ಸಿದ್ದಿ… ಸಿದ್ದಮ್ಮ… ಸಿದ್ದವ್ವ! ಕೆಲವು ನೆನಪುಗಳು


ಸಿದ್ದಿ… ಸಿದ್ದಮ್ಮ… ಸಿದ್ದವ್ವ! ಕೆಲವು ನೆನಪುಗಳು

ನಾನು ಹುಟ್ಟಿದ್ದು ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ವರ್ಷ ಹನ್ನೊಂದು ದಿನಗಳಿಗೆ...ಕರ್ನಾಟಕದ ಮೂಲೆಯೊಂದರ ಹಳ್ಳಿಯಲ್ಲಿ… ಅದರ ಹೆಸರು ಹೊಸಹಳ್ಳಿ...ಜಂಗಮರ ಹೊಸಹಳ್ಳಿ ಎಂದೂ ಕರೆಯುತ್ತಾರೆ. ನನಗೀಗ ಅತ್ತಿರತ್ತಿರ ಅರವತ್ನಾಲ್ಕು ವರ್ಷಗಳು. ಅಗಾಗ್ಗೆ ಹಲವು ಬಾಲ್ಯದ ನೆನಪುಗಳು ಕಣ್ಮುಂದೆ ಬರುತ್ತಿರುತ್ತವೆ. ಅವುಗಳೊಮ್ಮೊಮ್ಮೆ ಕನಸುಗಳಾಗಿ ಕಾಡುತ್ತಿರುತ್ತವೆ. ಅವುಗಳನ್ನು ದುಸ್ವಪ್ನಗಳು ಎನ್ನಲೂ ಆಗುವುದಿಲ್ಲ. ಹಲವಾರು ಬಾರಿ ಬಿದ್ದ ಕನಸುಗಳಲ್ಲಿ ಹೆಚ್ಚು ನಮ್ಮೂರಿನಲ್ಲಿ ಬದುಕುತ್ತಿದ್ದ ಹೊಲೆಯರ ಸಿದ್ದವ್ವನ ಬಗ್ಗೆಯಾಗಿದ್ದವು.

ನನ್ನಮ್ಮನ ಅಪ್ಪ-ಅಮ್ಮನಿಗೆ ಆಗಿನ ಕಾಲಕ್ಕೆ ಮೂರೇ ಮಕ್ಕಳು, ಒಂದು ಗಂಡು ಎರಡು ಹೆಣ್ಣು. ಅದರಲ್ಲಿ ನನ್ನಮ್ಮನೇ ಹಿರಿಮಗಳು. ಹತ್ಹನ್ನೊಂದು ವರ್ಷದವಳಿದ್ದಾಗ ತನ್ನಮ್ಮನನ್ನು ಕಳೆದುಕೊಂಡಿದ್ದವಳು. ಬೆನ್ನಿಗೆ ಬಿದ್ದಿದ್ದ ತಮ್ಮ-ತಂಗಿಯನ್ನು ಸಾಕುವ ಹೊಣೆ ಆಕೆಯದಾಗಿತ್ತು. ಅಷ್ಟರ ವೇಳೆಗೆ ನನ್ನಜ್ಜನ...ಅಮ್ಮನ ಅಪ್ಪ...ಅಣ್ಣತಮ್ಮಂದಿರೆಲ್ಲಾ ಬೇರೆಯಾಗಿದ್ದು ಬೇರೆಬೇರೆ ಮನೆ ಮಾಡಿ ಸಂಸಾರ ಹೂಡಿದ್ದುದರಿಂದ ಈ ಮೂರು ಮಕ್ಕಳು ತಾಯಿಯಿಲ್ಲದ ತಬ್ಬಲಿಯಾಗಿದ್ದರು...ಹಲವಾರು ಜನರ ಬುದ್ದಿ ಮಾತಿನಿಂದಾಗಿ ನನ್ನ ಹೆಣ್ಣಜ್ಜ ಎರಡನೆ ಮದುವೆಯಾಗುವ ಸಾಹಸಕ್ಕೆ ಹೋಗಿರಲಿಲ್ಲ. ಮನೆಯ ಅಡಿಗೆ, ಕಸಮುಸುರೆ, ತಮ್ಮ-ತಂಗಿ ಸಾಕುವ ಹೊಣೆ ಹೊಲಕ್ಕೆ ಬುತ್ತಿ ಹೊರುವ ಕೆಲಸ ನನ್ನಮ್ಮನದೇ ಆಗಿತ್ತೆಂಬುದು ಒಂದು ಅಂಬೋಣ. ಈ ಹೊಣೆ ಆಕೆ ಮದುವೆಯಾಗಿ ತಂಗಿ, ತಮ್ಮನ ಮದುವೆಯಾಗುವವರೆಗೂ ನಡೆದುಕೊಂಡು ಬಂದಿದ್ದಿತು. ಮದುವೆಯಾಗಿ ನಾಲ್ಕು ಮಕ್ಕಳ ತಾಯಿಯಾಗಿ ಸ್ಕೂಲು ಮಾಸ್ತರರಾಗಿದ್ದ ಗಂಡನ ಮನೆ ಸೇರಿದ ಮೇಲೂ ಈ ನನ್ನಮ್ಮನ ತವರು ಮನೆ ಜವಾಬ್ದಾರಿ ಮುಗಿದಿರಲಿಲ್ಲ. ನನಗೆ ಬುದ್ದಿ ಬಂದಾಗಿನಿಂದಲೂ ಈ ಕರ್ಮ ಮುಂದುವರಿದಿತ್ತು. ಹಾಗಾಗಿ ನಾನು ಬಾಲ್ಯದಲ್ಲಿ ಬಹುತೇಕ ಬೆಳೆದಿದ್ದ ಸಮಯಗಳು ನನ್ನಮ್ಮನ ತವರು ಮನೆಯಲ್ಲಿಯೇ ಆಗಿದ್ದವು. ಹಾಗಾಗಿ ನನಗೆ ಅಮ್ಮನ ತವರೂರೇ ನಮ್ಮೂರಾಗಿದ್ದಿತು. ಅಷ್ಟ್ಯಾಕೆ... ನನ್ನಪ್ಪ ನನ್ನ ಹೆಣ್ಣಜ್ಜನ ಅಕ್ಕನ ಮಗನೇ ಆಗಿದ್ದು ಅದೇ ಊರಿನಲ್ಲಿ ನೆಂಟರ ಮನೆಯಲ್ಲಿಯೇ ಊಳಿಗತನದಲ್ಲಿ ಬೆಳೆದದ್ದು... ಮನೆ ಬಿಟ್ಟು ಓಡ್ಹೋಗಿ ಆಗಿನ ಕಾಲದ ಲೋವರ್‌ ಸೆಕೆಂಡರಿ ಪರೀಕ್ಷೆ ಬರೆದು ಸ್ವಾತಂತ್ರ್ಯಪೂರ್ವದಲ್ಲಿಯೇ ಬ್ರಿಟಿಷ್‌ ಸರ್ಕಾರದಲ್ಲಿ ಪ್ರಾಥಮಿಕ ಶಾಲಾ ಮಾಸ್ತರಾಗಿ ಕೆಲಸಕ್ಕೆ ಸೇರಿದ್ದವರು. ಸೋದರ ಮಾವನ ಮಗಳನ್ನೇ ಮದುವೆಯಾಗಿದ್ದರು. ಅದ್ದರಿಂದ ನಮ್ಮಮ್ಮ-ಅಪ್ಪನ ಊರು ಒಂದೇ ಎಂದು ಪರಿಗಣಿಸಬಹುದು.

