತದ ಮೇಲಿನಿಂದ ಝರಿಯೊಂದು ದಮುಕುತ್ತಾ ಹರಿದು ಕೆಳಗೆ ಚಂದ್ರಾ ನದಿಯನ್ನು ಸೇರುತ್ತಿತ್ತು. ಟಿಬೆಟಿಯನ್‌ ಮುಖಗಳು… ಆಹಾರ, ಉಡುಪು, ಸಂಸ್ಕೃತಿ… ಎಲ್ಲಾ. ಚಳಿಗಾಲದ ನವಂಬರಿನಿಂದ ಹಿಡಿದು ಏಪ್ರಿಲ್‌ ತಿಂಗಳಿನವರೆಗೆ ಹಿಮ ದಟ್ಟವಾಗಿ ಬೀಳುವುದರಿಂದ ಕೋಕ್ಸರ್‌ ಹೊರಜಗತ್ತಿನ ಸಂಪರ್ಕ ಕಡಿದುಕೊಳ್ಳುತ್ತದೆ. ಇಲ್ಲಿನ ಜನರ ಬದುಕು ಬಹಳ ದುಸ್ತರವಾದುದು. ಹೊಟೆಲಿನಲ್ಲಿ ಊಟಕ್ಕೆ ಬೇಡಿಕೆಯಿಟ್ಟೆವು… ಹಬೆಯಕ್ಕಿ ಅನ್ನ ಮತ್ತು ದಾಲ್‌… ಆಮೇಲೆ ಕುಡಿಯಲು ಬಿಸಿ ಚಹ. ಹುಡುಗಿಯರು ಛಾಯಾಚಿತ್ರ ತೆಗೆದುಕೊಳ್ಳುತ್ತಿದ್ದರು. ಹತ್ತು ನಿಮಿಷದನಂತರ ಹಬೆಯಾಡುವ ಅನ್ನ-ದಾಲ್‌ ಸರಬರಾಜಾಯಿತು. ತಿಂದು ಚಹ ಕುಡಿದು ಜೀಪು ಹತ್ತಲು ಹೊರೆಟೆವು. ಒಂದಷ್ಟು ಶಾಲಾ ಹುಡುಗರು ನಮ್ಮನ್ನು ಮುತ್ತಿಗೆ ಹಾಕಿದರು. “ಪ್ಲಾಸ್ಟಿಕ್ನಿಂದ ಹಿಮಾಲಯ ಮುಕ್ತಿ” ಅಭಿಯಾನ ಕೈಗೊಂಡಿದ್ದರು. ನಮ್ಮಲ್ಲಿ ಪ್ಲಾಸ್ಟಿಕ್‌ ಕಸ ಇದ್ದರೆ ಕೊಡಿ ಎಂದು ಕೇಳಿದ ಅವರಿಗೆ ಸಿಂಚನ, ಚಿನ್ಮಯಿ ಜೀಪಿನಲ್ಲಿಯೇ ಇಟ್ಟುಕೊಂಡಿದ್ದ ಸಣ್ಣಪುಟ್ಟ ಪ್ಲಾಸ್ಟಿಕ್‌ ಕಸವನ್ನೆಲ್ಲಾ ತೆಗೆದು ಅವರಿಗೆ ಕೊಟ್ಟರು. ಅವರೊಂದು ಅಭಿಯಾನದ ಗುರುತಿರುವ ಚೀಲ ನೀಡಿದರು. ಅವರಿಗೆ ವಿಧಾಯ ಹೇಳಿದ ನಾವು ಅಲ್ಲಿಂದ ಚಂದ್ರಾ ನದಿ ದಂಡೆಮೇಲೆ ಪಶ್ಚಿಮಾಭಿಮುಖವಾಗಿ ಪಯಣ ಮುಂದುವರಿಸಿದೆವು. 
ಮಧ್ಯಾಹ್ನ 02.30ರ ವೇಳೆಗೆ ತಂಡಿ ಎಂಬ ಚಿಕ್ಕ ಹಳ್ಳಿಯಲ್ಲಿದ್ದೆವು. ಅಲ್ಲೊಂದು ಪೆಟ್ರೋಲ್‌ ಸ್ಟೇಷನ್‌ ಇದ್ದಿತು. ಜೀಪು ನಿಲ್ಲಿಸಿ ಟ್ಯಾಂಕು ಪೂರ್ಣ ಇಂಧನ ತುಂಬಿಸಿಕೊಂಡೆವು. 
ಟಿಪ್ಪಣಿ: ಇಲ್ಲಿ ಉತ್ತರದ ಕಡೆಯಿಂದ ಹರಿದುಬರುವ ಭಾಗಾ ನದಿಯು ಚಂದ್ರಾ ನದಿಯೊಡನೆ ಸಂಗಮವಾಗುತ್ತದೆ. ಇಲ್ಲಿಂದ ಮುಂದೆ ಅದು ಚಂದ್ರ-ಭಾಗಾ ಎಂದು ಹೆಸರು ಪಡೆಯುತ್ತದೆ. ಇದೇ ನದಿಯನ್ನು ಚಿನಾಬ್‌ ಎಂದೂ ಕರೆಯುತ್ತಾರೆ…ಪಶ್ಚಿಮಾಭಿಮುಖವಾಗಿ ಹರಿದು ಪಾಕಿಸ್ತಾನದಲ್ಲಿ ಝೇಲಂ ನದಿಯನ್ನು ಸೇರಿಕೊಳ್ಳುತ್ತದೆ. ಪೆಟ್ರೋಲ್‌ ಸ್ಟೇಷನ್‌ನಲ್ಲಿ ಪೆಟ್ರೋಲ್‌/diesel ತುಂಬಿಸಿಕೊಳ್ಳಬಹುದು. ಏಕೆಂದರೆ ಪುನಃ ಪೆಟ್ರೋಲ್‌ ಸ್ಟೇಷನ್‌ ಸಿಗುವುದು ಸುಮಾರು 320 ಕಿ.ಮೀ.ಗಳ ನಂತರ… ಲಡಖ್‌ನಲ್ಲಿ. 

ತಂಡಿಯಿಂದ ಒಂಬತ್ತು ಕಿ.ಮೀ. ಮುಂದೆ ಬಲಕ್ಕೆ ತಿರುಗಿದರೆ ಕಿಲಾಂಗ್‌ ಎಂಬ ಪಟ್ಟಣ ಸಿಗುತ್ತದೆ. ಇದು ಭಾಗಾ ನದೀ ಕೊಳ್ಳದ ಬಲದಂಡೆಗೆ ಇದೆ. ಹಿಮಾಚಲ ಪ್ರದೇಶದ ಚಂದ್ರ-ಭಾಗಾ ನದಿ, ಲಾಹೌಲ್‌, ಸ್ಪಿಟಿ ಕಣಿವೆ ಪ್ರದೇಶಗಳ ಜಿಲ್ಲಾಢಳಿತ ಕೇಂದ್ರ. ಈ ಪಟ್ಟಣವೂ ಚಳಿಗಾಲದಲ್ಲಿ ಹಿಮದಿಂದ ಮುಚ್ಚಿ ಹೋಗಿ ಆರು ತಿಂಗಳು ಹೊರಜಗತ್ತಿನ ಸಂಪರ್ಕ ಕಡಿದುಕೊಳ್ಳುತ್ತದೆ…. ಕಿಲಾಂಗ್‌ನಲ್ಲಿ ಅರ್ಧ ಗಂಟೆ ಜೀಪು ನಿಲ್ಲಿಸಿ ಪಕ್ಕದಲ್ಲಿದ್ದ ಹೊಟೆಲ್‌ನಲ್ಲಿ ಅನುಮತಿ ಪಡೆದು ಎಲ್ಲರೂ ಶೌಚಾಲಯಕ್ಕೆ ಹೋಗಿಬಂದರು. ಅವಸರಕ್ಕಿರಲೆಂದು ಬಾಟಲುಗಳಿಗೆ ಕುಡಿಯುವ ನೀರು ತುಂಬಿಸಿಕೊಡೆವು. ಅಲ್ಲಿಂದ ಭಾಗಾ ನದಿ ದಂಡೆಯ ಪರ್ವತದ ಕಣಿವೆ ರಸ್ತೆಯಲ್ಲಿ ಮುಂದಕ್ಕೆ ಹೊರಟೆವು. ಸಮಯ ಸಾಯಂಕಾಲ15.30 (03.30) ಗಂಟೆಯಾಗುತ್ತಿತ್ತು. 
ಟಿಪ್ಪಣಿ: 2020ರಲ್ಲಿ, ರೊಹ್ತಾಂಗ್‌ ಕಣಿವೆಯಲ್ಲಿ ಪೂರ್ಣಗೊಂಡ “ಅಟಲ್‌ ಟನಲ್‌”… ಬಿಆರ್‌ಒ ನಿರ್ಮಿಸಿರುವ ಸುರಂಗಮಾರ್ಗ ಇದೀಗ ತೆರೆದುಕೊಂಡಿದೆ. ಮನಾಲಿಯಿಂದ ರೊಹ್ತಾಂಗ್‌ ಅಟಲ್‌ ಟನಲ್‌ನ ದಕ್ಷಿಣ ಪ್ರವೇಶ ಧ್ವಾರ 24.4 ಕಿ.ಮೀ ದೂರದಲ್ಲಿದೆ. ಉತ್ತರದ ಧ್ವಾರ ಲಾಹೌಲ್‌ ಕಣಿವೆಯ ಚಂದ್ರಾ ನದಿ ದಂಡೆಯಲ್ಲಿ ಟೆಲಿಂಗ್‌, ಸಿಸ್ಸು ಎಂಬ ಹಳ್ಳಿಗಳ ಬಳಿ ತೆರೆದುಕೊಳ್ಳುತ್ತದೆ. ಸುಮಾರು 9.2 ಕಿ.ಮೀ. ಉದ್ದವಿರುವ ಈ ಸುರಂಗಮಾರ್ಗ ಪ್ರಪಂಚದಲ್ಲಿಯೇ ಸಮುದ್ರ ಮಟ್ಟದಿಂದ 10000ಕ್ಕೂ ಹೆಚ್ಚು ಅಡಿಗಳ ಅತಿ ಎತ್ತರದ್ದೆಂದು ಹೇಳಲಾಗುತ್ತಿದೆ. ಕಿಲಾಂಗ್ ತಲುಪಲು 46 ಕಿ.ಮೀ. ದೂರ ಮತ್ತು ನಾಲ್ಕೈದು ಗಂಟೆಗಳ ವೇಳೆಯನ್ನು ಈ ಸುರಂಗ ಮಾರ್ಗ ಕಡಿಮೆ ಮಾಡುತ್ತದೆ. ಅಲ್ಲದೆ ಕಿಲಾಂಗ್‌ನಿಂದ ಆಚೆಗೆ ದಾರ್ಚಾವರೆಗಿನ ಸರ್ವಕಾಲಿಕ (ವರ್ಷದ ಎಲ್ಲಾ ಕಾಲಗಳ) ಉಪಯೋಗದ ಮಾರ್ಗವಿದು.

ಬಾರಲಾಚ ಲಾ:
ಸಾಯಂಕಾಲ ಏಳು ಗಂಟೆಯೊಳಗೆ ಸರ್ಚು(ಸರಪ್‌ ಚು – ನದಿ ಹೆಸರು) ತಲುಪುವುದು ಯಶಪಾಲನ ಉದ್ದೇಶ ಮತ್ತು ಸರ್ಚುವಿನ ಟೆಂಟ್‌ ಕ್ಯಾಂಪ್‌ ಗಳಲ್ಲಿ ರಾತ್ರಿ ತಂಗಣೆ ಮಾಡುವುದಾಗಿತ್ತು. ಈ ಮಧ್ಯೆ ನಾವು ಬಾರಲಾಚ ಲಾ ದಾಟಬೆಕಾಗಿದ್ದಿತು(ಸಮುದ್ರ ಮಟ್ಟದಿಂದ 16500 ಅಡಿ ಎತ್ತರ). ಈ ಪಾಸ್‌ ಸಹ ಜೂನ್‌ ತಿಂಗಳ ಮೊದಲ ವಾರದೊಳಗೆ ಬಿಆರ್‌ಒ ನವರ ಕೃಪಾಕಾರ್ಯದಿಂದ ತೆರವಾಗುತ್ತದೆ. ಸುಮಾರು ಸಂಜೆ ಐದೂವರೆ ಗಂಟೆಯ ವೇಳೆಗೆ ಬಾರಲಾಚ ತಲುಪಿದ್ದೆವು. ಸುತ್ತಲೂ ಎಲ್ಲಿ ನೋಡಿದರಲ್ಲಿ ಹಿಮಾವೃತವಾದ ಪ್ರದೇಶ.ಯಶಪಾಲ ಒಂದು ಕಡೆ ಜೀಪು ನಿಲ್ಲಿಸಿದ. ಎಲ್ಲರೂ ಹತ್ತು ನಿಮಿಷ ಹಿಮದ ಮೇಲೆ ಓಡಾಡುತ್ತಾ ಛಾಯಾಚಿತ್ರ ತೆಗೆದುಕೊಂಡರು. ಚಳಿ ವಿಪರೀತವಾಗಿತ್ತು. 

ಟಿಪ್ಪಣಿ: ಬಾರಲಾಚ ಪರ್ವತದ ದಕ್ಷಿಣ ಭಾಗಕ್ಕಿರುವ ಚಂದ್ರಾ ಸರೋವರದಿಂದ ಚಂದ್ರಾ ನದಿ ಮತ್ತು ಪಶ್ಚಿಮದ ಕಡೆಗಿರುವ ಸೂರಜ್‌ ಸರೋವರದಿಂದ ಭಾಗಾ ನದಿ ಹುಟ್ಟುತ್ತವೆ. ಇವೆರಡೂ ತಂಡಿ ಬಳಿ ಸಂಗಮವಾಗಿ ಚಂದ್ರಭಾಗ ಅಥವಾ ಚಿನಾಬ್‌ ಎಂಬ ಹೆಸರಿನೊಂದಿಗೆ ನದಿ ಪಶ್ಚಿಮಕ್ಕೆ ಹರಿಯತ್ತದೆ. 

ಬಾರಲಾಚದಲ್ಲಿ ನಾವು ಆಟವಾಡುತ್ತಿದ್ದ ಪ್ರದೇಶದಿಂದ ಹೊರಡುವ ವೇಳೆಗೆ ಸರಿಯಾಗಿ ನಮ್ಮೆದುರಿಗೆ ಬರುತ್ತಿದ್ದ ಮಿನಿ ಲಾರಿಯ ಚಾಲಕ ನಮ್ಮನ್ನು ಕುರಿತು ಹಿಂದಿಯಲ್ಲೇನೋ ಬಡಬಡಿಸಿದ. ಯಶಪಾಲನಿಗೆ ಅರ್ಥವಾಗಿತ್ತು, ಲಘುಬಗನೆ ಹಿಮಗೋಡೆಗಳ ಮಧ್ಯದ ಹಾವಿನಂಥ ಏರಿಳಿತದ ರಸ್ತೆಯಲ್ಲಿ ಜೀಪು ಓಡಿಸಿದ. ಹೆಪ್ಪುಗಟ್ಟಿದ ಹಿಮಗಡ್ಡೆಗಳಿಂದ ಕೂಡಿದ ಸರೋವರವೊಂದು ಗೋಚರಿಸಿತು(ಹೆಸರು, ಸೂರಜ್‌… ಭಾಗಾ ನದಿ ಉಗಮಸ್ಥಾನ). ಸಿಂಚನ ಚಿತ್ರ ತೆಗೆದುಕೊಂಡಳು. 

ಟಿಪ್ಪಣಿ: ಇದೇ ಪರ್ವತದ ಉತ್ತರದ ಕಡೆಯಿಂದ ಸರಪ್‌ ಚು ನದಿ ಹುಟ್ಟುತ್ತದೆ… ಬಾರಲಾಚ ಲಾ ರಾ.ಹೆ.21ರಲ್ಲಿ ಒಂದು ಅಪಾಯಕಾರಿ ಪಾಸ್‌. 

ಪಾಗಲ್‌ ನಾಲಾ:
ಲಘು ಇಳಿದಾದ ಡೊಂಕು ರಸ್ತೆ. ಇದ್ದಕ್ಕಿದ್ದ ಹಾಗೆ ಯಶಪಾಲ ಜೀಪು ನಿಲ್ಲಿಸಿದ. ನಮ್ಮ ಮುಂದೆ ರಸ್ತೆ ಮೇಲೆ ಹರಿಯುತ್ತಿರುವ ಹಿಮನೀರಿನಲ್ಲಿ ಹರ್ಯಾಣ ರಾಜ್ಯದ ರಿಜಿಸ್ಟ್ರೇಷನ್‌ ಹೊಂದಿದ್ದ ಇನ್ನೋವ ಕಾರೊಂದು ಕುಳಿಗಳಲ್ಲಿ ಸಿಕ್ಕಿಹಾಕಿಕೊಂಡಿತ್ತು. ಮಿನಿ ಲಾರಿಯ ಚಾಲಕ ಹಿಂದಿಯಲ್ಲಿ ಬಡಬಡಿಸಿದ್ದ ಶಬ್ದಗಳು ನನಗೀಗ ಅರ್ಥವಾಗಿದ್ದವು. ಪುಷ್ಪಲತ “ಪಾಗಲ್‌ ನಾಲಾ” ಎಂದುಸಿರಿದಳು. 
ಟಿಪ್ಪಣಿ: ಹಿಮನೀರಿನಲ್ಲಿ ಉಂಟಾದ ನೀರ್ಗಲ್ಲ ಕುಳಿಗಳು, ಹಿಮದ ಮೇಲೆ ಓಡಾಡುವ ವಾಹನಗಳಿಂದಾಗಿ, ಹಿಮ ಕರಗಿ ಹರಿಯುವ ನೀರಿನಿಂದ ಕೊರಕಲಾದ ರಸ್ತೆಯಲ್ಲಿ ಹಿಮ ಗಟ್ಟಿಯಾಗಿರುತ್ತದೆ. ರಸ್ತೆ ಪಕ್ಕದ ಹಿಮಗೋಡೆಗಳಡಿಯಿಂದ ನೀರು ಮೇಲೆ ರಭಸವಾಗಿ ಹರಿಯುತ್ತಿರುತ್ತದೆ, ತಿಳಿಯಾದ ನೀರಿನಡಿಯಲ್ಲಿ ಗಟ್ಟಿಯಾದ ನೀರ್ಗಲ್ಲುಗಳೊಡನೆ ಗುಂಡಿಗಳೂ ಇರುತ್ತವೆ. ಸಾಮನ್ಯವಾಗಿ ಗೋಚರಿಸುವುದಿಲ್ಲ. ರಸ್ತೆ ಸಮವಾಗಿಯೇ ಇರುತ್ತದೆಂದು ತಿಳಿದು ವಾಹನಚಾಲಕರು ಮುನ್ನುಗ್ಗುವುದರಿಂದ ದುಡುಮ್ಮನೆ ಚಕ್ರಗಳು ಗುಂಡಿಗಳಲ್ಲಿ ಬೀಳುತ್ತವೆ. ಮುಂದಕ್ಕೂ ಹಿಂದಕ್ಕೂ ಹೋಗದಂತಾಗುತ್ತವೆ. 

ಚಾಲಕ ಎಕ್ಸಲರೇಟರ್‌ ಒತ್ತುತ್ತಿದ್ದ ಹಿಂದಿನ ಚಕ್ರಗಳು ನೀರಿನಲ್ಲಿ ಬರ‍್ರನೆ ತಿರುಗುತ್ತಿದ್ದವು, ಅದರ ಪ್ರಯಾಣಿಕರು ಕಾರನ್ನು ಹಿಂದಿನಿಂದ ತಳ್ಳುತ್ತಿದ್ದರು. ನಾವುಗಳೂ ಕೂಡ ಜೀಪಿನಿಂದಿಳಿದು ತಳ್ಳಿದೆವು. ಕಾರು ಜಪ್ಪೆನ್ನಲಿಲ್ಲ, ಪ್ರಯೋಜನವಾಗಲಿಲ್ಲ. ಅವರು, ಕುರುಕ್ಷೇತ್ರದವರೆಂದು ಪರಿಚಯಿಸಿಕೊಂಡರು. ಪುಷ್ಪಲತ ಕಾರಿನ ನಿಜವಾದ ಸಮಸ್ಯೆಯನ್ನು ಹಿಂದಿನಿಂದ ಗಮನಿಸಿದಳು. ಕಾರಿನ ಹಿಂದಿನ ಚಕ್ರಗಳ ಅಚ್ಚುಗಳ ಮಧ್ಯದ ಗೇರ್‌-ಹಬ್‌ ನೀರಿನಡಿಯಿದ್ದ ದಪ್ಪನೆಯ ನೀರ್ಗಲ್ಲ ಮೇಲಾತು ಕುಳಿತಿದ್ದಿತು. ಚಕ್ರಗಳಿಗೆ ನೆಲದ ಹಿಡಿತ ಸಿಗುತ್ತಿರಲಿಲ್ಲ. ಹಾಗಾಗಿ ಚಕ್ರಗಳು ಬರ‍್ರನೆ ತಿರುಗುತ್ತಿದ್ದವು. ನಾನು ಹರಿವ ನೀರನ್ನು ದಾಟಿ ಆಚೆ ಕಡೆಗೆ ನಡೆದೆ, ಈ ಸಮಯಕ್ಕೆ ಸರಿಯಾಗಿ ಎದುರಿನಲ್ಲೊಂದು ದೆಹಲಿ ರಿಜಿಸ್ಟ್ರೇಷನ್‌ ಹೊಂದಿದ ಇನ್ನೋವ ಕಾರು ಬರುತ್ತಿತ್ತು. ಕೈ ಅಡ್ಡ ಹಿಡಿದು ನಿಲ್ಲಿಸಿದೆ. ಕಾರನ್ನು ಪಕ್ಕಕ್ಕೆ ನಿಲ್ಲಿಸಿದ ಚಾಲಕ ಇಳಿದು ಬಂದ. ಆ ಕಾರಿನಲ್ಲಿ ಚಾಲಕ ಸೇರಿ ನಾಲ್ಕು ಜನರಿದ್ದರು… ಇಬ್ಬರು ಮಹಿಳೆಯರು. ನಾನು ಅವರಿಗೆ ಇರುವ ಸಮಸ್ಯೆಯನ್ನ್ನು ಇಂಗ್ಲೀಶಿನಲ್ಲಿ ವಿವರಿಸಿದೆ. ಆ ಚಾಲಕನೂ ಬಂದು ಕಾರನ್ನು ತಳ್ಳುವ ಕಾರ್ಯಕ್ಕೆ ಕೈ ಹಾಕಿದ. ಈಗ ಸಿಕ್ಕಿಹಾಕಿಕೊಂಡಿರುವ ಕಾರನ್ನು ಮುಂದಕ್ಕೆ ಬದಲಾಗಿ ಹಿಂದಕ್ಕೆ ಎಳೆಯುವುದೆಂದು ತೀರ್ಮಾನಿಸಲಾಯಿತು. ಯಶಪಾಲನ ಸಿಂತೆಟಿಕ್‌ ಹಗ್ಗ ಮತ್ತು ಶೊವೆಲ್‌ಗಳು ಈಗ ಉಪಯೋಗಕ್ಕೆ ಬಂದವು. ಶೊವೆಲ್‌ನಿಂದ ನೀರ್ಗಡ್ಡೆಗಳನ್ನು ಕುಕ್ಕಿ ಸ್ವಲ್ಪ ಕೊರೆದು ಇನ್ನೋವ ಕಾರನ್ನು ನಮ್ಮ ಜೀಪಿಗೆ ಕಟ್ಟಿ ಎರಡೂ ವಾಹನಗಳನ್ನು ಹಿಂಚಾಲಿತ ಗೇರ್‌ಗೆ ಹಾಕಿಕೊಂಡು ಎಳೆದರೂ ಕಾರು ಸ್ಥಳದಿಂದ ಮಿಸುಕಲಿಲ್ಲ. ನಮ್ಮ ಜೀಪು ಎಳೆಯಲಾರದೆ ನಿಂತುಹೋಗುತ್ತಿತ್ತು. ಜೆರ್ಕ್‌ ಕೊಟ್ಟು ಎಳೆಯುವುದೆಂದು ತೀರ್ಮಾನಿಸಿದ ಯಶಪಾಲ ಹಾಗೆ ಮಾಡಿದ. ಇನ್ನೋವದ ಹಿಂದಿನ ಚಕ್ರಗಳು ಜಂಪ್‌ ಹೊಡೆದು ನೀರ್ಗಲ್ಲಿನ ಮೇಲಕ್ಕೆ ಹಾರಿ ಕುಳಿತವು. ಮತ್ತೊಮ್ಮೆ ಹಾಗೆ ಮಾಡಲಾಗಿ ಮುಂದಿನ ಚಕ್ರಗಳೂ ಹಿಂದಕ್ಕೆ ಬಂದು ಕುಳಿತವು. ಹಗ್ಗವನ್ನು ಬಿಚ್ಚಿ ಮುಂದಕ್ಕೆ ಹೇಗೆ ಪಕ್ಕದ ನೀರ್ಗಲ್ಲ ದಿಂಡುಗಳ ಮೇಲೆ ಹೋಗಬಹುದೆಂದು ಗುರುತಿಸಿ ಕೇವಲ ಚಾಲಕ ಮಾತ್ರ ಹೋಗಲು ತೀರ್ಮಾನಿಸಲಾಯ್ತು. ನಾಜೂಕಾಗಿ ಹಾಗೆ ಮಾಡಿ ವಿಚಿತ್ರ ಹೆಸರಿನ ಪಾಗಲ್‌ ನಾಲಾದಿಂದಾಚೆಗೆ ಎರಡೂ ವಾಹನಗಳನ್ನು ದಾಟಿಸಿದ್ದಾಯಿತು. ಇನ್ನು ಎದುರಿಗಿನ ದೆಹಲಿ ವಾಹನ ದಾಟಿಸಲು ಚಾಲಕನಿಗೆ ಹೇಗೆ ಹೋಗಬೇಕೆಂದು ಸೂಚನೆ ನೀಡಿ ದಾಟುವಂತೆ ತಿಳಿಸಲಾಯ್ತು. ಸ್ವಲ್ಪದರಲ್ಲೇ ಯಾಮಾರಿದ ಚಾಲಕ ನೀರ್ಗಲ್ಲ ಗುಂಡಿಗಳಿಗೆ ವಾಹನವನ್ನು ದುಮ್ಮಿಕ್ಕಿಸಿದ. ಈಗ ಸುಮಾರು ಮುಕ್ಕಾಲು ಅಡಿ ಎತ್ತರದ ಅಡ್ಡಗೋಡೆಯಂತಿದ್ದ ಕುಳಿಯಲ್ಲಿ ಕಾರು ಕುಳಿತುಕೊಂಡಿದ್ದಿತು. ಮುಂದಕ್ಕೆ ಅದನ್ನು ಹತ್ತಿಸಲು ಸಾಧ್ಯವಿರಲಿಲ್ಲ. ಸಂಜೆ ಏಳು ಗಂಟೆ ಕತ್ತಲಾಗುತ್ತಿತ್ತು, ಚಳಿಯೂ ಹೆಚ್ಚಾಗುತ್ತಿತ್ತು. ನಾನು ಆಗಾಗ ಜೀಪಿನೊಳಗೆ ತೂರಿ ಬಿಸಿಗಾಳಿ ಹಾಕಿಕೊಂಡು ಚಳಿಕಾಯಿಸಲು ಮೈಯೊಡ್ಡುತ್ತಿದ್ದೆ. ವಾತಾವರಣ ಮೈನಸ್‌ ಆರು ಡಿಗ್ರಿ ಇದೆಯೆಂದು ಕುರುಕ್ಷೇತ್ರದ ಮಂದಿಯೆಲ್ಲಾ ಗೊಣಗಾಡಲು ಪ್ರಾರಂಭಿಸಿದ್ದರು. ಯಶಪಾಲ ದೆಹಲಿಯವರನ್ನು ಹಾಗೇ ಚಳಿಯಲ್ಲಿ ಬಿಟ್ಟು ಹೋಗಲಾಗದೆಂದು ಹೇಳಿದ. ರಾತ್ರಿಯಾದಂತೆ ಚಳಿ ಹೆಚ್ಚಾಗುತ್ತದೆ, ಕಾರಿನಲ್ಲಿನ ಇಂಧನ, ಕೂಲಂಟ್‌ ಎಲ್ಲಾ ಕೊರೆಯುವ ಚಳಿಯಲ್ಲಿ ಹೆಪ್ಪುಗಟ್ಟುದೆಂದೂ ತಿಳಿಸಿದ. ಕುರುಕ್ಷೇತ್ರದ ಗುಂಪು ಆಶ್ಚರ್ಯಚಕಿತರಾದರು. ತೀರ್ಮಾನ… ಕಾರನ್ನು ಹಿಂದಕ್ಕೆಳೆದು ಅವರನ್ನೂ ಜೊತೆಯಲ್ಲಿ ಸರ್ಚುವಿಗೆ ಕರೆದುಕೊಂಡು ಹೋಗುವುದೆಂದಾಯಿತು. ಸರಸರನೆ ಮತ್ತೆ ಸಿಂತೆಟಿಕ್‌ ಹಗ್ಗ ನಮ್ಮ ಜೀಪಿಗೆ ಮತ್ತು ಸಿಕ್ಕಿಕೊಂಡಿದ್ದ ಕಾರಿಗೆ ಕಟ್ಟಿ ಮೊದಲಿನ ಹಾಗೆ ಜೆರ್ಕ್‌ ಕೊಟ್ಟು ಕಾರನ್ನು ಹಿಂದಕ್ಕೆಳೆದದ್ದಾಯಿತು. ಚಾಲಕ ಗಾಡಿಯನ್ನು ಹಿಂದಕ್ಕೆ ತಿರುಗಿಸಿದ. ಸಮಯ ಸಾಯಂಕಾಲ ಏಳೂವರೆ ಗಂಟೆಯಾಗಿತ್ತು. ಮೂರೂ ವಾಹನಗಳು ಈಗ ಒಂದರ ಹಿಂದೊಂದು ಜೊತೆ ಜೊತೆಯಾಗಿ ಹೊರಟವು. ಸರ್ಚು ಇನ್ನೂ 34-35 ಕಿ.ಮೀ. ದೂರ ಉಳಿದಿತ್ತು. ಕೆಲವು ಕಡೆ ನದೀ ಪಾತ್ರವನ್ನು ದಾಟಬೇಕಿತ್ತು. ರಸ್ತೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ಅದೇ ದಾರಿಯಲ್ಲಿ ಬಂದಿದ್ದ ದೆಹಲಿ ಕಾರನ್ನು ಮುಂದೆ ಹೋಗಲು ಬಿಟ್ಟು ನಾವು ಆ ಕಾರನ್ನು ಹಿಂಬಾಲಿಸಿದೆವು. ಸಿಂಚನ ಈ ಘಟನೆಯ ಚಿತ್ರಗಳನ್ನು ತೆಗೆದು ವಿಡಿಯೋ ಮಾಡಿದ್ದಳು. 

