ಕ್ರಿಕೆಟ್‌, ಬ್ರಿಟಿಷ್‌ ವಸಾಹತುವಿನ ಭಾರತದ ಜಂಟಲ್ಮನ್‌ ಗುಲಾಮೀ ಆಟಗಳಲ್ಲೊಂದು

Gladiator II ಚಲಚಿತ್ರದ ದುಷ್ಟ ಶಕುನಿ(Macrinus) ಉವಾಚ: “The greatest Temple Rome ever built!? The Colosseum”. ಅಲ್ಲಿ Colosseumನಲ್ಲಿ… ರೋಮ್ನ ಸಾರ‍್ವಜನಿಕರು ವೀಕ್ಷಿಸಿ ಗ್ಲಾಡಿಯೇಟರ್ಗಳ ಸಾವಿನ ಆಟ ನೋಡಿ ಖುಶಿ ಪಟ್ಟು ಸಂತೋಷಡುತ್ತಿದ್ದರು. ಹಾಗೆ ಇಲ್ಲಿ ಭಾರತದಲ್ಲಿ ಕ್ರಿಕೆಟ್‌ ಕ್ರೀಡಾಂಗಣಗಳು ಕೊಲೊಸಿಯಂಗಳಾಗಿವೆ. ಇಲ್ಲಿ ಯಾವನೋ ಒಬ್ಬ IPLನ ಧನವುಳ್ಳ ಶ್ರೀಮಂತ ಕೊಂಡುಕೊಂಡ ಕ್ರಿಕೆಟ್‌ ಗ್ಲಾಡಿಯೇಟರ‍್ಗಳು ಪಣದಲ್ಲಿರುತ್ತಾರೆ, ಈ ಪಣಕ್ಕೊಡ್ಡಿದ ಗ್ಲಾಡಿಯೇಟರ‍್ಗಳ ಬೆನ್ನುಬೀಳುವ ಹಿಂಬಾಲಕ ಭಾರತೀಯ ಮೂರ್ಖರು ಅವರ ಗೆಲುವುಸೋಲಿನ ಆಟನೋಡಿ ಖುಶಿ ಪಡುತ್ತಾರೆ ಇಲ್ಲವೆ ಎಲ್ಲಾ ಕಳೆದುಕೊಂಡಂತೆ ಜೋಲುಮುಖ ಹಾಕಿಕೊಳ್ಳುತ್ತಾರೆ. ಹಾಗಾಗಿ… "ಕ್ರಿಕೆಟ್‌, ಭಾರತದ ಗುಲಾಮೀ ಆಟಗಳಲ್ಲೊಂದು....”