ಹೊಲೆಯರ ಸಿದ್ದಿ...ಸಿದ್ದಮ್ಮ...ಸಿದ್ದವ್ವ?!
ನನಗೆ ಬುದ್ದಿ ಬಂದಾಗಿನಿಂದಲೂ ಈಕೆಯನ್ನು ನಾನು ನೋಡಿದ್ದೆನು. ಆಗ ಆಕೆ ಸುಮಾರು ವರ್ಷ ಇಪ್ಪತ್ತು ವಯಸ್ಸಿನವಳಿದ್ದಿರಬಹುದು. ಕಪ್ಪಗೆ ನಾಲ್ಕೂವರೆಯಿಂದ ಐದಡಿ ಒಳಗೇ ಎತ್ತರವಿದ್ದ ಆಕೆ ಸುಂದರಿಯೇನೂ ಆಗಿರಲಿಲ್ಲ. ದಂತಗಳು ಸ್ವಲ್ಪ ವಕ್ರವೇ ಆಗಿದ್ದವು. ಮದುವೆಯಾಗಿದ್ದಿತು. ಮಕ್ಕಳಿರಲಿಲ್ಲ. ಗಂಡ ಬಿಟ್ಟಿದ್ದುದರಿಂದ ಗಂಡನೂರನ್ನು ಬಿಟ್ಟು ತವರೂರೆ ಆಗಿದ್ದ ನಮ್ಮೂರಿಗೇ ಬಂದು ಸೇರಿಕೊಂಡಿದ್ದಳು. ಊರಿನಲ್ಲಿ ಅವರಿವರ ಮನೆಯಲ್ಲಿ ಕೆಲಸಮಾಡಿಕೊಂಡಿದ್ದವಳು. ನಮ್ಮಮ್ಮನ ಅಪ್ಪನ ಮನೆಯಲ್ಲಿಯೂ ಕೆಲಕಾಲ ಕೆಲಸ ಮಾಡಿಕೊಂಡಿದ್ದಳು. ಮಾಡುತ್ತಿದ್ದ ಕೆಲಸವೆಂದರೆ…ಬೆಳಗ್ಗಿನ ಹೊತ್ತು ಮನೆಮುಂದಿನ ಹಟ್ಟಿಯ ಕಸ ಗುಡಿಸುವುದು, ಹೊಲಕ್ಕೆ ಹೋಗಿ ಹಸಿ ಹುಲ್ಲು ಕಿತ್ತೋ ಇಲ್ಲಾ...ಕೊಯ್ದು ತರುವುದು, ದನಗಳ ಕೊಟ್ಟಿಗೆಯ ಸಗಣಿ-ಗಂಜಳ ತೆಗೆದು ತಿಪ್ಪೆಗೆ ಸುರಿಯುವುದು, ಉಂಡಾದಮೇಲೆ ಮತ್ತೇ... ಮನೆಯ ದನಗಳನ್ನು ಮೇಯಿಸಲು ಹೊಡೆದುಕೊಂಡು ಹೋಗುವುದು...ಮುಸ್ಸಂಜೆ ಹೊತ್ತಿಗೆ ದನಗಳನ್ನು ಮನೆಗೆ ಹೊಡೆದುಕೊಂಡು ಬಂದು ಕೊಟ್ಟಿಗೆಗೆ ಕಟ್ಟಿಹಾಕಿ ಮೇಯಲು ಹುಲ್ಲು ಹಾಕುವುದು...ಹಟ್ಟಿಯ ಕಸ ಗುಡಿಸುವುದು...ಇತ್ಯಾದಿಯ ನಂತರ ರಾತ್ರಿಯ ಹಿಟ್ಟುಂಡು ಕೆಲಸಮಾಡುತ್ತಿದ್ದ ಮನೆಯ ಹೊರಜಗುಲಿಯ ಮೇಲೆ ಹಾಸಿ ಮಲಗುವುದಾಗಿತ್ತು ಆಕೆಯ ಬದುಕು. ಮನೆ ಮಂದಿ ಮತ್ತೇ...ಊರಿನ ಮಂದಿ ಕೆಲಸಮಯ ಆಕೆಯನ್ನು "ಸಿದ್ದಿ' ಎಂದು ಕರೆದರೆ...ಮತ್ತೆ...ಕೆಲಬಾರಿ "ಸಿದ್ದಮ್ಮ' ಅಥ್ವಾ "ಸಿದ್ದವ್ವ' ಎಂದು ಕರೆಯುತ್ತಿದ್ದರು. ಇದಕ್ಕಿಂತ ಹೆಚ್ಚೇನೂ ನನಗೆ ಗೊತ್ತಿರಲಿಲ್ಲ ಆಗ. ಆಕೆ ಮಾಡಿದ ಕೆಲಸಕ್ಕಾಗಿ ಆಕೆಗೇನೂ ಕೂಲಿ ಕೊಡುತ್ತಿದ್ದಂತೆ ಕಾಣುತ್ತಿರಲಿಲ್ಲ. ಹಬ್ಬಹರಿದಿನಗಳಲ್ಲಿ ಹೊಸ ಸೀರೆ ಕೊಡಿಸಿ ಕುಪ್ಪಸವೊಲಿಸಿ ಕೊಡುತ್ತಿದ್ದರು. ಆಕೆಗೆ ಅಂಥ ಹಣದ ಅವಶ್ಯಕತೆ ಏನೂ ಇರುತ್ತಿರಲಿಲ್ಲ.

ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಆ ಕಾಲದಲ್ಲಿ ದನಮೇಯಿಸಲು ಹೋಗುತ್ತಿದ್ದ ಆಕೆ ಒಮ್ಮೊಮ್ಮೆ ಅಲ್ಲಲ್ಲಿ ಅಂಡಲೆದು ಹುಡುಕಿ ಅಡವಲಸಿನಕಾಯಿ(ಸೀತಾಫಲ) ಕಿತ್ತು ಸೀರೆಯ ಮಡಿಲಿಗೆ ಹಾಕಿಕೊಂಡು ಬಂದು ಮನೆಗೆ ಕೊಡುತ್ತಿದ್ದಳು. ಈಕೆಯ ಅಂಡಲೆತದ ಸಮಯದಲ್ಲಿ ದನಗಳು ಕೂಡ ಅಲೆದು ಯಾರದೋ ಹೊಲಕ್ಕೆ ನುಗ್ಗಿ ಬೆಳೆ ಮೇದು ಹಾಳು ಮಾಡಿದ್ದಕ್ಕೆ ಸಾಯಂಕಾಲದ ವೇಳೆಗೆ ಆಕೆಯ ವಿರುದ್ಧ ಮನೆಗೆ ದೂರು ಬರುತ್ತಿತ್ತು. ಮಹಾ ಮುಂಗೋಪಿಯಾದ ನನ್ನ ಸೋದರಮಾವ ಹೊಂಗೆ ಅಥ್ವಾ ಹುಣಸೆ ಬರಲೆಯಿಂದ ಹಿಗ್ಗಾ ಮುಗ್ಗಾ ಹೊಡೆದುಬಿಡುತ್ತಿದ್ದ. ಇದನ್ನು ಗಮನಿಸುತ್ತಿದ್ದ ನನಗೆ ಸೀತಾಫಲ ತಂದುಕೊಟ್ಟು ನನ್ನನ್ನು ಎತ್ತಾಡಿಸುತ್ತಿದ್ದ ಆಕೆಯ ಬಗ್ಗೆ ಕನಿಕರವಾಗುತ್ತಿತ್ತು. ಏಟು ತಿಂದಬಳಿಕ ಅಳುತ್ತಾ...ಬೈದುಕೊಳ್ಳುತ್ತಾ ಎಲ್ಲಿಯೋ ಓಡಿಹೋಗಿಬಿಡುತ್ತಿದ್ದಳು…ನನಗೆ ಗೊತ್ತಾಗುತ್ತಿರಲಿಲ್ಲ. ವಾರಗಟ್ಟಲೆ ನಾಪತ್ತೆಯಾಗಿಬಿಡುತ್ತಿದ್ದಳು. ನನ್ನ ಮಾವನಿಗೆ ಅಮ್ಮನಿಗೆ ಮತ್ತು ಚಿಕ್ಕಮ್ಮನಿಗೆ ಇಂಥದ್ದೊಂದು ಘಟನೆ ಅಸಹನೀಯ ಪೀಕಲಾಟವಾಗುತ್ತಿತ್ತು. ಹಟ್ಟಿಯ ಕಸಗುಡಿಸುವುದು, ಕೊಟ್ಟಿಗೆಯ ಸಗಣಿ-ಗಂಜಳ ತೆಗೆದು ತಿಪ್ಪೆಗೆ ಸುರಿಯುವುದು… ದನಮೇಯಿಸುವ ಕೆಲಸ ಇವರ ತಲೆಗೆ ಬರುತ್ತಿತ್ತು. ಇಂಥ ಕಾಲದಲ್ಲಿ ಸಿದ್ದವ್ವ ಪಕ್ಕದೂರಿನಲ್ಲೆಲ್ಲೋ...ಇನ್ಯಾರದೋ ಮನೆಯಲ್ಲಿಯೋ ಕೆಲಸಮಾಡಿಕೊಂಡು ಕಾಲಕಳೆದು ಬಿಡುತ್ತಿದ್ದಳು. ತಿಂಗಳುಗಳಾಂತರದಲ್ಲಿ ಮತ್ತೆ ಇದ್ದಕ್ಕಿದ್ದಹಾಗೆ ಪ್ರತ್ಯಕ್ಷವಾಗಿಬಿಡುತ್ತಿದ್ದಳು ಊರಿನಲ್ಲಿ.