ಸರಪ್‌ ಚು:
ನದಿಯ ಇಕ್ಕೆಲಗಳಲ್ಲಿ ಕ್ಯಾಂಪು ಲೈಟುಗಳು ಮಿನುಗುತ್ತಿದ್ದವು. ಸೇತುವೆಯೊಂದನ್ನು ದಾಟಿ ನದಿಯ ಉತ್ತರ ಭಾಗಕ್ಕೆ ಹೋಗಿ ರಸ್ತೆ ಪಕ್ಕಕ್ಕೇ ಇದ್ದ ತಗಡುಶೀಟ್‌-ಶೆಡ್ಡೊಂದರ ಬಳಿ ವಾಹನಗಳನ್ನು ನಿಲ್ಲಿಸಲಾಯ್ತು. ಗಂಟೆ ಒಂಬತ್ತೂವರೆಯಾಗಿತ್ತು. ಕುರುಕ್ಷೇತ್ರದ ಗುಂಪು ಮತ್ತು ನಾವು ಒಂದೇ ಶೆಡ್ಡನ್ನು ಆರಿಸಿಕೊಂಡೆವು. ದೆಹಲಿ ಗುಂಪಿನವರು ಪಕ್ಕದ ಬೇರೆ ಶೆಡ್ಡಿಗೆ ಹೋದರು. ನಮ್ಮವರೆಲ್ಲರೂ ತಲೆನೋವು ಎನ್ನುತ್ತಿದ್ದರು. ನನಗೂ ತಲೆ ನೋವುತ್ತಿತ್ತು. ಕಾರಣ ಮೌಂಟನ್‌ ಸಿಕ್ನೆಸ್‌. 
 
ಟಿಪ್ಪಣಿ: ಸರ್ಚು ಸ.ಮ.ದಿಂದ 14074 ಅಡಿ ಎತ್ತರದಲ್ಲಿ ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರ ರಾಜ್ಯಗಳ ಗಡಿಯಲ್ಲಿದೆ. ಇಲ್ಲೊಂದು ಭಾರತೀಯ ಸೈನ್ಯ ತಳವಿದೆ. ಪ್ರವಾಸಿಗರಿಗೆ ಎತ್ತರದ ಪರ್ವತ ಶ್ರೇಣಿಗಳಲ್ಲಿ ಆಮ್ಲಜನಕ ಕೊರತೆಯಾಗುವ ಕಾರಣ ಹವಾಮಾನಕ್ಕೆ ಹೊಂದಾಣಿಕೆ(acclimatization) ಮಾಡಿಕೊಳ್ಳಲು ಸರ್ಚು ಸಲಹಿತ, ವ್ಯವಸ್ಥಿತ ತಂಗುದಾಣ. ಕಡೇಪಕ್ಷ ಎರಡು ದಿನವಾದರೂ ಇಲ್ಲಿ ತಂಗಬೇಕೆಂಬುದು ಅನುಭವಿ ಪ್ರವಾಸಿಗರ ಮಾತು. 

ಸಿಂಚನ, ಪುಷ್ಪಲತ ಬೇಗನೆ ಸ್ಟೌವ್‌, ಪಾತ್ರೆ, ನೀರನ್ನು ಜೀಪಿನಿಂದ ತೆಗೆದುಕೊಂಡು ಬಂದು ನೂಡಲ್‌ ಮಾಡಲು ಪ್ರಾರಂಭಿಸಿದರು. ಲಗೇಜನ್ನು ಇಳಿಸಿಕೊಳ್ಳಲಿಲ್ಲ. ಒದ್ದೆಯಾಗಿದ್ದ ಶೂಗಳನ್ನು ಒಂದೆಡೆ ಒಗೆದು ವಸಂತ, ಚಿನ್ಮಯಿ, ಯಶಪಾಲ ಮತ್ತು ನಾನು ಜಾಗ ಹಿಡಿದು ಹಾಸಿಗೆ ಮೇಲಿನ ಹೊದಿಕೆಗಳಡಿಯಲ್ಲಿ ತೂರಿಕೊಂಡೆವು. ಕುರುಕ್ಷೇತ್ರ ಗುಂಪಿನವರೂ ಕೂಡ ಏನನ್ನೂ ತಿನ್ನದೆ ಯಶಪಾಲನ ಧೈರ್ಯದ ಬಗ್ಗೆ ಮಾತನಾಡುತ್ತಾ ಮಲಗಿದರು. ಸಿಂಚನ ನನ್ನನ್ನು ಏಳಿಸಿ ಒಂದಷ್ಟು ತಿನ್ನಲು ನೂಡಲ್‌ ನೀಡಿದಳು. ನಾನು ತಿನ್ನಲಾರದೆ ಒಂದಷ್ಟು ತಿಂದು ಪ್ಲೇಟನ್ನು ಹಿಂದಿರುಗಿಸಿ ನೀರು ಕುಡಿದು ಮಲಗಿದೆ. ತಲೆನೋವು ತಾಳಲಾರದೆ ವಸಂತ ಹೊರಹೋಗಿ ವಾಂತಿಮಾಡಿಕೊಂಡು ಬಂದು ತಲೆನೋವಿನ ಮಾತ್ರೆ ನುಂಗಿ ಮಲಗಿದಳು. ಮಧ್ಯರಾತ್ರಿಯಲ್ಲಿ ಮುಲುಗುಡುತ್ತಿದ್ದ ಸಿಂಚನ ಮಲಗಿದ್ದ ಹತ್ತಿರವೇ ವಾಂತಿಮಾಡಿಕೊಂಡಳು. ಶೀತಲ ನೀರಿನಲ್ಲಿ ಒದ್ದೆಯಾಗಿದ್ದ ಕಾಲುಗಳು ಗಡಗಡನೆ ನಡುಗುತ್ತಿದ್ದವು. ರಾತ್ರಿಯಿಡೀ ಯಾರಿಗೂ ನಿದ್ರೆ ಹತ್ತಲಿಲ್ಲ. “ಯಾವಾಗ ಬೆಳಗಾಗುತ್ತದೋ…” ಎಂದು ಗಳಿಗೆ ಎಣಿಸುತ್ತಾ ಒದ್ದಾಡುತ್ತಾ ಮಲಗಿದ್ದಾಯಿತು. ನಮ್ಮ ಟೆಂಟುಗಳು ಮತ್ತು ಮಲಗುವ ಚೀಲಗಳು ಗಂಟುಬಿಚ್ಚದೆ ಹಾಗೇ ಬೆಚ್ಚಗೆ ಜೀಪಿನಲ್ಲುಳಿದವು. 

ಜೂನ್‌ 6, ನಾಲ್ಕನೇ ದಿನ:
ತಿಂಗಳು ಜೂನ್‌ ಅಗಿದ್ದು ಸೂರ್ಯ ಇನ್ನೂ ಉತ್ತರಾಯಣ ಕಾಲದಲ್ಲಿಯೇ ಇದ್ದುದರಿಂದ ಸರ್ಚು ಪ್ರಾಂತದಲ್ಲಿ ಬೆಳಗ್ಗೆ ನಾಲ್ಕೂವರೆ ಗಂಟೆಗೇ ಬೆಳ್ಳಂಬೆಳಗಾಗಿತ್ತು. ಆದರೂ ಯಾರೂ ಏಳು ಗಂಟೆವರೆಗೆ ಎದ್ದು ಹೊರಗೆ ಹೋಗುವ ಧೈರ್ಯ ಮಾಡಿರಲಿಲ್ಲ. ಎದ್ದವರು ಕೆಲವರು ಶೆಡ್ಡಿನ ಮರೆಗೆ ಹೋಗಿ ನೈಸರ್ಗಿಕ ಕರೆ ತೀರಿಸಿಕೊಂಡರು. ನಾನು ನನ್ನ ಶೂಗಳನ್ನು ಏರಿಸಿಕೊಳ್ಳಲು ನೋಡಿದಾಗ ಸಿಂಚನ ರಾತ್ರಿ ಮಾಡಿಕೊಂಡ ವಾಂತಿಯಿಂದ ಗಲೀಜಾಗಿದ್ದವು. ಹಾಗೇ ಅವುಗಳನ್ನು ಏರಿಸಿಕೊಂಡದ್ದಾಯಿತು. ಪುಷ್ಪಲತ ಮತ್ತು ಸಿಂಚನ ಮಿಕ್ಕುಳಿದಿದ್ದ ನೂಡಲನ್ನು ಚೆಲ್ಲಿ ಪಾತ್ರೆಯನ್ನು ತೊಳೆದುಕೊಂಡು ಸ್ಟೌವ್‌ ಜೊತೆ ಸೇರಿಸಿ ನೀರಿನ ಡ್ರಮ್ಮಿನೊಡನೆ ಜೀಪಿಗೇರಿಸಿದರು. ದೆಹಲಿ ಗುಂಪಿನವರಾಗಲೇ ಹೊರಡಲು ರೆಡಿಯಾಗಿದ್ದರು. ಚಾಲಕ ಇನ್ನೋವವನ್ನು ಬಿಸಿಯಾಗಲೆಂದು ಚಾಲೂ ಮಾಡಿಬಿಟ್ಟಿದ್ದ. ಅವರು ಯಶಪಾಲನಿಗೆ ವಂದನೆಗಳನ್ನು ಹೇಳಿ ಮನಾಲಿ ಕಡೆಗೆ ಅದೇ ಬಾರಲಾಚ ಪಾಸ್‌ ಮಾರ್ಗವಾಗಿ ತೆರೆಳಿದರು. ಕುರುಕ್ಷೇತ್ರ ಗುಂಪಿನವರು ಅವರ ವಾಹನವನ್ನು ಚಾಲೂ ಮಾಡಲು ಯತ್ನಿಸಿದ್ದರಾದರೂ ಅದು ಹಿಮಗಟ್ಟುವ ಶೀತಲದಿಂದಾಗಿ ಚಾಲನೆಯಾಗಿರಲಿಲ್ಲ. ಸ್ಟೌವ್‌ ಮತ್ತು ಗ್ಯಾಸ್‌ ಸಿಲಿಂಡರ್‌ ಇಳಿಸಿಕೊಂಡು ಕುಕರ್‌ನಲ್ಲಿ ನೀರು ಕುದಿಸಿ ಇಂಜಿನ್‌ ಮೇಲೆ ಸುರುವಿ ಬಿಸಿಮಾಡಿ ತಳ್ಳಿದರೂ ಕಾರು ಚಾಲನೆಯಾಗಲಿಲ್ಲ. ಪುನಃ ಯಶಪಾಲ ಅವರ ನೆರವಿಗೆ ಹೋದ. ಅವರ ಕಾರಿಗೆ ಸಿಂತಟಿಕ್‌ ಹಗ್ಗ ಕಟ್ಟಿ ನಮ್ಮ ಜೀಪಿನಿಂದ ಎಳೆದುಕೊಂಡು ಹೋಗಿ ಚಾಲನೆ ಮಾಡಿದ್ದಾಯಿತು. ಕಾರು ಚಾಲನೆಯಾದ ಮೇಲೆ ಅವರು ಹಗ್ಗ ಬಿಚ್ಚಿ ನಮ್ಮನ್ನು ಮುಂದೆ ಹೋಗಲು ತಿಳಿಸಿ, ಹಿಂಬಾಲಿಸಿ ಬಂದು ನಮ್ಮ ಜೊತೆ ಸೇರಿಕೊಳ್ಳುವುದಾಗಿ ಹೇಳಿ ಅವರು ಹಿಂದಕ್ಕೆ ಸರಿದರು… ಬಹುಷಃ ಬೆಳಗಿನ ಉಪಹಾರ ಮಾಡಿಕೊಂಡು ಬರುವ ಉದ್ದೇಶ ಅವರದು. ಬರೀ ಗಂಡಸರೇ ಇದ್ದರೂ ಅಡುಗೆ ಮಾಡಕೊಳ್ಳಲು ಎಲ್ಲಾ ಸಾಮಾನುಗಳನ್ನು ಜೋಡಿಸಿಕೊಂಡು ಬಂದಿರುವುದಾಗಿ ತಿಳಿಸಿದ್ದರು. ಜೊತೆಗೆ ಹಿಂದಿನ ರಾತ್ರಿ ಅವರಾರೂ ಊಟ ಮಾಡಿರಲಿಲ್ಲ. ನಾವು ಸರ್ಚು ಬಿಟ್ಟು ಹೊರಡುವಾಗ್ಗೆ ಸಮಯ ಬೆಳಗ್ಗೆ ಏಳೂವರೆಯಾಗಿತ್ತು. 

ಲಡಖ್‌ ಪ್ರಾಂತದಲ್ಲಿ ಪಯಣ:
ನಾವೀಗ ಜಮ್ಮು-ಕಾಶ್ಮೀರ ರಾಜ್ಯದ ಲಡಖ್‌ ಪ್ರಾಂತದಲ್ಲಿದ್ದೆವು. ರಸ್ತೆಯಲ್ಲಿ ಅಲ್ಲಲ್ಲಿ ತೆಳುವಾಗಿ ನಿಂತಿದ್ದ ನೀರು ಹೆಪ್ಪುಗಟ್ಟಿ ಗ್ಲಾಸ್‌ ಶೀಟುಗಳ ಹಾಗೆ ಮಂಜುಗಡ್ಡೆಯಾಗಿ ಮಾರ್ಪಟ್ಟಿದ್ದವು. ಸೂರ್ಯನ ಕಿರಣಗಳಿಗೆ ಪಳಪಳಿಸುತ್ತಿದ್ದವು. ಜೀಪಿನಡಿಗೆ ಸಿಕ್ಕಿ ಹೊಡೆದ ಗಾಜಿನ ಚೂರುಗಳಂತೆ ಹೊಳೆಯುತ್ತಿದ್ದವು. ಸರಪ್‌ ಚು ನದಿ ದಂಡೆಯಲ್ಲಿಯೇ ಸಾಗುತ್ತಿತ್ತು ಪಯಣ. ಸುಮಾರು 20 ಕಿ.ಮೀ. ಸಾಗಿದ ನಂತರ ನದಿ ಎಡಕ್ಕೆ ಪಶ್ಚಿಮದ ಕಡೆಗೆ ತಿರುಗಿದ್ದಿತು (ಅದು ಮುಂದೆ ಹರಿದು ಸಿಂಧುವಿನ ಉಪನದಿ Zanskar ಸೇರಿಕೊಳ್ಳುತ್ತದೆ). ನಾವೀಗ ಬಲಕ್ಕೆ ತಿರುಗುವ ರಾ.ಹೆದ್ದಾರಿ-21ರಲ್ಲಿ ಇಪ್ಪತ್ತೊಂದು ಘಟ್ಟ ತಿರುವುಗಳು ಇರುವಲ್ಲಿಗೆ(21 U ತಿರುವುಗಳು) ಬಂದಿದ್ದೆವು. ತಳದಿಂದ ಸುಮಾರು 1500 ಅಡಿಗಳೆತ್ತರದಲ್ಲಿರುವ ನಕೀ ಲಾ ಪಾಸ್‌ (ಸ.ಮ.ದಿಂದ 15544 ಅಡಿ) ತಲುಪಲು ಇನ್ನೂ ಏಳು ಕಿ.ಮೀ.ದೂರದ ಏರು ತಿರುವುಗಳ ರಸ್ತೆ. 
ಟಿಪ್ಪಣಿ:ಪಾಸ್‌ ದಾಟುವಾಗ ಕಂಡುಬಂದ ದೃಶ್ಯಗಳು, ರಸ್ತೆ ಬದಿಯಲ್ಲಿ ಅಲ್ಲಲ್ಲಿ ಹಾಕಿರುವ ಕಲ್ಲು ಗುಡ್ಡೆಗಳು… ಸಮಾನ್ಯವಾಗಿ ಬೆಟ್ಟ, ಪರ್ವತ ದಾಟುದಾರಿ ಪ್ರದೇಶಗಳಲ್ಲಿ ಪ್ರವಾಸಿಗರು, ದಾರಿಹೋಕರು ಇಡುವ ಜ್ಞಾಪಕಾರ್ಥಕ ಗುಡ್ಡೆಗಳು, ಇಂಗ್ಲೀಶಿನಲ್ಲಿ Cairns ಎಂದು ಕರೆಯುತ್ತಾರೆ. ನಕೀ ಲಾ ಪಾಸ್‌ ದಾಟಿದ ಮೇಲೆ ಮುಂದೆ ಕೆಲವು ಕಿ.ಮೀ.ಗಳ ಇಳಿತದ ರಸ್ತೆ. ಅಲ್ಲಲ್ಲಿ ಬಿಆರ್‌ಒ ನವರು ರಸ್ತೆ ರಿಪೇರಿ ಮಾಡುತ್ತಿದ್ದರು. ಯಾವಾಗ ಏರು ರಸ್ತೆ ಪ್ರಾರಂಭವಾಗುತ್ತದೆಂದು ತಿಳಿಯುವುದಿಲ್ಲ. ಅಂತೂ ರಸ್ತೆ ಏರುತ್ತಾ ಹೋಗುತ್ತದೆ, ಸ.ಮ.ದಿಂದ 16616 ಅಡಿಗಳೆತ್ತರದ ಲಾಚುಲುಂಗ್‌ ಲಾ ಪಾಸ್‌ ತಲುಪಿ ಮುಂದುವರಿದಿದ್ದೆವು. ಸುತ್ತಲೂ ಮರಳು ಮಿಶ್ರಿತ ನಸುಗೆಂಪು ಬಣ್ಣದ ಕಲ್ಲುಗಳಿಂದ ಕೂಡಿದ ಹಿಮಾಚ್ಛಾದಿತ ಬೋಳು ಪರ್ವತಗಳು. ಇದೊಂದು ರೀತಿಯಲ್ಲಿ ಕಣ್ಣಿಗೆ ಭಯಂಕರ ಹಬ್ಬವಾಗಿತ್ತು. ಹಲವರು ಇದನ್ನೇ ಸ್ವರ್ಗವೆಂದು ಬಣ್ಣಿಸಿರುತ್ತಾರೆ. ನಿಚ್ಚಳ ನೀಲಾಕಾಶದಲ್ಲಿನ ಸೂರ್ಯನ ಕಿರಣಗಳು ಹಿಮಾವೃತ ಬೋಳು ಪರ್ವತಗಳ ಮೇಲಿನ ಬಿಳುಪಿನಿಂದ ಪ್ರತಿಪಲನವಾಗಿ ನಮ್ಮ ಕಣ್ಣಗಳಿಗೆ ರಾಚಿ ಚುಚ್ಚುತ್ತಿದ್ದವು. ಅದೊಂದು ರೀತಿಯಲ್ಲಿ ಅಯೋಮಯವಾಗಿತ್ತು. ಲಾಚುಲುಂಗ್‌ ಲಾ ದಾಟಿದ ಮೇಲೆ ಲಘು ಇಳಿತದ ರಸ್ತೆ ಅಲ್ಲಿಂದ ನಮ್ಮನ್ನು 22 ಕಿ.ಮೀ. ದೂರದ ಪಾಂಗ್‌ ಎಂಬ ಟೆಂಟ್‌ ಕ್ಯಾಂಪ್‌ಗಳ ಪ್ರದೇಶಕ್ಕೊಯ್ದಿತ್ತು. ಪಾಂಗ್‌ ಕ್ಯಾಂಪ್‌ನ ಬಯಲು ಸ್ಥಳ ಮತ್ತದರ ಕೊಳ್ಳ ಸ.ಮ.ದಿಂದ 14763 ಅಡಿಗಳು. ಇಲ್ಲಿ ಕೊಳ್ಳದಲ್ಲಿ ತೆಳುವಾಗಿ ನೀರು ಹರಿಯುವ ಕಾರಣ ಪ್ರವಾಸಿಗರಿಗಿದು ವಾತಾವರಣಕ್ಕೆ ಹೊಂದಾಣಿಕೆ (acclimatization) ಮಾಡಿಕೊಳ್ಳುವ ಇನ್ನೊಂದು ಸ್ಥಳವಾಗಿತ್ತು. ಟೆಂಟ್‌ ಹಾಕಿಕೊಂಡು ರಾತ್ರಿ ತಂಗಣೆ ಮಾಡುತ್ತಾರೆಯೂ ಕೂಡ. ಇಲ್ಲಿಗೆ ಬರುವ ವೇಳೆಗಾಗಲೇ ಮಧ್ಯಾಹ್ನವಾಗಿತ್ತು. ವಸಂತ ಪುಷ್ಪಲತ ಯಶಪಾಲನಿಗೆ ಇಲ್ಲಿ ಜೀಪು ನಿಲ್ಲಿಸಲು ಕೋರಿದರು. ಅವನು ನಿಲ್ಲಲಿಲ್ಲ. ಪಾಂಗ್‌ ಕೊಳ್ಳದ ದಂಡೆಯ ತಿರುವುಗಳ ಏರು ರಸ್ತೆಯನ್ನು ಏರಿಸಿ ಮೋರಿ ಪ್ರಸ್ಥಭೂಮಿ ಪ್ರದೇಶಕ್ಕೆ ಜೀಪು ತಂದು ನಿಲ್ಲಿಸಿದ. 