ಒಂದು ಕಾಲದಲ್ಲಿ ಕ್ರಿಕೆಟ್‌ ಅದು ಸಂಘ(ಅಸೋಷಿಯೇಶನ್‌)/ಕ್ಲಬ್‌ ಗಳೆಂಬ ಸದಸ್ಯರನ್ನೊಳಗೊಂಡ ಸಂಸ್ಥೆಗಳು ಒಂದರ ವಿರುದ್ಧ ಒಂದು ಆಟವಾಡುವ ಮೂಲಕ ಆಡುತ್ತಿದ್ದ ಆಟ. ಪ್ರಶ್ನೆ? ಭಾರತೀಯರೇಕೆ ಈ ಕ್ರಿಕೆಟ್‌ ಆಡುವುದನ್ನು ಕಲಿತರು? ಇದಕ್ಕೆ ಕಾರಣವಿದೆ… ಇದು ಬ್ರಿಟಿಷ್‌ ವಸಾಹತುವಿನ ಜಂಟಲ್ಮನ್ನರು ಆಡುತ್ತಿದ್ದ ಕ್ರೀಡೆ. ಬ್ರಿಟಿಷ್‌ ಗುಲಾಮಿತನದಲ್ಲಿದ್ದ ಭಾರತೀಯರು ತಾವುಗಳೂ ಸಹ ಆ ತರಹೆ ಜಂಟಲ್ಮನ್ನರುಗಳು ಆಗಬಹುದೆಂದು ಅಂದಿನ ಭಾರತೀಯ ಮೇಲ್ವರ್ಗದ ಜನ ಈ ಕ್ರೀಡೆಯನ್ನಾಡಲು ಪ್ರಾರಂಭಿಸಿದರು. ಸ್ವಾತಂತ್ರ್ಯ ಪೂರ್ವದಿಂದಲೂ ಈ ಅಟದ ವೀಕ್ಷಕ ವಿವರಣೆಯನ್ನು ನೀಡುತ್ತಿದ್ದರು. ಸ್ವಾತಂತ್ರ್ಯಾನಂತರವೂ ಅದು ಮುಂದುವರಿದು ಭಾರತದ ರಾಷ್ಟ್ರೀಯ ವಾಹಿನಿ “AIR-ಆಲ್‌ ಇಂಡಿಯ ರೇಡಿಯೊ" ವೀಕ್ಷಕ ವಿವರಣೆ ನೀಡುವುದನ್ನು ಮುಂದುವರಿಸಿಕೊಂಡೇ ಬಂದಿದೆ. ಈ ವ್ಯವಸ್ಥೆಯಿಂದಾಗಿ ಹುಟ್ಟಿಕೊಂಡಿತು ಒಂದು ವಿವರಣೆ ನೀಡುವ ಕಾಮೆಂಟೇಟರುಗಳೆಂಬ ಭಟ್ಟಂಗಿ ಸಮುದಾಯ… ವಿಶಿಷ್ಟ ವಿವರಣೆ ನೀಡುವ ಭಟ್ಟಂಗಿಗಳೂ ಹುಟ್ಟಿಕೊಂಡರು. ಭಾರತೀಯ ಇಂಗ್ಲಿಶ್‌ ಪತ್ರಿಕೆಗಳು ಮತ್ತು ಭಾಷಾ ಪತ್ರಿಕೆಗಳು ದಪ್ಪದಪ್ಪ ಅಕ್ಷರಗಳಲ್ಲಿ ಆಟ, ಆಟಗಾರರ ಬಗ್ಗೆ ಪ್ರಶಂಸೆ, ಅಪ್ರಶಂಸೆ ಎಲ್ಲವನ್ನೂ ಬರೆಯತೊಡಗಿದವು. ಇವರಿಗೆ, ಇವರುಗಳಿಂದ ಆಟವನ್ನು ಕಲಿತ ಹೊಸ ಕ್ರಿಕೆಟ್‌ ಕ್ರೀಡೆಯ ಆಟಗಾರರಿಗೆ ಸಮುದಾಯದಲ್ಲಿ ಹುಟ್ಟಿಕೊಂಡ ಮನ್ನಣೆ, ಮರ್ಯಾದೆ, ಸಲೆಬ್ರಟಿ ಎಂಬ ಪ್ರತಿಷ್ಠೆ, ಧಿಮಾಕು, ಗೌರವ, ಸವಲತ್ತು, ಹಣ ಇತ್ಯಾದಿಗಳು ಅವರ ತಲೆಯ ನೆತ್ತಗೇರಿಸಿತು. ಇದರ ಪ್ರಭಾವ… ಭಾರತೀಯ ಆಟಗಳಾದ ಚಿನ್ನಿಕೋಲು, ಕಬಡ್ಡಿ, ಖೊಖ್ಖೊ ಆಟಗಳು ಹೇಳ ಹೆಸರಿಲ್ಲದಂತೆ ನಶಿಸಿ ಹೋಗಲು ಪ್ರಾರಂಬಿಸಿದವು. ಚಿನ್ನಿಕೋಲು ಮತ್ತು ಖೊಖ್ಖೊ ಆಟಗಳು ಕೊನೆಗೆ ಸತ್ತೇಹೋದವು. ಈ ಭಾರತೀಯ ಆಟಗಳನ್ನು ವಸಾಹತುವಿನ ಬ್ರಿಟಿಷರು Country ಆಟಗಳೆಂದು ಕರೆಯುತ್ತಿದ್ದುದರಿಂದ ಕರ್ನಾಟಕದ ಅಚ್ಚ ಕನ್ನಡದಲ್ಲಿ "ಕಂತ್ರಿ" ಎಂಬ ಪದವೊಂದು ಹುಟ್ಟಿಕೊಂಡು ಕೊನೆಗೆ ಅದೊಂದು ಅವಹೇಳನಕರ ಬೈಗುಳ ಪದವಾಯಿತು. ಇರಲಿ ಬಿಡಿ… ನಂತರ ಹುಟ್ಟಿಕೊಂಡವು ರಾಜ್ಯವಾರು ಪ್ರಾದೇಸಿಕವಾರು ಕ್ರಿಕೆಟ್‌ ಸಂಘ, ಕ್ಲಬ್‌, ಅಸೋಷಿಯನ್ನುಗಳು ಮತ್ತು ರಾಷ್ಟ್ರಮಟ್ಟದಲ್ಲಿ ಹುಟ್ಟಿಕೊಂಡದ್ದು BCCI.