ಒಂದು ಮನೆ ಕೆಲಸ ಬಿಟ್ಟು ಇನ್ನೊಂದು ಮನೆ ಕೆಲಸಕ್ಕೆ ಹೇಳದೇ ಕೇಳದೇ ಹೋಗಿಬಿಡುತ್ತಿದ್ದ ಕೆಲಸಗಾರರ ವರ್ತನೆಯಿಂದಾಗಿ ವಕ್ಕಲುತನ ಕುಟುಂಬಗಳಿಗದು ನುಂಗಲಾರದ ತುತ್ತಾಗಿಬಿಡುತ್ತಿತ್ತು. ಇದನ್ನೇ ಈಗಿನ ಕಾಲದ ವ್ಯವಸ್ಥಾಪನಾ ಪದ್ಧತಿ ಕಲಿಕೆಯಲ್ಲಿ "ಕಾರ್ಮಿಕ ಗುಳೆ'(Labour Movement) ಎಂದು ಕರೆದಿರಬಹುದು! ಅದಷ್ಟಕ್ಕಿರಲಿ ಬಿಡಿ. ಸಿದ್ದವ್ವನೂ ಕೂಡ ಹಾಗೆಯೇ ಮಾಡುತ್ತಿದ್ದಳು.

ದಿನಗಳುರುಳಿದಂತೆ ಆಮನೆ ಈಮನೆ ಬದಲಾಯಿಸುತ್ತಾ ನಮ್ಮೂರಿನ...ಸಾಮಾನ್ಯವಾಗಿ ಎಲ್ಲಾ ವಕ್ಕಲು ಮನೆಗಳಲ್ಲಿ ಸಿದ್ದವ್ವ ಕೆಲಸಮಾಡಿದವಳಾಗಿದ್ದಳು. ಗಂಡನಿಲ್ಲದ ಹೆಂಗಸಲ್ಲವೆ? ಆಕೆಗೂ ಯೌವನದ ವಯಸ್ಸಿತ್ತು. ಹಲವಾರು ಬಾರಿ ಊರಿನಿಂದ ಇದ್ದಕ್ಕಿದ್ದ ಹಾಗೆ ಕಣ್ಮರೆಯಾಗಿ ಹೋಗುತ್ತಿದ್ದಳು. ಮತ್ತೆ ಊರಿನಲ್ಲಿ ಪ್ರತ್ಯಕ್ಷವಾದಾಗ ಯಾರದರೂ... "ಎಲ್ಲಿಗೆ ಹೋಗಿದ್ಯೇ ಸಿದ್ದವ್ವಾ..?' ಎಂದು ಕೇಳಿದರೆ "ಗಂಡ್ನೂರ್ಗೆ ಹೋಗಿದ್ದೆ' ಎಂದಷ್ಟೇ ಹೇಳಿರುತ್ತಿದ್ದಳು. ಇಲ್ಲದಿದ್ದರೆ ಏನಾದರೊಂದು ಸುಳ್ಳೇ ನೆವ ಹೇಳಿರುತ್ತಿದ್ದಳು.