ಮೋರಿ ಪ್ರಸ್ಥಭೂಮಿ:
ನೇರ ರಸ್ತೆ, ಗಿಡಮರಗಳಿಲ್ಲದ ಬಟಾಬಯಲು ಪ್ರದೇಶ. ಸುತ್ತಲೂ ದೂರದಲ್ಲಿ ಕಾಣತ್ತಿದ್ದ ನಸುಗೆಂಪು ಬಣ್ಣದ ಪರ್ವತ ಶ್ರೇಣಿಗಳು. ಯಶಪಾಲನೂ ಹಿಂದಿನ ರಾತ್ರಿ ನಿದ್ದೆಗೆಟ್ಟಿದ್ದ. ಬೆಳಗಿನಿಂದಲೂ ಜೀಪು ಓಡಿಸಿ ಅವನಿಗೂ ಕಷ್ಟವಾಗಿತ್ತು. ಪುಷ್ಪಲತ ಮೋರಿ ಪ್ರಸ್ಥಭೂಮಿ ಬಯಲಿನ ರಸ್ತೆಯಲ್ಲಿ ಜೀಪು ಓಡಿಸುವುದಾಗಿ ತಿಳಿಸಿ ಸ್ಟಿಯರಿಂಗ್‌ ಜಾಗದಲ್ಲಿ ಕುಳಿತಳು. ಅಲ್ಲಲ್ಲಿ ಬಿಆರ್‌ಒನವರು ಹೊಸ ಮಣ್ಣು ಹಾಕಿ ರಸ್ತೆ ಕಾಮಗಾರಿ ನಡೆಸಿದ್ದರು. ಕೆಲವೊಮ್ಮೆ ರಸ್ತೆ ಪಕ್ಕಕ್ಕಿಳಿದು ದೂಳು ದಾರಿಯಲ್ಲಿ ಹೋಗಬೇಕಾಗುತ್ತಿತ್ತು. ಈಮಧ್ಯೆ ಕುರುಕ್ಷೇತ್ರ ಗುಂಪಿನ ಇನ್ನೋವ ಕಾರು ನಮ್ಮನ್ನು ಹಿಂದೆ ಹಾಕಿ ಮುಂದೆ ಹೋಯಿತು. ನನಗೆ ರಾತ್ರಿ ನಿದ್ದೆಯಿಲ್ಲದೆ ಮತ್ತು ಬೆಳಗಿನಿಂದ ಏನನ್ನೂ ತಿನ್ನದೆ ಇದ್ದು ದೇಹದ ತ್ರಾಣ ಕುಂದಿತ್ತು. ಕಣ್ಣುಬಿಟ್ಟು ಹೊರಪ್ರಪಂಚ ನೋಡಲು ಕಷ್ಟವಾಗುತ್ತಿತ್ತು. ಅಗಾಗ ತೂಗಡಿಸುತ್ತಾ ನಿದ್ದೆ ಮಾಡಿಬಿಡುತ್ತಿದ್ದೆ. ಹಾಗೆಯೇ ಸುಮಾರು ಒಂದು ಗಂಟೆಗೂ ಹೆಚ್ಚು ನಿದ್ದೆಯೂ ಹೋಗಿದ್ದೆನು. 

ಸಿಂಚನ ನನ್ನನ್ನು ಏಳಿಸುತ್ತಾ ಚಾಕೊಲೆಟ್‌, ಒಬ್ಬಟ್ಟು ತಿನ್ನುವಂತೆ ಸೂಚಿಸುತ್ತಿದ್ದಳು. ನನಗೆ ಮಲಬದ್ಧತೆಯಿಂದಾಗಿ ದೇಹಭಾದೆಯಾಗುತ್ತಿತ್ತು. ಏನನ್ನಾದರು ತಿನ್ನಲು ಹಲ್ಲುಜ್ಜಿ ಗಂಟಲು ಸ್ವಚ್ಛಮಾಡಬೇಕಿತ್ತು. ಈಗ ಜೀಪು ಪರ್ವತ ಶ್ರೇಣಿಯಲ್ಲಿ ಓಡುತ್ತಲಿತ್ತು. ಪುನಃ ಯಶಪಾಲ ಡ್ರೈವ್‌ ಮಾಡುತ್ತಿದ್ದ. ತಾಂಗ್‌ಲಾಂಗ್‌ ಲಾ ಪಾಸ್‌(ಸ.ಮ.ದಿಂದ 17582 ಅಡಿಗಳು) ದಾಟಿಯಾಯಿತೆಂದೂ, ಅಲ್ಲಿ ನನ್ನನ್ನು ಎಷ್ಟು ಏಳಿಸಿದರೂ ಏಳಲಿಲ್ಲವೆಂದು ವಸಂತ ತಿಳಿಸಿದಳು. ಸಿಂಚನ ಮತ್ತು ಯಶಪಾಲ ಛಾಯಾಚಿತ್ರ ತೆಗೆದುಕೊಂಡಿದ್ದರು. ನನ್ನ ಬೇಡಿಕೆಯ ಮೇರೆಗೆ ಯಶಪಾಲ ಜೀಪು ನಿಲ್ಲಿಸಿದ. ಜೀಪು ಇಳಿದ ನಾನು ಬಾಟಲಿಯಲ್ಲಿ ನೀರು ತೆಗೆದುಕೊಂಡು ಮಲಭಾದೆ ತೀರಿಸಿಕೊಳ್ಳಲು ರಸ್ತೆ ಕೆಳಭಾಗದ ಮರೆಗೆ ಹೋದೆ. ಇಲ್ಲಿ ನಾವು ಸುಮಾರು 16000ಅಡಿಗಳಷ್ಟು ಎತ್ತರದಲ್ಲಿ ಇದ್ದವೆಂದು ಕಾಣುತ್ತದೆ. ದೇಹದಲ್ಲಿ ತೂಕವೇ ಇರಲಿಲ್ಲಲ್ಲ. ಬಿದ್ದುಹೋಗುವಂತೆ ಆಗುತ್ತಿತ್ತು. ಕಷ್ಟಪಟ್ಟು ನನ್ನ ಕಾರ್ಯ ಮುಗಿಸಿಬಂದು ಹಲ್ಲು ಬ್ರಶ್‌ ಮಾಡಿ ಗಂಟಲು ಸ್ವಚ್ಛಮಾಡಿ ಬಾಯಿ ತೊಳೆದೆ. ಅಷ್ಟರ ವೇಳೆಗೆ ಕುರುಕ್ಷೇತ್ರ ಗುಂಪಿನವರು ನಾವು ಹಿಂಬಾಲಿಸುತ್ತಿಲ್ಲವೆಂದು ತಿಳಿದು ಖಾತರಿಮಾಡಿಕೊಳ್ಳಲು ಹಿಂದಿರುಗಿ ಹುಡುಕಿಕೊಂಡು ಬಂದಿದ್ದರು. ಅವರಿಗೆ ನಾವು, ಹಿಂಬಾಲಿಸಿ ಬರುತ್ತೇವೆಂದು ತಿಳಿಸಿ ಮುಂದೆ ಹೋಗಲು ಹೇಳಿದೆವು. ಒಂದರ್ಧ ಗಂಟೆ ತಡವಾಗಿತ್ತು. ಜೀಪು ಏರಿದೆವು. ತಿನ್ನಲು ಚಾಕೊಲೆಟ್‌, ಒಬ್ಬಟ್ಟು ನೀಡಿದರು, ಪ್ರಯಾಣ ಮಾಡುತ್ತಲೇ ತಿಂದು ನೀರು ಕುಡಿದೆ. ಅರ್ಧ ಗಂಟೆಯಲ್ಲಿ ದೇಹದಲ್ಲಿ ಒಂದಷ್ಟು ತ್ರಾಣ ಬಂದಿತು. ತಾಂಗ್‌ಲಾಂಗ್‌ ಲಾ ಪಾಸ್‌ ನೋಡುವ, ಅನುಭವಿಸುವ ಅವಕಾಶ ತಪ್ಪಿಹೋಗಿತ್ತು. ಯಶಪಾಲ, ಸಿಂಚನ ತೆಗೆದ ಚಿತ್ರಗಳು ಮಾತ್ರವೇ ಉಳಿದಿದ್ದವು ನನಗೆ. 

ಮಧ್ಯಾಹ್ನ ಎರಡು ಗಂಟೆ ಊಟದ ಸಮಯವಾಗಿತ್ತು. ಇದೀಗ ತಾಂಗ್‌ಲಾಂಗ್‌ ಪರ್ವತದ ಬುಡಕ್ಕೆ ಇಳಿದಿದ್ದೆವು. ರಸ್ತೆಯ ಬದಿಯಲ್ಲಿ ಅಲ್ಲಲ್ಲಿ ಬೌದ್ಧ ಸ್ತೂಪಗಳು ಕಾಣಸಿಗುತ್ತಿದ್ದವು. ಜನವಸತಿಯಿತ್ತು. ರುಮ್‌ತ್ಸೆ ಮತ್ತು ಗ್ಯಾ ಎಂಬ ಹಳ್ಳಿಗಳ ಬಳಿ ಒಂದು ಕಡೆ ಜೀಪು ನಿಲ್ಲಿಸಿದೆವು. ಸುತ್ತಲೂ ಗೋದಿ ಮತ್ತು ಬಾರ್ಲಿ ಸಾಗುವಳಿಯ ಹಸಿರು ಬಯಲು. ತಾಂಗ್‌ಲಾಂಗ್‌ ಪರ್ವತದ ಕಡೆಯಿಂದ ಹರಿದುಬರುತ್ತಿದ್ದ ನದೀ ಕಣಿವೆಯಾಗಿತ್ತು. ನಮ್ಮ ಆಹಾರದ ಬ್ಯಾಗು ಹೊರತೆಗೆದು ಎಲ್ಲರೂ ಚಪಾತಿ-ಚಟ್ನಿಯನ್ನು ತಿಂದು ಮಧ್ಯಾಹ್ನದ ಊಟವನ್ನು ಮುಗಿಸಿದೆವು. ಇಲ್ಲಿಂದ ಮುಂದೆ ಹರಿಯುತ್ತಿದ್ದ ನದಿ ಕೊಳ್ಳದ ದಂಡೆಯಲ್ಲಿಯೇ ಸಿಂಧು ನದಿ ಸೇರುವವರೆಗೂ ಪ್ರಯಾಣ. ನದಿಯಲ್ಲಿನ ನೀರು ರಕ್ತದೋಕುಳಿಯಂತಿತ್ತು. ಸಾಮಾನ್ಯ ಹಿಮನೀರಿನಂತೆ ಹಸಿರು ಮಿಶ್ರಿತ ನೀಲಿ(Azure) ಆಗಿರಲಿಲ್ಲ. ಈ ಪ್ರದೇಶದ ಮಣ್ಣಿನ ಬಣ್ಣಕ್ಕೆ ಹೋಲುತ್ತಿತ್ತು. ನದಿ ದಂಡೆಯಲ್ಲಾದ ಭೂಕೊರೆತ ರಸ್ತೆಯನ್ನು ಹಾಳುಮಾಡಿತ್ತು. ಅಲ್ಲಲ್ಲಿ ಬಿಆರ್‌ಒ ನವರು ರಸ್ತೆ ರಿಪೇರಿಕಾರ್ಯ ನಡೆಸಿದ್ದರು. ಕೊಚ್ಚಿ ಹೋಗಿದ್ದ ರಸ್ತೆಯನ್ನು ಎಡ-ಬಲ ಎರಡು ವಾಹನಗಳು ಚಲಿಸಲು ಅನುಕೂಲವಾಗುವಂತೆ ಅಗಲ ಮಾಡುತ್ತಿದ್ದರು. ಕೆಲವು ಕಡೆ ಡೈನಮೈಟ್‌ ಇಟ್ಟು ಗಿರಿಕಡೆಯ ಗೋಡೆಯ ಭಾಗವನ್ನು ಸಿಡಿಸುತ್ತಿದ್ದರು. ಸಿಡಿಸಿದ ಮಣ್ಣುಮಿಶ್ರಿತ ಕಲ್ಲುಗಳು ನದಿಗೆ ಬಿದ್ದು ನೀರಿನೊಡನೆ ಬೆರೆತು ನೀರು ಕೆಂಪಾಗಲು ಕಾರಣವಾಗಿತ್ತು. ಗಂಟೆ 03.30ರ ವೇಳೆಗೆ ಉಪ್‌ಶಿ ಎಂಬ ಹಳ್ಳಿಯ ಬಳಿ ನಾವೊಂದು ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ದೊಡ್ಡ ಕಬ್ಬಿಣದ ಸೇತುವೆಯನ್ನು ದಾಟಿದೆವು. ಯಶಪಾಲ “ಸಿಂಧು ನದಿ” ಎಂದುದ್ಗರಿಸಿದ. ಅದೇ ಹಸಿರುಮಿಶ್ರಿತ ನೀಲಿ ನೀರು. ಈವರೆಗೆ ಪಕ್ಕದ ಕೊಳ್ಳದಲ್ಲಿ ಹರಿದುಬರುತ್ತಿದ್ದ ಕೆಂಪು ನೀರು ಸಿಂಧುವಿನಲ್ಲಿ ಮಿಳಿತವಾಗಿ ತನ್ನ ಬಣ್ಣ ಕಳೆದುಕೊಳ್ಳುತ್ತಿತ್ತು. ಸಿಂಧು ನದಿ ಬಗ್ಗೆ ಭೂಗೋಳದಲ್ಲಿ ಓದಿದ್ದೊಂದೇ ನನಗೆ ತಿಳಿದಿದ್ದುದು. ಅದೀಗ ಸಾಕ್ಷಾತ್ಕಾರವಾಗಿತ್ತು. ಒಂದು ರೀತಿಯ ಭಾವನಾತ್ಮಕ ಸಂಬಂಧದ ಧನ್ಯತಾಭಾವನೆ. 
ಯಶಪಾಲ ಸೇತುವೆ ದಾಟಿದ ಮೇಲೆ ಜೀಪನ್ನು ಪಶ್ಚಿಮಾಭಿಮುಖವಾಗಿ ತಿರುಗಿಸಿ ನಿಲ್ಲಿಸಿದ. ಜೀಪಿನ ದಾಖಲೆಗಳನ್ನು ತೆಗೆದುಕೊಂಡು ರಸ್ತೆ ಪಕ್ಕದಲ್ಲಿದ್ದ ಜಮ್ಮು-ಕಾಶ್ಮೀರ ಪೊಲೀಸು ಚೆಕ್‌ಪೋಸ್ಟ್‌ಗೆ ಹೋಗಿ ದಾಖಲಿಸಿ ಹಿಂದಿರುಗಿದ. ಉಪ್‌ಶಿಯಿಂದ ಲೆಹ್‌ ಇನ್ನೂ 50 ಕಿ.ಮೀ. ದೂರವಿತ್ತು. ರಸ್ತೆ ಚೆನ್ನಾಗಿದ್ದಿತು. 

ಲೆಹ್‌ ಪ್ರವೇಶ:
ಲೆಹ್‌ ಪಟ್ಟಣ ತಲುಪಿದಾಗ ಸಾಯಂಕಾಲ ನಾಲ್ಕೂವರೆ ಗಂಟೆಯಾಗಿತ್ತು. ನಾನು ಗಮನಿಸಿದಂತೆ ಎಲ್ಲಾ ಮಣ್ಣಿನ ಹೆಂಡೆ-ಗೋಡೆಯ ಮಾಳಿಗೆಯ ಹಳ್ಳಿ ತರಹೆ ಮನೆಗಳಾಗಿದ್ದವು. ಸಿಮೆಂಟಿನ ಗುರುತು ಎಲ್ಲೂ ಅಷ್ಟಾಗಿ ಕಾಣಲಿಲ್ಲ. (ಟಿಪ್ಪಣಿ: ಆಗಸ್ಟ್‌, 2010ರಲ್ಲಿ ಅನಿರೀಕ್ಷಿತವಾಗಿ ಸುರಿದ ಅಗಾದ ಮಳೆಯಿಂದುಂಟಾದ ಪ್ರವಾಹಕ್ಕೆ ಹೇಗೆ ಮನೆಗಳು ಕುಸಿದು ನೆಲಸಮವಾಗಿದ್ದವೆಂಬುದಕ್ಕೆ ಕಾರಣ ಸಿಕ್ಕಿತ್ತು, ಅಲ್ಲಿ ಅಪಾರ ಆರ್ಥಿಕ ಮತ್ತು ಜೀವ ಹಾನಿಯಾಗಿತ್ತು). ಅಗಾಗ್ಗೆ ಬಿರುಸಾದ ಮೇಲ್ಮೈ ಗಾಳಿ ಬೀಸುತ್ತಿತ್ತು. ಜೀಪಿನ ಗ್ಲಾಸುಗಳನ್ನು ತೆರೆಯುವಂತಿರಲಿಲ್ಲ. ಗಾಳಿಯೊಂದಿಗೆ ಮರಳು ತೂರಿಬಂದು ಮುಖಕ್ಕೊಡೆಯುತ್ತಿತ್ತು. ಇದೊಂದು ಹಿಮಾಲಯದ ಶೀತಲ ಮರುಭೂಮಿ ಅನಿಸಿತು. ಪ್ರವೇಶ ತೆರಿಗೆ ಪಾವತಿಸಿ ರಸೀತಿ ಪಡೆದು ಪಟ್ಟಣ ಪ್ರವೇಶಿಸಿದೆವು. ತಲಾಶ್‌ ನಡೆಸಿ ಕೊನೆಗೆ ಭಾರತ್‌ ಗೆಸ್ಟ್‌ ಹೌಸ್‌ ಎಂಬಲ್ಲಿ ಎರಡು ರೂಮು ಹಿಡಿದೆವು. ಎಲ್ಲರೂ ಸ್ನಾನ ಮಾಡಿ ವಿಶ್ರಾಂತಿ ಪಡೆದೆವು. ಗಲೀಜಾಗಿದ್ದ ನನ್ನ ಶೂ ಮತ್ತು ಕಾಲ್ಚೀಲಗಳನ್ನು ತೊಳೆದು ಒಣಹಾಕಿದೆ. ಯಶಪಾಲ ಚೆನ್ನಾಗಿ ನಿದ್ದೆ ಹೋದ… ರಾತ್ರಿ ಊಟಕ್ಕೆ ಏಳಿಸುವವರೆಗೂ! 

ಜೂನ್‌ 7, ಐದನೇ ದಿನ – 4ನೇ ಹಂತ… ಲೆಹ್‌ ಸ್ಥಳೀಯ ವೀಕ್ಷಣಾ ಸ್ಥಳಗಳು ಮತ್ತು ಚರಿತ್ರೆ: 

ಬೆಳಗ್ಗೆ ಎಲ್ಲರೂ ಸ್ನಾನಮುಗಿಸಿ ರೆಡಿಯಾಗಿ ತಿಂಡಿ ತಿಂದು ಲೆಹ್‌ ಸುತ್ತಮುತ್ತಲ ಸ್ಥಳಗಳ ವೀಕ್ಷಣೆಗೆ ಹೊರಟೆವು. ಹೊರಡುವ ಮುನ್ನ ಗೆಸ್ಟ್‌ ಹೌಸ್‌ನ ಮೇಟ್ರನ್‌ಗೆ ಒಂದಷ್ಟು ಹಣ ನೀಡಿ ನಮ್ಮೆಲ್ಲರ ಒಂದೊಂದು ಭಾವಚಿತ್ರ ಮತ್ತು ಗುರುತಿನ ಕಾರ್ಡುಗಳನ್ನು ಕೊಟ್ಟು ಲೆಹ್‌-ಲಡಖ್‌ ಪ್ರಾಂತದ ಜಿಲ್ಲಾಧಿಕಾರಿಗಳವರಿಂದ ನೂಬ್ರ ಕಣಿವೆ ಮತ್ತು ಪ್ಯಾಂಗೊಂಗ್‌ ಸರೋವರ ವೀಕ್ಷಣೆಗೆ ತೆರಳಲು ಅನುಮತಿ ಪತ್ರ ತೆಗೆದುಕೊಳ್ಳಲು ತಿಳಿಸಿದೆವು. ಆ ವೇಳೆಗೆ ಯಶಪಾಲನ ಕೋಶವಾಣಿಗೆ ಬಂದ ಕರೆಯಿಂದ ಕುರುಕ್ಷೇತ್ರ ಗುಂಪಿನವರು ಶ್ರೀನಗರ ಮಾರ್ಗವಾಗಿ ಆ ದಿನವೇ ವಾಪಸಾಗುತ್ತಿದ್ದಾರೆಂದು ತಿಳಿಸಿದರು. ಅವರ ಗುಂಪಿನಲ್ಲಿದ್ದ ಡಾಕ್ಟರೊಬ್ಬರ ಕೈ ಬೆರಳುಗಳು ಬಾರಲಾಚದಲ್ಲಿ ಕಾರು ತಳ್ಳುವ ಸಮಯದಲ್ಲಿ ಉಂಟಾದ ಶೀತ-ಕಡಿತದಿಂದ (ಕೋಲ್ಡ್‌ ಬೈಟ್‌) ಅದೀಗ ಊದಿಕೊಂಡು ನೋವಿನಿಂದ ಜ್ವರ ಬಂದು ನರಳುತ್ತಿದ್ದಾರೆಂದು ತಿಳಿಸಿದರು. 

ಲೆಹ್‌… ಹಳೆಯ ಹಿಮಾಲಯ ರಾಜ್ಯ ಲಡಖ್‌ನ ರಾಜಧಾನಿಯಾಗಿತ್ತು. ನಮ್ಮ ಪ್ರವಾಸದ ಸಮಯದಲ್ಲಿ ಜಮ್ಮು-ಕಾಶ್ಮೀರ ರಾಜ್ಯದ ಲಡಕ್‌ ಜಿಲ್ಲೆ ಮತ್ತದರ ಆಡಳಿತ ಕಛೇರಿಗಳಿರುವ ಕೇಂದ್ರಸ್ಥಾನ. ಸ.ಮ.ದಿಂದ ಸುಮಾರು 11550 ಅಡಿ ಎತ್ತರದಲ್ಲಿದೆ. ಲಡಖ್‌ ಪ್ರಾಂತದ ಸಮೀಪ ಎಲ್ಲಂದರಲ್ಲಿ ಹಳೆ ಮತ್ತು ಹೊಸ ಭೌದ್ಧ ಸ್ತೂಪ(ಗೋಪುರ)ಗಳನ್ನು ನಾವು ಕಾಣುತ್ತಿದ್ದೆವು. ಶೇಕಡ 77 ಭಾಗ ಬೌದ್ಧಮತೀಯರಿರುವ ಲೆಹ್‌ನಲ್ಲಿ 1983ರಲ್ಲಿ ಜಪಾನೀಯರು ನಿರ್ಮಿಸಿಕೊಟ್ಟಿರುವ ಹೊಸ ಶಾಂತಿ ಸ್ತೂಪವಿದೆ. ಲೆಹ್‌ ಸ್ಥಳೀಯವಾಗಿ ಮರಳುಗಲ್ಲಿನಿಂದ ಕೂಡಿದ ಒಂದು ಬಂಜರು ಭೂಮಿಯಂತೆ ಕಾಣುತ್ತದೆ. ಆದರೆ ಅಲ್ಲಲ್ಲಿ ಸಾಗುವಳಿಯ ಹಸಿರು ಪ್ರದೇಶದಿಂದ ಕೂಡಿದ್ದಿತು. ಇಲ್ಲಿನ ನೋಟ ಪ್ರವಾಸಿಗರನ್ನು, ಹಿಮಾಚ್ಛಾದಿತ ಪರ್ವತಗಳಿಂದ ಸುತ್ತುವರಿದು ಝರಿ-ನದಿ-ಕಣಿವೆಗಳಿಂದ ಕೂಡಿದ ಒಂದು ಸ್ವರ್ಗಲೋಕದಂತೆ ಕಾಣುತ್ತಾ ಅವರನ್ನು ಸೆಳೆಯುತ್ತಿದೆ. ಸಿಂಧು ನದಿ ಪಕ್ಕದ ಹೆದ್ದಾರಿಯುದ್ದಕ್ಕೂ ಆಸುಪಾಸಿನಲ್ಲಿ ಭಾರತೀಯ ಸೈನ್ಯಕ್ಕೆ ಸಂಬಂಧಿಸಿದ ಹಲವು ಸೈನಿಕ ತಾಣಗಳಿವೆ. ಶೆ (Shey) ಎಂಬ ಹಳ್ಳಿ ಬಳಿ 1997ರಿಂದಾರಂಭಿಸಿ ಪ್ರತಿವರ್ಷ ಮೂರು ದಿನಗಳ ಕಾಲದ ಸಿಂಧು ದರ್ಶನ ಉತ್ಸವವನ್ನು ಭಾರತ-ಸರ್ಕಾರ ಆಚರಣೆಗೆ ತಂದಿದೆ. ಕಾರಣ, ಭಾರತ ಸಿಂಧು ನದಿ ಬಯಲಿನ ಬಹುಮುಖ್ಯ ಸಿಂಧ್‌ ಪ್ರಾಂತವನ್ನು 1947ರ ದೇಶ ವಿಭಜನೆಯಲ್ಲಿ ಪಾಕಿಸ್ಥಾನಕ್ಕೆ ಬಿಟ್ಟುಕೊಟ್ಟು ಕಳೆದುಕೊಂಡಮೇಲೆ ಸಿಂಧು ನದಿ ಭಾರತದಲ್ಲಿದೆಯೆ..? ಎಂದು ಪ್ರಶ್ನಿಸುವವರಿಗೆ ಇಲ್ಲಿ ಅದು ಸಿಂಧು ನದಿಗೆ ಪುನರ್ಜನ್ಮ ನೀಡಿದೆ… ಮತ್ತದರ ಭಾವನಾತ್ಮಕ ಸಂಬಂಧದ ಸಾಕಾರವಾಗಿ ಉತ್ಸವವನ್ನು ಆಚರಿಸಲಾಗುತ್ತಿದೆ.

ಹೆಮಿಸ್‌ ಮೊನಾಸ್ಟರಿ(ಬೌದ್ಧಮಠ/ಗೊಂಪ):
ಲೆಹ್‌ ನಿಂದ ಮನಾಲಿ ಕಡೆ ಹೋಗುವ ರಾ.ಹೆದಾದ್ದಾರಿಯಲ್ಲಿ 47ಕಿ.ಮೀ. ದೂರದಲ್ಲಿ ಸಿಂಧು ನದಿಯ ದಕ್ಷಿಣ ದಡಕ್ಕಿರುವ Zanskar ಪರ್ವತ ಶ್ರೇಣಿಯ ಕೊಳ್ಳದಲ್ಲಿದೆ. ಮೊದಲ ದೇಹಧಾರಣೆ ಮಾಡಿದ ಸ್ಟಾಂಗ್ಸಂಗ್‌ ರಸ್ಪ ನವಾಂಗ್‌ ಗ್ಯಾತ್ಸೊರವರಿಂದ ಕ್ರಿ.ಶ.1630ರಲ್ಲಿ ಸ್ಥಾಪಿತವಾದ ಹೆಮಿಸ್‌ ಬೌದ್ಧಮಠ ಲಡಖ್‌ ಪ್ರಾಂತದಲ್ಲಿಯೇ ಬಹುದೊಡ್ಡದು ಮತ್ತು ಶ್ರೀಮಂತವಾದುದು. ಇನ್ನೂರು ಶಾಖಾ ಮಠಗಳು, ಸುಮಾರು 1000 ಮಂದಿ ಬೌದ್ಧ ಸನ್ಯಾಸಿಗಳಿದ್ದಾರೆಂದು ಅಲ್ಲಿಯ ಮಾಹಿತಿ ತಿಳಿಸುತ್ತದೆ. ಇದು ಬೌದ್ಧ ದ್ರುಗ್ಪ ಪಂಥಕ್ಕೊಳಪಟ್ಟಿದೆ. ಇಲ್ಲಿ ಪ್ರತಿವರ್ಷ ಗುರು ಪದ್ಮ-ಸಂಭವರವರ ಹುಟ್ಟುಹಬ್ಬ ಸ್ಮರಣಾರ್ಥವಾಗಿ ಆಚರಿಸುವ ಹೆಮಿಸ್‌ ಉತ್ಸವ ಮತ್ತು ಟಿಬೆಟನ್‌ ಪಂಚಾಂಗದ ಒಂಬತ್ತು ಮತ್ತು ಹತ್ತನೇ ದಿನಗಳಲ್ಲಿ ಪವಿತ್ರ ಮುಖವಾಡ ನೃತ್ಯೋತ್ಸವಗಳು ನಡೆಯುತ್ತವೆ. ಮಠದಲ್ಲಿ ಬುದ್ಧನ ಮೂರ್ತಿ ಇರುವ ಗೊಂಪ(ದೇವಸ್ಥಾನ) ಇದೆ, ಮತ್ತು ಹಳೆಯವಸ್ತುಗಳ ಒಂದು ಸಂಗ್ರಹಾಲಯವಿದೆ. 

