ದ ನ್ಯೂಸ್‌ ಅವರ್‌ ಅಟ್‌ 9


ದ ನ್ಯೂಸ್‌ ಅವರ್‌ ಅಟ್‌ 9

" ನ್ಯೂಸ್‌ ಅವರ್‌ ಅಟ್‌ 9” ಎಂಬ "ಟೈಮ್ಸ್‌ ನೌ" ಇಂಗ್ಲೀಷ್‌ ಸುದ್ದಿ ವಾಹಿನಿ ಕಾರ್ಯಕ್ರಮವನ್ನು ದಿನಾಂಕ 3-01-2017 ರ ರಾತ್ರಿ ನೋಡಿದ ಮೇಲೆ ನನಗೆ ಅನಿಸಿದ್ದು... ಕಾರ್ಯಕ್ರಮದ ಅತಿಜ್ಞಾನಿ-ಬಹುಜ್ಞಾನಿ ಲಂಗರುದಾರಿಣಿ ನವಿಕ ಕುಮಾರ್‌ ಎಂಬ ಮಹಿಳೆ ಮತ್ತು ಆಕೆಯ ಸಹೋದ್ಯೋಗಿ ಮತ್ತೊಬ್ಬ ಅತಿಜ್ಞಾನಿ-ಬಹುಜ್ಞಾನಿ ಆನಂದ ನರಸಿಂಹನ್‌ ಇವರ ಜೊತೆಗೆ ಹಲವರು ವಿಷಯದ ಅತಿಜ್ಞಾನಿಯಜ್ಞಾನಿ ಚರ್ಚಾಹ್ವಾನಿತ ಸದಸ್ಯರು ಭಾಗವಹಿಸಿದ ಎರಡು ಗಂಟೆಗಳ ವ್ಯರ್ಥಾಲಾಪಗಳು ಸಮಸ್ಯೆಯ ಗಂಭೀರತೆಗಿಂತ ತಮಾಷೆಯೆನಿಸುತ್ತಿತ್ತು. ಈ ವಿಷಯದ ಬಗ್ಗೆ ಬರೆಯುವುದೂ ಸಹ ಮತ್ತೊಂದು ವಿವಾದಕ್ಕೆ ಎಡೆಮಾಡುತ್ತದೆ ಎಂಬ ಭಯವೂ ಕಾಡುತ್ತದೆ. ಈವತ್ತಿನ ಜಗತ್ತಿನಲ್ಲಿ ಏನು ಹೇಳುವುದೂ ತಪ್ಪಾಗಿರುತ್ತದೆ. ತಡೆಯಲಾಗದೆ ಹೊಟ್ಟೆಯಿಂದ ಬರುವ ಡರ್‌ಪುಸ್‌ ಹೂಸೂ ಕೂಡ ಮರ್ಯಾದಸ್ಥ ನವಯುಗದ ಅತಿಜ್ಞಾನಿಗಳಿಗೆ ಅಸಂಬದ್ಧವಾಗಿರುತ್ತದೆ… ಆ ರೀತಿ ಹೂಸು ಬಿಡುವವರು ಅನಾಗರೀಕರಾಗಿರುತ್ತಾರೆ. ಯಾರಿಗೂ ಕೇಳಿಸದ ಹಾಗೆ ಒಳಗೊಳಗೇ ಪಿಸ್ಸನೆ ಬಿಡುವ ದುರ್ವಾಸನೆ ಹೂಸುಗಳಿಗೆ ಅದೇ ಮರ್ಯಾದೆ ಜನ ಮೂಗು ಮುಚ್ಚಿಕೊಂಡು ಕೈಯಲ್ಲಿ ಗಾಳಿ ಸೋವಿಕೊಳ್ಳುತ್ತಾರೆ. ಯಾಕಂದರೆ ಅಂಥ ಹೂಸನ್ನು ಅವರೇ ಬಿಟ್ಟಿರುತ್ತಾರೆ.