ಭಾರತದಲ್ಲಿ ಕ್ರಿಕೆಟ್‌ ಹುಟ್ಟಿಕೊಂಡಿತು, ಕ್ರಿಕೆಟ್‌ ಆಡುವುದನ್ನು ಕಲಿತಿದ್ದ ದೇಶಗಳ ಮಧ್ಯೆ ಟೆಸ್ಟ್‌ ಎಂದು ಐದು ದಿನಗಳ ಆಟ ನಡೆಯುತ್ತಿದ್ದವು… ಪ್ರಾರಂಭದಲ್ಲಿ ಆಡುತ್ತಿದ್ದ ದೇಶಗಳು ಇಂಗ್ಲೆಂಡ್‌, ಆಷ್ಟ್ರೇಲಿಯ, ನ್ಯೂಜಿಲ್ಯೆಂಡ್‌, ಭಾರತ, ಪಾಕಿಸ್ಥಾನ ಗಳು ಮಾತ್ರ. ದಕ್ಷಿಣ-ಆಫ್ರಿಕ ಕ್ರಿಕೆಟ್‌ ಆಡುತ್ತಿದ್ದಾಗ್ಯೂ ಆ ದೇಶದ ಜೊತೆ ಮೊದಲು ಹೇಳಿದ ದೇಶಗಳು ಟೆಸ್ಟ್‌ ಆಡುತ್ತಿರಲಿಲ್ಲ. ಕಾರಣ ಅಲ್ಲಿನ್ನೂ ಪ್ರಿಟೊರಿಯ ವಾಸಹತುಶಾಹಿ ಅಧಿಕಾರವಿತ್ತು. ಗುಲಾಮಿತನವನ್ನು ಮುಂದುವರಿಸಿದ್ದ ಕಾರಣ ಆ ದೇಶಕ್ಕೆ ನಿರ್ಭಂದ ಹೇರಲಾಗಿತ್ತು. ಆನಂತರ ಈ ಟೆಸ್ಟ್‌ ಪಟ್ಟಿಗೆ ಸೇರಿಕೊಂಡ ರಾಷ್ಟ್ರಗಳು ಶ್ರೀಲಂಕ, ಜಿಂಬಾಬ್ವೆ, ಬಂಗ್ಲಾದೇಶ ಇತ್ಯಾದಿ. ಇದಲ್ಲದೆ ಆಂತರಿಕವಾಗಿ ಭಾರತದಲ್ಲಿ ಪ್ರಾದೇಶಿಕ ಸಂಸ್ಥೆಗಳು ದೇಶೀಯವಾಗಿ ಮೇಲು-ಕೀಳು ಯಾರೆಂದು ಗುರುತಿಸಲು ಮೂರು/ನಾಲ್ಕು/ಐದು ದಿನಗಳ ರಣಜಿ ಪಂದ್ಯವನ್ನು ಆಡುತ್ತಿದ್ದರು. ರಣಜಿ ಗೆದ್ದವರ ವಿರುದ್ಧ ಇತರೆಲ್ಲರೂ ಒಟ್ಟಾಗಿಸೇರಿ ಬೇರೆ ಬೇರೆ ಹೆಸರಿನ ಪಂದ್ಯಗಳಾಡುತ್ತಿದ್ದರು. AIR-ಆಲ್‌ ಇಂಡಿಯ ರೇಡಿಯೊ ಈ ಅಟಗಳ ವೀಕ್ಷಕ ವಿವರಣೆಯನ್ನೂ ನೀಡುತ್ತಿದ್ದಿತು. ಭಾರತದಲ್ಲಿ ಕ್ರಿಕೆಟ್‌ ಪ್ರತಿಷ್ಠೆಯ ಕ್ರೀಡೆಯಾಯಿತು. ಅದರೊಂದಿಗೇ ಹುಟ್ಟಿಕೊಂಡರು ಬಾಜಿಕಟ್ಟುವ ದುಷ್ಟಕೂಟಗಳು ಮತ್ತು ಮೂರ್ಖ ಫಂಕ(Fan)ಗಳು. ಅಲ್ಲಿಯವರೆಗೆ ಕ್ರಿಕೆಟಿಗರಿಗೆ ಅವರ ಸಂಸ್ಥೆಗಳು, BCCI ಸಂಸ್ಥೆಯಿಂದ ಗೌರವ ಸಂಭಾನೆಯನ್ನು ನೀಡುತ್ತಿದ್ದರು.

