ಹುಟ್ಟು ಹೋರಾಟಗಾರ ಶ್ರೀ ಎಂ.ಚಂದ್ರಶೇಖರಯ್ಯ


                                        ಹುಟ್ಟು ಹೋರಾಟಗಾರ ಶ್ರೀ ಎಂ.ಚಂದ್ರಶೇಖರಯ್ಯ

                                            ಊರಿಂದಲ/ಊರಹಿಂದಲ ಮಲ್ಲೇಗೌಡ ಕುಟುಂಬ
ಶ್ರೀ ಎಂ.ಚಂದ್ರಶೇಖರಯ್ಯ, ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಹೊಸಹಳ್ಳಿಯ ಊರಿಂದಲ(ಊರಹಿಂದಲ) ಮಲ್ಲೇಗೌಡರ ಹಿರಿಯ ಮಗ, ಅವರ ತಾತನ ಹೆಸರೂ ಮಲ್ಲೇಗೌಡ...ಎಂದೇ. 'ಊರಹಿಂದಲ' ಎಂಬುದಕ್ಕೆ ಕಾರಣ..! ಊರಿನ ದೊಡ್ಡಮನೆಯ ಮುಂಬಾಗಿಲು ಪೂರ್ವಕ್ಕೆ ಇದ್ದು ಆಮನೆಯ ಹಿಂಭಾಗಕ್ಕೆ ಇದ್ದುದರಿಂದಲೋ ಅಥವಾ ಊರಿನಲ್ಲಿನ ದೇವಸ್ಥಾನಗಳು ಆ ಮನೆಯ ಪೂರ್ವಕ್ಕೆ ಇದ್ದುದರಿಂದಲೋ ಏನೋ ಇರಬೇಕು, ಇಲ್ಲವೆ ಅವರ ಮನೆ ಪಶ್ಚಿಮದಲ್ಲಿ ಒಂಟಿಯಾಗಿದ್ದುದರಿಂದಲೋ ಏನೋ ಇರಬೇಕು..? ಒಟ್ಟಿನಲ್ಲಿ 'ಊರಿಂದಲ/ಊರಹಿಂದಲ' ಎಂಬ ವಿಶೇಷಣ ಅವರ ಕುಟುಂಬಕ್ಕೆ ಅಂಟಿಕೊಂಡಿತ್ತು. ಮನೆಯಲ್ಲಿ ಬೆಳ್ಳಿಬಂಗಾರ ದವಸ-ಧಾನ್ಯ ತುಂಬಿ ತುಳುಕಾಡುತ್ತಿದ್ದುದೆಂದೇ ಹೇಳಬೇಕು. ಆ ಮಟ್ಟಿಗೆ ಅವರು ನಮ್ಮೂರಿನಲ್ಲಿ ಶ್ರೀಮಂತರೇ ಆಗಿದ್ದರು, ಮನೆಯ ಮುಂದೊಂದು ಬ್ರಿಟಿಷರ ಕಾಲದ ಕಪ್ಪುಕಾರೊಂದು ನಿಂತಿರುತ್ತಿತ್ತು... ಬಾಕಿ ಮಂದಿ ನೀರಾವರಿ ಜಮೀನುಗಳಲ್ಲಿ ಕಪಿಲೆ ಹೊಡೆದು ಬಾವಿಗಳಿಂದ ನೀರೆತ್ತುತ್ತಿದ್ದರೆ ಇವರ ನೀರಾವರಿ ಬಾವಿಗೆ ಅಳವಡಿಸಿದ್ದ ಜರ್ಮನಿಯಲ್ಲಿ ತಯಾರಾಗಿದ್ದ ಬಹುದೊಡ್ಡ ಡೀಜ಼ಲ್‌ ಇಂಜಿನೊಂದು ನೀರೆತ್ತುತ್ತಿತ್ತು...ಒಬ್ಬರೇ ಎತ್ತಿ ನಿಲ್ಲಿಸಲಾಗದ ಹೊರದೇಶದಲ್ಲಿ ತಯಾರಾದ ಮೋಟಾರು-ಸೈಕಲ್ಲೊಂದೂ ಇತ್ತೆಂದು ಹೇಳಲೂ ಹೆಮ್ಮೆಯೇ.?!

ಅಪ್ಪ...ಮಲ್ಲೇಗೌಡರ ಆಸೆ
ಶ್ರೀ ಚಂದ್ರಶೇಖರಯ್ಯ ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲೇ ಜನಿಸಿದವರು. ಬ್ರಿಟಿಷರ ಕಾಲದ ಮಾಧ್ಯಮಿಕ ಶಾಲೆ, ಪ್ರೌಢಶಾಲೆ, ನಂತರ ಇಂಟರ್‌-ಮೀಡಿಯೆಟ್‌ ಮುಗಿಸಿ ಪ್ರಥಮವಾಗಿ ತುಮಕೂರಿನ ಸ್ನಾತಕ-ಪಧವಿ ಕಾಲೇಜು ಮೆಟ್ಟಿಲೇರಿದವರು. ತಾಯಿ, ಲಕ್ಷ್ಮಮ್ಮ, ಮಲ್ಲೇಗೌಡರ ಶ್ರೀಮತಿ, ಏಳು ಮಕ್ಕಳ ತಾಯಿ. ಆಗಿನ ಕಾಲಕ್ಕೆ ಅಕ್ಷರ ಜ್ಞಾನ ಇಲ್ಲದವರು. ಯಜಮಾನರಾದ ಮಲ್ಲೇಗೌಡರು ಏನೂ ಅರಿಯದ ಪತ್ನಿ ಲಕ್ಷ್ಮಮ್ಮನವರನ್ನು...ಮಗ ಕಾಲೇಜಿಗೆ ಸೇರಿದ ಹೊಸದರಲ್ಲಿ... ಮನೆ ಜಗುಲಿಯ ಮೇಲೆ ಹತ್ತಿರ ಕೂರಿಸಿಕೊಂಡು 'ನೋಡೆ ಲಕ್ಷ್ಮೂ ನಮ್ಮ ಮಗ ಅಮುಲ್ದಾರನಾಗುತ್ತಾನೆ… ತಾಲ್ಲೂಕಿಗೇ ಧಣಿಯಾಗುತ್ತಾನೆ…' ಎಂದೇನೇನೋ ಬಡಬಡಿಸುತ್ತಾ ಬೀಗುತ್ತಾ ಕೊಚ್ಚುತ್ತಾ ಹೇಳುತ್ತಿದ್ದರೆಂದು ಅದನ್ನು ನೋಡಿದವರು ಕೇಳಿದವರು ಅವರಿವರಲ್ಲಿ ಹೇಳಿ ಊರೆಲ್ಲಾ ಸುದ್ದಿಯಾಗಿ ಹರಿದಾಡಿರಬಹುದು. ಆ ವಿಷಯ ನಮ್ಮ ಕಾಲದ ಹುಡುಗರವರೆಗೂ ಹರಿದು ಬಂದುಬಿಟ್ಟಿದೆ.