ನಾನು ಪ್ರಾಥಮಿಕ ಮತ್ತು ಮಾಧ್ಯಮಿಕ ತರಗತಿಗಳನ್ನು ಮುಗಿಸಿ ನಮ್ಮೂರಿನಲ್ಲಿಯೇ ಇದ್ದ ಪ್ರೌಢಶಾಲೆಗೆ ಸೇರಿಕೊಂಡಿದ್ದೆನು. ನನ್ನ ಸೋದರಮಾವ ವಾಸಿಸುತ್ತಿದ್ದ ಮನೆಯಲ್ಲಿಯೇ ನಾವೀಗ ವಾಸ ಮಾಡುತ್ತಿದ್ದೆವು. ನನ್ನ ಸೋದರ ಮಾವನಿಗೆ ಮದುವೆಯಾಗಿ ಎರಡ್ಮೂರು ಮಕ್ಕಳಾಗಿದ್ದವು. ನಾವು ಹೊಸಹಳ್ಳಿಗೆ ಕುಟುಂಬ ಸಮೇತ ಹಿಂದಿರುಗಿದ ಮೇಲೆ ತೋಟದ ಬಳಿಯಿದ್ದ ಗುಡಿಸಿಲಿಗೆ ಸಂಸಾರವನ್ನು ವರ್ಗಾಯಿಸಿಕೊಂಡಿದ್ದನು. ಇದೇ ಸಮಯದಲ್ಲಿ ನಮ್ಮೂರಿನ ದಲಿತರ ಕೇರಿಯ ಹನುಮ ಅದೇಗೋ ಸಿದ್ದವ್ವನನ್ನು ತನ್ನ ಬುಟ್ಟಿಗಾಕಿಕೊಂಡು ಅಕೆಯ ಹೊಟ್ಟೆ ತುಂಬಿಸಿಬಿಟ್ಟಿದ್ದನು. ಹನುಮ ಆಲಿಯಾಸ್‌ ಮುಗಿಲ, ಊರ ಮಂದಿಜನ ಸಾಮಾನ್ಯವಾಗಿ ಕರೆಯುತ್ತಿದ್ದುದು "ಮುಗಿಲ' ಎಂದೇ. ಮದುವೆಯಾಗಿ ಸಂಸಾರಮಾಡಿಕೊಂಡಿದ್ದವನು. ಇವನ ಹೆಂಡತಿಯೇನೂ ಸುಂದರಿಯಲ್ಲ. ಕುಳ್ಳಗೆ ಕರ್ರಗೆ ಇದ್ದ ಈಕೆಗೆ ಬಾಯಿ ಮಾತ್ರ ಸೊಟ್ಟಗೆ ಪಕ್ಕಕ್ಕೆ ತಿರುಗಿದ್ದುದರಿಂದ ಸೊಟ್ಟಬಾಯಿ, ಸೊಟ್ಟಮೂತಿ ಎಂದೇ ಆಕೆಯನ್ನು ಕರೆಯುತ್ತಿದ್ದರು. ಮದುವೆಯಾಗಿ ಗಂಡನಮನೆಗೆ ಬಂದ ಆರೇ ತಿಂಗಳಿಗೆ ಗಂಡುಮಗುವಿಗೆ ಜನ್ಮಕೊಟ್ಟಿದ್ದಳು. ಮುಗಿಲನನ್ನು ಆಡಿಕೊಂಡವರೇನೂ ಕಡಿಮೆ ಮಂದಿಯಿರಲಿಲ್ಲ... ಸಿದ್ದವ್ವನೂ ಇನ್ನೂ ಸಿದ್ದಿಯೇ ಆಗಿದ್ದು ವಯಸ್ಸಿನಲ್ಲಿದ್ದುದರಿಂದ ಸುಲಬವಾಗಿ ಅಂಥ ಸಂಸಾರವಂತನಲ್ಲದ ಮುಗಿಲನಿಗೆ ಜಾರಿಬಿದ್ದಿದ್ದಳು. ಸಿದ್ದವ್ವ... ಹನುಮ ದಲಿತರಲ್ಲಿಯೇ ಬೇರೆಬೇರೆ ಜಾತಿಯವರು. ಆಗಿನ ಕಾಲಕ್ಕೆ ದಲಿತರಲ್ಲಿ ಈ ಸಂಬಂಧಗಳು ಬೆಸೆಯತ್ತಿರಲಿಲ್ಲ. ಮೇಲೂ ಕೀಳು ಇದ್ದೇ ಇತ್ತು. ಇರಲಿ ಬಿಡಿ. ಗಂಡನಿಲ್ಲದೆ ಬಸಿರಾಗಿದ್ದುದರಿಂದ ಅದು ಊರಿನಲ್ಲಿ ಗುಲ್ಲಾಗಿದ್ದಿತು. ಆಕೆಗೆ ಯಾರೂ ಹೆಚ್ಚಾಗಿ ಕೆಲಸ ಹೇಳುತ್ತಿರಲಿಲ್ಲ. ಮಾಡಿಸಿಕೊಂಡ ಸಣ್ಣಪುಟ್ಟ ಕೆಲಸಗಳಿಗೆ ಕೂಲಿಯಾಗಿ ಉಣ್ಣಲಿಡುತ್ತಿದ್ದರು, ಉಟ್ಟು-ತೊಡಲು ಹಳೆಯ ಸೀರೆ-ಕುಪ್ಪಸಗಳನ್ನು ಕೊಡುತ್ತಿದ್ದರು. ಆಕೆಯೆಂದೂ ಪಾತ್ರೆಪಡಗ ಇಟ್ಟುಕೊಂಡು ಅಡಿಗೆ ಮಾಡಿಕೊಳ್ಳುತ್ತಿರಲಿಲ್ಲ.