ತಿಕ್ಸೆ ಗೊಂಪ(ದೇವಸ್ಥಾನ/ಬೌದ್ಧಮಠ):
ತಿಕ್ಸೊರ್‌ ನಂಬಾರ್‌ ತಕ್‌ ಪೆ ಲಿಂಗ್‌ ಟಬೆಟ್‌ ಮೂಲದ ಬೌದ್ಧಮಠ. ಇದು ಗೇಲುಗ್ಪ ಬೌದ್ಧಪಂಥಕ್ಕೆ ಸೇರಿದೆ. ಗೇಲುಗ್ಪ ಪಂಥವನ್ನು ಕ್ರಿ.ಶ.15ನೇ ಶತಮಾನದಲ್ಲಿ ತ್ಸೋಂಗ್‌ ಖಾಪಾ ಎಂಬುವನು ಆಚರಣೆಗೆ ತಂದ. ಆತನ ಅನುಯಾಯಿಗಳು, ಶೆರಬ್‌ ಸಾಂಗ್ಪೊ ಮತ್ತು ಪಾಲ್ಡೆನ್‌ ಸಾಂಗ್ಪೊ ಲಡಖ್‌ನ ದೊರೆ ಸಹಾಯದಿಂದ ತಿಕ್ಸೆ ಎಂಬಲ್ಲಿ 1433ರ ಸುಮಾರಿನಲ್ಲಿ ಈ ಮಠವನ್ನು ಸ್ಥಾಪಿಸಿದರೆಂದು ಅಲ್ಲಿಯ ಮಾಹಿತಿ ತಿಳಿಸುತ್ತದೆ. ಮಠ ಲೆಹ್‌ನಿಂದ ಪೂರ್ವಕ್ಕೆ 19 ಕಿ.ಮೀ. ದೂರದಲ್ಲಿ ಸಿಂಧು ನದಿಯ ಉತ್ತರ ದಂಡೆಯಲ್ಲಿ ಸಣ್ಣ ಗುಡ್ಡದ ಮೇಲಿದೆ. ಮಧ್ಯ ಲಡಖ್‌ನಲ್ಲಿ ಬಹುದೊಡ್ಡ ಗೊಂಪ/ದೇವಸ್ಥಾನ ಇದು. ಹನ್ನೆರಡು ಅಂತಸ್ತಿನ ದೊಡ್ಡ ಸಂಕೀರ್ಣ… ಸಂಕೀರ್ಣದಲ್ಲಿ ಬೌದ್ಧ ಕಲಾಕೃತಿಗಳ, ತಾಂಗ್‌ಕ(ಪವಿತ್ರ ಅಲಂಕಾರಿಕ ಸಾಧನ) ಗಳು, ಸ್ತೂಪಗಳು, ಮೂರ್ತಿಗಳಿವೆ. ಮುಖ್ಯವಾದುದೆಂದರೆ 49 ಅಡಿ ಎತ್ತರದ ಎರಡು ಅಂತಸ್ತುಗಳೆತ್ತರಕ್ಕೆ ಆವರಿಸಿರುವ ಬುದ್ಧ ವಿಗ್ರಹ. ಇದನ್ನು ಮೈತ್ರೇಯ ಬುದ್ಧ ಎಂದು ಕರೆಯುತ್ತಾರೆ. ಹದಿನಾಲ್ಕನೇ ದಲಾಯ್‌ ಲಾಮಾ ರವರು 1970ರಲ್ಲಿ ಇಲ್ಲಿಗೆ ಭೇಟಿ ನೀಡಿದ ಸಂದರ್ಭದ ನೆನಪಿಗಾಗಿ ಈ ವಿಗ್ರಹವನ್ನು ಸ್ಥಾಪಿಸಿದೆ. ತಿಕ್ಸೆ ಗೊಂಪ, ಹೆಮಿಸ್‌ ಗೊಂಪದ ನಂತರ ಎರಡನೇ ಸ್ಥಾನದಲ್ಲಿದೆ. (ಗೊಂಪ = ದೇವಸ್ಥಾನ/ಬೌದ್ಧಮಠ). 

ಲೆಹ್‌ ಮತ್ತು ಶೆ (Shey) ಅರಮನೆಗಳು:
ಲೆಹ್‌ ಅರಮನೆ ಪಟ್ಟಣದ ಉತ್ತರಕ್ಕೆ ಎರಡು ಕಿ.ಮೀ. ಅಂತರದಲ್ಲಿ ಎತ್ತರ ಪ್ರದೇಶದಲ್ಲಿದೆ. ಇದು ಟಿಬೆಟ್ಟಿನ ಲ್ಹಾಸಾ ದಲ್ಲಿರುವ ಪೊಟಾಲ ಅರಮನೆ ಮಾದರಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಹದಿನೇಳನೇ ಶತಮಾನದ ಪ್ರಾರಂಬದ ವೇಳೆಗೆ ಲೆಹ್‌ ಹಿಮಾಲಯ ರಾಜ್ಯದ ರಾಜಧಾನಿಯಾಗಿತ್ತು. ಆಗಿನ ರಾಜ ನಾಮ್ಗ್ಯಾಲ್‌ ಅರಸೊತ್ತಿಗೆಯ ಸ್ಥಾಪಕ ತ್ಸೆವಾಂಗ್‌ ನಾಮ್ಗ್ಯಾಲ್‌ ಈ ಕಲ್ಲಿನ ಅರಮನೆಯನ್ನು ನಿರ್ಮಿಸಲು ಪ್ರಾರಂಬಿಸಿದಾಗ್ಯೂ ಸೆಂಗ್ಗೆ ನಾಮ್ಗ್ಯಾಲ್‌ ಕಾಲದಲ್ಲಿ ಪೂರ್ಣಗೊಂಡಿದೆ… ಲಾಚೆನ್‌ ಪಾಲ್ಕಾರ್‌ ಎಂಬ ಹೆಸರಿನಿಂದಲೂ ಇದು ಕರೆಯಲ್ಪಡುತ್ತದೆ. ಅರಮನೆ ಒಂಬತ್ತು ಅಂತಸ್ತುಗಳನ್ನು ಒಳಗೊಂಡಿದೆ. ಹತ್ತೊಂಬತ್ತನೇ ಶತಮಾನದಲ್ಲಿ ಜಮ್ಮು-ಕಾಶ್ಮೀರದ ದೋಗ್ರಿಗಳು ಈ ಸಂಸ್ಥಾನವನ್ನು ಆಕ್ರಮಿಸಿಕೊಂಡ ಮೇಲೆ ನಾಮ್ಗ್ಯಲ್‌ ವಂಶಸ್ಥರು Zanskar ದಕ್ಷಿಣ ಪರ್ವತ ಶ್ರೇಣಿಯ ಸ್ಟೋಕ್‌ ಕಾಂಗ್ರಿಯಲ್ಲಿರುವ ಸ್ಟೋಕ್‌ ಮಠದಲ್ಲಿ ನೆಲೆಸಿತು. ಶಿತಿಲಾವಸ್ಥೆಯಲ್ಲಿರುವ ಈ ಅರಮನೆಯೀಗ ಎಎಸ್‌ಐ(Archaeological Survey of India) ವಶದಲ್ಲಿ ಪುನುರಜ್ಜೀವನದಲ್ಲಿದೆ. ಅರಮನೆಗೆ ಟಿಕಟ್‌ ಮೂಲಕ ಮಾತ್ರ ಪ್ರವೇಶ. 

ಲೆಹ್‌ ನಿಂದ ದಕ್ಷಿಣಕ್ಕೆ 15ಕಿ.ಮೀ. ದೂರದಲ್ಲಿ ಲೆಹ್‌-ಮನಾಲಿ ರಾಸ್ಟ್ರೀಯ ಹೆದ್ದಾರಿಯಲ್ಲಿ ಸಣ್ಣ ಕಲ್ಲುಗುಡ್ಡದ ಮೇಲೆ ಶೆ ಅರಮನೆಯಿದೆ. ಗುಡ್ಡದ ಮೇಲಿನಿಂದ ಸುತ್ತಲೂ ನೋಡಿದರೆ ಶೆ ಹಳ್ಳಿಯ ಸುತ್ತಲ ಹಸಿರು ಬಯಲು, ಕೃಷಿಭೂಮಿಯ ವಿಹಂಗಮ ನೋಟ ಕಾಣಬಹುದು. ಶೆ ಲಡಖ್‌ನ ರಾಜಧಾನಿಯಾಗಿತ್ತೆಂದು ಅಲ್ಲಿ ಹಾಕಿರುವ ನೀಲಿ ಫಲಕ ತಿಳಿಸಿತ್ತು. ದೊರೆ ಡೆಲ್ಡಾನ್‌ ನಾಮ್ಗ್ಯಾಲ್‌ 1655ರಲ್ಲಿ ಅರಮನೆ ನಿರ್ಮಿಸಿದನೆಂದು ಫಲಕ ತಿಳಿಸುತ್ತದೆ. ಶೆ ಎಂದರೆ ಲಡಖಿ ಭಾಷೆಯಲ್ಲಿ 'ಪ್ರತಿಬಿಂಬ' ಎಂದರ್ಥ. ಗುಡ್ಡದ ಮುಂಭಾಗದಲ್ಲಿ ಹರಡಿಕೊಂಡ ನೀರಿನಲ್ಲಿ ಕಾಣುತ್ತಿದ್ದ ಬಿಂಬದಿಂದ ಆ ಹೆಸರು ಬಂದಿರಬಹುದೆಂದು ತಿಳಿಯಬಹುದು. ಕಾಶ್ಮೀರದ ಕೊನೆಯ ದೋಗ್ರಿ ಅರಸೊತ್ತಿಗೆಯವರು ಅತಿಕ್ರಮಣ ಮಾಡುವವರೆಗೆ ಶೆ ಲಡಖಿನ ರಾಜಧಾನಿಯಾಗಿತ್ತು. Repeat- “ಅಧಿಕಾರ ಕಳೆದುಕೊಂಡ ನಾಮ್ಗ್ಯಾಲ್‌ ವಂಶ ಸ್ಟೋಕ್‌ ಕಾಂಗ್ರಿ ಪರ್ವತದಲ್ಲಿರುವ ಸ್ಟೋಕ್‌ ಮಠದಲ್ಲಿ ಮನೆಮಾಡಿತು,” ಎಂದು ಉಲ್ಲೇಖ ತಿಳಿಸುತ್ತದೆ. ಮೂರಂತಸ್ತಿನ ಅರಮನೆಯಲ್ಲಿ ಎರಡು ಬುದ್ಧ ಮೂರ್ತಿಗಳಿವೆ. ಮೊದಲನೆಯದು ತಾಮ್ರದಿಂದ ಮಾಡಿದ್ದು ಬಂಗಾರ ಲೇಪಿತವಾಗಿದೆ ಮತ್ತು ಮೂರಂತಸ್ತಿನ ಎತ್ತರಕ್ಕೂ ಇದೆಯೆಂದು ತಿಳಿಯುತ್ತದೆ. ಎರಡನೆಯದು ಅರಮನೆಗೆ ಹೊಂದಿಕೊಂಡಿರುವ ಗೊಂಪದಲ್ಲಿ ಕುಳಿತ ಭಂಗಿಯಲ್ಲಿದೆ. ವೀಕ್ಷಣೆಗೆ ಟಿಕೆಟ್‌ಮೂಲಕ ಮಾತ್ರ ಪ್ರವೇಶವಿದೆ. ಎಎಸ್‌ಐ(Archaeological Survey of India) ನವರು ಅರಮನೆ ಶಿಥಿಲಾವಸ್ಥೆಯಲ್ಲಿ ಇರುವುದರಿಂದ ಒಳಾವರಣ ನೋಡಲು ಬಿಡದೆ ಬೀಗ ಹಾಕಿ ಪ್ರವೇಶ ನಿಷೇಧಿಸಿದ್ದಾರೆ. 

ದ್ರುಕ್‌ ವೈಟ್‌ ಲೋಟಸ್‌ ಸ್ಕೂಲ್‌:
ಲಡಖ್‌ ಪ್ರಾಂತದ ಶ್ರೀಮಂತ ಸಂಸ್ಕೃತಿ, ಸಂಪ್ರದಾಯ ಮತ್ತು ಟಿಬೆಟನ್‌ ಬೌದ್ಧಧರ್ಮದ ಆಚಾರ ವಿಚಾರಗಳನ್ನು ಅವರ ಮಕ್ಕಳು ಕಲಿತು ಮುಂದಿನ ತಲೆಮಾರಿಗೆ ಕೊಂಡುಯ್ಯುವ ಮುಖ್ಯ ಉದ್ದೇಶದಿಂದ ಲಡಖ್‌ನ ದೈವಾಂಶ ನಾಯಕರಾದ 12ನೇ ಗ್ಯಾಲ್ವಾಂಗ್‌ ದ್ರುಕ್ಪಾರವರು ದ್ರುಕ್‌ ವೈಟ್‌ ಲೋಟಸ್‌ ಸ್ಕೂಲ್‌ ಅನ್ನು 2001ರಲ್ಲಿ ಸ್ಥಾಪಿಸಿರುತ್ತಾರೆ. ಅಂತಾರಾಷ್ಟ್ರೀಯ ಖ್ಯಾತಿಯ ಅರುಪ್‌ ಅಂಡ್‌ ಓವೆ ಅರುಪ್‌ ನಿರ್ಮಾಣ ಸಂಸ್ಥೆಯವರು ಸ್ಥಳೀಯ ತಾಂತ್ರಿಕತೆ ಮತ್ತು ಸಾಮಗ್ರಿಗಳನ್ನು ಬಳಸಿ ಸ್ಥಳೀಯ ಪರಿಸರ ಮತ್ತು ಹವಾಮಾನಕ್ಕೆ ಹೊಂದಿಕೊಳ್ಳುವಂತೆ ವಿನ್ಯಾಸಮಾಡಿ ನಿರ್ಮಾಣ ಮಾಡಿರುತ್ತಾರೆ. ಶಾಲೆ ಲಡಖ್‌ ಪ್ರಾಂತದ ಕಡುಬಡವ ಮಕ್ಕಳನ್ನೂ ಪ್ರಾಯೋಜನೆ ಮೇಲೆ ಸೇರಿಸಿಕೊಳ್ಳುತ್ತದೆ. ಲಡಖಿ ಮತ್ತು ಇಂಗ್ಲೀಶ್‌ ಭಾಷೆಗಳಲ್ಲಿ ಭೋದನೆ ಮಾಡುತ್ತದೆ. ಅಮೆರಿಕದ ಪಬ್ಲಿಕ್‌ ಬ್ರಾಡ್‌ಕ್ಯಾಸ್ಟಿಂಗ್‌ ಸರ್ವೀಸ್‌ ಸಂಸ್ಥೆ ಈ ಶಾಲೆಯ ಬಗ್ಗೆ 2007ರಲ್ಲಿ ನಿರ್ಮಿಸಿದ ಸಾಕ್ಷ್ಯಚಿತ್ರ ಟಿವಿ ವಾಹಿನಿಗಳ ಮೂಲಕ ಪ್ರಪಂಚದಾದ್ಯಂತ ಪ್ರಸ್ತುತವಾಗಿದೆ. ಶಾಲೆ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಕಟ್ಟಡ ನಿರ್ಮಾಣದ ಸಲುವಾಗಿ ಪಡೆದುಕೊಂಡಿದೆ. ಜೊತೆಗೆ ಈಶಾಲೆ ಅಮೀರ್‌ಖಾನ್‌ ನಿರ್ಮಿತ ಚಲಚಿತ್ರ, “3 ಈಡಿಯಟ್ಸ್‌”ನ ಕೊನೆಯ ದೃಶ್ಯಗಳನ್ನಿಲ್ಲಿ ಚಿತ್ರೀಕರಿಸಿಕೊಂಡಿದೆ. ಈ ಚಲಚಿತ್ರ ಶಾಲೆಗೆ ಬಹಳಷ್ಟು ಪ್ರಚಾರ ಗಳಿಸಿಕೊಟ್ಟುದುದರಿಂದ ಲೆಹ್‌ ಗೆ ಬರುವ ಹೆಚ್ಚು ಪ್ರವಾಸಿಗರು ಗುಂಪುಗುಂಪಾಗಿ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಅದಕ್ಕಾಗಿ ಶಾಲೆ ಒಬ್ಬ ಗೈಡ್‌ನನ್ನು ನೇಮಿಸಿದೆ. ವರ್ಷ 2010ರ ಆಗಸ್ಟ್‌ ಮಾಸದಲ್ಲಿ ಸುರಿದ ಭಾರೀ ಮಳೆ ಮತ್ತದರ ಕಲ್ಲುಗುಂಡು-ಕೆಸರು ಮಿಶ್ರಿತ ಪ್ರವಾಹ ಶಾಲೆಗೆ ನುಗ್ಗಿ ಬಹಳಷ್ಟುಮಟ್ಟಿಗೆ ಹಾಳುಮಾಡಿದ್ದಿತೆಂದು ಗೈಡ್‌ ಹೇಳುತ್ತಿದ್ದರು. ಮತ್ತು ಶಾಲೆ ಮತ್ತಷ್ಟು ನಿರ್ಮಾಣ ವಿಸ್ತರಣೆ ಹಂತದಲ್ಲಿತ್ತು. 

ಮಧ್ಯಾಹ್ನದ ಊಟವನ್ನು ಸಣ್ಣ ಹೊಟೆಲಿನಲ್ಲಿ ಮಾಡಿದೆವು. ಸಾಯಂಕಾಲವಾಗುತ್ತಿತ್ತು. ಯಶಪಾಲ ಮ್ಯಾಗ್ನೆಟಿಕ್‌ ಹಿಲ್‌ ಹತ್ತಿರವಿದೆಯೆಂದು ಹೇಳಿ ಜೀಪನ್ನು ತಿರುಗಿಸಿ ಶ್ರೀನಗರ ಕಡೆಗಿನ ರಾ.ಹೆ. 1ಡಿ ಯಲ್ಲಿ ಓಡಿಸಿದ. ಸುಮಾರು 10 ಕಿ.ಮೀ. ಹೋದಮೇಲೆ ದಾರಿಹೋಕರನ್ನು ವಿಚಾರಿಸಲಾಗಿ ಇನ್ನೂ 30 ಕಿ.ಮೀ ದೂರ ಹೋಗಬೇಕೆಂದು ತಿಳಿಸಿದರು. ಕತ್ತಲಾಗುತ್ತದೆಂದು ತಿಳಿದು ಪುನಃ ಜೀಪನ್ನು ಲೆಹ್‌ ಕಡೆಗೆ ತಿರುಗಿಸಿದ ಯಶಪಾಲ. ದಾರಿಯಲ್ಲಿದ್ದ ಪೆಟ್ರೋಲ್‌ ಪಂಪಿನಲ್ಲಿ ಮಾರನೆ ದಿನದ ಪ್ರಯಾಣಕ್ಕೆ ಜೀಪಿಗೆ ಟ್ಯಾಂಕ್‌ಪೂರ್ಣ ಇಂಧನ ತುಂಬಿಸಿಕೊಂಡು ಗೆಸ್ಟ್‌ ಹೌಸ್‌ಗೆ ಹಿಂದುರಿಗಿದೆವು. ರಾತ್ರಿ ಊಟಕ್ಕೆ ಆದೇಶ ನೀಡಿದೆವು. ಮೇಟ್ರನ್‌ ಹತ್ತಿರ ನೂಬ್ರ ಕಣಿವೆ ಮತ್ತು ಪ್ಯಾಂಗೊಂಗ್‌ ಸರೋವರ ವೀಕ್ಷಣೆಗೆ ಜಲ್ಲಾಧಿಕಾರಿಗಳು ನೀಡಿದ ಅನುಮತಿ ಪತ್ರ ಪಡೆದುಕೊಂಡೆವು. ಪುಷ್ಪಲತ ಕಳೆದ ಐದೂ ದಿನಗಳ ಪ್ರಯಾಣದಿಂದ ಹುಷಾರು ತಪ್ಪಿದ್ದಳು. ಪ್ರವಾಸದಿಂದ ಹಿಂದುರಿಗಿದ ಮೇಲೆ ಮೈಸೂರಿಗೆ ಹೋಗಿ ಆಪರೇಷನ್‌ ಮಾಡಿಸಿಕೊಳ್ಳಲು ಡಾಕ್ಟರಲ್ಲಿ ಸಮಯಾವಕಾಶ ಬೇರೆ ತೆಗೆದುಕೊಂಡಿದ್ದಳು. ಸದ್ಯಕ್ಕೆ ನಮ್ಮ ಮಗಳು ಡಾಕ್ಟರ್‌ ಸಿಂಚನ ಅವಳ ಔಷಧಿ ಮತ್ತು ಶುಶ್ರೂಷೆ ಉಸ್ತುವಾರಿ ವಹಿಸಿದ್ದಳು. ಅಂಗಡಿ ಹುಡುಕಿಕೊಂಡು ಹೋಗಿ ಔಷಧಿ-ಮಾತ್ರೆ ತಂದು ಉಪಚರಿಸಿದಳು. 

ಜೂನ್‌ 8, ಆರನೇ ದಿನ:
ಬೆಳಗ್ಗೆ ಬೇಗನೆ ಎದ್ದು ಐದೂವರೆ ಗಂಟೆಯೊಳಗೆ ಎಲ್ಲರೂ ಸ್ನಾನ ಮುಗಿಸಿ ನೂಬ್ರ ಕಣಿವೆಗೆ ಹೊರಡಲು ಸಿದ್ಧವಾದೆವು. ಸಿಂಚನ ಒಂದಷ್ಟು ಚಾಕೊಲೆಟ್‌ಗಳನ್ನು ಮತ್ತು ಪುಷ್ಪಲತಳಿಗಾಗಿ ಔಷಧಿ ತೆಗೆದುಕೊಂಡಿದ್ದಳು. ಆರು ಗಂಟೆಗೆ ಸರಿಯಾಗಿ ಗೆಸ್ಟ್‌ ಹೌಸ್‌ ಬಿಟ್ಟು ಲೆಹ್‌ನಿಂದ ಉತ್ತರದ ಕಡೆಗೆ ಸಿಯಾಚಿನ್‌ ಗ್ಲೇಸಿಯರ್‌ ಕಡೆಗೆ ಹೋಗುವ ಪರ್ವತದ ಏರು ರಸ್ತೆಯಲ್ಲಿ ಹೊರಟೆವು. ಖಾರ್ದುಂಗ್‌ ಲಾ ಪಾಸ್‌ ದಕ್ಷಿಣ ಚೆಕ್‌ಪೋಸ್ಟ್‌ ಸೌತ್‌ ಪುಲ್‌ ನಲ್ಲಿ ಅನುಮತಿ ಪತ್ರಗಳನ್ನು ದಾಕಲಿಸಿದೆವು. ಅಲ್ಲಿಯೇ ಹಾಕಿದ್ದ ಸೂಚನಾ ಫಲಕದಲ್ಲಿ ಪಾಸ್‌ನಲ್ಲಿ ಎಷ್ಟು ಸಮಯ ಉಳಿದು ಮತ್ತು ಹೇಗೆ ನಡೆದು ಕೊಳ್ಳಬೇಕೆಂಬ ತಿಳುವಳಿಕೆ, ಸಲಹೆ ನೀಡಿದ್ದರು. 

ಖಾರ್ದುಂಗ್‌ ಲಾ:
ಸುಮಾರು ಎಂಟು ಗಂಟೆ ವೇಳೆಗೆ ಖಾರ್ದುಂಗ್‌ ಲಾ ಪಾಸ್‌ (ಸ.ಮ.ದಿಂದ 18380ಅಡಿ) ತಲುಪಿದೆವು. ಲೆಹ್‌ನಿಂದ ಇದು ಸುಮಾರು 40ಕಿ.ಮೀ. ಏರು ಪ್ರಯಾಣ. ನಮ್ಮ ಈ ಪ್ರವಾಸದಲ್ಲಿ ನಾವು ಈವರೆಗೆ ದಾಟಿದ ಪಾಸ್‌ಗಳಲ್ಲಿ ಇದೇ ಎತ್ತರದ ಪಾಸ್‌. ಇದು ಪ್ರಪಂಚದಲ್ಲಿಯೇ ಮೋಟಾರು ವಾಹನಗಳು ಒಡಾಡುವಂತೆ ಮಾಡಲಾಗಿರುವ ಅತಿ ಎತ್ತರದ ಪಾಸ್‌ ಎಂದು ದಾಖಲಾಗಿದೆ. ಇಲ್ಲೊಂದು ಬಿಸಿ ಚಹಾ ಸಿಗುವ ಶೆಡ್‌-ಕ್ಯಾಂಟೀನ್‌ ಇದೆ. ಹಾಗೆಯೇ ಒಂದು ಆಮ್ಲಜನಕದ ಕೊರತೆ ನೀಗಿಸಲು ಡಾಕ್ಟರ್‌ ಸಹಿತದ ಆರೋಗ್ಯ ಕೇಂದ್ರವಿದೆ. ಜೀಪು ನಿಲ್ಲಿಸಿ ನಾನು ಮತ್ತು ಯಶಪಾಲ ಇಳಿದೆವು. ಉಳಿದವರಾರೂ ಇಳಿಯಲಿಲ್ಲ. ಬಲವಾದ ಭಯಂಕರ ಚಳಿಗಾಳಿ ಬೀಸುತ್ತಿತ್ತು. ದೇಹ ಹಗುರವಾಗಿದ್ದು ಚಳಿಗಾಳಿಗೆ ತೂರಿಹೋಗುತ್ತಿರುವಂತಹ ಅನುಭವ. ಬೆಚ್ಚಗಿನ ಉಡುಪು ಧರಿಸಿದ್ದಾಗ್ಯೂ ತಡೆಯಲಾರದ ಚಳಿ. ಬೇಗನೆ ಚಹಾ ಶೆಡ್ಡಿನೊಳಗಡೆ ತೂರಿಕೊಂಡು ಎರಡು ಕರಿ ಚಹಾ ಪಡೆದು ನಾನು ಯಶಪಾಲ ನಿಧಾನವಾಗಿ ಕುಡಿದೆವು. ಚಹಾ ಸುವಾಸಿತವಾಗಿ ಮಧುರವಾಗಿತ್ತು. ನಾನು ಹಲವಾರು ಚಹಾಪುಡಿಗಳನ್ನು ಅಂಗಡಿಯಿಂದ ತಂದು ಮನೆಯಲ್ಲಿ ಪ್ರಯೋಗ ಮಾಡಿದ್ದೇನೆ. ಈ ರೀತಿಯ ಮಧುರತೆ ನಾನು ಮಾಡಿದ ಕರಿ ಚಹಾಕ್ಕೆ ಬಂದಿರಲಿಲ್ಲ. ಇಲ್ಲಿಯೂ ಸಹ ಸೂಚನಾ ಫಲಕವಿತ್ತು… ಅರ್ಧ ಗಂಟೆಗಿಂತ ಹೆಚ್ಚು ಹೊತ್ತು ಇರುವಂತಿರಲಿಲ್ಲ. 