ಸ್ವಾತಂತ್ರ್ಯ ಚಳುವಳಿ ಹೋರಾಟಗಾರ
ಶ್ರೀ ಚಂದ್ರಶೇಖರಯ್ಯನವರು ಹದಿ-ವಯಸ್ಸಿನಲ್ಲಿ ಓದುತ್ತಿದ್ದಾಗ ತುಮಕೂರಿನಲ್ಲೋ ಅಥವಾ ಪಾವಗಡದಲ್ಲೋ...ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲು 'ಬ್ರಿಟಿಷರೇ ಭಾರತ ಬಿಟ್ಟು ತೊಲಗಿ' ಎಂಬ ಘೋಷಣೆಯನ್ನು ಕೂಗಿದ್ದಿರಬಹುದು ಅಥವಾ ಜೈಲಿನಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರರಿಗೆ ಊಟ ತಿಂಡಿ ಸರಬರಾಜು ಮಾಡಿರಬಹುದು ಅಥವಾ ಅವರೂ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲುಗೊಂಡು ಕೂಗಿ ಸಿಲುಕಿ ಜೈಲಿಗೆ ಹೋಗಿ ಬಂದಿರಬಹುದು. ಒಟ್ಟಿನಲ್ಲಿ ಯಾವುದೋ ಒಂದು ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದ ಪ್ರಮಾಣಪತ್ರ-ಧಾಖಲೆಯ ಆಧಾರದ ಮೇರೆಗೆ ಇವರಿಗೆ ಸ್ವಾತಂತ್ರ್ಯ ಹೊರಾಟಗಾರರಿಗೆ ಭಾರತ-ಸರ್ಕಾರದಿಂದ ದೊರಕುತ್ತಿರುವ ಪಿಂಚಣಿ ಬರುತ್ತಿದೆ. ಜೊತೆಗೆ ಅದೇ ಪ್ರಮಾಣಪತ್ರ ಇವರು ಸರ್ಕಾರಿ ಬಸ್ಸುಗಳಲ್ಲಿ ಮತ್ತು ರೈಲಿನಲ್ಲಿ ಭಾರತದಲ್ಲಿ ಎಲ್ಲೆಂದರಲ್ಲಿಗೆ ಪುಕ್ಕಟೆಯಾಗಿ ಓಡಾಡಲು ಅವಕಾಶವೂ ಇದೆ. ಅದನ್ನವರು ಸದ್ವಿನಿಯೋಗಪಡಿಸಿ ಕೊಂಡಿದ್ದಾರೆ ಕೂಡ.

ಅಪ್ಪನ ಆಸೆಗೆ ತಿಲಾಂಜಲಿ
ನಮ್ಮ ಚಂದ್ರಶೇಖರಯ್ಯ, ಸ್ವಾತಂತ್ರ್ಯಾನಂತರದ 1950ರ ದಶಕದಲ್ಲಿ ಭಾರತ ಸರ್ವತಂತ್ರ ಸ್ವತಂತ್ರ್ಯ ರಾಷ್ಟ್ರವಾಗಿ ಹೊರ- ಹೊಮ್ಮುವಷ್ಟರಲ್ಲಿ ಅವರಪ್ಪನ ಆಸೆ ಪೂರೈಸುವ 'ತಾಲ್ಲೂಕಿನ ಒಡೆಯ, ಅಮುಲ್ದಾರಿಗಿರಿ ನಡೆಸುವ ಮಗ' ಆಗುವಂತಾಗಲು ಕಾಲೇಜು ಪಧವಿ ಪೂರ್ಣಗೊಳಿಸಿರಲಿಲ್ಲ. ಇತ್ತ ವ್ಯವಸಾಯ ಮಾಡುವಂಥ ಮಗನೂ ಆಗದೆ ಅಲ್ಲಿ ಇಲ್ಲಿ ಅಂಡಲೆಯುವ ವ್ಯಕ್ತಿಯಾಗಿ ಪರಿಣಮಿಸಿದ್ದರು. ಗುರಿಯಿಲ್ಲದೆ ಅಲೆದಾಡುತ್ತಿದ್ದ ಮಗ, ಚಂದ್ರಶೇಖರಯ್ಯ ಆ ಮಧ್ಯೆ ಬೆಂಗಳೂರಿನ 'ಸಚ್ಛಿದಾನಂದ ಅಶ್ರಮ'ದ ಸ್ವಾಮಿಗಳ ಪ್ರಭಾವಕ್ಕೆ ಒಳಗಾಗಿಬಿಟ್ಟಿದ್ದರು. ಈ ಪ್ರಭಾವ ಹೇಗಿತ್ತೆಂದರೆ...ಊರಿನಲ್ಲಿ ಮದುವೆಯಾದ ಹೆಣ್ಣುಮಕ್ಕಳು ಗಂಡನ ಪಾದಪೂಜೆ ಮಾಡಿ ಕಾಲುತೊಳೆದ ನೀರನ್ನು ಆಪೋಶನ ಮಾಡಿದರೆ ಸತೀಶಿರೋಮಣಿಯಾಗಿ ವಿಜೃಂಬಿಸುತ್ತಾಳೆಂಬ ಅಭಿಯಾನ ಕಾರ್ಯವನ್ನೂ ಕೈಗೊಂಡಿದ್ದರೆಂದು ಅಂಬೋಣ. ಮುಂದುವರಿದು ಊರಿನ ಹನುಮಂತರಾಯನ ಬೀಳುವಿನಲ್ಲಿ, ಊರಿನ ಪೂರ್ವಕ್ಕೆ ಹರಿಜನರ ಕೇರಿಯಿಂದಾಚೆಗೆ ಕುರಿಯಟ್ಟಿಗಳನ್ನು ದಾಟಿ ಜಂಗಮರಹಳ್ಳಿಯ ದಾರಿಯ ಕಡೆ ಎಡಬಲಕ್ಕಿದ್ದ ಸುಮಾರು ಒಂದ್ಹದಿನೈದಿಪ್ಪತ್ತು ಎಕರೆ ಜಮೀನಿನ ಮೇಲಕ್ಕೆ(ಇದೀಗ ಪ್ರೌಢಶಾಲೆ ಇರುವ ಜಾಗದ ಮುಂಭಾಗದಲ್ಲಿ) ಧ್ಯಾನ ಮಾಡಲು ಒಂದು ಚಿಕ್ಕ ಗುಹೆಯಾಕಾರದ, ಗಾಳಿಯಾಡದ, ಒಬ್ಬ ದೊಡ್ಡ ವ್ಯಕ್ತಿ ಬಗ್ಗಿ ತೂರಿಹೋಗಿ ಕುಳಿತುಕೊಳ್ಳುವಂಥ ಕೊಠಡಿಯನ್ನು ನಿರ್ಮಿಸಿಕೊಂಡು ಅದರಲ್ಲಿ ಧ್ಯಾನ-ಯೋಗಮಾಡುತ್ತೇನೆಂದು ಒಂದು ರಾತ್ರಿ ಹಟವಾದಿಯಾಗಿ ಕುಳಿತುಕೊಂಡಿದ್ದರೆಂಬುದು ಮತ್ತೊಂದು ಕತೆ. ಏನೇ ಇರಲಿ ಆ ಗುಹೆಯಂಥ ಕೋಣೆಯ ಮುಂಭಾಗದಲ್ಲಿ ಒಂದು ಯಜ್ಞಕುಂಡವಿದ್ದಿತು, ಆ ಜಾಗ ನಾಟಕವಾಡಲು ಸುತ್ತಲೂ ಕಲ್ಲುಕಟ್ಟಿ ಮಧ್ಯೆ ಮಣ್ಣುತುಂಬಿ ಅಟ್ಟಣಿಗೆ ಮಾಡಿದಂತೆ ಇದ್ದ ಜಾಗವಾಗಿತ್ತು. ಮತ್ತಲ್ಲಿಂದ ಮುಂದಕ್ಕೊಂದು ನೆಡಲಾಗಿದ್ದ ಅರಳಿಗಿಡ ಇದೀಗ ಮರವಾಗಿ ಬೆಳೆದುಬಿಟ್ಟಿದೆ.