ದಿನತುಂಬಿದ ಸಿದ್ದವ್ವಳಿಗೆ ಒಂದು ಹೆಣ್ಣು ಮಗು ಜನನವಾಗಿತ್ತು. ಯಾರು ಹೇಗೆ ಎಲ್ಲಿ ಹೆರಿಗೆ ಮಾಡಿಸಿ ಬಾಣಂತನ ಮಾಡಿಸಿದರು ಎಂಬುದು ನನಗೆ ತಿಳಿದಿಲ್ಲ. ಅದನ್ನು...ಚಿಕ್ಕವಯಸ್ಸಿನವನಾದ ನಾನು ತಿಳಿಯುವಂತೆಯೂ ಇರಲಿಲ್ಲ. ಎಳೇ ಮಗುವಿನ ತಾಯಿಯಾದ ಸಿದ್ದವ್ವ ಯಾರಮನೆಯಲ್ಲಿಯೂ ಕೆಲಸ ಮಾಡುವಂತಿರಲಿಲ್ಲ. ಊರಿನಲ್ಲಿ ಅವರಿವರ ಮನೆಮುಂದೆ ಮಗುವನ್ನೆತ್ತಿಕೊಂಡು ಹೋಗಿ ಅನ್ನಕ್ಕಾಗಿ ಬೇಡುತ್ತಿದ್ದಳು. “ಮಗಾನ್ಹುಟ್ಟಿಸ್ದೋನು ಎಲ್ಲೋದ್ನೆ ಸಿದ್ದಿ..?” ಎಂದ್ಹಂಗಣೆ ಮಾತನಾಡುತ್ತಿದ್ದ ಹೆಂಗಸರು ಕೊನೆಗೆ ಒಂದರ್ಧ ರಾಗಿಮುದ್ದೆ ಮತ್ತೊಂದಷ್ಟು ಅನ್ನ-ಸಾರು ಮತ್ತೆ ಮಗುವಿಗೆ ಹಾಲನ್ನೂ ನೀಡಿ ಕಳುಹಿಸುತ್ತಿದ್ದರು. ಒಂದ್ಮೂರು ಮನೆಯಲ್ಲಿ ಸಿಕ್ಕಿದ ಮುದ್ದೆ-ಅನ್ನ-ಸಾರು ಆಕೆಗೆ ಒಂದು ದಿನಕ್ಕೆ ಸಾಕಾಗುತ್ತಿತ್ತು. ರಾತ್ರಿಗೆ ಯಾರದೋ ಮನೆಯ ಹೊರಗಿನ ಛಾವಡಿ ಅಥವಾ ಹನುಮಂತರಾಯನ ಗುಡಿಯ ಕೆಳಾಂಗಣದಲ್ಲಿಯೋ ಮಗುವಿನೊಂದಿಗೆ ಮಲಗುತ್ತಿದ್ದಳು.

ಸರಿಯಾಗಿ ತಾಯಿ ಹಾಲಿಲ್ಲದೆ ಪೌಷ್ಟಿಕ ಆಹಾರದ ಕೊರತೆಯಿಂದ ಪೀಚಾಗಿದ್ದ ಸಿದ್ದವ್ವನ ಮಗು ಎಲುಬಿನ ಹಂದರವಾಗಿ ಬೆಳೆದಿತ್ತು. ಸುಮಾರು ಎರಡೂವರೆ ವರ್ಷದವರೆಗೆ ಬದುಗಿದ್ದ ಆ ಮಗು ವಿಪರೀತವಾಗಿ ಬಂದ ಜ್ವರದಿಂದಲೋ ಅಥವಾ ಅತಿಸಾರದಿಂದಲೋ ನರಳುತ್ತಾ ಒಂದು ದಿನ ಮದ್ಯಾಹ್ನ ಕೊನೆಯುಸಿರೆಳೆಯಿತು. ಊರಮುಂದಿನ ಮಾರಮ್ಮನ ಗುಡಿಯ ಬೇವಿನಮರದಡಿಯಲ್ಲಿ ಸತ್ತುಹೋದ ಮಗುವಿನ ದೇಹವನ್ನಿಟ್ಟುಕೊಂಡು ರೋಧಿಸುತ್ತಿದ್ದ ಸಿದ್ದವ್ವನ ಗೋಳು ನೋಡುತ್ತಿದ್ದ ಮಂದಿಗೆ ಅಸಹನೀಯವೆನಿಸಿತ್ತು.
ಸಿದ್ದವ್ವನಿಗೆ ಸಾಂತ್ವನದ ಮಾತುಗಳನ್ನೇಳುತ್ತಿದ್ದರು. ಆಕೆಯ ಗೋಳು ಮತ್ತೆ... ಅನುಕಂಪವನ್ನು ಚಿಕ್ಕವನಾದ ನಾನೂ ಕೂಡ ಗಮನಿಸುತ್ತಾ ಏನೂ ಮಾಡಲಾಗದವನಂತಾಗಿ ಕೊನೆಗೆ ಮನೆಕಡೆ ಮುಖಮಾಡಿದ್ದೆ. ಸಾಯಂಕಾಲದ ವೇಳೆಗೆ ಊರಿನ ಎಡದಂಡೆಗಿದ್ದ ಹಳ್ಳದ ದಂಡೆಯಲ್ಲಿ ದಲಿತರ ಕೇರಿಯ ಯಾರದೋ ಸಹಾಯದಿಂದ ಸತ್ತ ಮಗುವನ್ನು ಮಣ್ಣುಮಾಡಿದ್ದಳು ಸಿದ್ದವ್ವ.