ಎಪ್ಪತ್ತರ ದಶಕದ ಪ್ರಾರಂಭದಲ್ಲಿ ಹುಟ್ಟಿಕೊಂಡಿದ್ದು 50 ದುಂಡು(6 ಎಸೆತದ ದುಂಡು) ಎಸೆತಗಳ ಅಂತಾರಾಷ್ಟ್ರೀಯ ಪಂದ್ಯಗಳು. 81ರ ದಶಕದಲ್ಲಿ ಭಾರತದಲ್ಲಿ ಬಣ್ಣದ ದೂರದರ್ಶನ ಪ್ರಸಾರವೂ ಪ್ರಾರಂಭವಾಯಿತು. ಜೊತೆಗೇ ಹುಟ್ಟಿಕೊಂಡವು ಖಾಸಗಿ ದುರ‍್ದರ್ಶನ ವಾಹಿನಿಗಳು. ಕ್ರಿಕೆಟ್ ಆಟದಲ್ಲಿ ಹಣವಿರುವುದನ್ನು ಕಂಡುಕೊಂಡ ಹಣದ ರುಚಿಕಂಡ BCCI ಸಮಯ ವೇಳೆಗಳ ಸಹಿತ ಪ್ರದರ್ಶನದ ಆಧಿಕೃತ ಪ್ರಸಾರ ಮಾಡಲು ಖಾಸಗಿ ದುರ‍್ದರ್ಶನಗಳಿಗೆ ಹರಾಜು ಮೂಲಕ ಮಾರಾಟ ಮಾಡಲು ಪ್ರಾರಂಭಿಸಿತು. ದೇಶದಲ್ಲಿ ಕ್ರಿಕೆಟನ್ನು ಬೆಳೆಸಲು ಏಣಿಗಳಾಗಿದ್ದ AIR-ಆಲ್‌ ಇಂಡಿಯ ರೇಡಿಯೊ, ದೂರದರ್ಶನ ಸಂಸ್ಥೆಗಳನ್ನು ದೂರತಳ್ಳಿ ಅವುಗಳನ್ನು ಮರೆತೇಬಿಟ್ಟಿತು BCCI.