ಬೆಳೆದ ಸಂಪರ್ಕ...ಸಂಬಂಧಗಳು
ಆಂದ್ರಪ್ರದೇಶದ ಪೂರ್ವ-ಕರಾವಳಿಯ ವಿಜಯವಾಡದಿಂದ ಬೆಂಗಳೂರಿಗೆ ಒಂದು ಸಾಮಾನ್ಯ-ಪ್ರಯಾಣಿಕ ರೈಲುಗಾಡಿ ಓಡಾಡುತ್ತದೆ...ಅದು ಈಗಲೂ ಓಡಾಡುತ್ತದೆ. ಈ ರೈಲುಗಾಡಿಯನ್ನು ನಮ್ಮ ಚಂದ್ರಶೇಖರಯ್ಯನವರು, ಅಂಡಲೆಯುವ ಕಾಲಕ್ಕೆ ಯಾವಾಗಲೋ ಒಮ್ಮೆ, ಬೆಂಗಳೂರಿಗೆ ಹೋಗಲು 'ಹಿಂದೂಪುರದಲ್ಲಿ' ಏರಿದ ಸಮಯದಲ್ಲಿ ವಿಜಯವಾಡದ ಕನಕಮ್ಮ ಎಂಬ ಮಹಿಳೆಯ ಕುಟುಂಬ ಪರಿಚಯ ಆಗಿದ್ದಿರಬಹುದು. ಆಕೆಯ ಪತಿ(ಹೆಸರು ಗೊತ್ತಿಲ್ಲ) ಭಾರತೀಯ ರೈಲು ಸೇವೆಯಲ್ಲಿದ್ದರೆಂದು ಅಂಬೋಣ. ಇವರ ಪರಿಚಯ ಮುಂದೆ, ತಿರುವು ಪಡೆದ ಟಿ.ವಿ ಧಾರಾವಾಹಿ ಕತೆಗಳಂತೆ, ಚಂದ್ರಶೇಖರಯ್ಯನವರ ಜೀವನದಲ್ಲಿ ತಿರುವು ಮೂಡಿಸಿದ್ದಿತು. ಚಂದ್ರಶೇಖರಯ್ಯನವರಿಗೆ, ಚಿಕ್ಕಮಗುವಾಗಿದ್ದಾಗಲೇ ತೀರಿಹೋದ ಒಬ್ಬ ಅಕ್ಕ ಇದ್ದರು. ಆ ತೀರಿಕೊಂಡ ಅಕ್ಕ ಇದೀಗ ಕನಕಮ್ಮನ ರೂಪದಲ್ಲಿ ಪುನರ್ಜನ್ಮ ಪಡೆದಿದ್ದರು. ಅದಕ್ಕೆ ಪೂರಕವಾಗಿ ಬೆಂಗಳೂರಿನ ಸಚ್ಛಿದಾನಂದಾಶ್ರಮ ಮಠವಾಸಿಗಳೂ ಧನಿಗೂಡಿಸಿ ಚಂದ್ರಶೇರಯ್ಯನ ಬೆಂಬಲಕ್ಕೆ ನಿಂತಿದ್ದರು. ಒಟ್ಟಿನಲ್ಲಿ ಚಂದ್ರಶೇಖರಯ್ಯನವರಿಗೆ ಒಬ್ಬ ಅಕ್ಕ ದೊರಕಿದ್ದಳು. ಇನ್ನು...ಅವರಿಗೊಬ್ಬ ಮಗಳೂ ಇದ್ದಳೆಂದು ಬೇರೆ ಹೇಳಬೇಕಿಲ್ಲ. ಮೂಲತಃ ಆಂದ್ರದವರಾಗಿದ್ದ ಕನಕಮ್ಮನ ಕುಟುಂಬಕ್ಕೆ ಕನ್ನಡವೇನೂ ಬರುತ್ತಿರಲಿಲ್ಲ. ಅದಾಗ್ಯೂ ಸಚ್ಛಿದಾನಂದಾಶ್ರಮದ ಸ್ವಾಮಿಗಳ ಘನ ಆಶೀರ್ವಾದದಡಿಯಲ್ಲಿ ಊರಹಿಂದಲ ಮಲ್ಲೇಗೌಡರ ಕುಟಂಬವೂ ಮತ್ತು ಹೊಸಹಳ್ಳಿಯ ಜನತೆಯೂ ಸೇರಿ ಚಂದ್ರಶೇಖರಯ್ಯ ಹನುಮಂತರಾಯನ ಬೀಳಿನಲ್ಲಿ ಕಟ್ಟಸಿಕೊಂಡಿದ್ದ ಧ್ಯಾನ-ಯೋಗ ಕೋಣೆಯ ಮುಂಭಾಗದಲ್ಲಿ ಮಹಾಯಜ್ಞವೊಂದನ್ನು ನೆರವೇರಿಸಿದ್ದರು…ಹೊಸಹಳ್ಳಿ ಸಮುದಾಯದ ಒಳಿತಿಗಾಗಿ.