ಹತ್ತು ನಿಮಿಷಗಳನಂತರ ನಾರ್ತ್‌ ಪುಲ್‌ ಕಡೆಗೆ ಪರ್ವತ ಇಳಿಯುತ್ತಿದ್ದೆವು. ರಸ್ತೆ ಅಲ್ಲಲ್ಲಿ ಖರಾಬಾಗಿತ್ತು. ಮಂದಗತಿಯ ಪ್ರಯಾಣ. ನಾರ್ತ್‌ ಪುಲ್‌ ತಲುಪಿದ ಮೇಲೆ ಅಲ್ಲಿರುವ ಪೊಲೀಸ್‌ ಚೆಕ್‌ಪೋಸ್ಟ್‌ನಲ್ಲಿ ನಮ್ಮ ಅನುಮತಿ ಪತ್ರವನ್ನು ನೀಡಿ ನಿರಾತಂಕವಾಗಿ ಮುಂದಕ್ಕೆ ಪ್ರಯಾಣಿಸಿದೆವು. ಇಲ್ಲಿಂದ ಕಳಕ್ಕೆ ಇಳಿಯುತ್ತಾ ಹೋದಂತೆ ಕಣಿವೆಗಳಲ್ಲಿ ಅಲ್ಲಲ್ಲಿ ಬಯಲು ಹುಲ್ಲುಗಾವಲುಗಳಲ್ಲಿ ಹಸುಗಳು ಯಾಕ್‌ಗಳು ಮೇಯುತ್ತಿರುವುದು ಕಾಣಬರುತ್ತಿತ್ತು. ಹಳ್ಳಿ, ಖಾರ್ದುಂಗ್‌ ತಲುಪಿದ ಹಾಗೆ ಬಾರ್ಲಿ ಗೋದಿ ಸಾಸಿವೆ ಹೊಲಗಳು ಕಾಣಿಸಿದವು. ಪಾಸ್‌ನಿಂದ ಸುಮಾರು 43 ಕಿ.ಮೀ. ದೂರವಿತ್ತು. ಗಂಟೆ ಹತ್ತಾಗುತ್ತಲಿತ್ತು. ಹಸಿವಾಗುತ್ತಿತ್ತು. ಯಶಪಾಲ ಹಳ್ಳಿಯ ರಸ್ತೆ ಪಕ್ಕದ ಹೊಟೆಲ್‌ ಬಳಿ ಜೀಪು ನಿಲ್ಲಿಸಿದ. ಮೂರ್ನಾಲ್ಕು ಲಡಕಿ ಹುಡುಗಿಯರ ಗುಂಪು ಉಪಾಹಾರ ಮುಗಿಸಿ ಚಹ ಕುಡಿಯುತ್ತಿದ್ದರು. ನಮಗೆಲ್ಲರಿಗೂ ಕುಳಿತುಕೊಳ್ಳಲು ಜಾಗವಿರಲಿಲ್ಲ. ನಮ್ಮನ್ನು ನೋಡಿದವರೇ ಲಘುಬಗನೆ ಚಹ ಕುಡಿದು ನಮಗೆ ಜಾಗ ಖಾಲಿ ಮಾಡಿಕೊಟ್ಟರು. ನಾವು ನೂಡಲ್‌ ಅರ್ಡರ್‌ ಮಾಡಿದೆವು. ಅದನ್ನು ಬಿಟ್ಟರೆ ಬ್ರೆಡ್‌… ಹೊರತು ಮತ್ತೇನೂ ಸಿಗುತ್ತಿರಲಿಲ್ಲ. ಹಾಗಾಗಿ ಅದೇ ನಮ್ಮ ಬೆಳಗಿನ ಉಪಾಹಾರವಾಯಿತು. ಜೊತೆಗೆ ಚಹಾ ಕುಡಿದೆವು. 

ಖಾರ್ದುಂಗ್‌ನಿಂದ ಕೆಳಗಿಳಿದಂತೆ ಹುಲ್ಲುಗಾವಲು ಮಾಯವಾಗಿ ದೊಡ್ಡ ಕೊಳ್ಳ ಪ್ರಾರಂವಾಗುತ್ತದೆ. ಕೊಳ್ಳದ ಪಕ್ಕದಲ್ಲಿಯೇ ಎತ್ತರಕ್ಕಿರುವ ಎರಡೂ ಕಡೆಯ ಗಿರಿಶಿಖರಗಳು ಕಬ್ಬಿಣದ ಖನಿಜದಂತೆ ಕಪ್ಪಗಿದ್ದವು. ಮುಂದೆ ಖಲ್ಸಾರ್‌ವರೆಗೂ ಕೊಳ್ಳದ ದಂಡೆ ರಸ್ತೆಯಲ್ಲಿಯೇ ಹೋಗಬೇಕು. ಖಲ್ಸಾರ್‌ ಬಳಿ ಎದುರಿಗೆ ಬಂದ ಭಾರತೀಯ ಸೈನ್ಯಕ್ಕೆ ಸೇರಿದ ಟ್ರಕ್ಕೊಂದರ ಚಾಲಕ ನಿಧಾನಮಾಡಿ ಪಕ್ಕಕ್ಕೆ ನಿಲ್ಲಿಸಿ ನಗೆಮಖ ತೋರಿ ಕೈಬೀಸಿ “ಕಹಾ ಸೆ ಆಯಾ?” ಎಂದು ಹಿಂದಿಯಲ್ಲಿ ಕೇಳಿದ. ಯಶಪಾಲ “ಬೆಂಗಳೂರು” ಎಂದು ಹೇಳಿದ. ಆತ ಪುನಃ “ಇಲ್ಲೆಲ್ಲಾ ಚೆನ್ನಾಗಿದೆಯಾ?” ಎಂದು ಮತ್ತೊಮ್ಮೆ… ಕನ್ನಡದಲ್ಲಿ ಕೇಳಿದ. ನಾನು “ಹೂಂ… ಚೆನ್ನಾಗಿದೆ,” ಎಂದುತ್ತರಿಸಿದೆ. ಆತ ನಮ್ಮ ಜೀಪಿನ ರಿಜಿಸ್ಟ್ರೇಷನ್‌ ನೋಡಿ ಕರ್ನಾಟಕದವರೆಂದು ಗುರುತಿಸಿ ವಿಚಾರಿಸಿದನೆಂದು ಕಾಣುತ್ತದೆ. ವಾಹನಗಳು ಚಲಿಸಿ ಆಚೀಚೆ ಮುಂದೆ ಹೋದವು. 

ನೂಬ್ರ ಕಣಿವೆ:
ಖಲ್ಸಾರ್‌ ದಾಟಿದಮೇಲೆ ಸಿಂಧುವಿನ ಉಪನದಿ ಶ್ಯೋಕ್‌ನ ಪಾತಳಿಗಿಳಿದು ಮರಳಮೇಲೆ ಮಾಡಿರುವ ರಸ್ತೆಯಲ್ಲಿ ಮುಂದೆ ಹೋಗಬೇಕಿತ್ತು. ಆಗ್ನೇಯದ ಕಡೆಯಿಂದ ಹರಿದು ಬರುವ ಶ್ಯೋಕ್‌ ನದಿ ಮತ್ತು ವಾಯುವ್ಯದ ಕಡೆಯಿಂದ ಹರಿದುಬರುವ ನೂಬ್ರ ನದಿಗಳ ಸಂಗಮದ ಬಯಲು ತಳ. ಮರಳಿನ ಮರುಭೂಮಿಯಂತೆ ವಿಶಾಲವಾಗಿ ಹರಡಿತ್ತು. ಎಲ್ಲೋ ಒಂದು ಪಕ್ಕದಲ್ಲಿ ನೀಲಹಸಿರು ಬಣ್ಣದ ನೀರ್ಗಲ್ಲ ನೀರು ಹರಿಯುತ್ತಿತ್ತು. ನಾವೀಗ ಸ.ಮ.ದಿಂದ ಸುಮಾರು 10000 ಅಡಿಗಳೆತ್ತರದಲ್ಲಿರುವ ನೂಬ್ರ ಕಣಿವೆಯಲ್ಲಿದ್ದೆವು. “ನೂಬ್ರ” ಎಂದರೆ ಲಡಕಿ ಭಾಷೆಯಲ್ಲಿ “ಹೂವುಗಳ ಕಣಿವೆ” ಎಂದರ್ಥ. ಆದರೆ ನಮಗೆಲ್ಲೂ ಹೂವುಗಳು ಕಾಣಲಿಲ್ಲ. ಸಕಾಲವಾಗಿರಲಿಲ್ಲವೆಂದು ಕಾಣುತ್ತದೆ. ಅಲ್ಲೊಂದು ಕೈಮರವಿತ್ತು. ಅಲ್ಲಿಂದ ನೇರವಾಗಿ ನೂಬ್ರ ನದಿಯ ಎಡದಂಡೆಯಲ್ಲಿ ಮುಂದೆ ಹೋದರೆ ತಿರಿತ್‌, ಸುಮುರ್‌ ಮತ್ತು ಪನಾಮಿಕ್‌ ಎಂಬ ಹಳ್ಳಿಗಳು ಸಿಗುತ್ತವೆ. ಫನಾಮಿಕ್‌, ಕೈಮರದಿಂದ ಸುಮಾರು 40 ಕಿ.ಮೀ. ದೂರವಿದೆ. ಪ್ರವಾಸಿಗರಿಗದು… ನೂಬ್ರ ಕಣಿವೆಯ ಅಂತಿಮ ತಾಣ. ಅಲ್ಲಿಂದ ಮುಂದಕ್ಕೆ ಭಾರತೀಯ ಸೈನ್ಯದ ತಾಣಗಳು. ಪ್ರವಾಸಿಗರಿಗೆ ಪ್ರವೇಶ ನಿಶಷಿದ್ಧ… ಕೈಮರದ ಬಳಿಯಿದ್ದ ಟೆಂಟ್‌ವಾಲಾಗಳು ಆ ಮಾಹಿತಿ ನೀಡಿದರು. 

ಕೈಮರದಿಂದ ಎಡಕ್ಕೆ ತಿರುಗಿದರೆ ದಿಸ್ಕಿತ್‌ ಮತ್ತು ಹುಂಡರ್‌ ಎಂಬಲ್ಲಿಗೆ ಹೋಗುವ ಮರಳ ಮೇಲಿನ ರಸ್ತೆ ದಕ್ಷಿಣ ಕಡೆಯ ಗಿರಿಶ್ರೇಣಿಗೆ ತಲುಪಿ ಮುಂದುವರಿಯುತ್ತದೆ. ನಾವು ಎಡಕ್ಕೆ ತಿರುಗಿ 15 ಕಿ.ಮೀ. ದೂರದ ದಿಸ್ಕಿತ್‌ ನ ರಸ್ತೆಯಲ್ಲಿ ಹೊರಟೆವು. 

ಟಿಪ್ಪಣಿ: ಇಲ್ಲಿ ಸಂಗಮವಾಗುವ ನದಿಗಳು ಮುಂದೆ ಶ್ಯೋಕ್‌ ಹೆಸರಿನಲ್ಲಿ ಮಶ್ಚಿಮಕ್ಕೆ ಹರಿಯುತ್ತದೆ. ಸಿಯಾಚಿನ್‌ ಗ್ಲೇಸಿಯರ್‌ನಿಂದ ಹುಟ್ಟಿ ಬರುವ ನೂಬ್ರ ನದಿ ಇಲ್ಲಿ ಅದೇ ಸಿಯಾಚಿನ್‌ ಗ್ಲೇಸಿಯರ್‌ ನ ಪೂರ್ವಭಾಗದಲ್ಲಿರುವ ಅಕ್ಷಯ್‌ಚಿನ್‌ನ ರಿಮೊ ಗ್ಲೇಸಿಯರ್‌ನಲ್ಲಿ ಹುಟ್ಟಿ ಪ್ಯಾಂಗೊಂಗ್‌ ಕಡೆ ಹರಿದು ಸುತ್ತುವರಿದುಕೊಂಡು ಬರುವ ಶ್ಯೋಕ್‌ ನದಿ ಈ ಕಣಿವೆಯಲ್ಲಿ ನೂಬ್ರದೊಡನೆ ಮಿಳಿತವಾಗುತ್ತದೆ. ಇಲ್ಲಿಂದ ಮುಂದೆ ಹರಿಯುವ ನದಿಯೂ ಶ್ಯೋಕ್‌ ಎಂದಾಗುತ್ತದೆ; ನೇರ ಪಶ್ಚಿಮಕ್ಕೆ ಹರಿದು ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಕೆರೆಸ್‌ ಎಂಬಲ್ಲಿ ಸಿಂಧು ನದಿಗೆ ಸೇರಿಕೊಳ್ಳುತ್ತದೆ. ಇದೀಗ ಶ್ಯೋಕ್‌ ನದಿ ಕಣಿವೆ… ದಕ್ಷಿಣದ ಲಡಖ್‌ ಪರ್ವತಶ್ರೇಣಿ ಮತ್ತು ಉತ್ತರದ ಕಾರಕೋರಂ ಪರ್ವತಶ್ರೇಣಿಗಳನ್ನು ಬೇರ್ಪಡಿಸುತ್ತದೆ. ಅದಾಗ್ಯೂ ನೂಬ್ರ ಕಣಿವೆ ಎನ್ನುವ ಹೆಸರೇ ಬಳಕೆಯಲ್ಲಿದೆ. ಯಾಕಂದರೆ ದಿಸ್ಕಿತ್‌ನಲ್ಲಿ ನೂಬ್ರ ಕಣಿವೆ ಆಡಳಿತಕ್ಕೆ ಸೇರಿದ ಸರ್ಕಾರಿ ಕಚೇರಿಗಳಿವೆ. ನದಿ ಪಾತ್ರದಲ್ಲಿ ಅನಾದಿ ಕಾಲದಿಂದಲೂ ಮೆಕ್ಕಲುಮಣ್ಣು ಕೂತು ವ್ಯವಸಾಯಕ್ಕೆ ಅನುಕೂಲವಾಗಿರುವ ಭೂಮಿಯಲ್ಲಿ ಬಾರ್ಲಿ, ಗೋದಿ, ಸಾಸಿವೆ, ಆಲೂಗೆಡ್ಡೆ ಬೆಳೆದುಕೊಳ್ಳುವುದಲ್ಲದೆ ಸೇಬು, ಆಪ್ರಿಕಾಟ್‌, ವಾಲ್ನಟ್‌ ತೋಟಗಳನ್ನು ಇಲ್ಲಿನ ಜನ ಮಾಡಿಕೊಂಡಿದ್ದಾರೆ. ಕಣಿವೆಯ ಬಹುತೇಕ ಮಂದಿ ಲಡಖಿ ಬೌದ್ಧಮತೀಯರು, ಉಳಿದಂತೆ ಬಾಲ್ಟಿ ಮಾತನಾಡುವ ಮುಸ್ಲಿಮರು. ದಿಸ್ಕಿತ್‌ನಲ್ಲಿ ಪ್ರಾಚೀನ ಬೌದ್ಧ ಗೊಂಪಾ ಇದೆ. ಸುಮುರ್‌ ಮತ್ತು ಪನಾಮಿಕ್‌ನಲ್ಲಿಯೂ ಸಹ ಪ್ರಾಚೀನ ಬೌದ್ಧ ಗೊಂಪಾಗಳಿವೆಯೆಂದು ಇಲ್ಲಿಗೆ ಬರುವ ಪ್ರವಾಸಿಗರು, ಮತ್ತು ಸ್ಥಳೀಯರು ಹೇಳುತ್ತಾರೆ. ನೂಬ್ರ ಕಣಿವೆ ಒಂದು ಕಾಲಕ್ಕೆ ನೂಬ್ರ ಅರಸೊತ್ತಿಗೆಯ ರಾಜ್ಯವಾಗಿತ್ತೆಂದು ಚರಿತ್ರೆ ಹೇಳುತ್ತದೆ. 

ದಿಸ್ಕಿತ್‌ ತಲುಪಿದ ನಾವು ಬಹಳಷ್ಟು ಪ್ರವಾಸಿ ವಾಹನಗಳು ನಿಂತಿದ್ದ ಸ್ಥಳದ ಬಳಿ ಎರಡು ಡುಬ್ಬದ ಒಂಟೆಗಳ ಬಗ್ಗೆ ವಿಚಾರಿಸಿದೆವು. ಅಲ್ಲಿನ ಜನ ಹುಂಡರ್‌ಗೆ ಹೋಗಬೇಕೆಂದು ತಿಳಿಸಿದರು. ಹುಂಡರ್‌ ಅಲ್ಲಿಂದ ಎಂಟು ಕಿ.ಮೀಟರು ದೂರ. ರಾತ್ರಿ ಉಳಿದುಕೊಳ್ಳಲು ದಿಸ್ಕಿತ್‌ನಲ್ಲಿ ಕಡಿಮೆ ಬೆಲೆಗೆ ರೂಮುಗಳು ದೊರೆಯುತ್ತವೆಂಬ ಮಾಹಿತಿಯೂ ದೊರೆಯಿತು. ನಮಗೆ ಆಬಗ್ಗೆ ಆಸಕ್ತಿಯಿರಲಿಲ್ಲ… ಸಾಯಂಕಾಲದ ವೇಳೆಗೆ ಲೆಹ್‌ಗೆ ಹಿಂದಿರುಗಬೇಕಾಗಿತ್ತು. ಹಾಗಾಗಿ ನಾವು ದಿಸ್ಕಿತ್‌ನಲ್ಲಿ ನಿಲ್ಲಲೇ ಇಲ್ಲ. ನೇರವಾಗಿ ಹುಂಡರ್‌ಗೆ ಧಾವಿಸಿದೆವು. 

ಹುಂಡರ್‌ ಬಳಿ ಶ್ಯೋಕ್‌ ನದಿ ಬಯಲಿನಲ್ಲಿ ಮರಳು ದಿಣ್ಣೆಗಳು ಮರುಭೂಮಿಯಲ್ಲಿ ನಿರ್ಮಿತವಾಗುವ ಗುಡ್ಡಗಳಂತೆ ಗೋಚರಿಸುತ್ತಿದ್ದವು. ಅಲ್ಲಲ್ಲಿ ಎರಡು ಡುಬ್ಬದ ಒಂಟೆಗಳು ಓಡಾಡುವುದು ಕಾಣಸಿಗುತ್ತಿತ್ತು. ಹುಂಡರ್‌ ತಲುಪುತ್ತಿದ್ದ ಹಾಗೆ ಬಲಕ್ಕೆ ತಿರುಗಿ ನದಿ ಪಾತ್ರದ ಕಡೆಗೇ ಹೋಗಬೇಕು. ನೇರ ಮುಖ್ಯರಸ್ತೆಯಲ್ಲಿ ಹೋಗುವಂತಿರಲಿಲ್ಲ. ನಿಷೇಧಿಸಲಾಗಿತ್ತು. ಮುಂದಕ್ಕದು ಗಡಿ ಪ್ರದೇಶದ ಸೈನ್ಯದ ವಲಯ. ತೆಳುವಾಗಿ ಹರಿಯುವ ನದಿ ನೀರಿನಲ್ಲಿ ಆಟವಾಡಲು ಮತ್ತು ಒಂಟೆ ಮೇಲೆ ಕುಳಿತು ಮರಳು ದಿಣ್ಣೆಗಳ ಮೇಲೆ ಸುತ್ತಿಬರಲು ಮಾತ್ರ ಅವಕಾಶ. ಮುಖ್ಯರಸ್ತೆ ಬಿಟ್ಟು ಬಲಕ್ಕೆ ತಿರುಗಿ ಹೋಗುತ್ತಿದ್ದ ಹಾಗೆ ಒಂದು ಭಾರತೀಯ ಸೈನ್ಯದ ಕ್ಯಾಂಪ್‌ ಎದುರಾಗುತ್ತದೆ. ಒಳಗೆ ಹೋಗಲು ಅವಕಾಶವಿಲ್ಲ. ಹೊರಗಡೆ ಇರುವ ಶೌಚಾಲಯ ಮತ್ತು ಕ್ಯಾಂಟೀನ್‌ ಉಪಯೋಗಿಸಲು ಮಾತ್ರ ಅವಕಾಶ. ಗಂಟೆ ಹನ್ನೆರಡಾಗುತ್ತಿತ್ತು. ನಾವು ಕ್ಯಾಂಟೀನ್‌ ಬಳಿ ಜೀಪು ನಿಲ್ಲಿಸಿ ಊಟ-ತಿಂಡಿ ದೊರೆಯುವ ಬಗ್ಗೆ ವಿಚಾರಿಸಿದೆವು… ಕೇವಲ ದೋಸೆ ಮತ್ತು ನೂಡಲ್‌… ಸಾಂಬಾರು ರೆಡಿಯಾಗಲು ಇನ್ನೂ ಅರ್ಧ ಗಂಟೆ ಆಗಬೇಕೆಂದು ಹೇಳಿದ ಕ್ಯಾಂಟೀನ್‌ವಾಲ. ನಾವು ಅಲ್ಲಿಂದ ಹಾಗೆಯೇ ಅರ್ಧ ಕಿ.ಮೀ. ದೂರದಲ್ಲಿನ ನದಿನೀರು ಹರಿವ ಜಾಗವನ್ನು ಹುಡುಕಿ ಹೊರಟೆವು. 

ನದಿನೀರ ದಂಡೆಯಲ್ಲಿ:
ಬಂದಿದ್ದ ಪ್ರವಾಸಿಗರು ನೀರಿನ ಪಾತ್ರದ ಬಳಿ ಜಮಾಯಿಸಿದ್ದರು. ನಮ್ಮ ಹಾಗೆ ದೊಡ್ಡ ವಾಹನಗಳಲ್ಲಿ ಕುಟುಂಬಗಳ ಸಹಿತ ಬಂದಿದ್ದವರಿದ್ದರು. ಇಲ್ಲೂ ಕೂಡ ಮರಳಿನ ಮೇಲೆ ಜೆಲ್ಲಿಕುಸುಕಿ ಮಾಡಿದ್ದ ಕಿರಿದಾದ ರಸ್ತೆ. ಆಚೀಚೆ ಹೋಗುವಂತಿರಲಿಲ್ಲ. ಯಶಪಾಲ ಸ್ವಲ್ಪ ಗಟ್ಟಿ ನೆಲದ ಮೇಲೆ ನಮ್ಮ ಜೀಪನ್ನು ನೀರಿನ ಪಾತ್ರದ ಹತ್ತಿರ ನಿಲ್ಲಿಸಿದ. ನದಿ ನೀರನ್ನು ವ್ಯವಸಾಯಕ್ಕೆ ಉಪಯೋಗಿಸಿಕೊಳ್ಳಲು ಅಲ್ಲಲ್ಲಿ ಕಾಲುವೆಗಳನ್ನು ಮಾಡಿಕೊಂಡು ನೀರು ಹರಿಸಿಕೊಳ್ಳಲಾಗಿತ್ತು. ಹರಿವ ನೀರಿನಾಚಿನ ದಡದಲ್ಲಿ ಸೀಬಕ್‌ತಾರ್ನ್‌ ಎಂಬ ಮುಳ್ಳಿನ ಕುರುಚಲು ಕಾಡು ಬೆಳೆದುಕೊಂಡಿತ್ತು. ಒಂದಷ್ಟು ಎರಡು-ಡುಬ್ಬದ ಒಂಟೆಗಳು(Bactarian Camels) ಸೀಬಕ್‌ತಾರ್ನ್‌ ಗಿಡದ ಸೊಪ್ಪನ್ನು ಮೇಯುತ್ತಿದ್ದವು. ಕತ್ತೆಯೊಂದು ಸಹಾ ಅಲ್ಲಿ ಮೇಯುತ್ತಾ ಸುತ್ತಾಡುತ್ತಿತ್ತು. ಎಲ್ಲರೂ ಜೀಪಿಳಿದು ಕೊರೆಯುವ ನೀರಿಗಿಳಿದು ಆಚೀಚೆ ಓಡಾಡಿದರು. ಸಿಂಚನ, ಚಿನ್ಮಯಿ, ಯಶಪಾಲ ಆಟವಾಡುತ್ತಾ ಕತ್ತೆ ಜೊತೆಯೂ ಛಾಯಾಚಿತ್ರ ತೆಗೆದುಕೊಂಡರು. ಪುಷ್ಪಲತಾಳಿಗೆ ಮೈಯಲ್ಲಿ ಹುಷಾರಿರಲಿಲ್ಲ. ಆದಾಗ್ಯೂ ನೀರಿಗಿಳಿದು ಚಿತ್ರ ತೆಗಿಸಿಕೊಂಡಳು. ಜೀಪು, ಕೆಸರು ರಸ್ತೆಗಳಲ್ಲಿ ಬಂದು ತುಂಬಾ ಕೊಳೆಯಾಗಿದ್ದಿತು. ನಾನು ಮತ್ತು ವಸಂತ ಬಕೆಟ್‌ ತೆಗೆದುಕೊಂಡು ಸ್ವಲ್ಪ ನೀರೆರಚಿ ತೊಳೆಯಲು ಪ್ರಾರಂಬಿಸಿದೆವು. ಯಶಪಾಲನೂ ಸೇರಿಕೊಂಡು ಅವನಷ್ಟು ಜೀಪು ತೊಳೆದ. 

ಮರಳಿನಲ್ಲಿ ಹೂತುಹೋದ ಸ್ಕಾರ್ಪಿಯನ್‌ ಜೀಪು:
ಈ ಸಮಯದಲ್ಲಿ ಪಂಜಾಬಿನಿಂದ ಸ್ಕಾರ್ಪಿಯನ್‌ ಜೀಪಿನಲ್ಲಿ ಬಂದಿದ್ದ ಕುಟುಂಬದ ಯಜಮಾನ… ಬಹುಷಃ ಜಾಹೀರಾತಿನ ಪ್ರಭಾವಕ್ಕೆ ಒಳಗಾಗಿರಬಹುದು ಆತ… ನೀರಿನಲ್ಲಿ ವಾಹನಗಳನ್ನು ಆಚೀಚೆ ಓಡಾಡಿಸಬಾರದೆಂದು ಸೂಚನಾ ಫಲಕವನ್ನು ಹಾಕಿದ್ದರೂ ಸಹ ಜೀಪನ್ನು ಹರಿಯುವ ನೀರಿನಲ್ಲಿ ಆಚೆಗೊಮ್ಮೆ ಮತ್ತು ಈಚೆಗೊಮ್ಮೆ ನೀರನ್ನು ಚಿಮ್ಮಿಸುತ್ತಾ ಓಡಿಸುತ್ತಾ ಆತನ ಮಕ್ಕಳಿಂದ ಛಾಯಾಚಿತ್ರ ತೆಗೆಸಿಕೊಳ್ಳುತ್ತಿದ್ದರು. ಇಷ್ಟೂ ಸಾಲದೆಂಬಂತೆ ನೀರಿನಿಂದ ಈಚೆ ಬಂದ ಆತ ಜೀಪನ್ನು ಬರ್‌ರ‍್ರನೆ ಓಡಿಸುತ್ತಾ ಸುತ್ತುವರಿದು ರಸ್ತೆಯಿಂದಾಚೆಗೆ ಹೋಗಿ ಮರಳ ರಾಶಿಗೆ ನುಗ್ಗಿಸಿದ. ಸ್ಕಾರ್ಪಿಯನ್‌, ಜಾಹೀರಾತಿನಲ್ಲಿ ಹಾರಿ ನುಗ್ಗಿಬಂದಂತೆ ಇಲ್ಲಿ ನುಗ್ಗಿ ಬರಲಿಲ್ಲ. ಬದಲಾಗಿ ಮರಳಿನಲ್ಲಿ ಹೂತುಕೊಂಡಿತು. ಜೀಪು ನೇರವಾಗಿ ನಿಂತಿರಲಿಲ್ಲ. ಸ್ವಲ್ಪ ತಿರುವುಪಡೆದು ನಿಂತುಕೊಂಡಿತ್ತು. ಎಕ್ಸಲರೇಟರ್‌ ಕೊಟ್ಟು ಮೂರ್ನಾಲ್ಕು ಬಾರಿ ಪ್ರಯತ್ನಸಿದಂತೆಲ್ಲಾ ಜೀಪಿನ ಹಿಂದಿನ ಚಕ್ರಗಳು ಮರಳಿನಲ್ಲಿ ಮತ್ತಷ್ಟು ಹೂತುಕೊಂಡವು. ಎಲ್ಲಾ ಸೇರಿ ತಳ್ಳುವ ಪ್ರಯತ್ನವೂ ವಿಫಲವಾಯಿತು. ಆತ ಕೈ ಕೈ ಹಿಸುಕಿಕೊಳ್ಳುತ್ತಿದ್ದ. ಹೆಂಡತಿ ಬೈಯ್ಯುತ್ತಿದ್ದಳು. ಹತ್ತಿರದಲ್ಲಿ ನಿಂತಿದ್ದ ಇನ್ನೊಂದು ವಾಹನದ ಚಾಲಕನ ಬಳಿ ಹೋಗಿ ಸಹಾಯ ಕೇಳಿದ. ಯಾರ ಬಳಿಯೂ ಶೊವೆಲ್‌ ಇರಲಿಲ್ಲ. ವಸಂತ ಮತ್ತು ನಾನು ಜೀಪು ತೊಳೆಯುತ್ತಾ ಆತನ ಪೀಕಲಾಟದ ಬಗ್ಗೆ ಮಾತನಾಡುತ್ತಾ ಅಗಾಗ್ಗೆ ಆಕಡೆ ಗಮನಿಸುತ್ತಿದ್ದೆವು. ಆತ ಕೊನೆಗೆ ನಮ್ಮ ಬಳಿಗೆ ಬಂದು ಸಹಾಯ ಕೇಳಿದ. ವಸಂತ, ಹಾಗೇಕೆ ಮಾಡಿಕೊಂಡಿರೆಂದು ಹಿಂದಿಯಲ್ಲಿ ಪ್ರಶ್ನಿಸಿದಳು. ಆತ ತಲೆಕೆರೆದುಕೊಳ್ಳುತ್ತಾ ಬೆರಳುಮಾಡಿ ಬುದ್ದಿಯಿಲ್ಲದೆ ಮಾಡಿಕೊಂಡೆ ಎಂಬಂತೆ ಸೂಚಿಸಿದ. ಆತನ ಹೆಂಡತಿಯೂ ವಸಂತಳ ಬಳಿ ಬಂದು ಗಂಡನ ಬಗ್ಗೆ ದೂರುತ್ತಿದ್ದರು. ನಾನು ಏನೂ ಹೇಳದೆ ಅಲ್ಲಿಇಲ್ಲಿ ಓಡಾಡುತ್ತಿದ್ದ ಯಶಪಾಲನಿಗೆ ಸಂಜ್ಞೆ ಮಾಡಿ ಕರೆದೆ. ಅವನು ಬಂದು ಶೊವೆಲ್‌ ಮತ್ತು ಸಿಂತೆಟಿಕ್‌ ಹಗ್ಗವನ್ನು ಜೀಪಿನಿಂದ ತೆಗೆದುಕೊಟ್ಟ. ಶೊವೊಲ್‌ನಿಂದ ನಾಲ್ಕೂ ಚಕ್ರಗಳ ಬಳಿಯ ಮರಳನ್ನು ಸುಮಾರಾಗಿ ತೆಗೆದು ಹಾಕಿದರು. ಇನ್ನೊಂದು ವಾಹನಕ್ಕೆ ಸಿಂತೆಟಿಕ್‌ ಹಗ್ಗ ಕಟ್ಟಿ ಪುಶ್‌-ಪುಲ್‌ ವಿಧಾನ ಅನುಸರಿಸಿ ಕೊನೆಗೆ ಮರಳಿನಿಂದಾಚೆಗೆ ಸ್ಕಾರ್ಪಿಯನ್‌ನ್ನು ಎಳೆದು ಹಾಕಿದರು. ಎಲ್ಲರೂ ಸಮಾದಾನದ ನಿಟ್ಟುಸಿರು ಬಿಟ್ಟರು. ನಮ್ಮ ಜೀಪಿನ ಸಾಮಾನುಗಳನ್ನು ವಾಪಸ್ಸು ನೀಡುತ್ತಾ ಪಂಜಾಬ್‌ ಕುಟುಂಬದವರು ಅವರ ಪರಿಚಯ ಮಾಡಿಕೊಂಡರು. ಅವರಿಗೆ ಹೇಳಿದೆ, “ಈ ಟೂಲ್‌ಗಳ ಉಪಯೋಗ ಪಡೆದದ್ದು ನಿಮ್ಮದು ಮೂರನೆ ವಾಹನ” ಎಂದು, ಅವರು ಆಶ್ಚರ್ಯಚಕಿತರಾದರು. ಲಡಕ್‌ ಪ್ರಾಂತಪೂರ ಪ್ರವಾಸದ ಅನುಮತಿ ಪಡೆದಿದ್ದರವರು. ಇಲ್ಲಿಂದ ಅವರ ಮುಂದಿನ ಪ್ರಯಾಣ ಪ್ಯಾಂಗೊಂಗ್‌ ಸರೋವರ ಮತ್ತಲ್ಲಿ ರಾತ್ರಿ ತಂಗಣೆಯೆಂದು ತಿಳಿಸಿದರು. ನಮ್ಮನ್ನೂ ಜೊತೆಗೂಡುವಂತೆ ಸಲಹೆ ಮಾಡಿದರು. “ನಮ್ಮ ಲಗೇಜೆಲ್ಲಾ ಲೆಹ್‌ನಲ್ಲಿ ಇರುವುದರಿಂದ ವಾಪಸ್ಸು ಲೆಹ್‌ಗೆ ಹಿಂದಿರುಗಬೇಕು. ನಾಳೆಗೆ ಪ್ಯಾಂಗೊಂಗ್‌ ಸರೋವರ”, ನಾನು ಹೇಳಿದೆ. ಅವರು ನಮಗೆ, ಯಶಪಾಲನಿಗೆ ವಂದನೆಗಳನ್ನು ತಿಳಿಸಿ ವಿಧಾಯ ಹೇಳಿ ಹೊರಟುಹೋದರು. ನಾವು ಸಹ ಅಲ್ಲಿಂದ ಕ್ಯಾಂಟಿನ್‌ ಬಳಿಗೆ ಊಟಕ್ಕಾಗಿ ಹಿಂದಿರುಗಿದೆವು. 

ಕಣ್ಸೆಳೆದ Royal Enfield ಮೊಟಾರು ಸೈಕಲ್ಲು: 
ನಾವು ಮಿಲಿಟರಿ ಕ್ಯಾಂಟೀನ್‌ಗೆ ಹಿಂದುರಿಗಿ ಬರುವ ವೇಳೆಗೆ ಅಲ್ಲಿಯ ಪಾರ್ಕಿಂಗ್‌ ಸ್ಥಳದಲ್ಲಿ Royal En-field ಮೊಟಾರು ಸೈಕಲ್ಲೊಂದು ನಿಂತಿದ್ದಿತು. ಹಿಂದಿನ ಡಿಕ್ಕಿಬಾಕ್ಸ್‌ ಭಾಗದ ಎರಡೂ ಕಡೆಗಳಲ್ಲಿ ಪೂರ್ಣಪ್ರವಾಸಕ್ಕೆ ಬೇಕಾದ ಎಲ್ಲ ಸರಂಜಾಮು ಮತ್ತು ಪಟ್ರೋಲ್‌ ತುಂಬಿದ ಜೆರ‍್ರಿ ಕ್ಯಾನ್‌ಗಳನ್ನು ಬಿಗಿದು ಕಟ್ಟಲಾಗಿತ್ತು. ಅದರ ರಿಜಿಸ್ಟ್ರೇಷನ್‌ ಸಂ. KA 09 ಮೈಸೂರು?! ನಾವು ಜೀಪು ನಿಲ್ಲಿಸಿ ಒಳಹೋದಾಗ ಇಬ್ಬರು ಯುವಕರು ಕನ್ನಡದಲ್ಲಿ ಮಾತನಾಡಿಕೊಳ್ಳುತ್ತಿರುವುದನ್ನು ಗಮನಿಸಿದೆವು. ನಾವು ಅವರ ಬಳಿ ಹೋಗಿ ಮಾತನಾಡಿಸಿ ಮೈಸೂರಿನವರೆಂದು ಪರಿಚಯ ಮಾಡಿಕೊಂಡೆವು. ವಸಂತ ಆಶ್ಚರ್ಯಚಕಿತಳಾಗಿ, “ಮೈಸೂರಿನಿಂದಲೂ ಮೊಟಾರು ಸೈಕಲ್ಲಿನಲ್ಲಿ ಬಂದಿರಾ?” ಎಂದು ಪ್ರಶ್ನಿಸಿದಳು. ಅದಕ್ಕವರು “ಮೊಟಾರು ಸೈಕಲನ್ನು ದೆಹಲಿವರೆಗೆ ರೈಲಿನಲ್ಲಿ ತರಲಾಯಿತು, ಆಮೇಲೆ ಅದರ ಮೇಲೆ ಸವಾರಿ,” ಎಂದು ಹೇಳಿದವರು ಮುಂದಿನ ಸಾಹಸಕಾರ್ಯದ ಬಗ್ಗೆ ವಿವರಿಸಿದರು. ಪನಾಮಿಕ್‌ ಮತ್ತು ಸುಮುರ್‌ಗೆ ಹೋಗಿ ಅಲ್ಲಿಂದ ಬರುತ್ತಾ ದಿಸ್ಕಿತ್‌ನಲ್ಲಿ ರಾತ್ರಿ ತಂಗಣೆ ಮಾಡಿ ನಂತರ ಹುಂಡರ್‌ಗೆ ಬಂದಿರುವುದಾಗಿ ತಿಳಿಸಿದರು. ಕ್ಯಾಂಟೀನ್‌ವಾಲಾ ನಮ್ಮೆಲ್ಲ ಜನರಿಗೂ ದೋಸೆ-ಸಾಂಬಾರು ಸರಬರಾಜು ಮಾಡಿದ. ಯಾರಿಗೂ ದೋಸೆ ರುಚಿಸಲಿಲ್ಲ. ಸಪ್ಪೆಸಪ್ಪೆಯಾಗಿತ್ತು. ನಾನು ಮತ್ತು ಯಶಪಾಲ ಕಷ್ಟಪಟ್ಟು ಪೂರ್ಣಗೊಳಿಸಿದೆವು. ಇತರೆಯವರೆಲ್ಲ ಅರೆಬರೆ ತಿಂದು ಜ್ಯೂಸ್‌ಪ್ಯಾಕ್‌ಗಳನ್ನು ತೆಗೆದುಕೊಂಡು ಕುಡಿದರು. ಪುಷ್ಪಲತಳಿಗೆ ಚಾಕೊಲೆಟ್‌ ಮತ್ತು ಜ್ಯೂಸ್‌ ಆಹಾರವಾಯಿತು. ನಾನು ಇಲ್ಲೊಂದೆರಡು ಗಿರಿಸಿಖರಗಳ ಛಾಯಾಚಿತ್ರ ತೆಗೆದುಕೊಂಡೆನು. ನಂತರ ಲೆಹ್‌ ಕಡೆಗೆ ಹಿಂದಿರುಗಲು ಜೀಪು ಹತ್ತಿದೆವು. ಗಂಟೆ ಮಧ್ಯಾಹ್ನ ಎರಡಾಗಿತ್ತು. 

ನಮ್ಮ ಜೀಪಿನಲ್ಲಿ ಸೈನಿಕರು!?:
ನಾವು ಹಿಂದಿರುಗಿ ದಿಸ್ಕಿತ್‌ ದಾಟಿ ನೂಬ್ರ ಕಣಿವೆಯ ಕೈಮರವಿರುವ ಮರಳುರಸ್ತೆಗೆ ಬರುತ್ತಿದ್ದ ಹಾಗೆ ಇಬ್ಬರು ಸಿಪಾಯಿಗಳು ಕೈ ಅಡ್ಡ ಹಿಡಿದು ನಮ್ಮ ಜೀಪು ನಿಲ್ಲಿಸಿದರು. ಅಲ್ಲೆರಡು ಮಿಲಿಟರಿ ಟ್ರಕ್ಕುಗಳು ನಿಂತಿದ್ದವು. ಅದರಲ್ಲೊಂದು ಕೆಟ್ಟುನಿಂತಿತ್ತು. ಪರಿವೀಕ್ಷಿಸಲು ಅದರ ಬಾಯ್ನೆಟ್‌ ತೆರದಿದ್ದರು. ಇಬ್ಬರೂ ಅವರ ಲಗೇಜು ಕೆಳಗಿಳಿಸಿಕೊಂಡಿದ್ದರು. ಜೀಪು ನಿಲ್ಲಿಸಿದ ಅವರು ನಮ್ಮ ಬಳಿಬಂದು ನಾರ್ತ್‌ ಪುಲ್‌ವರೆಗೆ ಬರಲು ಇಬ್ಬರಿಗೆ ಸ್ಥಳಾವಕಾಶ ಕೇಳಿದರು. ಪುಷ್ಪಲತ ಗೊಣಗಾಡಿದರೂ ಯಶಪಾಲ “ಹೂಂ” ಎಂದು ಒಪ್ಪಿಕೊಂಡ. ಹಿಂದಿನ ಡಿಕ್ಕಿ ಸೀಟುಗಳ ಬಳಿ ಇದ್ದ ಲಗೇಜುಗಳನ್ನು ಮೇಲಿನ ಕ್ಯಾರಿಯರ್‌ಗೆ ವರ್ಗಾಯಿಸಿ ಕಟ್ಟಿ ಅವರಿಬ್ಬರನ್ನೂ ಅವರ ಲಗೇಜಿನೊಡನೆ ಹಿಂದೆ ಕುಳ್ಳಿರಿಸಿಕೊಂಡು ಏರುರಸ್ತೆಯಲ್ಲಿ ನಾರ್ತ್‌ ಪುಲ್‌ವರೆಗೂ ಕರೆದುಕೊಂಡು ಹೋಗಿ ಬಿಡಲಾಯಿತು. ಅಲ್ಲವರ ವಾಸಸ್ಥಳದ ಶೆಡ್ಡುಗಳಿದ್ದುವೆಂದು ಕಾಣುತ್ತದೆ, ಅವರು ನಮಗೆ ವಂದನೆಗಳನ್ನು ತಿಳಿಸಿ ಹೊರಟುಹೋದರು. 

ಖಾರ್ದುಂಗ್‌ ಲಾ ಪಾಸ್‌ ಬಳಿ ಒಂದ್ಹತ್ತು ನಿಮಿಷ ಜೀಪನ್ನು ನಿಲ್ಲಿಸಿದ ಯಶಪಾಲ. ಪುಷ್ಪಲತಳ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಪುಷ್ಪಲತಳ ಹೊರತು ಎಲ್ಲರೂ ಇಳಿದು ಓಡಾಡಿದರು. ತಡೆಯಲಾರದಷ್ಟು ಚಳಿಯಾಗುತ್ತಿತ್ತು. ಕೆಲವು ಛಾಯಾಚಿತ್ರಗಳನ್ನು ತೆಗೆದುಕೊಳ್ಳಲಾಯಿತು. ಸಮಯ ಸುಮಾರು ಐದು ಗಂಟೆಯಾಗಿತ್ತು. ಸೌತ್‌ಪುಲ್‌ನ ಇಳಿರಸ್ತೆಯಲ್ಲಿ ಲೆಹ್‌ನತ್ತ ಹೊರಟದ್ದಾಯಿತು. ದಾರಿಯಲ್ಲಿ ಇದ್ದಕ್ಕಿದ್ದಹಾಗೆ ಪ್ರಾಣಿಯೊಂದು ಅದೇನೆಂದು ನೋಡುವಷ್ಟರಲ್ಲಿ ಓಡಿಹೋಗಿ ಕಲ್ಲುಗಳ ಸಂದುಗಳ ಬಳಿ ಮರೆಯಾಗಿತ್ತು. ಮುಂದೆ ಹೋದಮೇಲೆ ರಸ್ತೆ ಬದಿಯಲ್ಲಿ ಅದೇರೀತಿಯ ಪ್ರಾಣಿಯೊಂದು ಸತ್ತುಬಿದ್ದಿತ್ತು. ಈಗ ಆ ಪ್ರಾಣಿ ಯಾವುದೆಂದು ನಮ್ಮನಮ್ಮಲ್ಲೇ ಚರ್ಚೆಯಾಯಿತು. ಆನಂತರ ತಿಳಿಯಿತು ಅದರ ಹೆಸರು ಮಾರ್ಮೊಟ್‌ ಎಂದು. 
ಸಂಜೆ ಏಳೂವರೆ ಗಂಟೆಗೆಲ್ಲಾ ನಾವಿಳಿದುಕೊಂಡಿದ್ದ ಭಾರತ್‌ ಗೆಸ್ಟ್‌ ಹೌಸ್‌ಗೆ ಮರಳಿದ್ದೆವು. ಅದಾಗತಾನೆ ಪಶ್ಚಿಮದಲ್ಲಿ ಸೂರ್ಯ ಮುಳುಗಿ ಐದ್ಹತ್ತು ನಿಮಿಷವಾಗಿತ್ತು. ಈ ಮಧ್ಯೆ ಪುಷ್ಪಲತ ಮರುದಿನದ ಪ್ರವಾಸಕ್ಕೆ ಬರುವುದಿಲ್ಲವೆಂದೂ ಗೆಸ್ಟ್‌ ಹೌಸ್‌ನಲ್ಲಿಯೇ ಉಳಿಯುತ್ತೇನೆಂದೂ… ಉಳಿದು ಪೂರ್ಣ ವಿಶ್ರಾಂತಿ ಪಡೆಯುತ್ತೇನೆಂದು ತಿಳಿಸಿದಳು. ಸಿಂಚನ, ಚಿನ್ಮಯಿ ಇಬ್ಬರಿಗೂ ಯೋಚನೆಯಾಯಿತು ಎಲ್ಲಿ ಪ್ಯಾಂಗೊಂಗ್‌ ಸರೋವರ ಭೇಟಿ ಕೈಬಿಟ್ಟು ಹೋಗುತ್ತದೆಂದು? ಪುಷ್ಪಲತಳ ಆರೋಗ್ಯದ ಕಡೆ ಸಿಂಚನ ಹೆಚ್ಚು ಮುತುವರ್ಜಿ ವಹಿಸಿದಳು. ಬೆಳಗ್ಗೆ ಯೋಚಿಸೋಣವೆಂದು ಹೇಳಿ ಊಟಮಾಡಿ ಮಲಗಿದೆವು. 

ಜೂನ್‌ 9, ಏಳನೇ ದಿನ:
ಬೆಳಗ್ಗೆ ಎದ್ದು ಎಲ್ಲಾ ಸ್ನಾನ ಮುಗಿಸಿದರು ಪುಷ್ಪಲತಾಳ ಹೊರತು. ಅವಳ ಆರೋಗ್ಯ ಉತ್ತಮವೇನೂ ಆಗಿರಲಿಲ್ಲ. ಮತ್ತಷ್ಟು ಬಿಗಡಾಯಿಸಿತ್ತು. ಮೈಯಲ್ಲಿ ನೀರು ತುಂಬಿಕೊಂಡು ಊದಿಕೊಂಡಿತ್ತು. ಏನು ಮಾಡುವುದೆಂದು ಚಡಪಡಿಸಿದೆವು. ಅವಳನ್ನು ಬಿಟ್ಟು ಹೋಗುವಂತಿರಲಿಲ್ಲ. ಯಶಪಾಲ, “ಯಾವುದಾದರೂ ವಿಮಾನವಿದ್ದರೆ ದೆಹಲಿಗೆ ಕಳುಹಿಸಿಬಿಡೋಣ” ಎಂದು ಹೇಳಿದ. ಅದಕ್ಕವಳು, ಹೋಗುತ್ತೇನೆಂದು ತಲೆಯಲ್ಲಾಡಿಸಿ ಹೂಂಗುಟ್ಟಿದಳು. ಆದರೆ ವಿಮಾನದಲ್ಲಿ ಯಾರು ನೋಡಿಕೊಳ್ಳುತ್ತಾರೆ, ದೆಹಲಿಯಲ್ಲಿ ಎಲ್ಲಿಗೆ ಹೋಗುತ್ತಾಳೆ, ಯಾರು ಯಾವ ಮನೆಗೆ ಕರೆದುಕೊಂಡು ಹೋಗುತ್ತಾರೆ? ಪ್ರಶ್ನೆಗಳೆದ್ದವು. ವಸಂತ ಆ ವಿಚಾರವನ್ನು ಅಲ್ಲಿಗೇ ತಳ್ಳಿ ಹಾಕಿದಳು. 
ನಮ್ಮ ಉದ್ದೇಶ, ಆ ದಿನ ಪ್ಯಾಂಗೊಂಗ್‌ ಸರೋವರ ನೋಡಿಕೊಂಡು ಮಾರನೆ ದಿನ ಬಂದ ದಾರಿಯಲ್ಲಿಯೇ ಅಂದರೆ ಸರ್ಚು ಮತ್ತು ಮನಾಲಿ ಮೂಲಕ ದೆಹಲಿಗೆ ಮರಳಿ ಹೋಗುವುದಾಗಿತ್ತು. ಅದು ಸುಮಾರು ಎರಡೂವರೆ ದಿನಗಳ ಮರುಪ್ರಯಾಣ. ಪುಷ್ಪಲತ… ಸರ್ಚು-ಮನಾಲಿ ಮಾರ್ಗದ ರಸ್ತೆಯಲ್ಲಿ ಹೋಗುವುದು ಬೇಡ, ಶ್ರೀನಗರದ ಮಾರ್ಗವಾಗಿ ವಾಪಸ್ಸು ಹೋಗೋಣವೆಂದು ಅವಳ ಆರೋಗ್ಯದ ದೃಷ್ಟಿಯಿಂದ ಸೂಚನೆ ಕೊಟ್ಟಳು. ವಸಂತ ಸಹ ಅದೇ ಸಲಹೆ ಮಾಡಿದಳು. ಶ್ರೀನಗರದ ಕಡೆಯಿಂದ ಹೋಗುವುದೆಂದರೆ ಆಗಿನ ಪರಿಸ್ಥಿತಿಯಲ್ಲಿ ದೆಹಲಿ ನಾಲ್ಕು ದಿನಗಳ ಹಗಲು ಪ್ರಯಾಣ. ಲೆಹ್‌ನಿಂದ ಶ್ರೀನಗರಕ್ಕೆ ಸುಮಾರು 450 ಕಿ.ಮೀ.ಗಳು, ಶ್ರೀನಗರ-ದೆಹಲಿ ಸುಮಾರು 850 ಕಿ.ಮೀ. ಒಟ್ಟಾರೆ ದೆಹಲಿಗೆ 1300 ಕಿ.ಮೀ.ಗಳು., ಅಧಿಕವಾಗಿ 200 ಕಿ.ಮೀ.ಹೆಚ್ಚಾಗಿದ್ದಿತು. ನಮ್ಮೀ ಪ್ರವಾಸದಲ್ಲಿ ಪ್ಯಾಂಗೊಂಗ್‌ ಸರೋವರ ಅತಿಮುಖ್ಯ ವೀಕ್ಷಣೆಯ ಸ್ಥಳವಾಗಿತ್ತು. ಹಿಂದಿ ಚಿತ್ರನಟ ಅಮೀರ್‌ ಖಾನ್‌ ನಿರ್ಮಿತ ಚಲಚಿತ್ರ “3 ಈಡಿಯಟ್ಸ್‌”ನ ಕೊನೆಯ ದೃಶ್ಯಗಳಲ್ಲಿ ಈ ಸರೋವರ ಅದರ ಪ್ರಶಾಂತ ಪ್ರಕೃತಿ ಸೌಂದರ್ಯದ ಪ್ರತೀಕವಾಗಿ ಚಿತ್ರಿತಗೊಂಡಿದೆ. ಚಿತ್ರ, ಸರೋವರದ ದೃಶ್ಯಗಳೊಡನೆ ಮುಕ್ತಾಯವಾಗುತ್ತದೆ. ಹಾಗಾಗಿ ಅದು ಅಚ್ಚಳಿಯದೆ ಮನಸ್ಸಿನಲ್ಲಿ ಉಳಿದುಬಿಡುತ್ತದೆ… ಉಳಿದುಬಿಟ್ಟಿತ್ತೂ ಕೂಡ. ನಮ್ಮೆಲ್ಲರಿಗೂ ಇಷ್ಟುದೂರ ಬಂದು ಪ್ಯಾಂಗೊಂಗ್‌ ಸರೋವರ ನೋಡದೆ ಹೋಗುತ್ತಿರುವುದಕ್ಕೆ ದುಗುಡವಾಗುತ್ತಿತ್ತು. 