ಕಳೆದ 18 ವರ್ಷಗಳ ಹಿಂದೆ ಗುಜರಾತಿನ ಕ್ರಿಕೆಟ್‌ ಸಂಸ್ಥೆಯಲ್ಲಿದ್ದ ಲಲಿತ್‌ ಕುಮಾರ್‌ ಮೋದಿ ಎನ್ನುವ ವ್ಯಕ್ತಿ ಮತ್ತೊಂದು ರೀತಿಯ 20 ದುಂಡು ಎಸೆತಗಳ ಕ್ರಿಕೆಟ್‌ ಪಂದ್ಯಾಟಗಳನ್ನು ನಡೆಸಲು BCCIನ ಅಂಗಸಂಸ್ಥೆಯಾಗಿ IPLCouncil(Indian Premier League) ಹುಟ್ಟಿಸಿದರು. ಉದ್ದೇಶ ಭಾರತದಲ್ಲಿ ಬೆಳೆದ ಮೂರ್ಖ ಅಂಧಾ ಕ್ರಿಕೆಟ್‌ ಅಬಿಮಾನಿಗಳನ್ನು ಮತ್ತು ಖಾಸಗಿ ದುರ್ದರ್ಶನ ವಾಹಿನಿಗಳನ್ನು ಉಪಯೋಗಿಸಲು ಒಂದು ಕ್ರಿಕೆಟ್‌ನ ಅಂಧಾ ದರ್ಬಾರಿನ ವ್ಯವಸ್ಥೆ ಮಾಡಿದರು ಅದುವೇ IPL. ಈ IPL ರಾಜ್ಯಾವಾರು ಪಾವತಿಸಿದತ ಖಾಸಗಿ ಒಡೆತನದ ಕ್ರಿಕೆಟ್‌ ಸಂಸ್ಥೆ(franchise) ನಡೆಸಲು ಆಹ್ವಾನ ನೀಡಿದರು. ಹಾಗಾಗಿ ಕೇವಲ ಹಣ ಮಾಡುವ ಮೂಲೋದ್ದೇಶವೇ ಗುರಿಯಾಗಿಸಿಕೊಂಡು ದೇಶದಲ್ಲಿ ಹುಟ್ಟಿಕೊಂಡವು ಒಡೆತನದ ಕ್ರಿಕೆಟ್‌ ಸಂಸ್ಥೆಗಳು, ಅದರಲ್ಲೊಂದು RCB(Royal Challengers Bangalore). ಈ ಸಂಸ್ಥೆಗಳು ಕ್ರಿಕೆಟ್‌ ಆಟಗಾರರನ್ನು ಹರಾಜಿನಲ್ಲಿ ಕೊಂಡುಕೊಳ್ಳಬೇಕಾಯಿತು. ಆಟಗಾರರು ಭಾರತದವರೇ ಆಗಬೇಕೆಂದಿಲ್ಲ, ಯಾವ ದೇಶದವರಾದರೂ ಆಗಿರಬಹುದಾಗಿತ್ತು. ಕ್ರಿಕೆಟ್‌ ಆಟ ಕ್ರೀಡೆಯಾಗುಳಿಯಲಿಲ್ಲ… ಅದೊಂದು ವ್ಯಾಪಾರವಾಯಿತು. 

ಬ್ರಿಟನ್‌ ಮತ್ತು ಅಮೆರಿಕಾ ದೇಶಗಳು ಒಂದು ಕಾಲದಲ್ಲಿ ತೋಟಗಳಲ್ಲಿ ಕೆಲಸ ಮಾಡಲು ಬೇಕಾಗುತ್ತಿದ್ದ ಕೆಲಸಗಾರರಿಗಾಗಿ ಆಫ್ರಿಕಾ ಖಂಡದಿಂದ ಕಾನೂನುಬಾಹಿರವಾಗಿ ಹಿಡಿದು ತರುತ್ತಿದ್ದ ಕಪ್ಪು ಜನಾಂಗೀಯರನ್ನು ಗುಲಾಮರ ಮಾರಕಟ್ಟೆಯಲ್ಲಿ ಹಣಕೊಟ್ಟು ಕೊಳ್ಳುತ್ತಿದ್ದವು. ಇಲ್ಲಿ IPLನಲ್ಲಿ ಮಾರಾಟಕ್ಕಾಗಿ ನೊಂದಾಯಿಸಿಕೊಳ್ಳುತ್ತಿದ್ದ ಆಟಗಾರರನ್ನು ಅದರ ರಹದಾರಿ ಪಡೆದ ಈ ಖಾಸಗಿ ಸಂಸ್ಥೆಗಳಿಗೆ ಹರಾಜು ಮೂಲಕ ಹಣಕೊಟ್ಟು ಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ. ಈ ರೀತಿ ಮಾರಾಟವಾದ ಆಟಗಾರರ ಹೆಸರುಗಳನ್ನು ಸುದ್ದಿ ಮಾಧ್ಯಮಗಳಲ್ಲಿ ದಪ್ಪದಪ್ಪ ಅಕ್ಷರಗಳಲ್ಲಿ ಮುದ್ರಿಸುವುದು /ಇಲ್ಲವೆ ದುರ‍್ದರ್ಶನ ವಾಹಿನಿಗಳು ಬಹುಮುಖ್ಯ ವಿಷಯವಾಗಿ ಬಿತ್ತರಿಸಲು ಪ್ರಾರಂಬಿಸಿದವು… ದೇಶದಲ್ಲಿ ಹುಟ್ಟಿಕೊಂಡರು ನವೀನ ರೀತಿಯ ಬೆಲೆಬಾಳುವ ಗುಲಾಮರು. ಬ್ರಿಟಿಷರ ದಬ್ಬಾಳಿಕೆ ಗುಲಾಮಿ ಆಳ್ವಿಕೆಯಿಂದ ಹೊರಬಂದ ಭಾರತ ನವೀನ ಗುಲಾಮಿತನಕ್ಕೆ ನಾಂಧಿ ಹಾಡಿತು ಇಲ್ಲಿ. ಇದು ಬ್ರಿಟಿಷ್‌ ಜಂಟಲ್ಮನ್‌ ಗುಲಾಮಿತನದ ಹೊರತಾಗಿ ಮತ್ತೇನೂ ಅಲ್ಲ. ಅಂದರೆ ನಾವಿನ್ನೂ ಬ್ರಿಟಿಷ್‌ ಸಾಮ್ರಾಜ್ಯದ ಗುಲಾಮಿತನದಿಂದ ಹೊರಬಂದಿಲ್ಲವೆಂಬುದನ್ನು ಜಗತ್ತಿಗೆ ಸಾರಿ ಸಾರಿ ಹೇಳಲಾಗುತ್ತಿದ್ದೇವೆ.