ಠೇವಣಿ ಕಳೆದುಕೊಂಡ ಲೋಕಸಭಾ ಚುನಾಣೆಯ ಸ್ಪರ್ಧಿ
ಎರಡನೇ ಲೋಕಸಭಾ ಚುನಾವಣೆ, 1957ರಲ್ಲಿ ನಡೆದ ಕಾಲಕ್ಕೆ ಮಧುಗಿರಿ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ವ್ಯಕ್ತಿಯಾಗಿ ಸ್ಪರ್ಧಿಸಿದ್ದರು ಚಂದ್ರಶೇಖರಯ್ಯ. ಚುನಾವಣೆಯ ಪ್ರಚಾರದ ಕುಮ್ಮಕ್ಕಾಗಿ ಕನಕಮ್ಮನವರ ಕುಟುಂಬವೂ ಹೆಗಲು ಕೊಟ್ಟಿದ್ದಿತು ಎಂಬುದೊಂದು ಅಂಬೋಣ. ಮನೆಯ ಮುಂದೆ ನಿಂತಿರುತ್ತಿದ್ದ ಕಾರು ಇವರು ತಂದು ನಿಲ್ಲಿಸಿದ್ದಾಗಿರಬಹುದು. ಈ ಲೋಕಸಭಾ ಚುನಾವಣೆಯಲ್ಲಿ ಮತಹಾಕಲು, ಮತಕ್ಷೇತ್ರ ಜಂಗಮರಹಳ್ಳಿಗೆ ಹೋಗಿಬರಲು ಅರಸೀಕೆರೆಯಲ್ಲಿ ವಾಸವಿದ್ದ ನಮ್ಮಮ್ಮ-ಅಪ್ಪನಿಗೆ ಎತ್ತಿನಗಾಡಿ ಸೇವೆ ಲಭ್ಯವಾಗಿತ್ತು. ಫಲಿತಾಂಶ ಪ್ರಕಟವಾದಾಗ ಕೇವಲ ನಮ್ಮೂರಿನ, ಹೊಸಹಳ್ಳಿಯ ಸುತ್ತಮುತ್ತಲ ಊರುಗಳ ಮತಗಳು ಮಾತ್ರ ದೊರಕಿದ್ದವೆಂದು ಕಾಣಿಸುತ್ತದೆ...ಒಟ್ಟಾರೆ ಚುನಾವಣೆಯಲ್ಲಿ ಚಂದ್ರಶೇಖರಯ್ಯನವರ ಠೇವಣಿ ಹೋಗಿದ್ದಿತು, ಚುನಾವಣೆಯಲ್ಲಿ ಸೋತಿದ್ದರು. ಅದಾಗ ಊರಹಿಂದಲ ಮಲ್ಲೇಗೌಡ, ಅವರಪ್ಪನ ಚರಾಸ್ತಿಯಲ್ಲಿ ಸ್ವಲ್ಪ ಬೆಳ್ಳಿ ರುಪಾಯಿಗಳು ಕರಗಿ ಕಡಿಮೆ ಆಗಿರಬಹುದು. ಇಷ್ಟಕ್ಕೇ ಚಂದ್ರಶೇಖರಯ್ಯನವರ ಸಾಹಸ ಮುಗಿದಿರಲಿಲ್ಲ...ಅವರ 'ಛಲಬಿಡದ ತ್ರಿವಿಕ್ರಮ'ನ ಹೋರಾಟಗಳು ಮುಂದುವರಿದಿದ್ದವು. ಈಮಧ್ಯೆ ಕನಕಮ್ಮನವರ ಪುತ್ರಿ ಸಾವಿತ್ರಮ್ಮನ ಜೊತೆಯಲ್ಲಿ ಚಂದ್ರಶೇಖರಯ್ಯನವರ ಮದುವೆಯೂ ನಡೆದುಹೋಗಿದ್ದಿತು. ನಾನು ನೋಡಿದ ಅವರ ಮದುವೆ ಪೋ಼ಟೋಗಳಿಂದ ಊರಿನ ಯಾರ್ಯಾರು, ಎಷ್ಟುಜನ ಮದುವೆಗೆ ಹೋಗಿದ್ದರೆಂಬುದೂ ತಿಳಿದುಬಂದಿತ್ತು.

ಢೋಂಗಿ ಕುಂಟಸ್ವಾಮಿ ಸಹವಾಸ
ಸಚ್ಛಿದಾನಂದಾಶ್ರಮದ ಸಹವಾಸದ ಜೊತೆಯಲ್ಲಿ ಬೆಂಗಳೂರಿನಲ್ಲಿ ಅದ್ಯಾವುದೋ ಢೋಂಗಿ ಕುಂಟಸ್ವಾಮಿಯ ಸಹವಾಸವೂ ಆಗಿಬಿಟ್ಟಿದ್ದಿತು ನಮ್ಮ ಹೋರಾಟಗಾರ ಚಂದ್ರಶೇಖರಯ್ಯನವರಿಗೆ. ನಾನೇಕೆ ಆ ಕುಂಟಸ್ವಾಮಿಯನ್ನು ಢೋಂಗಿ ಎಂದು ಬರೆದಿದ್ದೇನೆಂಬುದಕ್ಕೆ ಕಾರಣವಿದೆ. ಆತ ಮುಂದೊಂದು ದಿನ ಸಂಸಾರಸ್ತನಾಗಿಬಿಟ್ಟಿದ್ದನು. ಆ ಕಥೆ ಬೇಡ ಇಲ್ಲಿ…ಬಿಡಿ. ಆ ಢೋಂಗಿ ಸ್ವಾಮಿಯನ್ನು ಊರಿಗೆ ಕರೆದುಕೊಂಡು ಬಂದ ಚಂದ್ರಶೇಖರಯ್ಯ, ಅವರಾಗಲೇ ನಿರ್ಮಿಸಿಟ್ಟಿದ್ದ ಧ್ಯಾನ-ಯೋಗ ಗುಹಾ-ಮಂಟಪವನ್ನು ಆ ಢೋಂಗಿ ಸ್ವಾಮಿಯ ಬಳಕೆಗಾಗಿ ಬಿಟ್ಟುಕೊಟ್ಟಿದ್ದರು, ವಾಸಸ್ಥಳ ಮಂಟಪದ ಬಾವಿ ಹತ್ತಿರವಿರಬೇಕು?
ಆ ಕಾರಣಕ್ಕಾಗಿಯೇ ಇರಬೇಕು ಅಲ್ಲಿದ್ದ ಅವರ ನೀರಾವರಿ ಬಾವಿಗೆ...'ಮಂಟಪದ ಬಾವಿ' ಎಂಬ ನಾಮ ಅಂಟಿರಬೇಕು!?

ಪ್ರೌಢಶಾಲೆಯ ಕನಸು ನನಸು
ಇದೇ ಸಮಯದಲ್ಲಿ ಚಂದ್ರಶೇಖರಯ್ಯನವರು ಹೊಸಹಳ್ಳಿಯಲ್ಲಿ… ಗ್ರಾಮೀಣ ಪ್ರದೇಶಗಳಲ್ಲಿ ಬೃಹದಾಕಾರವಾಗಿ ಕೊರತೆಯಿದ್ದ, ಮಾಧ್ಯಮಿಕ ಶಾಲೆಯನಂತರ, ವಿಧ್ಯಾಭ್ಯಾಸದ ತೊಂದರೆ ಗಮನಿಸಿದ್ದರು. ಪ್ರೌಢಶಾಲೆ ಓದಲು ಹಳ್ಳಿಗರು ಪಾವಗಡ, ಮಧುಗಿರಿ ಇಲ್ಲವೆ ತುಮಕೂರಿಗೆ ಹೋಗಬೇಕಿತ್ತು. ಅದು ಅವರಿಗೆ ದುಸ್ತರವಾಗುತ್ತಿತ್ತು. ವಸತಿ-ಊಟ ಒದಗಿಸುವುದೇ ಮುಖ್ಯವಾಗಿ ತೊಂದರೆಯಾಗುತ್ತಿದ್ದುದು. ಈಎಲ್ಲ ಸಮಸ್ಯೆಗಳನ್ನರಿತಿದ್ದ ಚಂದ್ರಶೇಖರಯ್ಯನವರು ಊರಿನ ಜನರನ್ನು ಮತ್ತು ಸುತ್ತಮುತ್ತಲಿನ ಹಳ್ಳಿಯ ಜನರನ್ನು ಕಲೆಹಾಕಿ 1960ರಲ್ಲಿ ನಮ್ಮೂರು, ಹೊಸಹಳ್ಳಿಯಲ್ಲಿ 'ಶ್ರೀ ಮಾರುತಿ ಗ್ರಾಮಾಂತರ ಪ್ರೌಢಶಾಲೆ'ಯನ್ನು ಹುಟ್ಟುಹಾಕಿದ್ದರು. ಹಳ್ಳಿಯಲ್ಲಿ ಒಂದು ಚಪ್ಪರ ಹಾಕಿಸಿ ಯರ್ಯಾರಿಗೆ ಪ್ರೌಢಶಾಲಾ ಶಿಕ್ಷಣದ ಅವಶ್ಯಕತೆಯಿದೆಯೋ ಅವರೆಲ್ಲಾ ಬಂದು ಶಾಲೆಗೆ ಸೇರುವಂತೆ ಹುರಿದುಂಬಿಸಿದ್ದರು. ಆ ವೇಳೆಗೆ ಬಿ.ಎಸ್ಸಿ ಪಧವಿ ಪೂರ್ಣಗೊಳಿಸಿದ್ದ ಶ್ರೀ ಎಚ್‌.ಎಂ.ಹನುಮಂತಣ್ಣ, ನಮ್ಮ ಪ್ರೀತಿಯ ಮಾಮ, ಶಾಲೆಯ ಪ್ರಥಮ ಮುಖ್ಯೋಪಾಧ್ಯಾಯರಾಗಿ ಅವರ ವಿಧ್ಯಾದಾನ ಪ್ರಾರಂಭಿಸಿದ್ದರು...ಮುಖ್ಯವಾಗಿ ಭೌತಶಾಸ್ತ್ರ, ಗಣಿತ, ಬೀಜಗಣಿತ ಮತ್ತು ರೇಖಾಗಣಿತ. ಶಾಲೆಯ ಕಟ್ಟಡಗಳು ಮತ್ತು ಆಟದ ಮೈದಾನಕ್ಕಾಗಿ ಹನುಮಂತರಾಯನ ಬೀಳು ಎಂದೇ ಖ್ಯಾತಿ ಪಡೆದಿದ್ದ ಸುಮಾರು ಇಪ್ಪತ್ತೈದೆಕರೆ ಜಮೀನನ್ನು ಬಿಟ್ಟುಕೊಡುವಂತೆ ಊರಿನ ಎಲ್ಲಾ ಹಕ್ಕುದಾರಿ ಪ್ರಮುಖರನ್ನು ಶಾಲೆಯ ಹೆಸರಿಗೆ ಬರೆದುಕೊಡಲು ಹಗಲು-ರಾತ್ರಿಯೆನ್ನದೆ ಬಿಡದೆ ದುಂಬಾಲು ಬಿದ್ದಿದ್ದಕ್ಕೆ ಹೊಸಮನೆ ಕರೀಗೌಡರ ಹೊರತು ಬೇರೆಲ್ಲಾ ಪ್ರಮುಖರು ಸಹಿಮಾಡಿಕೊಟ್ಟಿದ್ದರು.

ಶಾಲೆಯ ಪ್ರಗತಿಗೆ ಹಣಸಂಗ್ರಹಕ್ಕೆ ಆಡಿದ ನಾಟಕ, 'ತಾರಾಮಂಜರಿ'
ಶಾಲೆಯ ಕಟ್ಟಡಗಳಿಗಾಗಿ ಹಣ ಹೊಂಚಲು ಶಾಲೆಯ ಹುಡುಗರು, ನರಸಿಂಹಯ್ಯ ಎಂಬ ಹುಡುಗ ನಾಯಕಿ ಪಾತ್ರದಲ್ಲಿ ಮತ್ತು ಚಂದ್ರಶೇಖರಯ್ಯನವರ ಸೋದರತ್ತೆಯ ಮಗ ಎರೆಹಳ್ಳಿ ನಾರಾಯಣಪ್ಪ ನಾಯಕ ಪಾತ್ರದಲ್ಲಿ ಕೂಡಿದ ಒಂದು ನಾಟಕ, ಹೊಸಹಳ್ಳಿ ಪಾಸಲೆಯಲ್ಲಿಯೇ ಯಾರೂ ಆಡದಿದ್ದ 'ತಾರಾಮಂಜರಿ' ಎಂಬ ಒಂದು ಜಾನಪದ ನಾಟಕವನ್ನು ಅದ್ಧೂರಿಯಾಗಿ, ಹನುಮಂತರಾಯನ ಬೀಳುವಿನಲ್ಲಿ ನಿರ್ಮಿಸಿದ, ಸುತ್ತಲೂ ಮುಚ್ಚಿದ ರಂಗಮಂಟಪದಲ್ಲಿ, ಆಡಿ ಹಣಸಂಗ್ರಹಣೆ ಮಾಡಿಸಿದ್ದರು ನಮ್ಮ ಹುಟ್ಟುಹೋರಾಗಾರ ಚಂದ್ರಶೇಖರಯ್ಯ. ನಾಟಕ ನೋಡಲು ನಮ್ಮೂರಿನ ನೆಂಟರಿಷ್ಟರೆಲ್ಲಾ ಬೇರೆ ಬೇರೆ ಊರುಗಳಿಂದ ಬಂದಿದ್ದರು. ನಮ್ಮಪ್ಪ ಆಗ ಆಂದ್ರದ ಗಡಿಪ್ರದೇಶ ಗ್ರಾಮ 'ಮದ್ದೆ'ಯಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದರು, ನಮ್ಮ ಕುಟುಂಬಕ್ಕೂ ಚೀಟಿಗಳನ್ನು ತೆಗೆದು ನಾಟಕ ನೋಡಲು ಬರುವಂತೆ ಊರಿನಿಂದ ಎತ್ತಿನಗಾಡಿಯನ್ನು ಕಳುಹಿಸಿಕೊಟ್ಟಿದ್ದರು...ನಮ್ಮ ತಾತ. ಆದಿನ ಊರಿನಲ್ಲಿ ಒಂದು ಹಬ್ಬದ ವಾತಾವರಣ ಮೂಡಿ ಸಡಗರದಿಂದ ಕೂಡಿತ್ತು. ನಾಟಕ ಶುರುವಾಗುವ ವೇಳೆಗೆ ಹನುಮಂತರಾಯನ ಬೀಳಿನಲ್ಲಿ ಪಕ್ಕದ ಊರುಗಳಿಂದ ಜಮಾಯಿಸಿದ್ದ ಎತ್ತಿನಗಾಡಿಗಳು ತುಂಬಿಹೋಗಿದ್ದವು. ನಾಟಕವನ್ನು ಹಣ-ಸಂಗ್ರಹಣೆಗಾಗಿ ಒಂದೆರಡು ಬಾರಿ ಆಡಿರಬಹುದು.

ಹೊರ ಊರಿನ ಹುಡುಗರಿಗೆ ಊಟ-ವಸತಿ ಸೌಲಭ್ಯ ಕಲ್ಪನೆ
ಈ ಮಧ್ಯೆ 1961-62ರ ಶೈಕ್ಷಣಿಕ ವರ್ಷದಲ್ಲಿ ನಮ್ಮಪ್ಪನಿಗೆ 'ಮದ್ದೆ' ಗ್ರಾಮದಿಂದ 'ಮಂಗಳವಾಡ' ಗ್ರಾಮದ ಬಹುಶಿಕ್ಷಕರಿದ್ದ ಪ್ರಾಥಮಿಕ ಶಾಲೆಗೆ ವರ್ಗಾವಣೆಯಾಗಿತ್ತು. ನಾನು ನಮ್ಮೂರಿನಲ್ಲಿ, ಹೊಸಹಳ್ಳಿಯಲ್ಲಿ, ಹನುಮಂತರಾಯನ ಗುಡಿಯಲ್ಲಿ ನಡೆಸುತ್ತಿದ್ದ ಸರ್ಕಾರಿ ಪ್ರಾಥಮಿಕ ಶಾಲೆಗೆ, ನಾಲ್ಕನೇ ತರಗತಿ ಓದಲು ಸೇರಿಕೊಂಡಿದ್ದೆನು. ಈ ಸಮಯದಲ್ಲಿ ನನಗೆ ಯರ್ಯಾರ ಮನೆಯಲ್ಲಿ ಎಷ್ಟೆಷ್ಟು ಹುಡುಗರು ವಸತಿ-ಊಟಕ್ಕೆ ಸೇರಿಕೊಂಡಿದ್ದರೆಂದು ತಿಳಿದು ಬಂದಿತು. ದೂರದ ಊರುಗಳಿಂದ ಬಂದು ಶಾಲೆಗೆ ಸೇರುವ ಹುಡುಗರಿಗೆ ಊರಿನ ಪ್ರಮುಖ ಬೇಸಾಯ ಕುಟುಂಬಗಳ ಮನೆಗಳಲ್ಲಿ ತಲಾ ಇಬ್ಬರು ಹುಡುಗರಿಗೆ ಅಥವಾ ಅವರ ಶಕ್ತಾನುಸಾರ ಊಟ-ವಸತಿ ಸೌಕರ್ಯವನ್ನು ನೀಡುವ ಸುವ್ಯವಸ್ಥೆಯನ್ನು ಹೊಸಹಳ್ಳಿಯ ಜನ ಹಂಚಿಕೊಂಡಿದ್ದರು. ಇದರಲ್ಲಿ ಸುಮಾರು 30ಕಿ.ಮೀ ದೂರದ ಊರಿನಿಂದ ಬಂದ ಹುಡುಗರೂ ಸೇರಿದ್ದರು.