ದೆಹಲಿಗೆ ಮರುಪ್ರಯಾಣ – ಅಂತಿಮ ಹಂತ:
ಅದೇ ದಿನ ಶ್ರೀನಗರ ಮಾರ್ಗವಾಗಿ ವಾಪಸ್ಸು ಹೊರಡುವುದೆಂದು ತೀರ್ಮಾನವಾದಕೂಡಲೇ ಗೆಸ್ಟ್‌ ಹೌಸಿನ ಮೇಟ್ರನ್‌ಗೆ ಬೆಳಗಿನ ಉಪಾಹಾರ ಸರಬರಾಜು ಮಾಡಲು ಸೂಚನೆ ನೀಡಿ ಅಂತಿಮ ಬಿಲ್ಲು ಸಿದ್ಧಪಡಿಸಲು ತಿಳಿಸಿದೆವು. ಬಿಲ್ಲು ಮೊತ್ತವನ್ನು ಚುಕ್ತಾ ಮಾಡಿ ಬ್ಯಾಗೇಜುಗಳನ್ನು ಇತರೆ ಟೆಂಟ್‌ ವಸ್ತುಗಳನ್ನು ಜೀಪಿನೊಳಗೆ ಹಿಂದಿನ ಡಿಕ್ಕಿ ಸೀಟುಗಳ ಬಳಿ ಜೋಡಿಸಿ ಮೆತ್ತಗಿನ ಹಾಸಿಗೆಯನ್ನು ಪುಷ್ಪಲತಾಳಿಗಾಗಿ ಸಿದ್ಧಪಡಿಸಲಾಯಿತು, ಉಳಿದ ಲಗೇಜನ್ನು ಮೇಲಿನ ಕ್ಯಾರಿಯರ್‌ಗೆ ಏರಿಸಿ ಮೇಲೊಂದು ಕವರ್‌ಶೀಟ್‌ ಬಿಗಿದು ಕಟ್ಟಿಕೊಂಡು ಗೆಸ್ಟ್‌ ಹೌಸ್‌ ಬಿಟ್ಟಾಗ ಹತ್ತು ಗಂಟೆ. ಲೆಹ್‌ನ ದೊಡ್ಡ ವೃತ್ತದ ಬಳಿ ಶ್ರೀನಗರದ ಕಡೆಗೆ ರಾ.ಹೆ.1ಡಿ ನಲ್ಲಿ ಹೋಗುತ್ತಾ ಜೀಪಿಗೆ ಟ್ಯಾಂಕ್‌ಪೂರ್ಣ ಇಂಧನ, ಇಂಜಿನ್‌ ಆಯಿಲ್‌ ತುಂಬಿಸಿಕೊಂಡು, ಪುಷ್ಪಲತಳಿಗೆ ಪ್ರತ್ಯೇಕ ಔಷಧಿ-ಮಾತ್ರೆ, ಒಂದಷ್ಟು ಬಾಳೆಹಣ್ಣು, ಚಾಕೊಲೆಟ್‌ ಮತ್ತು ಮುಂಜಾಗ್ರತೆಯಾಗಿ ಖರೀದಿಸಿಕೊಂಡು ಲೆಹ್‌ ಬಿಡುವ ವೇಳೆಗೆ ಸುಮಾರು ಹನ್ನೊಂದೂವರೆ ಗಂಟೆಯಾಗಿತ್ತು.

ಮರುಪ್ರಯಾಣದಲ್ಲಿ ನಾವು ನೋಡುವಂಥ ಸ್ಥಳಗಳ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಸರಿಯಾದ ಸಮಯಕ್ಕೆ ದೆಹಲಿ ತಲುಪುವುದೇ ನಮ್ಮ ಗುರಿಯಾಗಿತ್ತು. ಏಕೆಂದರೆ ಜೊತೆಯಲ್ಲಿ ಆರೋಗ್ಯಗೆಟ್ಟ ವ್ಯಕ್ತಿಯೊಬ್ಬರಿದ್ದುದರಿಂದ ಅವರದೇ ಯೋಚನೆಯಾಗಿತ್ತು. ಅಲ್ಲಲ್ಲಿ ಈ ಮಧ್ಯೆ ಸಿಂಚನ, ಚಿನ್ಮಯಿ ಛಾಯಾಚಿತ್ರ ತೆಗೆದಿದ್ದರು. ಜಮ್ಮುವಿನಿಂದ ಪಠಾನಕೋಟ್‌ವರೆಗೂ ಜೀಪು ನಾನು ಓಡಿಸಿದೆ. ಕತ್ತಲಾದ ಮೇಲೆ ಯಶಪಾಲ ಓಡಿಸಿದ. ಆದರೂ ಅವನು ರಾ.ಹೆ.1ಎ ದಲ್ಲಿ ವಾಣಿಜ್ಯ ವಾಹನಗಳ ಸಂಚಾರ ಅಧಿಕವಾಗಿದ್ದು ಅಲ್ಲಲ್ಲಿ ದಟ್ಟಣೆ ಇದ್ದುದರಿಂದ ಅವುಗಳನ್ನು ತಪ್ಪಿಸಲು ಮಧ್ಯೆ ಸಿಕ್ಕಿದ ದಟ್ಟಣೆಯಲ್ಲದ ಅಡ್ಡತಿರುಗಿದ ರಸ್ತೆಗೆ ನುಗ್ಗಿಹೋಗಿದ್ದನು. ಕತ್ತಲೆಯಲ್ಲಿ ದಾರಿತಪ್ಪಿ ಹೊಸಿಯಾರ್ಪುರದ ಮಾರ್ಗವಾಗಿ ರೂಪನಗರ ತಲುಪಲು 45-50 ಕಿ.ಮೀ. ಹೆಚ್ಚು ಪ್ರಯಾಣ ಮಾಡಿದ್ದೆವು. 

ಜೂನ್‌ 12ರಂದು ಮಧ್ಯಾಹ್ನ ಎರಡು ಗಂಟೆ ವೇಳೆಗೆ ದೆಹಲಿಯಲ್ಲಿ ಯಶಪಾಲನ ಪರಿಚಯದವರ ಮನೆಯಲ್ಲಿದ್ದೆವು. ಮೂರು ಪೂರ್ಣ ಹಗಲು ಮತ್ತು ಒಂದು ದಿನ ರಾತ್ರಿ ಬೆಳಗಿನಜಾವ ಎರಡು ಗಂಟೆಯವರೆಗೆ ಪ್ರಯಾಣ ಮಾಡಿ ನಾಲ್ಕನೇ ದಿನ ಮಧ್ಯಾಹ್ನ ದೆಹಲಿಗೆ ತಲುಪಿದ್ದೆವು. ದೆಹಲಿಯಲ್ಲಿ ಸಾಯಂಕಾಲ ಒಂದು ಗಂಟೆಕಾಲ ಮಾರ್ಕೆಟ್‌ಗೆ ಭೇಟಿ ನೀಡಿ ಮಕ್ಕಳಿಗೆ ಉಡುಪುಗಳನ್ನು ಕೊಂಡದ್ದಾಯಿತು. ನಮಗೆ ಬೆಂಗಳೂರಿಗೆ ಹೊರಡಲು ವಿಮಾನ ಇದ್ದದ್ದು ರಾತ್ರಿ 8.30 ಗಂಟೆಯ ಮೇಲೆ. 

ಮರುಪ್ರಯಾಣದ ಮುಖ್ಯಾಂಶಗಳು – ಕೆಲವು ನೋಟಗಳು, ಸಂಚಲಿತ ಘಟನೆಗಳು ಮತ್ತು ಭಾವನಾತ್ಮಕ ನೆನಪುಗಳು:  
1. ಲೆಹ್‌ನ ಮೊದಲ ದಿನ ಸಾಯಂಕಾಲ ನೋಡಲು ಹೊರಟಿದ್ದ ಆಯಸ್ಕಾಂತ(ಮ್ಯಾಗ್ನೆಟಿಕ್‌) ಪರ್ವತ, ಶ್ರೀನಗರ ಮಾರ್ಗದಲ್ಲಿ ಮೊದಲು ಸಿಕ್ಕಿದ ಸ್ಥಳ. ಇಲ್ಲಿ ಯಶಪಾಲ ಐದು ನಿಮಿಷ ಜೀಪು ನಿಲ್ಲಿಸಿದ. ನಮ್ಮ ಹಾಗೆ ಇನ್ನೂ ಕೆಲವರು ಪರ್ವತದ ಆಯಸ್ಕಾಂತ ಸೆಳೆತವನ್ನು ಪರೀಕ್ಷಿಸುತ್ತಿದ್ದರು. ಸಮತಲವಾಗಿದ್ದ ರಸ್ತೆ. ಇಂಜಿನ್‌ ಚಾಲೂ ಇಲ್ಲದೆ ವಾಹನಗಳನ್ನು ನ್ಯೂಟ್ರಲ್‌ಗೆ ಹಾಕಿ ನಿಲ್ಲಿಸಬೇಕಿತ್ತು. ವಾಹನಗಳು ಬಹುನಿಧಾನವಾಗಿ ಮುಂದೆ ಚಲಿಸುತ್ತಿದ್ದುದನ್ನು ಗಮನಿಸಬಹುದಿತ್ತು. 

2. ಲೆಹ್‌ಗೆ ದಕ್ಷಿಣದ ಕಡೆಯಿಂದ ಹರಿದುಬರುವ ನದಿ, Zanskar, ಸಿಂಧುವಿನ ಕೆಳಹರಿವಿನಲ್ಲಿ ನಿಮ್ಮೊ ಎಂಬ ಹಳ್ಳಿಗೆ ಮೊದಲು ಸೇರಿಕೊಳ್ಳುತ್ತಿತ್ತು. Zanskar, ಲಡಖ್‌ ಪ್ರಾಂತದಲ್ಲಿ ಒಂದು ಪ್ರಮುಖ ಟ್ರೆಕ್ಕಿಂಗ್‌-ಪ್ರಿಯರ ಕಣಿವೆ. ಅಲ್ಲದೆ ಇಲ್ಲಿ ಸಿಂಧುವಿನಲ್ಲಿ ತೆಪ್ಪದಾಟ(Rafting) ಪ್ರಿಯರು ತೆಪ್ಪದಾಟವಾಡಲು ಅವಕಾಶವಿದೆ… ಮಾಹಿತಿಗಾಗಿ. 

3. ಖಾಲ್ಸಿ ಎಂಬಲ್ಲಿ ರಾ.ಹೆ.1ಡಿ ಸಿಂಧುವಿನಿಂದ ಬೇರೆಯಾಗಿ ಲಮಯೂರು ಕಡೆಗೆ ತಿರುಗಿಕೊಳ್ಳುತ್ತದೆ. ಇಕ್ಕಟ್ಟಾದ ಕಣಿವೆಯ ಹೇರ‍್ಪಿನ್‌ ತಿರುವುಗಳ ಏರು ರಸ್ತೆ. ಬಿಆರ್‌ಒ ಕೆಲಸಗಾರರು ರಸ್ತೆ ಕೆಲಸಮಾಡುತ್ತಿದ್ದರು. ಮಣ್ಣುದೂಡುವ ಯಂತ್ರದ ಕೆಲಸಗಾರನೊಬ್ಬ ರಸ್ತೆಗೆ ಅಡ್ಡಲಾಗಿ ಬೇಕೆಂದೇ ಕಲುಬಂಡೆಗಳನ್ನು ದೂಡುತ್ತಾ ದಾರಿಹೋಕ ವಾಹನಗಳನ್ನು ಸತಾಯಿಸುತ್ತಿದ್ದ. ನಮ್ಮ ಹಿಂದುಗಡೆ ಪೊಲೀಸ್‌ ವಾಹನವೊಂದು, ಮಾರುತಿ ಜಿಪ್ಸಿ, ಬಂದು ನಿಂತಿತು. ಪೊಲೀಸ್‌ ಅಧಿಕಾರಿಗಳಿಗೂ ಸತಾಯಿಸಿದ ಆ ಕೆಲಸಗಾರ, ದಾರಿಮಾಡಿಕೊಡು ಎಂದು ಕೇಳಲು ಹೋದ ಅಧಿಕಾರಿಗೆ ಸಿಗರೆಟ್‌ ಬೇಡಿಕೆ ಇಟ್ಟು ಅದನ್ನು ಪಡೆದು ಹೊತ್ತಿಸಿ ಸೇದುತ್ತಾ ಕಲ್ಲುಬಂಡೆಗಳನ್ನು ಪಕ್ಕಕ್ಕೆ ತಳ್ಳಿ ದಾರಿಮಾಡಿಕೊಟ್ಟನು. ಪೊಲೀಸ್‌ ಜೀಪು ಹೋದ ನಂತರ ನಾವೂ ಹಿಂದೆಯೇ ಮುನ್ನುಗ್ಗಿ ಹೋದೆವು. ಸುಮಾರು 20 ನಿಮಿಷಗಳ ಕಾಲ ಆತ ನಮಗೆ ಸತಾಯಿಸಿದ್ದ. ಲಮಯೂರುವಿನಲ್ಲಿ ಪುರಾತನ ಪ್ರಸಿದ್ಧ ಬೌದ್ಧ ಗೊಂಪಾ ಇದೆ… ಮಾಹಿತಿಗಾಗಿ. 

4. ನಾವು ನಿಜವಾಗಿಯೂ ಪಿಕ್‌ನಿಕ್‌ ಅಂಥ ಅನುಭವಿಸಿದ್ದು ಮುಲ್ಬೆಖ್‌ ಪ್ರಾಂತದ ವಾಖಾ ನದಿ ಕಣಿವೆಯ ಝರಿಯೊಂದರ ಬಳಿ. ಜೂನ್‌ 09ರ ದಿನ ಮಧ್ಯಾಹ್ನದ ಊಟಕ್ಕೆ ನಾವೇ ಮಾಡಿಕೊಂಡ ಉಪ್ಪಿಟ್ಟು ಮತ್ತು ತಯಾರಿಸಿದ Coffee, ಮತ್ತದನ್ನು ಸವಿಯುತ್ತಾ ಕಳೆದ ಗಳಿಗೆಗಳು. ಮುಲ್ಬೆಖ್‌ ಹಳ್ಳಿಯಲ್ಲಿ ನಿಲುವು ಭಂಗಿಯ ಪುರಾತನ ಪ್ರಸಿದ್ಧ ಬುದ್ಧನ ವಿಗ್ರಹ ಮತ್ತು ಗೊಂಪಾ ಇದೆ… ಮಾಹಿತಿಗಾಗಿ. 

5. ಕಾರ್ಗಿಲ್‌ ಬಳಿ ಹರಿಯುವ ಸುರು ನದಿ ರಾತ್ರಿಯಿಡೀ ಮರ‍್ರೋ ಎಂದು ಸದ್ದು ಮಾಡುತ್ತಾ ಹರಿಯುತ್ತಿದ್ದುದರಿಂದ ಹೊಸಬರಾದ ನಮಗೆ ಆರಾತ್ರಿ ಸರಿಯಾಗಿ ನಿದ್ದೆ ಬರಲಿಲ್ಲ. ಲೆಹ್‌ನಿಂದ ಶ್ರೀನಗರದ ಕಡೆಗಿನ ಪ್ರಯಾಣದಲ್ಲಿ ಇಲ್ಲಿ ರಾತ್ರಿತಂಗಣೆ ಅನಿವಾರ್ಯವಾಗಿತ್ತು. ಯಾಕಂದರೆ ಇಲ್ಲಿಂದ ಮುಂದಕ್ಕೆ ಶ್ರೀನಗರದ ಕಡೆಗೆ 52 ಕಿ.ಮೀ. ಅಂತರದಲ್ಲಿ ಸಿಗುವ ಡ್ರಾಸ್‌ ಬಳಿ ಇರುವ ಮಿಲಿಟರಿ ಚೆಕ್‌ಪೋಸ್ಟ್‌, ಬೆಳಗ್ಗೆ ಒಂಬತ್ತು ಗಂಟೆಯಿಂದ ರಾತ್ರಿ ಬೆಳಗಿನಜಾವ ಎರಡು ಗಂಟೆವರೆಗೆ ರಾ.ಹೆ.1ಡಿ ಯನ್ನು ಮುಚ್ಚಿ ಎಲ್ಲ ಪ್ರವಾಸಿ ಮತ್ತು ವಾಣಿಜ್ಯ ವಾಹನಗಳಿಗೆ ತಡೆಯೊಡ್ಡುತ್ತದೆ. ಹಾಗೆಂದು ಹೇಳಿದವರು ನಾವು ಕಾರ್ಗಿಲ್‌ನಲ್ಲಿ ಉಳಿದುಕೊಂಡಿದ್ದ ವಸತಿಗೃಹದ ಮಾಲೀಕರು. ಕಾರ್ಗಿಲ್‌ ತಂಗಣೆ ನಮಗೆ 1999ರ ಮೇ 03 ರಿಂದ ಜುಲೈ 26ರವರೆಗೆ ನಡೆದ ಭಾರತ-ಪಾಕಿಸ್ಥಾನ ಯುದ್ಧದ ನೆನಪು ಕಾಡಿಸಿತು. 

6. ಡ್ರಾಸ್‌, ಒಂದು ಸೈನಿಕ ನೆಲೆಯಾದರೂ ಅಲ್ಲಿ ನಾಗರೀಕರು ವಾಸಿಸುತ್ತಾರೆ. ಇದು ಪ್ರಪಂಚದಲ್ಲಿ ಎರಡನೆಯ ಅತೀ ಹೆಚ್ಚು ಚಳಿಯಿರುವ ಜನವಾಸಿಸುವ ಪ್ರದೇಶ. ಡ್ರಾಸ್‌ ಕೂಡ ಕಾರ್ಗಿಲ್‌ ಯುದ್ಧದ ಒಂದು ಭಾಗವಾಗಿತ್ತು. ಇಲ್ಲಿ ಭಾರತದ ವಶದಲ್ಲಿದ್ದ ಟೈಗರ್‌ ಹಿಲ್‌ನ್ನು ಪಾಕಿಸ್ಥಾನೀ ಸೈನಿಕರು ಅಕ್ರಮಿಸಿಕೊಂಡಿದ್ದರು. ಇಲ್ಲೊಂದು ಸೈನಿಕ ತರಭೇತು ಶಾಲೆಯಿದೆ. ಹಾಗೂ ಕಾರ್ಗಿಲ್‌ ಯುದ್ಧದಲ್ಲಿ ಮಡಿದ ಯೋಧರ ಜ್ಞಾಪಕಾರ್ಥವಾಗಿ ಇಲ್ಲೊಂದು ವಾರ್‌ ಮೆಮೊರಿಯಲ್‌ ನಿರ್ಮಿಸಲಾಗಿದೆ… ಮಾಹಿತಿಗಾಗಿ. 

7. ಡ್ರಾಸ್‌ ಬಿಟ್ಟು Zoji La ಪಾಸ್‌ ಕಡೆಗೆ ಪ್ರಯಾಣಿಸುತ್ತಿದ್ದಾಗ ರಸ್ತೆಯಲ್ಲಿ ಎದುರಾದ ಕೆಲವು ಮಕ್ಕಳು ಅಂಗೈಯನ್ನು ಬೆರಳುಗಳಿಂದ ಕೆರೆಯುತ್ತಾ ನಮ್ಮ ಗಮನ ಸೆಳೆಯುತ್ತಿದ್ದರು. ನಮಗೆ ಮೊದಮೊದಲು ಅರ್ಥವಾಗಲಿಲ್ಲ. ಆನಂತರ ಉದ್ದಬಾಲದ ಕುರಿ, ಮೇಕೆಗಳ ಮಂದೆಯನ್ನು ಮೇಯಿಸಲು ಬುಜದ ಮೇಲೆ ತನ್ನ ಮಗನನ್ನು ಹೊತ್ತು ಹೋಗುತ್ತಿದ್ದಾತ ನಮ್ಮಬಳಿ ಬಂದು ಮಗನಿಗೆ ತಿನ್ನಲೇನಾದರೂ ಕೊಡಿರೆಂದು ಕೇಳಿದ. ಸಿಂಚನ, ಚಿನ್ಮಯಿ ಕೆಲವು ಬಿಸ್ಕತ್ತುಗಳನ್ನು ಮತ್ತು ಚಾಕೊಲೆಟ್ಟುಗಳನ್ನು ಕೊಟ್ಟರು. ಆತ ಧನ್ಯವಾದ ತಿಳಿಸಿದ. ಹೆಗಲಮೇಲಿದ್ದ ಹುಡುಗ ಖುಷಿಯಾಗಿ ಹೋದ. ಮುಂದೆ ಹೋಗುತ್ತಾ ಪುನಃ ಇದೇ ರೀತಿ ಎದುರಾದ ಮಕ್ಕಳು ಕೈಕೆರೆತ ಚಾಳಿಯನ್ನು ಮುಂದುವರಿಸಿದ್ದರು. ನಮ್ಮಲ್ಲಿದ್ದ ಬಿಸ್ಕತ್ತುಗಳನ್ನು ಎಲ್ಲರಿಗೂ ಹಂಚಿ ಬರಿದು ಮಾಡಿಕೊಂಡದ್ದಾಯಿತು. ಇದು ಇಲ್ಲಿನ ಬಡತನವನ್ನು ಪ್ರತಿಬಿಂಬಿಸಿತು. ಸಿಂಚನ ಕುರಿ-ಮೇಕೆ ಮಂದೆಗಳ, ಕುದುರೆಗಳ, ಗಿರಿಪರ್ವತಗಳ ಛಾಯಾಚಿತ್ರ ತೆಗೆದುಕೊಂಡಿದ್ದಳು. 

8. ಜೂನ್‌ 10ರ ದಿನ ಕಾರ್ಗಿಲ್‌ ಬಿಟ್ಟು ಬೆಳಗ್ಗೆ ಐದು ಗಂಟೆಗೆ ಹೊರಟ ನಾವು ನಿತ್ಯಕರ್ಮಗಳಿಗಾಗಿ ಜೀಪು ನಿಲ್ಲಿಸಿದ್ದು ಸೋನಾ ಮಾರ್ಗ್‌ ಬಳಿ. ಉಪಾಹಾರ ಮುಗಿಸಿದಮೇಲೆ, ನಮ್ಮ ಡಾಕ್ಟರ್‌ ಸಿಂಚನ, ಪುಷ್ಪಲತಳಿಗೆ ಮೈಯಲ್ಲಿ ತುಂಬಿಕೊಂಡಿರುವ ನೀರು ಬಸಿದು ಹೋಗುವಂತಹ ಮಾತ್ರೆಗಳನ್ನು ನುಂಗಲು ಕೊಟ್ಟಿದ್ದಳು. ಅದರ ಪ್ರಭಾವದಿಂದಾಗಿ ಆಕೆ ಸ್ವಲ್ಪಸ್ವಲ್ಪವಾಗಿ ಚೇತರಿಸಿಕೊಳ್ಳತೊಡಗಿದ್ದಳು. ಸೋನಾ ಮಾರ್ಗ್‌ನಿಂದ ಮುಂದಕ್ಕೆ ಪ್ರಯಾಣಿಸುವಾಗ ಅಲ್ಲಲ್ಲಿ ಸಿಗುವ ರಸ್ತೆ ಬದಿಯ ಸಾರ್ವಜನಿಕ ಶೌಚಾಲಯಗಳ ಬಳಿ ಜೀಪು ನಿಲ್ಲಿಸಿ ಆಕೆಗೆ ಅವಕಾಶ ಮಾಡಿಕೊಡಲಾಯಿತು. ಶ್ರೀನಗರಕ್ಕೆ ಬಂದು ಸೇರುವ ವೇಳೆಗೆ ಅಂದರೆ ಮೂರೂವರೆ ಗಂಟೆಯೊಳಗೆ ಆಕೆಯ ದೇಹದೊಳಗಿನ ನೀರೆಲ್ಲಾ ಪೂರ್ಣವಾಗಿ ಬಸಿದುಹೋಗಿ ಆಕೆ ಚೇತರಿಸಿಕೊಂಡಿದ್ದಳು. ನಾವು ನೆಮ್ಮದಿಯ ನಿಟ್ಟುಸಿರು ಬಿಟ್ಟೆವು. ಮಧ್ಯಾಹ್ನದ ಊಟವನ್ನು ಶ್ರೀನಗರದಲ್ಲಿಯೇ ಮಾಡಿದೆವು. ಇಲ್ಲಿ ಪ್ರಸ್ತಾಪಿಸಲಾಗಿರುವ ಸೋನಾಮಾರ್ಗ್‌ನಿಂದ Zoji La ಪಾಸ್‌ ಕಡೆಗಿರುವ ಕಣಿವೆಯಲ್ಲಿ ಬಾಲ್ತಾಳ್‌ ಎಂಬ ಪ್ರದೇಶವಿದೆ. ಇದು ಈ ಕಡೆಯಿಂದ ಅಮರನಾಥ ಯಾತ್ರೆ ಹೋಗುವವರಿಗೆ ತಳ ಪ್ರದೇಶ. Zoji La ಪಾಸ್‌ ಕಡೆಯಿಂದ ಇಳಿದು ಬರುವಾಗ ಎಡಕ್ಕೆ ಬಾಲ್ತಾಳ್‌ ತಳಬಯಲು ಕಾಣಿಸುತ್ತದೆ… ಮಾಹಿತಿಗಾಗಿ. 

9. ಶ್ರೀನಗರ ಪ್ರವೇಶಿಸಿದ ನಂತರ ನೇರವಾಗಿ ನಾವು ದಾಲ್‌ ಸರೋವರ ಹುಡುಕಿಕೊಂಡು ಹೋದೆವು. ಸರೋವರದ ಅಂಚಿನುದ್ದಕ್ಕೂ ಇರುವ ಜೋಡಿ ರಸ್ತೆಯಲ್ಲಿ ಒಂದುಸುತ್ತು ಬಂದೆವು. ಸರೋವರ ಬಣಗುಡುತ್ತಿತ್ತು. ಕ್ಯಾರೇ..? ಎಂದು ಕೇಳುವವರೇ ಇರಲಿಲ್ಲ. ನಮಗೆ ಕೇರಳದ ಅಲೆಪ್ಪಿ ಬಳಿ ಇರುವ ಕುಟ್ಟನಾಡು ಜ್ಞಾಪಕಕ್ಕೆ ಬಂತು… ಹೋಲಿಕೆ ಮಾಡಲು ಸಾಧ್ಯವಿಲ್ಲ!? ಕುಟ್ಟನಾಡುವಿನಲ್ಲಿ ಬಿಸಿಲ ತಾಪ, ಸೆಖೆ ಇರುತ್ತದೆ. ಶ್ರೀನಗರದಲ್ಲಿ ತಂಪಾಗಿರುತ್ತದೆ. ದಾಲ್‌ ಸರೋವರದ ಪಕ್ಕದಲ್ಲಿಯೇ ಸಿಗುವ ಹೊಟೆಲೊಂದರಲ್ಲಿ ನಮ್ಮ ಊಟವಾಯಿತು. 

10. ಮರುಪ್ರಯಾಣದಲ್ಲಿ ನಾವು ಮೂರು ಎತ್ತರದ ಪರ್ವತ ಶ್ರೇಣಿಗಳ ಪಾಸ್‌ಗಳನ್ನು ದಾಟಿದ್ದೆವು. ಲಮಯೂರು ಬಿಟ್ಟು ವಾಖಾ ನದಿ ಕಣಿವೆಯಲ್ಲಿ ಮೇಲೇರುತ್ತಾ ಮುಲ್ಬೆಖ್‌ ಶ್ರೇಣಿಯಲ್ಲಿ ಸಿಗುವ Fatu La ಪಾಸ್‌ (ಸ.ಮ.ದಿಂದ 13479 ಅಡಿ), ಇದಕ್ಕೆ ಹೋಲಿಸಿದರೆ ನಾವು ಲೆಹ್‌ ತಲುಪಲು ಪ್ರಯಾಣಿಸುತ್ತಿದ್ದಾಗ ರಾತ್ರಿ ತಂಗಿದ ಪ್ರದೇಶ ಸರ್ಚು 14074 ಅಡಿ ಎತ್ತರದಲ್ಲಿತ್ತು; ಡ್ರಾಸ್‌ ಬಿಟ್ಟು ಸೋನಾ ಮಾರ್ಗ್‌ ದಾರಿಯಲ್ಲಿ ಸಿಗುವ Zoji La ಪಾಸ್‌ ಸ.ಮ.ದಿಂದ 11649 ಅಡಿ ಎತ್ತರ. ಇದು ಸರಿಸುಮಾರು ಲೆಹ್‌ ಪಟ್ಟಣದ ಎತ್ತರ-11562 ಅಡಿ. ಜಮ್ಮುವಿನ ದಾರಿ ರಾ.ಹೆ.1ಎ ನಲ್ಲಿ ಪೀರ್‌ ಪಾಂಜಾಲ್‌ ಪರ್ವತ ಶ್ರೇಣಿಯಲ್ಲಿರುವ ಬಾನಿಹಾಲ್‌ ಪಾಸ್‌ ಸ.ಮ.ದಿಂದ 9291ಅಡಿ… ಇಲ್ಲೊಂದು ಜೋಡಿ ಸುರಂಗ ಮಾರ್ಗವಿದೆ, ಅದಕ್ಕೆ ಜವಹರ್‌ ಟನಲ್ ಎಂದು ಹೆಸರಿಸಿದ್ದಾರೆ. ಈಪಾಸ್‌ ಶ್ರೀನಗರದಿಂದ ಭಾರತದ ದಕ್ಷಿಣ ಪ್ರಾಂತಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ದಾರಿ. ಇದರಲ್ಲಿ ತೊಂದರೆಯಾದರೆ ಕಾಶ್ಮೀರ ಕಣಿವೆ… ಹೊರ ಹಿಮಾಲಯ ಮತ್ತು ಪ್ರಸ್ಥಭೂಮಿ ಕಡೆಗಿನ ವಾಣಿಜ್ಯಮಾರ್ಗ ಸಂಪರ್ಕದಿಂದ ಕಡಿಯುತ್ತದೆ. ಇದಲ್ಲದಿದ್ದರೆ ಹಿಮಾಚಲದ ಕಿಲಾಂಗ್‌ ಕಡೆಯಿಂದ ಬರುವ ಮಾರ್ಗವನ್ನು ಉಪಯೋಗಿಸಿಕೊಳ್ಳಬೇಕು. ಆದರದು ಮತ್ತಷ್ಟು ದುರ್ಗಮ ಮತ್ತು ಬಳಸು ರಸ್ತೆ, ಜೊತೆಗೆ ಆರು ತಿಂಗಳು ಹಿಮದಿಂದ ಮುಚ್ಚಿಹೋಗುತ್ತದೆ. ಈ ಮೂರು ಪಾಸ್‌ಗಳು ನಾವು ದಾಟಿದ ಇತರ ಪಾಸ್‌ಗಳಿಗೆ (ನಕೀ ಲಾ-15302 ಅಡಿ, ಬಾರಲಾಚ ಲಾ-16500 ಅಡಿ, ಲಾಚಲುಂಗ್‌ ಲಾ-16616ಅಡಿ, ತಾಂಗ್‌ಲಾಂಗ್‌ ಲಾ-17582ಅಡಿ ಮತ್ತು ಖಾರ್ದುಂಗ್‌ ಲಾ-18380 ಅಡಿ) ಹೋಲಿಸಿದರೆ ಅವುಗಳ ಸಮಕ್ಕೇ ಬರುತ್ತಿರಲಿಲ್ಲ. 

11. ಪೀರ್‌ ಪಾಂಜಾಲ್‌ ಪರ್ವತ ಶ್ರೇಣಿಯ ರಾ.ಹೆ.1ಎ ನಲ್ಲಿ ಟೈಟಾನಿಕ್‌ ಪಾಯಿಂಟ್‌ ಎಂದು ಗುರುತಿಸಲಾದ ಒಂದು ಸ್ಥಳವಿದೆ. ಅಲ್ಲಿ ನಮ್ಮ ಜೀಪಿನ ರಿಜಿಸ್ಟ್ರೇಷನ್‌ KA-09 ಗಮನಿಸಿದ ವ್ಯಕ್ತಿಯೊಬ್ಬ ಸರಸರನೆ ಕೈಬೀಸುತ್ತಾ ಜೀಪಿಗೆ ಅಡ್ಡಬಂದು ನಿಂತುಬಿಟ್ಟ. ಯಶಪಾಲ ಜೀಪನ್ನು ನಿಲ್ಲಿಸಿದ. ಆತ ಕನ್ನಡದಲ್ಲಿ, “ಯವೂರು?” ಎಂದು ಪ್ರಶ್ನಿಸಿದ. “ಮೈಸೂರು”, ಎಂದುತ್ತರಿಸಿದ ಯಶಪಾಲ “ನಿಮ್ಮೂರು ಯಾವುದು?” ಎಂದು ಕೇಳಿದ. ಪ್ರತ್ಯುತ್ತರಿಸಿದ ಆತ, “ಮೈಸೂರು… ಹೆಬ್ಬಾಳ… ಬೇಕರಿ ಹತ್ತಿರ….” ಎಂದುತ್ತರಿಸಿದ ಆತ ಮುಂದುವರಿದು “ಹೇಗೂ ಬಂದಿದ್ದೀರ..! ವೈಷ್ಣೋದೇವಿಗೆ ಹೋಗಿ… ಮಾತೆಗೆ ಕೈಮುಗಿದು ಆಶೀರ್ವಾದ ಪಡೆದು ಹೋಗಿ….” ಎಂದು ಸಲಹೆ ಮಾಡಿದ. “ಆಯಿತೆಂದು… ” ಮಾತ್ರ ಹೇಳಿದ ನಾವು ಪ್ರಯಾಣ ಮುಂದುವರಿಸಿದೆವು. 
 
12. ಜೂನ್‌ 10ರ ದಿನ ರಾತ್ರಿಗೆ ನಾವು ಉಧಾಂಪುರ್‌ ಜಿಲ್ಲೆಯ ಬಟೋಟ್‌ ಎಂಬಲ್ಲಿ ದಾರಿ ಪಕ್ಕದ ಹೊಟೆಲ್‌ನಲ್ಲಿ ತಂಗಿದೆವು. ಜೂನ್‌ 11ರ ಮಾರನೆಯ ದಿನ ಬೆಳಗ್ಗೆ ನಾವು ಸ್ನಾನ ಮುಗಿಸಿ ನಮ್ಮ ಲಗೇಜುಗಳನ್ನು ಜೋಡಿಸಿಕೊಂಡು ಬೆಳಗಿನ ಉಪಾಹಾರ ಮುಗಿಸಿ ಅಲ್ಲಿಂದ ಹೊರಡಲು ಅಣಿಯಾಗುತ್ತಿದ್ದಾಗ ಶ್ರೀನಗರದ ಕಡೆಗೆ ಹೋಗುವ ಎಲ್ಲಾ ವಾಹನಗಳು ರಸ್ತೆಯಲ್ಲಿಸಾಲುಗಟ್ಟಿ ನಿಲ್ಲತೊಡಗಿದ್ದವು. ಕೆಲವು ಮಿಲಿಟರಿಗೆ ಸೇರಿದ ವಾಹನಗಳು ಸಹ ಹೊಟೆಲ್‌ ಮುಂದೆ ಝಾಂಡಾ ಹೂಡಿದ್ದವು. ಕಾರಣ ಹಿಂದಿನ ದಿನ ಚಿರತೆಯೊಂದು ಚಿಕ್ಕ ಹುಡುಗನೊಬ್ಬನನ್ನು ಕೊಂದು ಎಳೆದುಕೊಂಡು ಹೋಗಿದೆಯೆಂಬುದು. ಬಟೋಟ್‌, ಸೇಬು ತೋಟಗಳು, ಚಿನಾರ್‌ ಮರಗಳ ಕಾಡು, ಇತರ ಪ್ಲಾಂಟೇಷನ್‌ ಮತ್ತು ಜನವಸತಿ ಒಟ್ಟೊಟ್ಟಿಗೆ ಇರುವ ಪ್ರದೇಶ. ಕಳೆದೆರಡು ತಿಂಗಳಿನಲ್ಲಿ ಇದು ಮೂರನೇ ಘಟನೆ. ಮಕ್ಕಳನ್ನು ಕಳೆದುಕೊಂಡ ಕುಟುಂಬಗಳು ಮತ್ತು ಸ್ಥಳೀಕರು ಸರ್ಕಾರದ ವಿರುದ್ಧ ರಸ್ತೆತಡೆ ನಡೆಸಿ ಧರಣಿ ಹೂಡಿದ್ದರು. ಹಾಗಾಗಿ ಘಟ್ಟದ ರಸ್ತೆ ರಾ.ಹೆ.1ಎ ಬಂದಾಗಿತ್ತು. ಜಮ್ಮುವಿನ ಕಡೆಗೆ ಇಳಿಯುವ ದಾರಿ ಹೋಗಲು ಸುಗಮವಾಗಿತ್ತು. ನಾವು ಬಚಾವಾಗಿದ್ದೆವು. ಅಲ್ಲಿಂದ ಕುಡ್‌ ಮಾರ್ಗವಾಗಿ ವೈಷ್ಣೋದೇವಿಗೆ ಹೋಗಬಹುದಿತ್ತು. 

13. ಬಟೋಟ್‌ನಲ್ಲಿ ನಾವು ತಂಗಿದ್ದ ದಾರಿಬದಿ ಹೊಟೆಲಿನ ಹತ್ತಿರ ರಸ್ತೆತಡೆಯಿಂದಾಗಿನ ಸಮಯದ ನೆನಪುಗಳು… ನಮ್ಮ ಜೀಪಿನ ರಿಜಿಸ್ಟ್ರೇಷನ್‌ KA-09 ಗುರುತಿಸಿದ ಇಬ್ಬರು ವ್ಯಕ್ತಿಗಳು ನಮ್ಮ ಬಳಿ ಬಂದು ಪರಿಚಯ ಮಾಡಿಕೊಂಡರು. ಅವರೊಲ್ಲಬ್ಬರು ಸುಮಾರು 40ರ ಪ್ರಾಯದವರು, ಆಂಧ್ರಪ್ರದೇಶದ ವಿಜಯವಾಡದವರು, ಸೈನಿಕ ಸೇವೆಯಲ್ಲಿದ್ದರು. ಅವರ ಟ್ರಕ್ಕು ರಸ್ತೆತಡೆ ಸಾಲಿನಲ್ಲಿ ನಿಂತುಕೊಂಡಿತ್ತು. ಊರು, ಭಾಷೆ, ನಮ್ಮ ಪ್ರವಾಸದ ಬಗ್ಗೆ ಎಲ್ಲಾ ವಿಚಾರಿಸಿದರು. ನನ್ನ ಪತ್ನಿ ವಸಂತ ಮತ್ತು ಪುಷ್ಪಲತ ಅವರೊಡನೆ ಸಂಭಾಷಣೆಯಲ್ಲಿದ್ದರು. ಅವರಿಗೆ ಖುಶಿಯಾಯಿತು. ಇನ್ನೊಬ್ಬ ವ್ಯಕ್ತಿ ಇನ್ನೂ ಸುಮಾರು ಮೂವತ್ತರೊಳಗಿನ ಪ್ರಾಯ. ಕೇರಳ ರಾಜ್ಯದವರು, ದೆಹಲಿಯಲ್ಲಿ ಇಂಜಿನಿಯರ್‌ ಕೆಲಸ. ಶ್ರೀನಗರದಲ್ಲಿರುವ ಸಹೋದರನನ್ನು ನೋಡಲು ಹೋಗುತ್ತಿದ್ದಾತ ಖುಷಿಯಾಗಿ ಮಾತಿಗಿಳಿದಿದ್ದ. ವಸಂತ ಮತ್ತು ಪುಷ್ಪಲತ ಅಲೆಪ್ಪಿಯ ಕುಟ್ಟನಾಡು ಮತ್ತು ಒಳನಾಡು ಜಲಮಾರ್ಗದ ಬಗ್ಗೆ ಮಾತನಾಡುತ್ತಿದ್ದರು ದಾಲ್‌ ಸರೋವರವನ್ನು ಗುರಿಯಿಟ್ಟಕೊಂಡು. ಎಲ್ಲಾ KA-09 ರಿಜಿಸ್ಟ್ರೇಷನ್‌ ಮಹಿಮೆ. ದೂರಸ್ಥಳದಲ್ಲಿ ಇದ್ದಾಗಲೂ ನೆರೆಯ ಪಕ್ಕದ ಪ್ರದೇಶದವರೂ ಕೂಡ ಹೇಗೆ ಆತ್ಮೀಯರಾಗಿ “ನಿಮ್ಮ ಹತ್ತಿರದವರೆಂದು,” ಗುರುತಿಸಿಕೊಂಡು ಪರಿಚಿತರಾಗುತ್ತಾರೆಂಬುದು… ಒಂದು ಭಾವನಾತ್ಮಕ ವಿಷಯ. 

14. ಜಮ್ಮುವಿನಲ್ಲಿ ಊಟ ಮಾಡಿ ಕೊನೆಯ ಕಂತಾಗಿ ನಾವು ವೀಕ್ಷಣೆ ಮಾಡಿದ ಸ್ಥಳವೆಂದರೆ ಜಮ್ಮು-ಕಾಶ್ಮೀರದ ದೋಗ್ರಿ ವಂಶದ ಕೊನೆಯ ರಾಜ… ರಾಜಾ ಹರಿಸಿಂಗ್‌ ರವರ ಅರಮನೆ. ಸುಂದರವಾದ ಚಿಕ್ಕ ಚೊಕ್ಕ ಅರಮನೆ. ಅರಮನೆ ಹಿಂಭಾಗದಿಂದ ರಾವಿ ನದೀ ದಂಡೆ ಮತ್ತದರ ಹರವಿನ ವಿಹಂಗಮ ನೋಟವಿದೆ. ಅರಮನೆ ಅದಾಗಲೇ ವಸ್ತುಸಂಗ್ರಹಾಲಯ ಅಗಿತ್ತು. ಪ್ರವೇಶ, ಟಿಕೆಟ್‌ ಮೂಲಕ. 

15. ಶ್ರೀನಗರದ ಸಂಚಾರಿ ಪೊಲೀಸ್‌ ದಾಲ್‌ ಸರೋವರದ ಬಳಿ; ರಾ.ಹೆ.1ಎ ನಲ್ಲಿಪೀರ್‌ ಪಾಂಜಾಲ್‌ ಪರ್ವತ ಶ್ರೇಣಿಯ ಏರುರಸ್ತೆ ಪ್ರಾರಂಭಕ್ಕೆ ಮೊದಲು Qazigund ಬಳಿಯ ಪೊಲೀಸ್‌ ಚೆಕ್‌ಪೋಸ್ಟ್‌ಬಳಿ; ಜಮ್ಮು ನಗರದ ಸಂಚಾರಿ ಪೊಲೀಸ್‌ ಜಮ್ಮುವಿನಲ್ಲಿ; ಪಂಜಾಬದ ಖರಾರ್‌ ನಗರದ ಸಂಚಾರಿ ಪೊಲೀಸ್‌… ಒಟ್ಟು ನಾಲ್ಕು ಕಡೆ ಯಶಪಾಲನನ್ನು ನಮ್ಮ ಜೀಪಿನ ರಿಜಿಸ್ಟ್ರೇಷನ್‌ ನಂಬರಿನ ಆಧಾರದ ಮೇಲೆ ಇಲ್ಲದ ಕಾರಣ ಹೇಳಿ ತಡೆದು ಲಂಚ ರುಶುವತ್ತು ವಸೂಲು ಮಾಡಲು ಪ್ರಯತ್ನಿಸಿದ್ದರು. ಜೀಪಿನ ಎಲ್ಲ ದಾಖಲೆಗಳೂ ಸರಿಯಾಗಿದ್ದವು. ಯಶಪಾಲನ ವಾಹನ-ಚಾಲನೆ ರಹದಾರಿಯೂ ಸಹ ಸರಿಯಾಗಿಯೇ ಇದ್ದಿತು. ಅದಾಗ್ಯೂ ಸತಾಯಿಸುತ್ತಿದ್ದರು. ವಸಂತಳ ಗುರುತಿನ ಚೀಟಿ ಮತ್ತು ಮಾತಿನ ಜೋರಿನ ಮೇಲೆ ಜಮ್ಮು-ಕಾಶ್ಮೀರದ ಪೊಲೀಸರು ಸುಮ್ಮನಾಗಿದ್ದರು. ಪಂಜಾಬದ ಖರಾರ್‌ ಪೊಲೀಸರು ಐದುಸಾವಿರ ರುಪಾಯಿ ಲಂಚ ಕೇಳಿದ್ದರು. ಕಡೆಗೆ ಐನೂರಕ್ಕಿಳಿದು ಅದನ್ನು ಯಶಪಾಲನಿಂದ ಪಡೆದಿದ್ದರು. ನನ್ನ ಪತ್ನಿ ವಸಂತ ಮಧ್ಯೆ ಪ್ರವೇಶಿಸಿ ಮಾತಿನೇಟು ಕೊಟ್ಟು ಆ ಹಣಕ್ಕೆ ರಸೀತಿ ಕೇಳಿದಳು. ಅವರಲ್ಲಿ ಅದಕ್ಕೆ ಉತ್ತರವಿರಲಿಲ್ಲ. ಕೊನೆಗೆ ಐದುನೂರು ರುಪಾಯಿಗಳನ್ನು ಹಿಂದಕ್ಕೆ ನೀಡಿದ್ದರು. ಭಾರತ-ಸರ್ಕಾರ “ಇಂಕ್ರೆಡಿಬಲ್‌ ಇಂಡಿಯಾ” ಭಾರತೀಯ ಪ್ರವಾಸೋಧ್ಯಮದ ಪ್ರಚಾರವನ್ನು ಭರಾಟೆಯಿಂದ ನಡೆಸುತ್ತಿತ್ತು. ಪ್ರವಾಸಿಗರನ್ನು ಅತಿಥಿಗಳ ರೀತ್ಯ ನಡೆಸಿಕೊಳ್ಳಲು ಹಿಂದಿ ಚಿತ್ರನಟ ಅಮೀರ್‌ ಖಾನ್‌ ಬಳಸಿಕೊಂಡು ಪ್ರಭಾವಿ ಹೇಳಿಕೆಗಳನ್ನು ನೀಡಿಸಿದ್ದರು… ಭಾರತೀಯ ಸಮುದಾಯದ ನಡವಳಿಕೆ ತಿದ್ದಲು ಜಾಹಿರಾತು ಚಿತ್ರ ನಿರ್ಮಿಸಿ ಎಲ್ಲಾ ಭಾಷಾ ಟಿವಿ ವಾಹಿನಿಗಳಲ್ಲೂ ಪ್ರಚುರಪಡಿಸಲಾಗುತ್ತಿತ್ತು; ಇದನ್ನು ಮದ್ರಣ ಮಾಧ್ಯಮಗಳಲ್ಲೂ ಮುದ್ರಿಸಿತ್ತು, ಸರ್ಕಾರ. ಆದಾಗ್ಯೂ ಅದು ಕೇವಲ ವಿದೇಶಿ ಪ್ರವಾಸಿಗರಿಗೆ ಮಾತ್ರ, ಆಂತರಿಕ ಪ್ರವಾಸಿಗರಿಗಲ್ಲ..! ಎನ್ನುವಂತಿತ್ತು ಪೊಲೀಸರ ಧೋರಣೆ?! ಇದು ಕೇವಲ ಜಮ್ಮು-ಕಾಶ್ಮೀರ, ಪಂಜಾಬ್‌ ರಾಜ್ಯಗಳಿಗೆ ಸೀಮಿತವಾಗಿಲ್ಲ, ಎಲ್ಲಾ ರಾಜ್ಯಗಳಿಗೂ ಅನ್ವಯಿಸುತ್ತದೆ. ಹಾಗಿದ್ದರೆ ಆಂತರಿಕವಾಗಿ ಪ್ರವಾಸೋಧ್ಯಮ ಬೆಳೆಯುವುದಾದರೂ ಹೇಗೆ!? ಉದ್ಭವಿಸುತ್ತವೆ ಆಶ್ಚರ್ಯಗಳೂ, ಪ್ರಶ್ನೆಗಳು.

16. ಯಶಪಾಲ ಮನಾಲಿ ಮೂಲಕ ಹಿಂದಿರುಗಿ ಹೋಗುವಾಗ ಕುಲ್ಲು ಬಳಿಯಿರುವ ಮಣಿಕರಣಕ್ಕೆ ಕರೆದುಕೊಂಡುಹೋಗಿ ನಮಗೆ ಬಿಸಿನೀರ ಬುಗ್ಗೆ ಗಳನ್ನು ತೋರಿಸಿತ್ತೇನೆಂದು ಹೇಳಿದ್ದ. ನಾವು ಮನಾಲಿ ಮೂಲಕ ಹಿಂದಿರುಗಲೇ ಇಲ್ಲ. ಬಿಸಿನೀರ ಬುಗ್ಗೆಗಳ ನಮ್ಮಾಸೆ ತಣ್ಣೀರ ಬುಗ್ಗೆಯಾಗಿ ಹೋಗಿತ್ತು. ###

ಬಾಲಂಗೋಚಿ:
 ಈ ಬರಹದಲ್ಲಿ ಇಂಗ್ಲೀಶಿನ F, Ph., Z ಶಬ್ದಗಳನ್ನು ಹೊಂದಿರುವ ಇಂಗ್ಲೀಶ್‌ ಪದಗಳನ್ನು ಕನ್ನಡದಲ್ಲಿ ನೇರವಾಗಿ ಉಚ್ಛರಿಸಿ (ಲಿಪ್ಯಂತರೀಕರಿಸಿಲ್ಲ) ಬರೆದಿಲ್ಲ. ಅಂತಹ ಪದಗಳನ್ನು ಇಂಗ್ಲೀಶಿನಲ್ಲಿಯೇ ಬರೆಯಲಾಗಿದೆ. ಏಕೆಂದರೆ ಆ ಶಬ್ದಗಳಿಗೆ ಕನ್ನಡದಲ್ಲಿ ಅಕ್ಷರಗಳಿಲ್ಲ. ಒಂದು ವೇಳೆ ಆ ಇಂಗ್ಲೀಶ್‌ ಶಬ್ದಾಕ್ಷರಗಳಿಗಾಗಿ ವಿಶೇಷ ಗುರತು ಚಿಹ್ನೆಗಳನ್ನು ಹಾಕಿ ಬರೆದ ಕನ್ನಡ ಲಿಪಿಗಳನ್ನು ಉಪಯೋಗಿಸಿದರೆ ಅಂತರ್ಜಾಲ ಪುಟಗಳಲ್ಲಿ ಅವು ಮೂಡುವುದಿಲ್ಲ. ಗೂಗಲ್‌ನ ಕನ್ನಡ ಲಿಪಿಗಳೂ ಸಹ ಆ ವಿಶೇಷ ಕನ್ನಡ ಲಿಪಿಗಳನ್ನು ಮೂಡಿಸುವುದಿಲ್ಲ. ಲಿಪಿಗಳು ಅಪ್ರತಪ್ರವಾಗಿ ಓದುಗರಿಗೆ ತೊಡಕನ್ನುಂಟು ಮಾಡುತ್ತವೆ. MS Windows ನ ಅಧಿಕೃತ ಕನ್ನಡ ಲಿಪಿಗಳೂ ಅವುಗಳನ್ನು ಹೊಂದಿಲ್ಲ ಹಾಗೂ ಗುರುತಿಸುವುದಿಲ್ಲ. F, Ph., Z ಶಬ್ದಗಳಿಗೆ ಸಾಮಾನ್ಯವಾಗಿ ಎಲ್ಲರೂ ಬಳಸುವ ಕನ್ನಡ ಅಕ್ಷರಗಳು(ಫ, ಜ, ಝ ). ಅವು ಸಮಾನಾಂತರ ಶಬ್ದಾಕ್ಷರಗಳಲ್ಲ ಎಂಬ ನನ್ನ ವೈಯಕ್ತಿಕ ಅಭಿಪ್ರಾಯದಿಂದ ಈ ಬರಹದಲ್ಲಿ ನಾನು ಅವುಗಳನ್ನು ಬಳಸಿ ಬರೆದಿರುವುದಿಲ್ಲ.

Comments

Popular posts from this blog

ಜೀವಂತ ಕ್ರಿಯಾಶೀಲ ಜ್ವಾಲಾಮುಖಿಯ ಮೇಲೆ 18 ಗಂಟೆಗಳ ಓಡಾಟ

ಲಾಸ್‌ಎಂಜಲಿಸ್‌ನಿಂದ ಟಿಟಾನ್‌ ವಿಲೇಜ್‌ವರೆಗೆ

ಕನ್ನಡಕ್ಕಾಗಿ ವಿಂಡೋಸ್ ಎದುರು ಲಿನಕ್ಸ್ ಗಣಕ ನಿರ್ವಹಣಾ ತಂತ್ರಾಂಶ