"ಕ್ರಿಕೆಟ್‌ ಭಾರತದ ಗುಲಾಮೀ ಆಟಗಳಲ್ಲೊಂದು” ಎಂದು ಪ್ರಾರಂಭದಲ್ಲಿಯೇ ಹೇಳಿದ್ದೇನೆ. ಹೇಗೆ? BCCI ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೊಕ್ಕಸದಲ್ಲಿ ಅತಿ ಹೆಚ್ಚು ಹಣವಿರುವ ಸಂಸ್ಥೆಯಾಗಿದೆ ಈಗ. ICC ಬದುಕಿರುವುದೇ BCCIನಿಂದಾಗಿ. ಒಂದು ವೇಳೆ ಭಾರತ ಸರ್ಕಾರವು ಕ್ರಿಕೆಟ್‌ ರಾಷ್ಟ್ರೀಯ ಅಟವಲ್ಲ, ಅದು ಒಲಂಪಿಕ್‌ ಕ್ರೀಡೆಯೂ ಅಗಿಲ್ಲ ಎಂದು ಪರಿಗಣಿಸಿ ದೇಶದಲ್ಲಿ ಅದನ್ನು ಒಕ್ಕಲೆಬ್ಬಿಸಿದರೆ ಇಂಗ್ಲೆಂಡಿನಲ್ಲಿನ ICC(International Cricket Club) ಸತ್ತುಹೋಗುತ್ತದೆ. ಅಂದರೆ ನಮ್ಮ ದೇಶದ ಕ್ರಿಕೆಟ್ ಸಂಸ್ಥೆ ಬ್ರಿಟಿಷರು ಹುಟ್ಟುಹಾಕಿರುವ ICCಯನ್ನು ಸಾಕುತ್ತಿದೆ. BCCI ಇಲ್ಲಿ ದುಡಿದು ICCಯನ್ನು ಸಾಕುತ್ತಿದೆ. ಬ್ರಿಟಿಷ್‌ ಜಂಟಲ್‌ಮನ್ನರ ಆಟವೆಂದು ಪರಿಗಣಿಸಿದ್ದ ಆಟಕ್ಕಾಗಿ ದುಡಿಯುತ್ತಾ ನಾವಿನ್ನೂ ಅವರ ಗುಲಾಮಿತನದಲ್ಲಿದ್ದೇವೆಂಬುದನ್ನು ನೆನಪಿಸಿಕೊಡುತ್ತಿದೆ ಕ್ರಿಕೆಟ್‌.