ಇಂಥಾ ಕಾಲದಲ್ಲೊಮ್ಮೆ ನಾನು ನನ್ನಮ್ಮನಿಗೆ ಪ್ರಶ್ನೆ ಮಾಡಿದ್ದೆ, “ನಮ್ಮೂರಿನಲ್ಲಿರುವುದು ಮಾದಿಗರಹಟ್ಟಿ ಮಾತ್ರ… ಹೊಲೆಯರಟ್ಟಿಯಿಲ್ಲ! ಸಿದ್ದವ್ವ ನಮ್ಮೂರಿನಲ್ಲಿಯೇ ಯಾಕಿದ್ದಾಳೆ..?” ಆವಾಗಲೇ ನಮ್ಮಮ್ಮ ಸಿದ್ದವ್ವನ ಕತೆಯನ್ನು ಬಿಚ್ಚಿಟ್ಟಿದ್ದುದು. "ಸಿದ್ದವ್ವ ಹುಟ್ಟಿದ್ದು ನಮ್ಮೂರಿನಲ್ಲಿಯೇ ಇದ್ದ ಹೊಲೆಯರ ಕುಟುಂಬದ ದಂಪತಿಗಳಿಗೆ. ಹೊಸಮನೆಯ ಹಿಂಬಾಗದಲ್ಲಿದ್ದ ಗುಡಿಸಿಲಿನಲ್ಲಿ. ಚಿಕ್ಕವಳಿದ್ದಾಗಲೇ ಅಮರಾಪುರದ ಬಳಿಯ ಮದ್ದನಕುಂಟೆ ಹುಡುಗನೊಟ್ಟಿಗೆ ಮದುವೆಮಾಡಿಕೊಟ್ಟಿದ್ದರು. ಅವನೊಂದಿಗೆ ಎಷ್ಟುದಿನ ಸಂಸಾರ ಮಾಡಿಕೊಂಡಿದ್ದಳೋ ಸರಿಯಾಗಿ ಯಾರಿಗೂ ಗೊತ್ತಿಲ್ಲ. ಈಕೆಯನ್ನು ಆತನೇ ಬಿಟ್ಟನೋ ಅಥ್ವಾ ಈಕೆಯೇ ಆತನೊಟ್ಟಿಗೆ ಇರಲಾರದೆ ಮತ್ತೆ ಹೊಸಹಳ್ಳಿಗೆ ಓಡಿಬಂದಿದ್ದಳೋ ಗೊತ್ತಿಲ್ಲ. ಆ ಸಮಯಕ್ಕೆ ಚಿಕ್ಕವಯಸ್ಸಿನ ಆಕೆಯ ತಂದೆ-ತಾಯಿಗಳು ಕೂಡ ತೀರಿಕೊಂಡಿದ್ದರು', ಎಂದಷ್ಟೇ ಅಮ್ಮನ ಮಾಹಿತಿಯಾಗಿತ್ತು. ಒಟ್ಟಿನಲ್ಲಿ ಆ ವೇಳೆಗೆ...ಸಿದ್ದಿ... ಸಿದ್ದಮ್ಮ ಅನಾಥಳಾಗಿದ್ದಳು.

ಪ್ರೌಢಶಾಲೆಯ ಹತ್ತನೆ ತರಗತಿಯನ್ನು ಮುಗಿಸಿ ನಂತರ ಕಾಲೇಜು ಓದಲು ತುಮಕೂರಿಗೆ ಹೋದಮೇಲೆ ಸಿದ್ದಮ್ಮನನ್ನು ನಾನು ನೋಡುತ್ತಿದ್ದುದು ರಜಾ ದಿನಗಳಿಗಾಗಿ ಊರಿಗೆ ಬಂದ ಮೇಲೆಯೇ. ಈ ಸಮಯದಲ್ಲಿ ಕೆಲವರ್ಷಗಳ ಕಾಲ ಸಿದವ್ವ ಮತ್ತೆ ನಮ್ಮ ಮನೆಯಲ್ಲಿಯೇ ಕೆಲಸ ಮಾಡಿಕೊಂಡಿದ್ದಳು. ಮುಗಿಲನ ಸಂಬಂಧವನ್ನು ಮುಂದುವರಿದು ಇಟ್ಟುಕೊಂಡಿದ್ದಳೋ ಇಲ್ಲವೋ ಗೊತ್ತಿಲ್ಲ. ಅಂತೂ ಇಂತೂ ಹೊಸಹಳ್ಳಿಯಲ್ಲಿಯೇ ಬೇರೂರಿಬಿಟ್ಟಿದ್ದಳು.