ಅಪ್ಪನ ಮನೆಯಿಂದ ಬೇರೆ ವಾಸ, ನಿರ್ಮಿತ ಹೊಸಕಟ್ಟಡಗಳಿಗೆ ಶಾಲಾತರಗತಿಗಳ ಸ್ಥಳಾಂತರ
1962-63ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಾನು 'ಮಂಗಳವಾಡ'ದ ಮಾಧ್ಯಮಿಕ ಶಾಲೆಗೆ ಸೇರಿಕೊಂಡೆನು. ನಾನು ಹೊಸಹಳ್ಳಿಯಲ್ಲಿಲ್ಲದ ಮೂರು ವರ್ಷಗಳ ಸಮಯದಲ್ಲಿ ಶಾಲೆಯ ಕಟ್ಟಡಗಳು ಒಂದು ಹಂತಕ್ಕೆ ಬಂದು ಎಲ್ಲೆಲ್ಲಿಯೋ ನಡೆಸುತ್ತಿದ್ದ ತರಗತಿಗಳನ್ನು ಪೂರ್ಣವಾಗದೆ ಉಳಿದಿದ್ದ ಅರೆಬರೆ ನಿರ್ಮಾಣವಾಗುಳಿದ ಹೊಸಕಟ್ಟಡಗಳಿಗೆ ವರ್ಗಾಂತರಿಸಿ ಪಾಠ-ಪ್ರವಚನಗಳನ್ನು ನಡೆಸುತ್ತಿದ್ದರು. ಅದಾಗಲೇ ಚಂದ್ರಶೇಖರಯ್ಯನವರು ಹಣದುರುಪಯೋಗ ಪಡಿಸಿದ್ದಾರೆಂಬ ವದಂತಿಗಳೂ, ಆಡಳಿತಮಂಡಳಿಯ ಒಳಜಗಳಗಳೂ ಪ್ರಾರಂಭವಾಗಿದ್ದವು. ಊರಹಿಂದಲ ಮಲ್ಲೇಗೌಡರು, ಅವರ ಮಗ ಚಂದ್ರಶೇಖರಯ್ಯ ಮತ್ತವರ ಕುಟುಂಬವನ್ನು ಬೇರೆಯಾಗಿ ವಾಸಮಾಡಲು ಕಳುಹಿಸಿದ್ದರು. ಚಂದ್ರಶೇಖರಯ್ಯನವರು ಶಾಲೆಯ ಆಡಳಿತ ಕಚೇರಿಗಾಗಿ ಕಟ್ಟಿಸಿದ್ದ ಕರಿಕಲ್ಲು ಕಟ್ಟಡವನ್ನೇ ತಮ್ಮ ಕುಟುಂಬದ ವಾಸಸ್ಥಾನವಾಗಿ ಮಾಡಿಕೊಂಡಿದ್ದರು. ಮುಖ್ಯೋಪಾಧ್ಯಾಯ ಶ್ರೀ ಹೆಚ್‌.ಎಂ.ಹನುಮಂತಣ್ಣನವರು, ಬಿ.ಎಡ್‌. ಓದಲು ಹೋಗಿದ್ದವರು ಮತ್ತೆ ಶಾಲೆಗೆ ಹಿಂದಿರುಗಿ ಬಂದಿರಲಿಲ್ಲ. ಮುಖ್ಯೋಪಾಧ್ಯಯರ ಹುದ್ದೆಯಲ್ಲಿ ಶ್ರೀ ನಾಗೇಂದ್ರರಾವ್‌ ಕಾರ್ಯನಿರ್ವಹಣೆ ಮಾಡುತ್ತಿದ್ದರು.

ಶಾಲೆಯ ಮುಂದಿನ ಕತೆ ಏನಾದರಾಗಿರಲಿ...ಅದನ್ನು ನಾನೀಗಾಗಲೇ ನನ್ನ ಹಿಂದಿನ ಬರವಣಿಗೆ, 'ಗುರುವಂದನಾ ಕಾರ್ಯಕ್ರಮ ಮತ್ತು ನನ್ನ ಪ್ರೌಢಶಾಲೆಯ ದಿನಗಳು'... ಅದರಲ್ಲಿ ಬರೆದಿರುತ್ತೇನೆ.

ತ್ರಿವಿಕ್ರಮ ಸಾಹಸದ ಪರಿಣಾಮ ಮತ್ತು ಅದರ ಹಿಂದಿನ ನೆನಪುಗಳು
ಏನಾದರಿರಲಿ, ಶ್ರೀ ಎಂ.ಚಂದ್ರಶೇಖರಯ್ಯನವರು ಪಾವಗಡ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಪ್ರಥಮವಾಗಿ ಗ್ರಾಮಾಂತರ ಪ್ರೌಢಶಾಲೆಯನ್ನು 1960ರ ದಶಕದ ಪ್ರಾರಂಭದಲ್ಲಿಯೇ ಹುಟ್ಟುಹಾಕಿ ಕಡೇಪಕ್ಷ ಎಸ್ಸೆಸ್ಸೆಲ್ಸಿ 10ನೇ ತರಗತಿ ಪಾಸುಮಾಡಿ ಆಗಿನ ಕಾಲಕ್ಕೆ ಸರ್ಕಾರದ ಕಚೇರಿಗಳಲ್ಲಿ ಎರಡನೇ ದರ್ಜೆ ಗುಮಾಸ್ತೆ ಹುದ್ದೆಗೆ ಸೇರುವಂತಾಗಲು ಅವಕಾಶ ಮಾಡಿರುತ್ತಾರೆ. ಅಲ್ಲದೆ ಮಾಧ್ಯಮಿಕ ಶಾಲೆ ಮುಗಿಸಿದ ತಕ್ಷಣ ಹೆಣ್ಣುಮಕ್ಕಳಿಗೆ ಮದುವೆ ಮಾಡಿ ಕಳುಹಿಸುವ ಯೋಚನೆಯಲ್ಲಿರುತ್ತಿದ್ದ ಕುಟುಂಬಗಳಿಗೆ ಮಾದರಿಯಾಗಿ ಹೆಣ್ಣುಮಕ್ಕಳಿಗೆ ಹೆಚ್ಚಿನ ವಿಧ್ಯಾಭ್ಯಾಸ ಮಾಡಿಸುವ ಅನುಕೂಲವನ್ನು ಮಾಡಿಕೊಟ್ಟರು.