ವಸಾಹತುಶಾಹಿ ಬ್ರಿಟಿಷ್‌ ಸಾಮ್ರಾಜ್ಯ ತನ್ನ ಅಧೀನದಲ್ಲಿದ್ದ ವಸಾಹತುಗಳನ್ನು ತ್ಯಜಿಸಿ ಹೋಗುವಾಗ್ಗೆ ಅಲ್ಲಿ ಬಿಟ್ಟುಹೋದ ಅವರ ಬಹುದೊಡ್ಡ ವಿಶ್ವಾಸಘಾತುಕನವೆಂದರೆ… ಕ್ರಿಕೆಟ್‌ ಮತ್ತದರ ಗುಲಾಮಗಿರಿ ಸಂಸ್ಕೃತಿಯನ್ನು. ಭಾರತದಲ್ಲಿ ಸರ್ಕಾರದ ಪ್ರಸಾರ ಭಾರತಿಯೂ ಸೇರಿಕೊಂಡು ಹುಟ್ಟಿಕೊಂಡ ಭಟ್ಟಂಗಿಗಳು ದೇಶಾದ್ಯಂತ ಕಟ್ಟಿದ ಬೃಹತ್‌ ಗುಲಾಮತನ ಬೆಳವಣಿಗೆಯ ದೇವಮಂದಿರಗಳು... ಕ್ರಿಕಟ್ ಕ್ಲಬ್ಬುಗಳು ಸಂಘಗಳು ಸ್ಟೇಡಿಯಂಗಳು. ಪೂರಕವಾಗಿ ಹುಟ್ಟಿಕೊಂಡವುಗಳು ಖಾಸಗಿ ಪ್ರಸಾರ ಮಾಧ್ಯಮಗಳು. ಈ ಗುಲಾಮಿ ಸಂಸ್ಕೃತಿ ಬಿಂಬಿಸಲು ಮತ್ತು ದುಡಿಯುವ ಜನರ ಸಮಯವನ್ನು ಕಿತ್ತುಕೊಂಡು ಆರ್ಥಿಕ ಬೆಳವಣಿಗೆಗೆ ಕಂಟಕಪ್ರಾಯಕ್ಕೆ ಕಾರಣವಾಗಿವೆ. ಆಡವುದೆಂದರೆ ವರ್ಷವಿಡೀ ಆಡುವುದಲ್ಲ! ನೋಡುವುದೆಂದರೆ ವರ್ಷವಿಡೀ ನೋಡುವುದಲ್ಲ!  ಈ ನಿಟ್ಟಿನಲ್ಲಿ ಬ್ರಿಟಿಷ್‌ ಸಾಮ್ರಾಜ್ಯ ಬಾರತ ಉಪಖಂಡದ ಮಟ್ಟಿಗೆ ಭಾರೀ ಜಯವನ್ನೇ ಗಳಿಸಿದೆ… ಉಪಖಂಡದಲ್ಲಿ ಈಗಾಗಲೇ ಎರಡು ದೇಶಗಳು ನೆಲಕಚ್ಚಿವೆ. ಇತ್ತೀಚೆಗಷ್ಟೇ ಕ್ರಿಕೆಟ್‌ ಆಡುವುದನ್ನು ಕಲಿತ ದೇಶ ಅವನತಿಯ ದಾರಿಯನ್ನು ಹಿಡಿದಿದೆ. ಕ್ರಿಕೆಟ್‌ ನಮಗಿನ್ನೂ ಬೇಕೇ ಬೇಕೆಂದು ಹೇಳಿದರೆ ಕೇಳಿದರೆ ನಾವಿನ್ನೂ ಬ್ರಿಟಿಷ್‌ ಗುಲಾಮರಾಗಿದ್ದೇವೆಂದು ಖುಶಿಪಡುತ್ತಾ ಆಡಬಹುದು.

ಬರಹ:
ದಿವಾಕರ ತಿಮ್ಮಣ್ಣ.

Comments

Popular posts from this blog

ಕನ್ನಡ ಗಣಕೀಕರಣದಲ್ಲಿ ಶಿಷ್ಟತೆ ಮತ್ತು ಏಕರೂಪತೆ: ಕಗಪ ಇಬ್ಬಗೆ ನೀತಿ

ಕನ್ನಡಕ್ಕಾಗಿ ವಿಂಡೋಸ್ ಎದುರು ಲಿನಕ್ಸ್ ಗಣಕ ನಿರ್ವಹಣಾ ತಂತ್ರಾಂಶ

ಲಾಸ್‌ಎಂಜಲಿಸ್‌ನಿಂದ ಟಿಟಾನ್‌ ವಿಲೇಜ್‌ವರೆಗೆ