ಪಧವಿ ಪರೀಕ್ಷೆ ಮುಗಿಸಿದ ಮೇಲೆ ನಾನು ಹೆಚ್ಚಾಗಿ ಊರಿನಕಡೆಗೆ ಹೋಗುವುದನ್ನೇ ನಿಲಿಸಿಬಿಟ್ಟೆ. ಒಂದು ಸರ್ಕಾರಿ ಕೆಲಸ ಸಿಗುವವರೆಗೆ ಸುಮಾರು ಒಂದೂವರೆ ಒಂದೂಮುಕ್ಕಾಲು ವರ್ಷ ಮೈಸೂರನಲ್ಲಿಯೇ ಕಳೆದೆ. ಕೆಲಸದನಂತರ ನಿವೃತ್ತನಾಗುವವರೆಗೆ ನಾನು ಊರಿಗೆ ಹೋದದ್ದು ಅಪರೂಪವೇ. ಆ ಅಪರೂಪದ ದಿನಗಳಲ್ಲಿ ನಾನು ಆಕೆಯನ್ನು ನಾಲ್ಕೈದು ಬಾರಿ ನೋಡಿರಬಹುದು. ಈ ನಾಲ್ಕೈದು ಬಾರಿ ನೋಡಿದ್ದು "ಮರೂರು' ದಾಟಿದಮೇಲೆ ಸಿಗುತ್ತಿದ್ದ "ವೀರನಾಗಪ್ಪನಗುಡಿ' ಹಳ್ಳದ ದಂಡೆಯಲ್ಲಿ ದನಕಾಯುತ್ತಿದ್ದ ಸಿದ್ದವ್ವನನ್ನು. ನನ್ನನ್ನು ನೋಡಿದ ಕೂಡಲೇ ಓಡಿಬಂದು ಕೈಯೊಡ್ಡುತ್ತಿದ್ದಳು. ಮುದುಕಿಯಾಗುತ್ತಿದ್ದ ಸಿದ್ದವ್ವನನ್ನು ಅರ್ಥಮಾಡಿಕೊಳ್ಳುತ್ತಿದ್ದ ನಾನು ಜೇಬಿಗೆ ಕೈಹಾಕಿ ಕೈಗೆ ಸಿಕ್ಕಿದ ಐದತ್ತು ರೂಪಾಯಿಗಳನ್ನು ಆಕೆಯ ಕೈಯಲ್ಲಿಡುತ್ತಿದ್ದೆ. ಖುಷಿಪಡುತ್ತಾ ದನಗಳ ಕಡೆಗೆ ನಡೆಯುತ್ತಿದ್ದಳು.
ನಾನು ಕೊನೆಯಸಾರಿ ನೋಡಿದಾಗ ಆಕೆ ಮೊದಲಿನ ಥರಾ ಇರಲಿಲ್ಲ...ಕುಪ್ಪಸವಿಲ್ಲದೆ ಹರಿದ ಸೀರೆಯನ್ನೇ ಸುತ್ತಿಕೊಂಡಿದ್ದ ಸಿದ್ದವ್ವನನ್ನು. ನೆರೆತುಹೋದ ಕೂದಲು ಕೆದರಿ ಸೆಟೆದು ಹರಡಿಕೊಂಡಿದ್ದವು, ವಿಕಾರವಾಗಿ ಸುರುಟಿದ ಮುಖದಲ್ಲಿ ಅರೆತೆರೆದ ಬಾಯಿಯಿಂದ ಹೊರಕಾಣುತ್ತಿದ್ದ ವಕ್ರದಂತಗಳು. ನನಗೆ ಮೊದಲು ಗುರುತಿಸಲಾಗಲಿಲ್ಲ. ಅದೇ ವೀರನಾಗಪ್ಪನ ಹಳ್ಳದ ದಂಡೆ ಬಳಿ. ಸಿದ್ದವ್ವ ಹುಚ್ಚಿಯಾಗಿದ್ದಳು. ಕೈಯಲ್ಲಿ ಒಂದುಕೋಲು ಹಿಡಿದುಕೊಂಡಿದ್ದಳು. ಹತ್ತಿರ ಬರುತ್ತಾ "ಏಯ್‌...ಗೌಡ..!’ ಎಂದು ಕೈಚಾಚಿದಳು. ನಾನು ಜೇಬಿಗೆ ಕೈಹಾಕಿ ಸಿಕ್ಕಿದ ಹತ್ತರ ನೋಟನ್ನು ಆಕೆಯ ಕೈಗಿತ್ತು ಅನ್ಯಮನಸ್ಕನಾಗಿ ಊರಿನ ಕಡೆಗೆ ಹೆಜ್ಜೆ ಹಾಕಿದ್ದೆ.

ನಮ್ಮಮ್ಮ ಸಾಯುವ ಮೊದಲು ನಾನು ಒಂದೆರಡು ಬಾರಿ ಊರಿಗೆ ಹೋದಾಗ ಸಿದ್ದವ್ವ ಕಣ್ಣಿಗೆ ಬಿದ್ದಿರಲಿಲ್ಲ. ಆ ಬಗ್ಗೆ ಅಮ್ಮನನ್ನೇ ನೇರವಾಗಿ ವಿಚಾರಿಸಿದಾಗ ಅಮ್ಮ ಹೇಳಿದ್ದು... "ಇನ್ನೆಲ್ಲಿಯ ಸಿದ್ದವ್ವ...ಹುಚ್ಚಿಯಾಗಿದ್ದ ಸಿದ್ದವ್ವ ಸತ್ತು ಒಂದೆರಡು ವರ್ಷಗಳೇ ಆದ್ವು. ಅನಾಥವಾಗಿ ಅಲ್ಲೆಲ್ಲೋ ಬಿದ್ದಿದ್ದ ಹೆಣವನ್ನು ಮಾದಿಗರಹಟ್ಟಿಯ(ದಲಿತರ ಕೇರಿ) ಹುಡುಗರು ತಂದು ಮಲ್ಲೇಗೌಡನೋರ ಹೊಂಗೆ ಹೊಲದಲ್ಲಿ ಸುಟ್ಹಾಕಿದರು….’ ಎಂಬ ಮಾತು ಒಂದು ಘಳಿಗೆ ಅಸಹನೀಯವೆನಿಸಿತ್ತು. ###
 

ಟಿ.ದಿವಾಕರ

Comments

Popular posts from this blog

ಲಾಸ್‌ಎಂಜಲಿಸ್‌ನಿಂದ ಟಿಟಾನ್‌ ವಿಲೇಜ್‌ವರೆಗೆ

ಜೀವಂತ ಕ್ರಿಯಾಶೀಲ ಜ್ವಾಲಾಮುಖಿಯ ಮೇಲೆ 18 ಗಂಟೆಗಳ ಓಡಾಟ

ಕನ್ನಡಕ್ಕಾಗಿ ವಿಂಡೋಸ್ ಎದುರು ಲಿನಕ್ಸ್ ಗಣಕ ನಿರ್ವಹಣಾ ತಂತ್ರಾಂಶ