ಇಷ್ಟಕ್ಕೇ ನಿಲ್ಲದೆ ಮುಂದುವರಿದು 1990ರ ದಶಕದಲ್ಲಿ ಅವರು 'ಪಾವಗಡ'ದಿಂದ 'ಹಿರಿಯೂರು' ಮತ್ತು 'ಶಿರಾ' ಕಡೆಗೆ ಹೋಗುವ ರಾಜ್ಯ ಹೆದ್ದಾರಿಯ 'ತುಮಕುಂಟೆ' ಬಳಿ ತೆಗೆದುಕೊಂಡಿದ್ದ ಜಮೀನಿನಲ್ಲಿ ಒಂದು ಸ್ನಾತಕಪೂರ್ವ ವಿಧ್ಯಾಸಂಸ್ಥೆ (ಪಿಯುಸಿ ಕಾಲೇಜು)ಅದನ್ನೂ ಸಹ ಪ್ರಾರಂಭಿಸಿದ್ದರು. ಈ ಸಂಸ್ಥೆ ವಿಧ್ಯಾರ್ಥಿಗಳ ಕೊರತೆ ಮತ್ತು ನುರಿತ ಶಿಕ್ಷಕರ ಕೊರತೆಯಿಂದಾಗಿ ಮುಚ್ಚಿ ಹೋಯಿತು.

ಜೂನ್‌ 14, 2017ರಂದು ಹೊಸಹಳ್ಳಿಯಲ್ಲಿ ನಡೆದ ಗುರವಂದನಾ ಕಾರ್ಯಕ್ರಮಕ್ಕಾಗಿ ಶ್ರೀ ಎಂ.ಚಂದ್ರಶೆಖರಯ್ಯನವರ ಹೆಸರಿನಲ್ಲಿ ನಿರ್ಮಿಸಿದ ವೇದಿಕೆ ನಿಜಕ್ಕೂ ಒಂದು ಅರ್ಥಪೂರ್ಣ ಅಂಶ. ###

ಟಿ.ದಿವಾಕರ

ಬಾಲಂಗೋಚಿ: 90 ವರ್ಷಗಳು ಮೀರಿ ಇಳಿ-ವಯಸ್ಸಿನಲ್ಲಿರುವ ಶ್ರೀ ಎಂ.ಚಂದ್ರಶೇಖರಯ್ಯನವರೀಗ ಅವರ ಮಗ ಚಕ್ರವರ್ತಿ ಜೊತೆಯಲ್ಲಿ ತುಮಕೂರಿನಲ್ಲಿ ವಾಸವಾಗಿದ್ದಾರೆ. ಅವರ ಪಾಲಿಗೆ ಬಂದಿದ್ದ ಜಮೀನಿನಲ್ಲಿ ಗುತ್ತಿಗೆ ಮೇರೆಗೆ ಯಾರದರೂ
ಉತ್ತು-ಬಿತ್ತಿ ಬೆಳೆದುಕೊಳ್ಳುತ್ತಾರೆ.

Comments

  1. ಈ ನನ್ನ ಬರವಣಿಗೆಯಲ್ಲಿ ಶ್ರೀ.ಎಂ.ಚಂದ್ರಶೇಖರಯ್ಯನವರು ಇನ್ನೂ ಜೀವಂತರಾಗಿದ್ದಾರೆಂದು ತಿಳಿಸಿ ಬರೆದಿದ್ದೇನೆ. ದಿನಾಂಕ:26-10-1916 ರಂದೆ ದೈವಾಧೀನರಾಗಿರುತ್ತಾರೆಂದು ಅವರ ಪುತ್ರ ಶ್ರೀಯುತ ಚಕ್ರವರ್ತಿ, ಶ್ರೀ ಮಾರುತಿ ಗ್ರಾಮಾಂತರ ಪ್ರೌಢಶಾಲೆ, ಇದರ ಸುವರ್ಣ ಮಹೋತ್ಸವ ಸ್ಮರಣ ಸಂಚಿಕೆ-2017 ರಲ್ಲಿ ಆತನ ತಂದೆಯ ಬಗ್ಗೆ "ಛಲದಂಕ ಮಲ್ಲ, ಸಾಧನೆಯ ಪುರುಷ, ಎಂ.ಚಂದ್ರಶೇಖರಯ್ಯ" ಬರೆಯುತ್ತಾ ಈ ವಿಷಯವನ್ನು ಹಂಚಿಕೊಂಡಿರಯತ್ತಾರೆ.

    ReplyDelete

Post a Comment

Popular posts from this blog

ಲಾಸ್‌ಎಂಜಲಿಸ್‌ನಿಂದ ಟಿಟಾನ್‌ ವಿಲೇಜ್‌ವರೆಗೆ

ಜೀವಂತ ಕ್ರಿಯಾಶೀಲ ಜ್ವಾಲಾಮುಖಿಯ ಮೇಲೆ 18 ಗಂಟೆಗಳ ಓಡಾಟ

ಕನ್ನಡಕ್ಕಾಗಿ ವಿಂಡೋಸ್ ಎದುರು ಲಿನಕ್ಸ್ ಗಣಕ ನಿರ್ವಹಣಾ ತಂತ್ರಾಂಶ