ಮೊದಲಿಗೆ ನಡೆದದ್ದು ಹೊಸವರ್ಷದ ಆಗಮನದ ಹಿಂದಿನದಿನ (ಡಿಸೆಂಬರ್‌ 31, 2016ರ ರಾತ್ರಿ) ಬೆಂಗಳೂರಿನ ಬ್ರಿಗೇಡ್‌ ರಸ್ತೆ ಮತ್ತು ಮಹಾತ್ಮಗಾಂಧಿ ರಸ್ತೆ ಅದರ ಆಚರಣೆಗೆ ಸೇರಿದ ವಯಸ್ಸಿನ ಹುಡುಗರು ಮತ್ತು ಹುಡುಗಿಯರು ನಡೆಸಿದ ಮೇಜವಾನಿಗಳಿಂದಾಗಿ ಆನಂತರದಲ್ಲಿ ಹುಡುಗಿಯರನ್ನು ಅದೂ ಕೂಡ ಪೊಲೀಸರ ಎದುರಿನಲ್ಲೇ ಲೈಂಗಿಕವಾಗಿ ಅಮಾನೀಯವಾಗಿ ನಡೆಸಿಕೊಂಡರೆಂಬ ಆರೋಪ ಮತ್ತು ಈ ಬಗ್ಗೆ ಕೆಲವು ನೇತಾಗಳು ಹೇಳಿದ ಹೇಳಿಕೆಗಳು, ಕೆಲವು ಮಹಿಳಾ ವಿಚಾರವಾಧಿಗಳ ಹೇಳಿಕೆಗಳು, ಚರ್ಚೆಯಲ್ಲಿ ಭಾಗವಹಿಸಿದ ಮಹಿಳಾ ಮಣಿಗಳು ವಾದಗಳು ನನಗೆ ನಗೆ ತರಿಸುತ್ತಿತ್ತು. ಬಹುಮಂದಿ ನವ ಯುವಕ ಯುವತಿಯರು ನವ ಜಗತ್ತಿನ ನವೀನ ಉಡುಗೆ ತೊಡುಗೆಗಳಲ್ಲಿ…ಅವು ಹೇಗಿರುತ್ತವೆಂದು ಹೇಳುವುದು ಹುಡುಗ ಹುಡುಗಿಯರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ. ಅಂದರೆ ಅವರು ಏನನ್ನಾದರೂ ಉಡಬಹುದು ತೊಡಬಹುದು, ಯಾವಾಗಬೇಕಾದರೂ ಎಲ್ಲಿಗೆ ಬೇಕಾದರೂ ಹೋಗಬಹುದು ಏನನ್ನಾದರೂ ಮಾಡಬಹುದು, ಏನನ್ನಾದರೂ ತಿಂದು ಕುಡಿಯಬಹುದು. ಯಾರೂ ಪ್ರಶ್ನಿಸುವಂತಿಲ್ಲ. ಪ್ರಶ್ನಿಸಿದರೆ ಅದು ಅವರ ಸ್ವಾತಂತ್ರ್ಯಕ್ಕಾದ ಧಕ್ಕೆ. ಇದು ಹುಡುಗರಿಗಾಗಿರಬಹುದು ಅಥವಾ ಹುಡುಗಿಯರಿಗಾಗಿರಬಹುದು. ಕೆಲವು ನೇತಾಗಳು ಇದು ಪಾಶ್ಚಿಮಾತ್ಯ ಪ್ರಪಂಚದ ಸಂಸ್ಕೃತಿಯ ಪ್ರಭಾವದ ಪರಿಣಾಮವೆಂದರೆ ಮತ್ತೊಬ್ಬ ನೇತಾ "ಹುಡುಗಿಯರು ಸಕ್ಕರೆಯಿದ್ದ ಹಾಗೆ ಹುಡುಗರು ಇರುವೆಗಳಿದ್ದ ಹಾಗೆ…ಸಕ್ಕರೆಗೆ ಇರುವೆಗಳು ಮುತ್ತಿಗೆ ಹಾಕುವುದು ಸಹಜ" ಎಂದುಬಿಡಬಹುದೆ? ಕರ್ನಾಟಕ ಸರ್ಕಾರದ ಹೊಣೆಗೇಡಿ ಪೊಲೀಸು ಮಂತ್ರಿ ಮಹನೀಯ ಪರಮೇಶ್ವರ್‌ "ಹುಡುಗರು ಹುಡುಗರೇ… ಇದೆಲ್ಲಾ ಇಂಥ ದಿನಗಳಲ್ಲಿ ಇಂಥ ಆಚರಣೆಗಳಲ್ಲಿ ಹೀಗಾಗುವುದು ಸಹಜ…." ಎಂದು ಹೇಳಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಯಿತು?! ಪಾಪ ಮಹಿಳೆಯರಿಗೆ ಈ ಮಾತು ಹೊಟ್ಟೆಯೊಳಗೆ ಬೆಂಕಿಹಾಕಿದ ಹಾಗಾಗಿತ್ತು. ಚರ್ಚೆಯಲ್ಲಿ ಭಾಗವಹಿಸಿದ ಹುಡುಗನೊಬ್ಬ "ಇಂಥ ಆಚರಣೆಗಳಿಗೆ ಅಂಥಾ ಉಡುಗೆಗಳನ್ನು ಹಾಕಿಕೊಂಡು ಅಂಥಾ ಅವಧಿಯಲ್ಲಿ…ಅಂದರೆ ಮಧ್ಯರಾತ್ರಿ ಮೀರಿದ ಭಯಭೀತಿ ವೇಳೆಯಲ್ಲಿ ತಮ್ಮ ಗೆಳೆಯ ಯಾ ಗೆಳತಿಯರ ಜೊತೆಯಲ್ಲಿ ಹೋಗುವುದು ಅಪಾಯ, ಹುಡುಗಿಯರು ಅವರ ಎಚ್ಚರಿಕೆಯಲ್ಲಿ ಅವರಿರಬೇಕು... ವಿವೇಚನೆಯಿರಬೇಕು, ಅದು ಅವರ ಜವಾಬ್ದಾರಿ" ಎಂದು ಹೇಳಿದ. ಇವನ ಮಾತಿಗೆ ಲಂಗರುಧಾರಿಣಿ ನವಿಕ ಕುಮಾರ್‌ ತಾನೇ ಹೇಳುತ್ತಿದ್ದರು " ನಾವು ಏನನ್ನಾದರೂ ಹಾಕಿಕೊಂಡು, ಎಲ್ಲಿಗೆ ಬೇಕಾದರೂ, ಯಾವಹೊತ್ತಿನಲ್ಲಾದರೂ ಹೋಗುತ್ತೇವೆ ಅದನ್ನು ಕೇಳಲು ನೀನಾರು? ಅದು ನಮ್ಮ ಸ್ವಾತಂತ್ರ್ಯ.” ಮರು ಪ್ರಶ್ನೆ. ಕೆಲವರು "ಭಾರತೀಯ ಸಂಸ್ಕೃತಿಯೆಂದರು, ಅವೇಳೆಯಲ್ಲಿ ಮಹಿಳೆ ಹೊರಹೋಗಬಾರದೆಂದರು.” ನವಿಕ ಕುಮಾರ್‌, "ಆ ಸಂಸ್ಕೃತಿ ನಮಗೂ ಗೊತ್ತು...” ಎನ್ನುತ್ತಿದ್ದ ಚರ್ಚೆಗೆ ಸೇರಿದ ಮಹಿಳೆಯರ ಜೊತೆಗೆ ತಲೆ ಗುಣುಕು ಹಾಕುತ್ತಿದ್ದರು. ಏನೇ ಇರಲಿ ಇದೊಂದು ಬೆಂಗಳೂರು ನಗರಕ್ಕೆ ಅವಮಾನದ ಅಮಾನವೀಯ ಘಟನೆ. ಅದೂ ಘಟನೆ ಬೆಳಕಿಗೆ ಬಂದಿರುವುದು ಒಂದು ದಿನ ಕಳೆದಮೇಲೆ. ಚರ್ಚೆ ನಡೆಯಿತು, ಅದು ಚರ್ಚೆ ಅನಿಸಲಿಲ್ಲ. ಅದೊಂದು ಅರುಚಾಟ ಕಿರುಚಾಟ ಎಂದೆನಿಸಿತು. ಗಂಬೀರ ಮುಜುಗರದ ಜೊತೆಗೆ ತಮಾಷೆಯೆನಿಸಿತು. ಇದರಿಂದ ಯುವಕರ ಮತ್ತು ನೇತಾಗಳ ಮನಸ್ಸು ಬದಲಾಗುತ್ತದೋ ಇಲ್ಲವೋ ಗೊತ್ತಿಲ್ಲ. ನವ ಯುಗದ ಯುವಕ ಯುವತಿಯರು ಈ ವಿಷಯದ ಬಗ್ಗೆ 2017ರ ಡಿಸೆಂರ್‌ 31ನೇ ದಿನಾಂಕದ ವೇಳೆಗೆ ಮರೆತುಹೋಗಿರುತ್ತಾರೆಂಬುದು ನನ್ನ ಅನಿಸಿಕೆ. ಬರುವ ಆ ದಿನದಂದು ಮತ್ತದೇ... ಇಂಥದೇ ಘಟನೆಗಳು ಮತ್ತೆ ನಡೆಯುವುದಿಲ್ಲವೆಂಬುದು ಯಾವ ನಂಬುಗೆ?! ಒಟ್ಟಿನಲ್ಲಿ ಈ ಚರ್ಚೆಯಬಗ್ಗೆ ಗಮನಕ್ಕೆ ಬಂದ ಅಂಶವೆಂದರೆ ಬುದ್ಧಿಮಾತನ್ನು ಗಂಡು ಮಕ್ಕಳಿಗೆ ಮಾತ್ರ ಸೀಮಿತವಾಗಿಡಬೇಕು. ಹೆಣ್ಣುಮಕ್ಕಳಿಗೆ ಬುದ್ಧಿ ಮಾತು ಹೇಳಲು ಯಾರಿಗೂ ಅಧಿಕಾರವಿಲ್ಲ… ಅವರ ತಂದೆ ತಾಯಿಗಳಿಗೂ ಕೂಡ. ನೆನಪಿನಲ್ಲಿಟ್ಟುಕೊಳ್ಳುವುದು. ಇಲ್ಲದಿದ್ದರೆ ಮನೆಯಲ್ಲಿಯೂ ಬಂಡಾಯವೇಳುತ್ತದೆ. ಇದು ಬುದ್ಧಿಮಾತು ಹೇಳುವವರಿಗೆ ಬುದ್ಧಿಮಾತು.

ನಾನು ವೀಕ್ಷಿಸಿದ ಇನ್ನೊಂದು ಚರ್ಚಿತ ವಿಷಯ, ಪಾಕಿಸ್ಥಾನದ ಬಲೂಚಿಸ್ಥಾನದ ಹಳ್ಳಿಗಳ ಮೇಲೆ ಅಲ್ಲಿಯ ನಿವಾಸಿಗಳ ಮೇಲೆ ಪಾಕಿಸ್ಥಾನಿ ಸೈನಿಕರು ನಡೆಸಿದ ಅವ್ಯಾಹತ ದೌರ್ಜನ್ಯ ಮತ್ತು ಹತ್ಯಾಕಾಂಡಗಳ ಬಗ್ಗೆ. ಯಾವುದೋ ಒಂದು ಅರೆಬರೆ ಕಾಣಿಸುತ್ತಿದ್ದ ದೃಶ್ಯಾವಳಿಗಳ ಚಲಚಿತ್ರದ ತುಂಡು ಹಿಡಿದುಕೊಂಡು ಪಾಕೀಸ್ಥಾನದ ನಡವಳಿಕೆ ಬಗ್ಗೆ ತಾವೇನ್ನ... ಬಲವತ್ತರವಾದ ನಿಜಾಂಶಗಳು ಬಲೂಚಿಸ್ಥಾನದಲ್ಲಿ ನಡೆಯುತ್ತಿರುವುದನ್ನು ಕಂಡು ಹಿಡಿದಿದ್ದೇವೆ ಎಂದು ಇದೇ ಅತಿಜ್ಞಾನಿ-ಬಹುಜ್ಞಾನಿ ನವಿಕ ಕುಮಾರ್‌ ದೊಡ್ಡಧ್ವನಿಯಲ್ಲಿ ಅರಚುತ್ತಿದ್ದರು. ಭಾಗವಹಿಸಿದ ಚರ್ಚಾನ್ವಿತ ಸದಸ್ಯರೆಂದರೆ ಇಬ್ಬರು ಪಾಕಿಸ್ಥಾನದ ಪರದ ಪಾಕಿಸ್ಥಾನಿಗಳು ಮತ್ತು ಭಾರತದ ಪರವಾಗಿ ಇಬ್ಬರು. ಮತ್ತೊಬ್ಬ... ಭಾರತದಲ್ಲಿ ಆಶ್ರಯಪಡೆದ ಬಲೂಚಿಸ್ಥಾನಿಯನೊಬ್ಬ ಹುಡುಗ. ಈ ನವಿಕ ಕುಮಾರ್‌ ಅತಿದೊಡ್ಡ ಅಮಾನವೀಯ ಘಟನೆಯನ್ನು ಬೆಳಕಿಗೆ ತಂದಿದ್ದೇನೆಂದು ಅರಚುತ್ತಿದ್ದರೆ... ಪಾಕಿಸ್ಥಾನಿಗನೊಬ್ಬ ಇದಕ್ಕೆಲ್ಲಾ ಭಾರತದ ಕುಮ್ಮಕ್ಕು ಕುತಂತ್ರವೇ ಕಾರಣ ಎನ್ನುತ್ತಿದ್ದ, ದೃಶ್ಯಾವಳಿಗಳನ್ನು ಅಲ್ಲಗಳೆದರೂ ಬಲೂಚಿಸ್ಥಾನದಲ್ಲಿನ ಘಟನೆಗಳನ್ನು ಸಮರ್ಥಿಸಿಕೊಳ್ಳುತ್ತಿದ್ದ. ನನಗೆ ಬೇಜಾರಾಗುತ್ತಿದ್ದುದೆದರೆ ಈ ಲಂಗರುದಾರರುಗಳು ಆಹ್ವಾನಿತ ಪಾಕಿಸ್ಥಾನಿ ಚರ್ಚಾದಾರರನ್ನು ಪೂರ್ಣವಾಗಿ ಮಾತನಾಡಲು ಬಿಡುತ್ತಿರಲಿಲ್ಲವೆನ್ನುವುದು. ಚರ್ಚೆಗೆ ಆಹ್ವಾನಿತರಾಗಿದ್ದ ಪಾಕಿಸ್ಥಾನಿ ಸದಸ್ಯರು ಅವರ ದೇಶದ ಸರ್ಕಾರದ ಪರವಾಗಿ ಮಾತನಾಡದೆ ಇನ್ಯಾರ ಪರವಾಗಿ ಮಾತನಾಡಬೇಕು. ಅವರ ಸರ್ಕಾರದ ವಿರುದ್ಧ ಮಾತನಾಡಲಾಗುವುದಿಲ್ಲ. ಹಾಗೆ ಮಾಡಿದ್ದಾದಲ್ಲಿ ಅವರನ್ನಲ್ಲಿ ಅಟ್ಟಾಡಿಸಿ ಹೊಡೆದುಹಾಕುತ್ತಾರೆ. ಇದನ್ನು ಈ ಅತಿಬುದ್ಧಿವಂತ ಲಂಗರುದಾರರು ತಿಳಿದಿರಬೇಕು. ಭಾರತದ ಪರವಾಗಿ ವಾದ ಮಂಡಿಸುತ್ತಿದ್ದವರು ಸುಮ್ಮನೇ ಪಾಕಿಸ್ಥಾನಿಯರನ್ನು ಹೀಯಾಳಿಸಿ ಬೈಯ್ಯುವುದೇ ಆಗಿತ್ತು. ಈ ಸಮಸ್ಯೆ ಪಾಕಿಸ್ಥಾನದ ಅಂತರಂಗದ ವಿಷಯ, ಅದು ಸರ್ವಸ್ವತಂತ್ರ ರಾಷ್ಟ್ರ. ಈ ರೀತಿಯ ದೌರ್ಜನ್ಯ ಮತ್ತದರ ಒಳಾಢಳಿತದ ಬಗ್ಗೆ ಕೇವಲ ಸುದ್ದಿ ಮಾಡಬಹುದೇ ವಿನಃ ಅವರ ಆಢಳಿತದಲ್ಲಿ ತಲೆತೂರಿಸಿ ಮಾತನಾಡುವುದು ಅನಗತ್ಯ ಅಂಶ. ಇದೊಂದು ಅನಗತ್ಯ ಗಂಟಾವಧಿಯ ಅಸಂಬದ್ಧ ಅರ್ಥವಿಲ್ಲದ ಪ್ರಲಾಪ, ಸಮಯಕೊಲ್ಲುವ ವಿಷಯ. ಬಲೂಚಿಸ್ಥಾನದಲ್ಲಿ ಬಲೂಚಿಗಳು ಹೋರಾಡಬೇಕು. ವಿಶ್ವಸಂಸ್ಥೆಗೆ ದೂರು ಕೊಂಡೊಯ್ಯಬೇಕು, ಇಲ್ಲಿ ಭಾರತೀಯರು "ಅಯ್ಯೋ ಪಾಪ" ಎಂದು ಹೇಳಿ ನಿಟ್ಟುಸಿರು ಬಿಡಬಹುದು ಅಷ್ಟೆ. ಸುಖಾಸುಮ್ಮನೆ ಪಾಕಿಗಳನ್ನು ಚರ್ಚೆಗೆ ಕರೆದು ಅವಮಾನವೇಕೆ ಮಾಡಬೇಕು? ಅವರೋ ಎಲ್ಲಾ ವಿಷಯಕ್ಕೂ ಭಾರತೀಯರೇ ಕಾರಣ ಭಾರತ ಸರ್ಕಾರವೇ ಕಾರಣ ಎಂದು ಇಡೀ ಭಾರತೀಯ ಸಮುದಾಯವನ್ನೇ ಅವಹೇಳನ ಮಾಡುತ್ತಾರೆ. ಇವರು ಅವರನ್ನು ಬೈಯ್ಯುತ್ತಾರೆ, ಅವರು ಇವರನ್ನು ಬೈಯುತ್ತಾರೆ. ಯಾಕೆ ಬೇಕು ಈ ತರಕಲಾಂಟಿ ಅಡ್ಡಕಸುಬಿ ಸಂವಾದ. ಬದಲಾಗಿ ಈ ಅತಿಜ್ಞಾನಿ-ಬಹುಜ್ಞಾನಿ ನವಿಕ ಕುಮಾರ್‌ ಮತ್ತು ಆನಂದ್‌ ನರಸಿಂಹನ್‌ ಬಲೂಚಿಸ್ಥಾನಕ್ಕೆ ಹೋಗಿ ಪಾಕಿಸ್ಥಾನಿ ಸೈನಿಕರ ವಿರುದ್ಧ ಹೋರಾಡುವುದು ಒಳ್ಳೆಯದು. ###
ಟಿ.ದಿವಾಕರ

Comments

Popular posts from this blog

ಲಾಸ್‌ಎಂಜಲಿಸ್‌ನಿಂದ ಟಿಟಾನ್‌ ವಿಲೇಜ್‌ವರೆಗೆ

ಜೀವಂತ ಕ್ರಿಯಾಶೀಲ ಜ್ವಾಲಾಮುಖಿಯ ಮೇಲೆ 18 ಗಂಟೆಗಳ ಓಡಾಟ

ಕನ್ನಡಕ್ಕಾಗಿ ವಿಂಡೋಸ್ ಎದುರು ಲಿನಕ್ಸ್ ಗಣಕ ನಿರ್ವಹಣಾ ತಂತ್ರಾಂಶ